ಇಂಡಿಯನ್ ವೆಲ್ಸ್: ವೀನಸ್‌ಗೆ ಮಣಿದ ಸೆರೆನಾ, ಫೆಡರರ್ ಗೆಲುವಿನ ಓಟ ಅಬಾಧಿತ

ವಿಲಿಯಮ್ಸ್ ಸೋದರಿಯರ ಸವಾಲಿನಲ್ಲಿ ಈ ಬಾರಿ ವೀನಸ್ ನಸುನಕ್ಕರು. ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ಎದುರು ವೀನಸ್ ೬-೩, ೬-೪ ನೇರ ಸೆಟ್‌ಗಳಲ್ಲಿ ಜಯಿಸಿದರು. ಇತ್ತ, ರೋಜರ್ ಫೆಡರರ್ ನಾಲ್ಕನೇ ಸುತ್ತಿಗೆ ದಾಪುಗಾಲಿಟ್ಟಿದ್ದಾರೆ

ಹದಿನೈದು ತಿಂಗಳ ಬಳಿಕ ಟೆನಿಸ್‌ಗೆ ಮರಳಿದ ಸೆರೆನಾ ವಿಲಿಯಮ್ಸ್‌ಗೆ ಸ್ವತಃ ಆಕೆಯ ಹಿರಿಯ ಸೋದರಿ ವೀನಸ್ ತಡೆಹಾಕಿದ್ದಾರೆ. ಪಿಎನ್‌ಬಿ ಪರಿಬಾಸ್ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ತೃತೀಯ ಸುತ್ತಿನ ಕಾದಾಟದಲ್ಲಿ ವೀನಸ್ ಪಾರಮ್ಯ ಮೆರೆದರು. ವಿಲಿಯಮ್ಸ್ ಸೋದರಿಯರ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಣಂಗಣದಲ್ಲಿ 13 ಸಾವಿರ ಪ್ರೇಕ್ಷಕರು ಸೇರಿದ್ದರು.

ಕಳೆದ ವರ್ಷ ಆಸ್ಟ್ರೇಲಿಯಾ ಓಪನ್ ಫೈನಲ್‌ನಲ್ಲಿ ಮುಖಾಮುಖಿಯಾದ ನಂತರ ಮೊದಲ ಬಾರಿಗೆ ಎದುರುಬದುರಾಗಿದ್ದ ವಿಲಿಯಮ್ಸ್ ಸೋದರಿಯರ ಪಂದ್ಯ ಸಹಜವಾಗಿಯೇ ಟೆನಿಸ್ ಪ್ರಿಯರ ಆಸಕ್ತಿ ಕೆರಳಿಸಿತ್ತು. ೨೦೧೭ನೇ ಋತುವಿನ ಮೊದಲ ಗ್ರಾಂಡ್‌ಸ್ಲಾಮ್ ಅನ್ನು ತನ್ನಕ್ಕನ ವಿರುದ್ಧದ ಗೆಲುವಿನೊಂದಿಗೆ ಅಲಂಕರಿಸಿದ್ದ ಸೆರೆನಾ, ಬಳಿಕ ಚೊಚ್ಚಲ ಮಗುವಿನ ಜನನದಿಂದಾಗಿ ೧೫ ತಿಂಗಳು ಟೆನಿಸ್ ಅಂಕಣದಿಂದ ದೂರ ಇದ್ದರು.

“ಮೊದಲಿನಂತೆ ಆಡುವುದು ಖಂಡಿತವಾಗಿ ಸಾಧ್ಯವಾಗುತ್ತಿಲ್ಲ,’’ ಎಂದು ಹೇಳಿದ ಸೆರೆನಾ, ಆ ಮೂಲಕ ದೈಹಿಕವಾಗಿ ತಾನಿನ್ನೂ ಪೂರ್ಣ ಪ್ರಮಾಣದ ಕ್ಷಮತೆ ಸಾಧಿಸಿಲ್ಲ ಎಂಬುದನ್ನು ಒಪ್ಪಿಕೊಂಡರು. ಇತ್ತ, ೧೦ನೇ ಶ್ರೇಯಾಂಕಿತೆ ವೀನಸ್, ಪ್ರೀಕ್ವಾರ್ಟರ್‌ಫೈನಲ್‌ಗೆ ಧಾವಿಸಿದರಲ್ಲದೆ, ಅನಸ್ಟಾಸಿಯಾ ಸೆವಾಸ್ಟೋವಾ ವಿರುದ್ಧದ ಕಾದಾಟಕ್ಕೆ ಅಣಿಯಾದರು. ಮಹಿಳೆಯರ ಇನ್ನೊಂದು ತೃತೀಯ ಸುತ್ತಿನ ಪಂದ್ಯದಲ್ಲಿ ೧೨ನೇ ಶ್ರೇಯಾಂಕಿತ ಆಟಗಾರ್ತಿ ಜುಲಿಯಾ ಜಾರ್ಜಸ್ ವಿರುದ್ಧ ಅನಸ್ಟಾಸಿಯಾ ೬-೩, ೬-೩ ನೇರ ಸೆಟ್‌ಗಳ ಗೆಲುವು ಪಡೆದರು.

ಇದನ್ನೂ ಓದಿ : ತಾಯ್ತನದ ಸವಿಗೂ ಮುನ್ನ ಸತ್ತು ಬದುಕಿದ್ದನ್ನು ಮತ್ತೆ ಸ್ಮರಿಸಿದ ಸೆರೆನಾ ವಿಲಿಯಮ್ಸ್

ಅಂದಹಾಗೆ, ಸೆರೆನಾ ಆಟದ ಗತಿಯಲ್ಲಿ ಹಿಂದಿನ ಕಸುವು ಇರಲಿಲ್ಲ. ಒಂದು ತಾಸು, ೨೬ ನಿಮಿಷಗಳ ಕಾದಾಟದಲ್ಲಿ ಸೆರೆನಾ ನಾಲ್ಕು ಏಸ್‌ಗಳನ್ನು ಸಿಡಿಸಿದರೆ, ವೀನಸ್ ರ‍್ಯಾಕೆಟ್‌ನಿಂದ ಆರು ಏಸ್‌ಗಳು ಪುಟಿದವು. ಇನ್ನು, ಸೆರೆನಾ ಸರ್ವ್ ಅನ್ನು ನಾಲ್ಕು ಬಾರಿ ವೀನಸ್ ತುಂಡರಿಸಿದರು. ಏತನ್ಮಧ್ಯೆ, ಈ ಸೋಲಿನ ಹೊರತಾಗಿಯೂ ೨೩ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತೆ ಸೆರೆನಾ, ತನ್ನ ಅಕ್ಕನ ಎದುರಿನ ಒಟ್ಟಾರೆ ೨೯ ಮುಖಾಮುಖಿಯಲ್ಲಿ ೧೭-೧೨ ಮೇಲುಗೈ ಸಾಧಿಸಿದ್ದಾರೆ.

ಫೆಡರರ್ ನಾಗಾಲೋಟ: ಇನ್ನು, ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ೨೦ ಗ್ರಾಂಡ್‌ಸ್ಲಾಮ್‌ಗಳ ಒಡೆಯ ರೋಜರ್ ಫೆಡರರ್ ಜಯದ ಅಭಿಯಾನ ಮುಂದುವರೆಸಿದರು. ದಾಖಲೆಯ ಆರನೇ ಇಂಡಿಯನ್ ವೆಲ್ಸ್ ಪ್ರಶಸ್ತಿಗಾಗಿ ಸೆಣಸುತ್ತಿರುವ ಫೆಡರರ್, ತೃತೀಯ ಸುತ್ತಿನ ಸೆಣಸಾಟದಲ್ಲಿ ಫಿಲಿಪ್ ಕಾರ್ಜಿನೋವಿಕ್ ವಿರುದ್ಧ ೬-೨, ೬-೧ ಸುಲಭ ಹಾಗೂ ನೇರ ಸೆಟ್‌ಗಳ ಜಯ ಪಡೆದರು.

ಒಂದು ವಿಧದಲ್ಲಿ ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಫೆಡರರ್ ಸರ್ಬಿಯಾ ಆಟಗಾರನಿಗೆ ಟೆನಿಸ್ ಮಟ್ಟುಗಳನ್ನು ತಿಳಿಸಿಕೊಟ್ಟರು. ಮೊದಲ ಸೆಟ್‌ನಲ್ಲಿ ೨ ಗೇಮ್‌ಗಳನ್ನು ಬಿಟ್ಟುಕೊಟ್ಟ ಫೆಡರರ್, ಎರಡನೇ ಸೆಟ್‌ನಲ್ಲಿ ಕೇವಲ ಒಂದು ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದರು. ಈ ಗೆಲುವಿನೊಂದಿಗೆ ಪ್ರಸಕ್ತ ಋತುವಿನಲ್ಲಿ ಫೆಡರರ್ ೧೪-೦ ಗೆಲುವಿನ ಓಟವನ್ನು ಮುಂದುವರಿಸಿದರು. ಪ್ರೀಕ್ವಾರ್ಟರ್‌ನಲ್ಲೀಗ ಅವರು ಫ್ರಾನ್ಸ್ ಆಟಗಾರ ಜೆರೇಮಿ ಚಾರ್ಡಿ ವಿರುದ್ಧ ಸೆಣಸಲಿದ್ದಾರೆ. ಮೂರನೇ ಸುತ್ತಿನ ಮತ್ತೊಂದು ಕಾದಾಟದಲ್ಲಿ ತಮ್ಮ ದೇಶದವರೇ ಆದ ಆಡ್ರಿಯನ್ ಮನ್ನಾರಿನೊ ವಿರುದ್ಧ ಚಾರ್ಡಿ ೭-೫, ೪-೬, ೬-೧ ಸೆಟ್‌ಗಳ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More