ಕ್ರಿಕೆಟ್ ನಾಡಿನಲ್ಲಿ ಶುರುವಾಯ್ತು ಕಾಮನ್ವೆಲ್ತ್ ಕ್ರೀಡಾಕೂಟದ ಕಲರವ

ಚೆಂಡು ವಿರೂಪ ಪ್ರಕರಣದಿಂದ ಮುಜುಗರ ಅನುಭವಿಸಿದ ಕ್ರಿಕೆಟ್ ನಾಡು ಆಸ್ಟ್ರೇಲಿಯಾ ಇದೀಗ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅಣಿಯಾಗಿದೆ. ಗೋಲ್ಡ್ ಕೋಸ್ಟ್‌ನಲ್ಲಿ ಮುಂದಿನ ೧೧ ದಿನಗಳ ಕಾಲ ನಡೆಯಲಿರುವ ಕೂಟದಲ್ಲಿ ೭೧ ರಾಷ್ಟ್ರದ ೬,೬೦೦ಕ್ಕೂ ಹೆಚ್ಚು ಅಥ್ಲೀಟ್‌ಗಳು ಪದಕ ಬೇಟೆಗೆ ಸಜ್ಜಾಗಿದ್ದಾರೆ

ಕಾಮನ್ವೆಲ್ತ್ ಇತಿಹಾಸದಲ್ಲಿ ಅತಿಹೆಚ್ಚು ಪದಕಗಳನ್ನು ಜಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸ್ಟ್ರೇಲಿಯಾ ನೆಲದಲ್ಲಿ ಇಪ್ಪತ್ತೊಂದನೇ ಕ್ರೀಡಾಕೂಟ ನಡೆಯುತ್ತಿದೆ. ೮೫೨ ಚಿನ್ನದ ಪದಕಗಳನ್ನು ಜಯಿಸಿದ ಏಕೈಕ ರಾಷ್ಟ್ರವಾಗಿರುವ ಆಸ್ಟ್ರೇಲಿಯಾ, ಇತ್ತೀಚೆಗಷ್ಟೇ ಸಂಭವಿಸಿದ ಚೆಂಡು ವಿರೂಪ ಪ್ರಕರಣದ ಮಧ್ಯೆಯೇ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆ ನಡೆಸಿಕೊಂಡಿದೆ.

ಆಸ್ಟ್ರೇಲಿಯಾ ಈ ಬಾರಿಯೂ ದಾಖಲೆಯ ಪ್ರಮಾಣದಲ್ಲಿ ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ. ಈ ಬಾರಿ ಅದು ೪೭೩ ಸ್ಪರ್ಧಿಗಳನ್ನು ಪದಕ ಬೇಟೆಗೆ ಇಳಿಸಿದ್ದು ಮತ್ತೊಮ್ಮೆ ಪ್ರಭುತ್ವ ಮೆರೆಯುವ ತುಡಿತದಲ್ಲಿದೆ. ಅಂದಹಾಗೆ, ಕಳೆದ ಬಾರಿ ಗ್ಲಾಸ್ಗೊ ಕಾಮನ್ವೆಲ್ತ್ ಕೂಟದಲ್ಲಿ ಮೊದಲ ೧೯೮೬ರ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಪದಕ ಗಳಿಕೆಯಲ್ಲಿ ಇಂಗ್ಲೆಂಡ್ ಹಿಂದಿಕ್ಕಿತ್ತು. ಇಂಗ್ಲೆಂಡ್‌ (೪೯) ಗೆದ್ದಿದ್ದ ಚಿನ್ನದ ಪದಕಗಳಿಗೆ ಪ್ರತಿಯಾಗಿ ೫೮ ಸ್ವರ್ಣ ಪದಕಗಳನ್ನು ಗೆದ್ದಿದ್ದ ಇಂಗ್ಲೆಂಡ್, ಆಸ್ಟ್ರೇಲಿಯಾಗೆ ಸೆಡ್ಡು ಹೊಡೆದಿತ್ತು. ಕಾಮನ್ವೆಲ್ತ್ ಕೂಟದ ಚರಿತ್ರೆಯಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳೆಂದೇ ಕರೆಸಿಕೊಳ್ಳುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾಗಿವೆ.

ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಸಮಾನ ಪದಕಗಳ ಸ್ಪರ್ಧೆಗಳು ನಡೆಯುತ್ತಿರುವುದು ಕೂಟದ ವಿಶೇಷ. ಜಗತ್ತಿನ ಮೂರನೇ ಒಂದು ಭಾಗದಷ್ಟು ಜನತೆ ಅಂದರೆ ೨.೪ ಬಿಲಿಯನ್ ಜನರು ಗೋಲ್ಡ್ ಕೋಸ್ಟ್ ಕೂಟದಲ್ಲಿ ಪ್ರತಿನಿಧಿಸುತ್ತಿದ್ದಾರೆ. ಬ್ಯಾಸ್ಕೆಟ್‌ಬಾಲ್ ಮತ್ತೆ ಕಾಮನ್ವೆಲ್ತ್ ಕೂಟಕ್ಕೆ ಮರಳಿದ್ದರೆ, ಬೀಚ್ ವಾಲಿಬಾಲ್ ಹಿನ್ನೆಲೆಯಲ್ಲಿ ಜೂಡೊ ಸ್ಪರ್ಧೆಯನ್ನು ಕೈಬಿಡಲಾಗಿದೆ.

ಭಾರತದ ೨೨೧ ಅಥ್ಲೀಟ್‌ಗಳು: ಪ್ರಮುಖ ಕ್ರೀಡಾಂಗಣ ಕರಾರದಲ್ಲಿ ಬುಧವಾರ (ಏಪ್ರಿಲ್ ೪) ಭಾರತೀಯ ಕಾಲಮಾನ ೩.೧೫ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಈ ಬಾರಿ ಭಾರತದಿಂದ ೨೨೧ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಪಥಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಬ್ಯಾಡ್ಮಿಂಟನ್, ಬಾಕ್ಸಿಂಗ್, ಕುಸ್ತಿ ಹಾಗೂ ಶೂಟಿಂಗ್‌ ವಿಭಾಗದಲ್ಲಿ ಭಾರತ ಹೆಚ್ಚು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ. ಅಂತೆಯೇ ಹಾಕಿಯಲ್ಲಿಯೂ ಭಾರತ ಪದಕದ ಮೇಲೆ ಕಣ್ಣಿಟ್ಟಿದೆ.

ಈಜುಪಟು ಆ್ಯಡಂ ಪಿಯಟಿ, ಜಿಮ್ನಾಸ್ಟ್ ಮ್ಯಾಕ್ಸ್ ವೈಟ್‌ಲಾಕ್, ಟ್ರಯಥ್ಲಾನ್ ಅಥ್ಲೀಟ್ ಅಲಿಸ್ಟೇರ್ ಬ್ರೌನ್ಲಿ ಹಾಗೂ ಹೆಪ್ತಲಾನ್ ಪಟು ಕ್ಯಾಥರಿನಾ ಜಾನ್ಸನ್ - ಥಾಂಪ್ಸನ್ ಹಾಗೂ ಇನ್ನೂ ಮುಂತಾದವರು ಇಂಗ್ಲೆಂಡ್‌ನ ಸ್ಟಾರ್ ಅಥ್ಲೀಟ್‌ಗಳಾಗಿದ್ದಾರೆ. ಅಂತೆಯೇ ಸ್ಕಾಟ್ಲೆಂಡ್‌ನಿಂದ ಅಥ್ಲೀಟ್ ಎಲಿದ್ ಡೋಯ್ಲೆ, ಸೈಕ್ಲಿಸ್ಟ್ ಕ್ಯಾಟಿ ಆರ್ಚಿಬಾಲ್ಡ್ ಹಾಗೂ ಈಜುಗಾರರಾದ ಹನ್ನಾ ಮಿಲೆ ಮತ್ತು ರಾಸ್ ಮುರ್ಡೋಕ್ ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದ ನೆಚ್ಚಿನ ಅಥ್ಲೀಟ್ ಎನಿಸಿದ್ದಾರೆ. ಇನ್ನು, ವೇಲ್ಸ್‌ನಿಂದ ೧೧ರ ಹರೆಯದ ಟೇಬಲ್ ಟೆನಿಸ್ ಆಟಗಾರ್ತಿ ಅನ್ನಾ ಹುರ್ಸೆ ಕ್ರೀಡಾಕೂಟದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡಿರುವುದು ವಿಶೇಷ.

ಏತನ್ಮಧ್ಯೆ, ಆತಿಥೇಯ ನಾಡಿನ ಸ್ಟಾರ್ ಹರ್ಡ್‌ಲರ್ ಸ್ಯಾಲಿ ಪಿಯರ್ಸನ್ ಕೂಟದ ಮುಖವಾಣಿ ಎಂಬಂತೆ ಕಂಗೊಳಿಸುತ್ತಿದ್ದಾರೆ. ಕರಾರ ಕ್ರೀಡಾಂಗಣಕ್ಕೆ ಕೆಲವೇ ಮೈಲುಗಳಲ್ಲಿ ವಾಸಿಸುತ್ತಿರುವ ೩೧ರ ಹರೆಯದ ಪಿಯರ್ಸನ್ ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಾಕೆ. ಅಂತೆಯೇ ೨೦೧೭ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನದ ಮಿಂಚು ಹರಿಸಿದ್ದ ಪಿಯರ್ಸನ್ ಈ ಬಾರಿಯೂ ಬಂಗಾರದ ನಗೆಬೀರಲು ಹಾತೊರೆಯುತ್ತಿದ್ದಾರೆ. ಆದಾಗ್ಯೂ, ಪಾದದ ಹಿಮ್ಮಡಿ ನೋವಿನೊಂದಿಗೆ ಸೆಣಸುತ್ತಿರುವ ಪಿಯರ್ಸನ್ ಈ ಕೂಟದಲ್ಲಿ ಮಾಡು ಇಲ್ಲವೇ ಮಡಿ ಎಂಬಂಥ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಇನ್ನುಳಿದಂತೆ ಒಲಿಂಪಿಕ್ಸ್ ಚಾಂಪಿಯನ್ನರಾದ ಎಲಾನಿ ಥಾಂಪ್ಸನ್, ಕ್ಯಾಸ್ಟರ್ ಸೆಮೆನ್ಯಾ ಹಾಗೂ ಸ್ಪ್ರಿಂಟರ್ ಯೋಹಾನ ಬ್ಲೇಕ್ ಟ್ರ್ಯಾಕ್ ಫೀಲ್ಡ್‌ನಲ್ಲಿರುವ ಸ್ಟಾರ್ ಅಥ್ಲೀಟ್‌ಗಳು. ಇತ್ತ, ಸ್ವಿಮ್ಮರ್ ಚಾಡ್ ಲಿ ಕ್ಲೊಸ್ ಕೂಡ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನದ ಮೀನಾಗಿ ಕಾಣಿಸಿದ್ದಾರೆ. ೨೦೧೨ರ ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ೨೦೦ ಮೀಟರ್ ಬಟರ್‌ಫ್ಲೈನಲ್ಲಿ ಮೈಕೆಲ್ ಫೆಲ್ಫ್ಸ್ ವಿರುದ್ಧ ಜಯ ಸಾಧಿಸಿದ್ದ ಚಾಡ್ ಲಿ, ಇದೀಗ ಈಜುಕೊಳದಲ್ಲಿ ಎಂಟನೇ ಪದಕ ಗೆಲ್ಲುವ ಉತ್ಸುಕತೆಯಲ್ಲಿದ್ದಾರೆ.

ಕೂಟದ ಪ್ರಮುಖ ಅಂಶಗಳು

  • ೨,೭೪೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ. ೭೧.೬೬ ಎಕರೆ ವಿಶಾಲ ಜಾಗದಲ್ಲಿ ೧೮ ಹೊಸ ಕಟ್ಟಡಗಳಲ್ಲಿ ೧೨೫೨ ನಿವಾಸಗಳನ್ನು ಕಾಯಂ ಆಗಿ ನಿರ್ಮಿಸಲಾಗಿದೆ. ೧೧೭೦ ಸಿಂಗಲ್ ಮತ್ತು ಡಬಲ್ ಮಲಗುಕೋಣೆಗಳಿರುವ ಮನೆಗಳಾಗಿದ್ದರೆ, ಮೂರು ಬೆಡ್‌ರೂಂ ಸೌಲಭ್ಯವುಳ್ಳ ೮೨ ಮನೆಗಳನ್ನು ಕಟ್ಟಲಾಗಿದೆ. ಒಂದೊಮ್ಮೆ ಕೂಟ ಮುಗಿದ ಬಳಿಕ ಈ ಮನೆಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ.
  • ಕ್ವೀನ್ಸ್‌ಲ್ಯಾಂಡ್ ನಗರಿ ಗೋಲ್ಡ್ ಕೋಸ್ಟ್‌ನಾದ್ಯಂತ ಮತ್ತು ಬ್ರಿಸ್ಬೇನ್, ಕ್ವೀನ್ಸ್‌ಲ್ಯಾಂಡ್‌ನ ಕೇರ್ನ್ಸ್ ಮತ್ತು ಟೌನ್ಸ್‌ವಿಲ್‌ನಲ್ಲಿ ನಿರ್ಮಾಣವಾಗಿರುವ ವಿಶ್ವದರ್ಜೆಯ ೧೭ ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ಜರುಗಲಿವೆ.
  • ಅಥ್ಲೆಟಿಕ್ಸ್, ಈಜು, ಲಾನ್ ಬಾಲ್, ಪವರ್ ಲಿಫ್ಟಿಂಗ್, ಟ್ರ್ಯಾಕ್ ಸೈಕ್ಲಿಂಗ್, ಟೇಬಲ್ ಟೆನಿಸ್ ಹಾಗೂ ಟ್ರಯಥ್ಲಾನ್ ಸೇರಿ ಏಳು ಪ್ಯಾರಾ ಕ್ರೀಡಾ ವಿಭಾಗಗಳ ೩೮ ಪದಕ ಸ್ಪರ್ಧೆಗಳಲ್ಲಿ ೩೦೦ಕ್ಕೂ ಹೆಚ್ಚು ಪ್ಯಾರಾಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದು, ಕಾಮನ್ವೆಲ್ತ್ ಕೂಟದಲ್ಲೇ ಇದು ಹೊಸ ಇತಿಹಾಸವೆನಿಸಿದೆ.
  • ಅಂದಹಾಗೆ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟ ಐದನೆಯದು. ೧೯೩೮ರಲ್ಲಿ ಸಿಡ್ನಿ, ೧೯೬೨ರಲ್ಲಿ ಪರ್ತ್, ೧೯೮೨ರಲ್ಲಿ ಬ್ರಿಸ್ಬೇನ್ ಹಾಗೂ ೨೦೦೬ರಲ್ಲಿ ಮೆಲ್ಬೋರ್ನ್ ನಗರಿ ಕಾಮನ್ವೆಲ್ತ್ ಕೂಟಕ್ಕೆ ಆತಿಥ್ಯ ಹೊತ್ತುಕೊಂಡಿತ್ತು.
  • 2013ರಲ್ಲಿ ಕಾಮನ್ವೆಲ್ತ್ ಕೂಟದಿಂದ ಹಿಂದೆ ಸರಿದಿದ್ದ ಗಾಂಬಿಯಾ ಫೆಬ್ರವರಿಯಲ್ಲಿ ಮತ್ತೆ ಕೂಟಕ್ಕೆ ಸೇರ್ಪಡೆಯಾಗಿದ್ದು, ಕೇವಲ ೬ ಅಥ್ಲೀಟ್‌ಗಳನ್ನಷ್ಟೇ ಕಳುಹಿಸಿದೆ. ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕನಿಷ್ಠ ಅಥ್ಲೀಟ್‌ಗಳಿರುವ ದೇಶವಿದು.
  • ಈ ಬಾರಿಯ ಕೂಟದಲ್ಲಿ ಒಟ್ಟು ೧೯ ಸ್ಪರ್ಧೆಗಳು ನಡೆಯುತ್ತಿವೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ, ನೆಟ್‌ಬಾಲ್, ರಗ್ಬಿಸೆವೆನ್ಸ್, ಸ್ಕ್ವಾಶ್, ಈಜು, ಬೀಚ್ ವಾಲಿಬಾಲ್, ಲಾನ್ ಬಾಲ್ಸ್, ಡೈವಿಂಗ್, ವೇಟ್‌ಲಿಫ್ಟಿಂಗ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಶೂಟಿಂಗ್, ಜಿಮ್ನಾಸ್ಟಿಕ್ಸ್, ಟೇಬಲ್ ಟೆನಿಸ್, ಟ್ರಯಥ್ಲಾನ್ ಹಾಗೂ ಕುಸ್ತಿ.
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More