ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ | ಭಾರತದ ಸೈನಾ, ಸಿಂಧು, ಶ್ರೀಕಾಂತ್ ಸವಾಲು

ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಬುಧವಾರದಿಂದ (ಮಾ.೧೪) ಆರಂಭವಾಗಲಿದೆ. ಹೈದರಾಬಾದ್‌ನ ಮೂವರು ಸ್ಟಾರ್ ಪಟುಗಳಾದ ಸೈನಾ ನೆಹ್ವಾಲ್, ಪಿ ವಿ ಸಿಂಧು ಹಾಗೂ ಕಿಡಾಂಬಿ ಶ್ರೀಕಾಂತ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಭಾರತ ಮತ್ತೊಮ್ಮೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಿಂಚುವುದೇ?

ಮತ್ತೊಂದು ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಗೆ ಕ್ಷಣಗಣನೆ ಶುರುವಾಗಿದೆ. ಭಾರತದ ತ್ರಿವಳಿ ಬ್ಯಾಡ್ಮಿಂಟನ್ ತಾರೆಗಳ ಮೇಲೆ ಮತ್ತೊಮ್ಮೆ ನಿರೀಕ್ಷೆ ಗರಿಗೆದರಿದೆ. ಬ್ಯಾಡ್ಮಿಂಟನ್ ಜಗತ್ತಿನ ಪ್ರಮುಖ ಹಾಗೂ ಹಳೆಯ ಚಾಂಪಿಯನ್‌ಶಿಪ್‌ಗಳಲ್ಲಿ ಒಂದಾದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವುದು ಪ್ರತಿಯೋರ್ವ ಶಟ್ಲರ್‌ನ ಕನಸಾಗಿದ್ದು, ಭಾರತ ಇಂಗ್ಲೆಂಡ್ ನೆಲದಲ್ಲಿ ಹ್ಯಾಟ್ರಿಕ್ ಬಾರಿಸುವ ಭರವಸೆಯಲ್ಲಿದೆ.

೧೯೮೦ರಲ್ಲಿ ಮೊದಲಿಗೆ ಪ್ರಕಾಶ್ ಪಡುಕೋಣೆ ಪ್ರಶಸ್ತಿ ಗೆದ್ದ ನಂತರ, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್‌ನಲ್ಲಿ ಮತ್ತೆ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟದ್ದು ಪ್ರಸಕ್ತ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಆಗಿರುವ ಪಿ ಗೋಪಿಚಂದ್. ಹದಿನೇಳು ವರ್ಷಗಳ ಹಿಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಪುಲ್ಲೇಲ ಗೋಪಿಚಂದ್ ಚಿನ್ನದ ನಗೆಬೀರಿದ್ದರು. ಪ್ರಸಕ್ತ ತಮ್ಮ ಊರಿನವರೇ ಆದ ಮೂವರು ಪ್ರಚಂಡ ಆಟಗಾರರೊಂದಿಗೆ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿರುವ ಗೋಪಿಚಂದ್, ಮತ್ತೊಂದು ಐತಿಹಾಸಿಕ ಸಾಧನೆಗೆ ಪ್ರೇರಕ ಶಕ್ತಿಯಾಗಿದ್ದಾರೆ.

ಸೈನಾಗೆ ಕಠಿಣ ಸವಾಲು: ಲಂಡನ್ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್‌ಗೆ ಹೋಲಿಸಿದರೆ, ಸ್ಥಿರ ಪ್ರದರ್ಶನ ನೀಡುತ್ತಿರುವ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಇನ್ನು, ಗುಂಟೂರಿನ ಶ್ರೀಕಾಂತ್, ಪುರುಷರ ವಿಭಾಗದಲ್ಲಿ ಭರವಸೆಯ ಬೆಳಕಾಗಿದ್ದಾರೆ. ಮೊದಲ ಸುತ್ತು ಸಿಂಧು ಮತ್ತು ಶ್ರೀಕಾಂತ್‌ ಪಾಲಿಗೆ ಸುಲಭವಾಗಿದ್ದರೂ, ಸೈನಾ ಆರಂಭಿಕ ಸುತ್ತಿನಲ್ಲೇ ಕಠಿಣ ಸವಾಲು ಎದುರಿಸಬೇಕಿದೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ನಂ.೧ ಆಟಗಾರ್ತಿ ಚೈನೀಸ್ ತೈಪೆಯ ತಾಯ್ ಟ್ಸು ಯಿಂಗ್ ವಿರುದ್ಧ ಸೈನಾ ಸೆಣಸಲಿದ್ದು, ಆಕೆಯ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ.

ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಕಾಶ್ ಪಡುಕೋಣೆಯವರ ಆಟ

ಈ ಋತುವಿನಲ್ಲಿ ಹಲವಾರು ಪ್ರಮುಖ ಪಂದ್ಯಾವಳಿಗಳಿದ್ದು, ಸಹಜ ಆಟದಿಂದ ಯಶ ಗಳಿಸುವ ವಿಶ್ವಾಸವಿದೆ. ಆಲ್ ಇಂಗ್ಲೆಂಡ್ ಓಪನ್‌ಗಾಗಿ ಕಳೆದ ಆರು ವಾರಗಳಿಂದ ಕಠಿಣ ತರಬೇತಿ ಪಡೆದಿದ್ದು, ಪದಕ ಗೆಲ್ಲುವ ಭರವಸೆಯಲ್ಲಿದ್ದೇನೆ.
ಪಿ ವಿ ಸಿಂಧು, ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ

ವೃತ್ತಿಬದುಕಿನಲ್ಲಿ ಸೈನಾ ಹಾಗೂ ತ್ಸುಂಗ್ ಹದಿನಾಲ್ಕು ಬಾರಿ ಸೆಣಸಿದ್ದು, ಈ ಪೈಕಿ ಚೈನೀಸ್ ತೈಪೆ ಆಟಗಾರ್ತಿ ೯ ಬಾರಿ ಜಯಭೇರಿ ಬಾರಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ, ಕಳೆದ ಏಳು ಸುತ್ತಿನ ಹಣಾಹಣಿಯಲ್ಲಿ ಸೈನಾ ಒಂದರಲ್ಲಿಯೂ ಗೆಲುವು ಸಾಧಿಸಿಲ್ಲ. ಈ ಪೈಕಿ ಪ್ರಸಕ್ತ ಋತುವಿನ ಇಂಡೋನೇಷಿಯಾ ಮಾಸ್ಟರ್ಸ್ ಫೈನಲ್‌ನಲ್ಲಿನ ಸೋಲು ಕೂಡ ಒಂದು. ಇದು ಸಹಜವಾಗಿಯೇ ಸೈನಾ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆಯೂ ಇದೆ.

ಸಿಂಧುಗೆ ಸುಲಭ ತುತ್ತು: ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಸುಲಭ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಥಾಯ್ ಆಟಗಾರ್ತಿ ಪಾರ್ನ್‌ಪಾವೀ ಚೊಚುವಾಂಗ್ ವಿರುದ್ಧ ಸೆಣಸಲಿರುವ ಸಿಂಧು, ಬಳಿಕ ಇಂಡಿಯಾ ಓಪನ್ ಪ್ರಶಸ್ತಿ ವಿಜೇತೆ ಬೀವೆನ್ ಝಾಂಗ್ ಎದುರು ಕಾದಾಡಲಿದ್ದಾರೆ. ಮೊದಲ ಸುತ್ತಿನಲ್ಲಿ ಶುಭಾರಂಭ ಸಾಧಿಸುವ ಭರಪೂರ ವಿಶ್ವಾಸದಲ್ಲಿದ್ದಾರೆ ಸಿಂಧು.

ಇದನ್ನೂ ಓದಿ : ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಆರಂಭದಲ್ಲೇ ಸೈನಾಗೆ ಕಠಿಣ ಸವಾಲು

ಶ್ರೀಕಾಂತ್‌ಗೆ ನಂ.೧ ಗುರಿ: ಕಳೆದ ಋತುವಿನಲ್ಲಿ ನಾಲ್ಕು ಸೂಪರ್ ಸಿರೀಸ್ ಗೆದ್ದು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಸಂಚಲನ ಮೂಡಿಸಿದ್ದ ಕಿಡಾಂಬಿ ಶ್ರೀಕಾಂತ್ ಆನಂತರದಲ್ಲಿ ಗಾಯದ ಸೆಳವಿಗೆ ಸಿಲುಕಿ ನಿರಾಸೆ ಅನುಭವಿಸಿದ್ದರು. ಕಳೆದ ಬಾರಿ ಇದೇ ಟೂರ್ನಿಯಲ್ಲಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ವಿಶ್ವದ ಎರಡನೇ ಶ್ರೇಯಾಂಕಿತ ಪಟು ಶ್ರೀಕಾಂತ್ ಈ ಪಂದ್ಯಾವಳಿಯಲ್ಲಿ ಒಂದೊಮ್ಮೆ ಗೆಲುವು ಸಾಧಿಸಿದ್ದೇ ಆದಲ್ಲಿ ನಂ.೧ ಸ್ಥಾನಕ್ಕೇರುವ ಅವಕಾಶವೂ ಇದೆ.

ಆದರೆ, ಪ್ರಸ್ತುತ ಜಗತ್ತಿನ ನಂ.೧ ಆಟಗಾರನಾಗಿರುವ ವಿಕ್ಟರ್ ಅಕ್ಸೆಲ್ಸನ್ ಅವರಿಗೆ ಪ್ರಬಲ ಸವಾಲಾಗಿದ್ದಾರೆ. ಏತನ್ಮಧ್ಯೆ, ಶ್ರೀಕಾಂತ್ ಜೊತೆಗೆ ಭಾರತದ ಇನ್ನಿಬ್ಬರು ಯುವ ಆಟಗಾರರೂ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸಿಂಗಪುರ ಓಪನ್ ಚಾಂಪಿಯನ್ ಸಾಯಿ ಪ್ರಣೀತ್ ಹಾಗೂ ವಿಶ್ವದ ೧೨ನೇ ಶ್ರೇಯಾಂಕಿತ ಎಚ್ ಎಸ್ ಪ್ರಣಯ್ ಕೂಡ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಹುರಿಯಾಳುಗಳಾಗಿದ್ದು, ಇವರ ಪೈಕಿ ಯಾರು ಭಾರತದ ಬ್ಯಾಡ್ಮಿಂಟನ್ ದಂತಕತೆಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬುದು ಕೌತುಕ ಕೆರಳಿಸಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More