ಕಾಮನ್ವೆಲ್ತ್ ಗೇಮ್ಸ್ ಟೀಂ ಇಂಡಿಯಾದಲ್ಲಿ ಎಸ್ ವಿ ಸುನೀಲ್ ಏಕೈಕ ಕನ್ನಡಿಗ

ಇತ್ತೀಚೆಗಷ್ಟೇ ಸಪ್ತಪದಿ ತುಳಿದ ಕರ್ನಾಟಕದ ಸ್ಟಾರ್ ಹಾಕಿ ಪಟು ಎಸ್ ವಿ ಸುನಿಲ್, ಮುಂದಿನ ತಿಂಗಳು ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರೊಬ್ಬರನ್ನು ಬಿಟ್ಟರೆ ೧೮ ಆಟಗಾರರಿರುವ ಭಾರತ ತಂಡದಲ್ಲಿ ಯಾವ ಕನ್ನಡಿಗನಿಗೂ ಸ್ಥಾನ ಕಲ್ಪಿಸಿಲ್ಲ

ಏಪ್ರಿಲ್ ೪ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮಂಗಳವಾರ (ಮಾ.೧೩) ಹದಿನೆಂಟು ಆಟಗಾರರ ತಂಡವನ್ನು ಭಾರತೀಯ ಹಾಕಿ ಆಯ್ಕೆ ಸಮಿತಿ ಪ್ರಕಟಿಸಿದೆ. ಮನ್‌ಪ್ರೀತ್ ಸಿಂಗ್ ತಂಡದ ಸಾರಥ್ಯ ಹೊತ್ತಿದ್ದು, ಚಿಂಗ್ಲೆನ್‌ಸಾನ ಸಿಂಗ್ ಕಾಂಗುಜಾಮ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಮನ್‌ಪ್ರೀತ್ ಸಾರಥ್ಯದಲ್ಲಿ ಭಾರತ ತಂಡ ಕಳೆದ ವರ್ಷ ಏಷ್ಯಾ ಕಪ್ ಗೆದ್ದಿತಲ್ಲದೆ, ತವರಿನಲ್ಲಿ ನಡೆದ ಪುರುಷರ ಹಾಕಿ ವಿಶ್ವ ಲೀಗ್‌ ಫೈನಲ್‌ನಲ್ಲಿ ಕಂಚಿನ ಪದಕ ಜಯಿಸಿತ್ತು.

‘ಬಿ’ ಗುಂಪಿನಲ್ಲಿರುವ ಭಾರತ ತಂಡ, ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ಸೇರಿದಂತೆ ಮಲೇಷ್ಯಾ, ವೇಲ್ಸ್, ಇಂಗ್ಲೆಂಡ್ ವಿರುದ್ಧ ಕಾದಾಡಲಿದೆ. ಪಾಕ್ ವಿರುದ್ಧದ ಪಂದ್ಯ ಏಪ್ರಿಲ್ ೭ಕ್ಕೆ ನಿಗದಿಯಾಗಿದೆ. ಇತ್ತೀಚೆಗಷ್ಟೇ ಮುಗಿದ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿದ್ದ ಎಸ್ ವಿ ಸುನಿಲ್ ನಿಷಾ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ವಿವಾಹದ ನಂತರದಲ್ಲಿ ಅವರು ಆಡುತ್ತಿರುವ ಪ್ರಮುಖ ಪಂದ್ಯಾವಳಿಯಾಗಿದೆ ಈ ಕಾಮನ್ವೆಲ್ತ್ ಕ್ರೀಡಾಕೂಟ.

ಡ್ರ್ಯಾಗ್‌ಫ್ಲಿಕ್ ತಜ್ಞ ರೂಪೀಂದರ್ ಪಾಲ್ ಸಿಂಗ್, ಹರ್ಮನ್ಪ್ರೀತ್ ಸಿಂಗ್, ವರುಣ್ ಕುಮಾರ್, ಕೊಥಾಜಿತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಹಾಗೂ ಅಮಿತ್ ರೋಹಿದಾಸ್ ಜತೆಗೆ ಭಾರತ ತಂಡದ ರಕ್ಷಣಾ ವ್ಯೂಹವನ್ನು ಕಾಯಲಿದ್ದಾರೆ. ಇನ್ನು, ಅನುಭವಿ ಕೀಪರ್ ಪಿ ಆರ್ ಶ್ರೀಜೇಶ್ ಗೋಲ್‌ಕೀಪರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಅಜ್ಲಾನ್ ಷಾ ಹಾಕಿ; ಐರ್ಲೆಂಡ್ ಹಣಿದು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಭಾರತ

ಇನ್ನು, ಫಾರ್ವರ್ಡ್ ಪಾಳೆಯದಲ್ಲಿ ಅನುಭವಿ ಆಟಗಾರ ಎಸ್ ವಿ ಸುನಿಲ್ ಯುವಪಡೆಯನ್ನು ಮುನ್ನಡೆಸಲಿದ್ದಾರೆ. ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಗುರ್ಜಂತ್ ಸಿಂಗ್ ಮತ್ತು ದಿಲ್ಪ್ರೀತ್ ಸಿಂಗ್ ಈ ಗುಂಪಿನಲ್ಲಿದ್ದಾರೆ. “ಏಷ್ಯಾ ಕಪ್ ಪಂದ್ಯಾವಳಿಯಿಂದ ಇಲ್ಲೀವರೆಗಿನ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಕಾಮನ್ವೆಲ್ತ್ ಕೂಟಕ್ಕೆ ಆಯ್ಕೆ ಮಾಡಲಾಗಿದೆ,’’ ಎಂದು ರಾಷ್ಟ್ರೀಯ ಹಾಕಿ ಮುಖ್ಯ ಕೋಚ್ ಸೋಯೆರ್ಡ್ ಮರಿನೆ ತಿಳಿಸಿದ್ದಾರೆ.

“ಗೆಲುವು ಸಾಧಿಸುವ ಮನಃಸ್ಥಿತಿಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಾವು ಭಾಗವಹಿಸಬೇಕಿದೆ. ಪ್ರತಿ ಪಂದ್ಯದ ಬಳಿಕ ತಂಡ ಸಾಕಷ್ಟು ನೈಪುಣ್ಯತೆ ಸಾಧಿಸುತ್ತ ಬಂದಿದೆ. ಇತ್ತೀಚೆಗಷ್ಟೇ ಮುಕ್ತಾಯ ಕಂಡ ೨೭ನೇ ಸುಲ್ತಾನ್ ಅಜ್ಲಾನ್ ಷಾ ಹಾಕಿ ಪಂದ್ಯಾವಳಿಯಲ್ಲಿ ನಾವು ಪದಕ ಗಳಿಸಬಹುದಾಗಿತ್ತು. ಆದಾಗ್ಯೂ ಇಲ್ಲಿ ಐದನೇ ಸ್ಥಾನ ಪಡೆದದ್ದು ಕಾಮನ್ವೆಲ್ತ್ ಕ್ರೀಡಾಕೂಟದ ಮೇಲೆ ಪ್ರತಿಫಲಿಸದು,’’ ಎಂದು ಮರಿನೆ ಅಭಿಪ್ರಾಯಪಟ್ಟರು.

ತಂಡ ಇಂತಿದೆ

ಗೋಲ್‌ಕೀಪರ್‌: ಎಸ್ ಆರ್ ಶ್ರೀಜೇಶ್, ಸೂರಜ್ ಕರ್ಕೆರಾ ಡಿಫೆಂಡರ್ಸ್: ರೂಪೀಂದರ್ ಪಾಲ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಕೊತಾಜಿತ್ ಸಿಂಗ್, ಗುರೀಂದರ್ ಸಿಂಗ್, ಅಮಿತ್ ರೋಹಿದಾಸ್ ಮಿಡ್‌ಫೀಲ್ಡರ್ಸ್: ಮನ್ಪ್ರೀತ್ ಸಿಂಗ್ (ನಾಯಕ), ಚಿಂಗ್ಲೆನ್‌ಸಾನ ಸಿಂಗ್ (ಉಪನಾಯಕ), ಸುಮಿತ್ ರೋಹಿದಾಸ್, ವಿವೇಕ್ ಸಾಗರ್ ಪ್ರಸಾದ್ ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಎಸ್ ವಿ ಸುನಿಲ್, ಗುರ್ಜಂತ್ ಸಿಂಗ್, ಮನ್‌ದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ ಮತ್ತು ದಿಲ್ಪ್ರೀತ್ ಸಿಂಗ್.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More