ಕಾಮನ್ವೆಲ್ತ್ ಕ್ರೀಡಾ ಕೂಟದ ಉದ್ಘಾಟನೆಗೆ ರಂಗು ತುಂಬಲಿರುವ ಬೆಡಗಿ ಡೆಲ್ಟಾ

ಸರ್ಫಿಂಗ್‌ನ ಸ್ವರ್ಗ ತಾಣ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನೆಗೆ ಸೊಬಗು ತುಂಬಲಿದ್ದಾರೆ ಗಾಯಕಿ ಹಾಗೂ ರೂಪಸಿ ಡೆಲ್ಟಾ ಗುಡ್‌ರೆಮ್. ಬುಧವಾರ (ಏ.೪) ಮಧ್ಯಾಹ್ನ ೩.೧೫ರಿಂದ ಉದ್ಘಾಟನಾ ಸೊಗಸನ್ನು ಕಣ್ತುಂಬಿಕೊಳ್ಳಬಹುದಾಗಿದೆ

ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದ ಆರಂಭೋತ್ಸವಕ್ಕೆ ಕ್ಯಾರಾರಾ ಕ್ರೀಡಾಂಗಣ ಸಕಲ ರೀತಿಯಲ್ಲಿಯೂ ಅಣಿಯಾಗಿದೆ. ಕ್ವೀನ್ಸ್‌ ಲ್ಯಾಂಡ್ ಹಾಗೂ ಆಸ್ಟ್ರೇಲಿಯಾದ ಸಂಸ್ಕೃತಿಯನ್ನು ಮೇಳೈಸುವಂತಿರುವ ಈ ಉದ್ಘಾಟನಾ ಕಾರ್ಯಕ್ರಮದ ಕೇಂದ್ರಬಿಂದುವಾಗಲು ನೂರಾರು ಮಂದಿ ಸರ್ಫ್ ಲೈಫ್‌ಸೇವರ್ಸ್ (ಜೀವರಕ್ಷಕರು) ಸಜ್ಜಾಗಿದ್ದಾರೆ. ವರ್ಣರಂಜಿತ ಹಾಗೂ ಕಣ್ಣುಕುಕ್ಕುವ ದೀಪಾಲಂಕರ ಇಡೀ ೨೫ ಸಹಸ್ರ ಪ್ರೇಕ್ಷಕ ಸಾಮರ್ಥ್ಯದ ಕ್ರೀಡಾಂಗಣದ ಸೊಬಗನ್ನು ಹೆಚ್ಚಿಸಲಿದೆ.

ಅಂದಹಾಗೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾನಸುಧೆ ಹರಿಸಲಿರುವ ಗಾಯಕಿ ಡೆಲ್ಟಾ ಗುಡ್‌ರೆಮ್ ಹಾಗೂ ಡಾಮಿ ಇಮ್ ತಮ್ಮ ಹಾಡು, ನರ್ತನದಿಂದ ಸಮಾರಂಭದ ಸೊಗಸನ್ನು ಹೆಚ್ಚಿಸುವ ವಿಶ್ವಾಸ ಮೂಡಿಸಿದ್ದಾರೆ. ಇದೇ ವೇಳೆ ಸಾವಿರಾರು ಕಲಾವಿದರು ಬಗೆಬಗೆಯ ಬಣ್ಣದ ಬೆಳಕಿಂಡಿಯಲ್ಲಿ ನರ್ತಿಸಿ ಪ್ರೇಕ್ಷಕರ ಮನಸೂರೆಗೊಳ್ಳಲು ವಾರಗಟ್ಟಲೆ ಭರ್ಜರಿ ತಾಲೀಮು ನಡೆಸಿದ್ದಾರೆ. ಇದೇ ವೇಳೆಗೆ ಕೂಟದಲ್ಲಿ ಭಾಗವಹಿಸುತ್ತಿರುವ ೭೧ ರಾಷ್ಟ್ರಗಳ ಬಾವುಟಗಳು ಕಾಣಿಸಿಕೊಳ್ಳಲಿವೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡದ ಅಧಿಕಾರಿಗಳು ಹಾಗೂ ಅಥ್ಲೀಟ್‌ಗಳನ್ನು ಸರ್ಫ್ ಜೀವೆರಕ್ಷಕರು ಸಮಮಾರಂಭಕ್ಕೆ ಕರೆತರಲಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಕುಳಿತು ವೀಕ್ಷಿಸಲು ಆಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚಿನ ಕಲಾವಿದರು ಉದ್ಘಾಟನಾ ಸಮಾರಂಭಕ್ಕಾಗಿ ಹಲವಾರು ದಿನಗಳಿಂದ ತಯಾರಿ ನಡೆಸಿದ್ದಾರೆ. ಈ ಸಮಾರಂಭಕ್ಕಾಗಿ ಎಂದೇ ಟನ್‌ಗಟ್ಟಲೆ ಮರಳನ್ನು ಸುರಿಯಲಾಗಿದೆ. ಈ ಉಸುಬಿನ ಮೇಲಿನ ನರ್ತನದಿಂದ ಪ್ರೇಕ್ಷಕರನ್ನು ಮುದಗೊಳಿಸಲು ಉದ್ಘಾಟನಾ ಕಾರ್ಯಕ್ರಮದ ಸಂಘಟಕರು ಯೋಜಿಸಿದ್ದಾರೆ.

ಕ್ಯಾಟಿಯ ಸಂಗೀತ: ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಸಂಗೀತ ನಿರ್ದೇಶಕಿಯಾಗಿ ಕ್ಯಾಟಿ ನೂನನ್ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ಸಾಂಗ್ಸ್ ಆಫ್ ದ ಲ್ಯಾಟಿನ್ ಸ್ಕೈಸ್ ಆಲ್ಬಂಗೆ ಆಸ್ಟ್ರೇಲಿಯನ್ ರೆಕಾರ್ಡಿಂಗ್ ಇಂಡಸ್ಟ್ರೀ ಅಸೋಸಿಯೇಷನ್ (ಎಆರ್‌ಐಎ) ಪ್ರಶಸ್ತಿ ಜಯಿಸಿರುವ ಕ್ವೀನ್ಸ್‌ಲ್ಯಾಂಡ್‌ ಮೂಲದ ಕ್ಯಾಟಿ, ಕೂಟದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ : ಆರಂಭಿಕ ಬೌಟ್‌ನಲ್ಲಿ ಗೆದ್ದರೆ ಸಾಕು, ಮೇರಿಗೆ ಕಾಮನ್ವೆಲ್ತ್ ಪದಕ ಗ್ಯಾರಂಟಿ

ಗಣ್ಯರ ಉಪಸ್ಥಿತಿ: ಕೂಟದ ಆರಂಭೋತ್ಸವ ಕಾರ್ಯಕ್ರಮದಲ್ಲಿ ದೊರೆ ಚಾರ್ಲ್ಸ್ ಮತ್ತು ಅವರ ಪತ್ನಿ ಕೆಮಿಲಾ ಕಾಣಿಸಿಕೊಳ್ಳಲಿದ್ದಾರೆ. ಇವರ ಜತೆಗೆ ಕಾಮನ್ವೆಲ್ತ್ ಕ್ರೀಡಾಕೂಟ ಫೆಡರೇಷನ್‌ನ ಉಪ ಮಹಾಪೋಷಕ ಪ್ರಿನ್ಸ್ ಎಡ್ವರ್ಡ್ ಕೂಡ ಸೇರ್ಪಡೆಯಾಗಲಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಕೂಟಕ್ಕೆ ಚಾಲನೆ ನೀಡಲಿದ್ದಾರೆ. ನಟಿ ಮಾರ್ಗೋಟ್ ರಾಬಿ, ನಟ ಕ್ರಿಸ್ ಹೆಮ್ಸ್ ವರ್ತ್ ಹಾಗೂ ಮಹಿಳೆಯರ ಒಳ ಉಡುಪುಗಳ ವಿಶ್ವವಿಖ್ಯಾತ ಬ್ರ್ಯಾಂಡ್ ವಿಕ್ಟೋರಿಯಾ ಸೀಕ್ರೆಟ್‌ನ ರೂಪದರ್ಶಿ ಮಿರಾಂಡ ಕೆರ್ ಕೂಡ ಭಾಗವಹಿಸುವ ಸಾಧ್ಯತೆ ಇದೆ.

ಅಂದಹಾಗೆ, ಈ ಮಿರಾಂಡ ಆಸ್ಟ್ರೇಲಿಯಾದ ಮೊದಲ ರೂಪದರ್ಶಿ ಎನ್ನುವುದು ಕೂಡ ಗಮನಾರ್ಹ. ಇನ್ನುಳಿದಂತೆ ವೈಟ್ ಲೈಟ್ನಿಂಗ್ ಖ್ಯಾತಿಯ ಆಸ್ಟ್ರೇಲಿಯಾದ ಹೆಸರಾಂತ ಸರ್ಫರ್ ಮಿಕ್ ಫ್ಯಾನಿಂಗ್ ಮತ್ತು ವೃತ್ತಿಪರ ಗಾಲ್ಫ್ ಪಟು ಗ್ರೆಗ್ ನಾರ್ಮನ್‌ಗೆ ಆಸ್ಟ್ರೇಲಿಯಾ ಸರ್ಕಾರ ಆಹ್ವಾನ ನೀಡಿದೆ.

ಸೋನಿಯಲ್ಲಿ ನೇರ ಪ್ರಸಾರ: ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರ ಸೋನಿ ನೆಟ್‌ವರ್ಕ್ ನಿರ್ವಹಿಸುತ್ತಿದೆ. ಸೋನಿ ಸಿಕ್ಸ್, ಸೋನಿ ಸಿಕ್ಸ್ ಎಚ್‌ಡಿ ಮತ್ತು ಸೋನಿ ಟೆನ್ ೨ ಹಾಗೂ ಸೋನಿ ಟೆನ್ ೨ ಎಚ್‌ಡಿ ಚಾನೆಲ್‌ಗಳಲ್ಲಿ ಆಂಗ್ಲಭಾಷೆಯ ವಿವರಣೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮ ಬಿತ್ತರವಾಗಲಿದೆ. ಅಂತೆಯೇ ಸೋನಿ ಟೆನ್ ೩ ಮತ್ತು ಸೋನಿ ಟೆನ್ ಎಚ್‌ಡಿ ೩ ಚಾನೆಲ್‌ಗಳಲ್ಲಿ ಹಿಂದಿ ಭಾಷೆಯಲ್ಲಿನ ವಿವರಣೆ ಇರಲಿದೆ. ಇನ್ನು ಕೂಟದ ಕ್ಷಣ ಕ್ಷಣದ ಮಾಹಿತಿಗೆ ಕ್ರೀಡಾಸಕ್ತರು SonyLiv.comಗೆ ಭೇಟಿ ನೀಡಬಹುದು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More