ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಇವರುಗಳನ್ನು ಮಿಸ್ ಮಾಡಿಕೊಳ್ಳಬೇಡಿ

ಕಾಮನ್ವೆಲ್ತ್ ಕ್ರೀಡಾಕೂಟ ಜಗತ್ತಿನ ಎರಡನೇ ಅತಿದೊಡ್ಡ ಆಟೋಟ. ಒಲಿಂಪಿಕ್ಸ್ ನಂತರದ ಕಾಮನ್ವೆಲ್ತ್ ಕೂಟ ಪ್ರತೀ ಬಾರಿಯೂ ಅಪೂರ್ವ ಅಥ್ಲೀಟ್‌ಗಳಿಂದ ಸಂಪನ್ನವಾಗಿದೆ. ಈ ಬಾರಿಯೂ ಕೆಲವು ಕ್ರೀಡಾಪಟುಗಳು ವಿಶ್ವ ಕ್ರೀಡಾಪ್ರಿಯರ ಗಮನ ಸೆಳೆದಿದ್ದು, ಅವರುಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ

ಸ್ಯಾಲಿ ಪಿಯರ್ಸನ್

ಆತಿಥೇಯ ನಾಡಿನ ಸ್ಟಾರ್ ಅಥ್ಲೀಟ್ ಸ್ಯಾಲಿ. ಕೇವಲ ಆಸ್ಟ್ರೇಲಿಯಾ ಪಾಲಿಗಷ್ಟೇ ಅಲ್ಲದೆ, ಕ್ರೀಡಾಕೂಟದ ಪ್ರಮುಖ ಆಕರ್ಷಣೆಯಲ್ಲಿ ಒಬ್ಬರಾಗಿರುವ ಸ್ಯಾಲಿ ಪಿಯರ್ಸನ್ ಆರು ವರ್ಷಗಳ ಹಿಂದೆ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ೧೦೦ ಮೀಟರ್ ಹರ್ಡಲ್ಸ್‌ನಲ್ಲಿ ಬಂಗಾರದ ಪದಕ ಬಾಚಿದ್ದಾಕೆ. ಎರಡು ಬಾರಿ ವಿಶ್ವ ಚಾಂಪಿಯನ್ ಕೂಡ ಆಗಿರುವ ಸ್ಯಾಲಿ ಪಿಯರ್ಸನ್, ದೆಹಲಿ ಮತ್ತು ಗ್ಲಾಸ್ಗೊ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿಯೂ ಚಿನ್ನದ ಪದಕ ಜಯಿಸಿದ್ದಾರೆ.

ತನ್ನ ಬಾಲ್ಯದ ಬಹುಪಾಲು ಜೀವಿತವನ್ನು ಕ್ವೀನ್ಸ್‌ಲ್ಯಾಂಡ್‌ನಲ್ಲೇ ಕಳೆದಿರುವ 31ರ ಹರೆಯದ ಸ್ಯಾಲಿ, ಮೂರು ವರ್ಷಗಳ ಗಾಯದ ಸಮಸ್ಯೆಯನ್ನು ಮೆಟ್ಟಿನಿಂತು ಕಳೆದ ವರ್ಷ ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಚೆಂಡು ವಿರೂಪದ ಹಗರಣದಿಂದಾಗಿ ಇಡೀ ಆಸ್ಟ್ರೇಲಿಯಾ ತಲೆತಗ್ಗಿಸಿದ್ದು, ಇದೀಗ ಸ್ಯಾಲಿ ಪಿಯರ್ಸನ್ ಅವರಂಥ ಅಥ್ಲೀಟ್‌ಗಳು ಮತ್ತೆ ಕಾಂಗರೂ ನಾಡು ತಲೆಎತ್ತಿ ನಿಲ್ಲುವಂತೆ ಮಾಡಲು ಸಜ್ಜಾಗಿದ್ದಾರೆ.

ವೈಯಕ್ತಿಕ ಶ್ರೇಷ್ಠ ಸಾಧನೆ: ೧೦೦ ಮೀಟರ್ ಓಟ: (೧೧.೧೪ ಸೆ.); ೧೦೦ ಮೀಟರ್ ಹರ್ಡಲ್ಸ್: (೧೨.೨೮ ಸೆ.); ೨೦೦ ಮೀಟರ್ ಓಟ: (೨೨.೯೭ನ ಸೆ.); ೪೦೦ ಮೀಟರ್ ಹರ್ಡಲ್ಸ್: (೧:೦೨.೯೮ ಸೆ.)

ಕ್ಯಾಸ್ಟರ್ ಸೆಮೆನ್ಯಾ

ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಅಥ್ಲೀಟ್ ಎನಿಸಿದ ಕ್ಯಾಸ್ಟರ್ ಸೆಮೆನ್ಯಾ ಗೋಲ್ಡ್ ಕೋಸ್ಟ್‌ನಲ್ಲಿನ ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೊಬ್ಬ ಗಮನಾರ್ಹ ರನ್ನರ್. ೮೦೦ ಮೀಟರ್ ಹಾಗೂ ೧೫೦೦ ಮೀಟರ್ ಈ ಎರಡರಲ್ಲಿಯೂ ಚಿನ್ನ ಗೆಲ್ಲುವ ಗುರಿ ಹೊತ್ತಿರುವ ಸೆಮೆನ್ಯಾ, ಜರ್ಮಿಲಾ ಕ್ರಾಟೊಚ್ವಿಲೋವಾ ಅವರ ದಾಖಲೆಯನ್ನು ಮುರಿಯುವ ಗುರಿ ಹೊತ್ತಿದ್ದಾರೆ. ೧೯೮೩ರ ಕೂಟದಲ್ಲಿ ಜರ್ಮಿಲಾ ೮೦೦ ಮೀಟರ್ ಓಟವನ್ನು ಒಂದು ನಿಮಿಷ ಮತ್ತು ೫೩.೨೮ ಸೆ.ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರು. ಸದ್ಯ, ಸೆಮೆನ್ಯಾ ಈ ದಾಖಲೆಯನ್ನು ಪುನರ್ರಚಿಸಲು ಸಜ್ಜಾಗಿದ್ದಾರೆ.

೨೭ರ ಹರೆಯದ ಸೆಮೆನ್ಯಾ, ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವುದಲ್ಲದೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಟ್ರಿಕ್ ಸಾಧಕಿ ಎನಿಸಿಕೊಂಡಾಕೆ. ೨೦೧೦ರ ದೆಹಲಿ ಹಾಗೂ ೨೦೧೪ರ ಗ್ಲಾಸ್ಗೊ ಕಾಮನ್ವೆಲ್ತ್ ಕೂಟವನ್ನು ಗಾಯದ ನಿಮಿತ್ತ ತಪ್ಪಿಸಿಕೊಂಡ ಸೆಮೆನ್ಯಾ, ಚೊಚ್ಚಲ ಕಾಮನ್ವೆಲ್ತ್ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ೬೦೦ ಮೀಟರ್ ಓಟವನ್ನು ೧: ೨೧.೭೭ ಸೆ.ಗಳಲ್ಲಿ ಕ್ರಮಿಸಿದ್ದ ಸೆಮೆನ್ಯಾ ವಿಶ್ವ ದಾಖಲೆ ಬರೆದವರು. ೧೫೦೦ ಮೀಟರ್ ಫೈನಲ್ ಮತ್ತು ೮೦೦ ಮೀಟರ್ ಫೈನಲ್ ಸ್ಪರ್ಧೆಗಳು ಕ್ರಮವಾಗಿ ಏಪ್ರಿಲ್ ೧೦ ಮತ್ತು ೧೩ರಂದು ನಡೆಯಲಿವೆ.

ವೈಯಕ್ತಿಕ ಶ್ರೇಷ್ಠ ಸಾಧನೆ: ೪೦೦ ಮೀಟರ್ ಓಟ: (೫೦.೪೦ ಸೆ.); ೬೦೦ ಮೀಟರ್ ಓಟ: (೧:೨೧.೭೭ ಸೆ.); ೮೦೦ ಮೀಟರ್ ಓಟ: (೧:೫೫.೧೬ ಸೆ.); ೧೫೦೦ ಮೀಟರ್ ಓಟ: (೪:೦೧.೯೯ ಸೆ.)

ಎಲೈನ್ ಥಾಂಪ್ಸನ್

ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಶ್ವ ವಿಖ್ಯಾತ ಓಟಗಾರ ಉಸೇನ್ ಬೋಲ್ಟ್ ಇಲ್ಲದೆ ಹೋದರೂ, ಜಮೈಕಾದ ಅಥ್ಲೀಟ್‌ಗಳು ಅಥ್ಲೆಟಿಕ್ಸ್ ವಿಭಾಗದ ಕೇಂದ್ರಬಿಂದುವಾಗಿದ್ದಾರೆ. ಮಹಿಳೆಯರ ೧೦೦ ಮತ್ತು ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಎಲೈನ್ ಥಾಂಪ್ಸನ್ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ರಿಯೊ ಕೂಟದಲ್ಲಿ ೧೦೦ ಮತ್ತು ೨೦೦ ಮೀಟರ್ ಓಟದಲ್ಲಿ ಮಿಂಚು ಹರಿಸಿದ್ದ ಥಾಂಪ್ಸನ್ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ನಿರಾಸೆ ಅನುಭವಿಸಿದ್ದರು.

೨೫ರ ಹರೆಯದ ಥಾಂಪ್ಸನ್ ೨೦೧೭ರ ವಿಶ್ವ ಚಾಂಪಿಯನ್ಸ್ ಕೂಟದಲ್ಲಿ ನಿಧಾನಗತಿಯ ಆರಂಭದಿಂದಾಗಿ ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದರು. ಇದೇ ವರ್ಷ ನಡೆಯಲಿರುವ ಡೈಮಂಡ್ ಲೀಗ್ ಸ್ಪರ್ಧೆಗೆ ಉತ್ತಮ ತಯಾರಿ ನಡೆಸಲು ಗೋಲ್ಡ್ ಕೋಸ್ಟ್‌ನಲ್ಲಿನ ಕಾಮನ್ವೆಲ್ತ್ ಕೂಟವನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದ ಥಾಂಪ್ಸನ್, ೨೦೦ ಮೀಟರ್ ಮತ್ತು ೪/೧೦೦ ಮೀಟರ್ ರಿಲೇಯಲ್ಲಿ ಮಾತ್ರ ಗೋಲ್ಡ್ ಕೋಸ್ಟ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಅಂದಹಾಗೆ, ಇವೆರಡೂ ವಿಭಾಗದ ಸ್ಪರ್ಧೆಗಳು ಕ್ರಮವಾಗಿ ಏಪ್ರಿಲ್ ೧೨ ಮತ್ತು ೧೪ರಂದು ನಡೆಯಲಿವೆ.

ವೈಯಕ್ತಿಕ ಶ್ರೇಷ್ಠ ಸಾಧನೆ: ೧೦೦ ಮೀಟರ್ ಓಟ: (೧೦.೭೦ ಸೆ.); ೨೦೦ ಮೀಟರ್ ಓಟ: (೨೧.೬೬ ಸೆ.)

ವ್ಯಾಲೆರೀ ಆ್ಯಡಮ್ಸ್

ನ್ಯೂಜಿಲೆಂಡ್‌ನ ಶಾಟ್ ಪುಟ್ ಎಸೆತಗಾರ್ತಿ ಆ್ಯಡಮ್ಸ್ ನಾಲ್ಕನೇ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗುವ ಕನಸು ಹೊತ್ತು ಗೋಲ್ಡ್ ಕೋಸ್ಟ್‌ಗೆ ಆಗಮಿಸಿದ್ದಾರೆ. ಆರು ತಿಂಗಳ ಹಿಂದಷ್ಟೇ ಕಿಮೋನಾ ಎಂಬ ಹೆಣ್ಣುಮಗುವಿಗೆ ಜನ್ಮ ನೀಡಿದ ಆ್ಯಡಮ್ಸ್ ಪದಕ ಗೆಲ್ಲುವ ಅತೀವ ಭರವಸೆಯಲ್ಲಿದ್ದಾರೆ.

ಬೀಜಿಂಗ್ ಮತ್ತು ಲಂಡನ್ ಒಲಿಂಪಿಕ್ಸ್ ಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದ ೩೩ರ ಹರೆಯದ ಡಬಲ್ ಒಲಿಂಪಿಕ್ ಚಾಂಪಿಯನ್. ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆ್ಯಡಮ್ಸ್, ಇತ್ತೀಚೆಗಷ್ಟೇ, “ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟ ನನ್ನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ನನ್ನ ಮಗುವಿನೊಂದಿಗೆ ಪದಕ ಗೆಲ್ಲುವ ವಿಶೇಷ ಕ್ಷಣಗಳನ್ನು ಎದುರುನೋಡುತ್ತಿದ್ದೇನೆ,’’ ಎಂದು ಹೇಳಿದ್ದರು. ಏಪ್ರಿಲ್ ೧೩ರಂದು ಶಾಟ್ ಪುಟ್ ಫೈನಲ್ ನಡೆಯಲಿದೆ.

ಶ್ರೇಷ್ಠ ಸಾಧನೆ: ೨೧.೨೪ ಮೀಟರ್ (ಹೊರಾಂಗಣದಲ್ಲಿ ೨೦೧೧ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ); ೨೦.೫೪ ಮೀಟರ್ (೨೦೧೨ರಲ್ಲಿ ಒಳಾಂಗಣ ಸ್ಪರ್ಧೆಯಲ್ಲಿ)

ಐಸಾಕ್ ಮಕ್ವಾಲ

ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಕಳೆದ ವರ್ಷ ಉಸೇನ್ ಬೋಲ್ಟ್ ಅವರಂತೆ ಪದೇ ಪದೇ ಸುದ್ದಿಯಲ್ಲಿದ್ದವ ಈ ಐಸಾಕ್ ಮಕ್ವಾಲ. ೩೧ರ ಹರೆಯದ ಐಸಾಕ್, ಕಳೆದ ವರ್ಷ ಲಂಡನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಫೇವರಿಟ್ ಎನಿಸಿದ್ದರು. ಆದರೆ, ಅವರಲ್ಲಿ ನೊರೊವೈರಸ್ ಇದ್ದಿರಬಹುದೆಂಬ ಶಂಕೆಯಿಂದ ೪೦೦ ಮೀಟರ್ ಫೈನಲ್‌ನಲ್ಲಿ ಸ್ಪರ್ಧಿಸದಂತೆ ತಡೆಯಲಾಯಿತು. ಅಂತೆಯೇ ೨೦೦ ಮೀಟರ್ ಹೀಟ್ಸ್‌ನಲ್ಲಿಯೂ ಅವರು ಅನರ್ಹರೆನಿಸಿದರು.

ಗೋಲ್ಡ್ ಕೋಸ್ಟ್‌ನಲ್ಲಿ ಮಕ್ವಾಲ ೪೦೦ ಮೀಟರ್ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲಿದ್ದು, ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ. “ಸ್ಕಾಟ್ಲೆಂಡ್ ನನ್ನ ಪಾಲಿಗೆ ಅತಿ ಶೀತಲವಾಗಿತ್ತು. ಇಲ್ಲಿ ಪದಕ ಗೆಲ್ಲುತ್ತೇನೆಂಬ ವಿಶ್ವಾಸ ಇತ್ತಾದರೂ, ವಿಫಲವಾದೆ. ಪ್ರತಿಕೂಲ ವಾತಾವರಣ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಆದರೆ, ಆಸ್ಟ್ರೇಲಿಯಾ ಹವಾಗುಣದಲ್ಲಿ ನಾನು ಪದಕ ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸವಿದೆ,’’ ಎಂದು ಬೋಸ್ವಾನ ಮೂಲದ ಮಕ್ವಾಲ ತಿಳಿಸಿದ್ದಾರೆ. ಅಂದಹಾಗೆ, ಪುರುಷರ ೪೦೦ ಮೀಟರ್ ಫೈನಲ್ ಏಪ್ರಿಲ್ ೧೦ರಂದು ಜರುಗಲಿದೆ.

ವೈಯಕ್ತಿಕ ಶ್ರೇಷ್ಠ ಸಾಧನೆ: ೪೦೦ ಮೀಟರ್: (೪೪.೨೩ ಸೆ); ೪/೪೦೦ ಮೀಟರ್ ರಿಲೇ: (೩:೦೩.೧೬ ಸೆ.)

ಸ್ಕೈ ನಿಕೋಲ್ಸನ್

ಮಹಿಳಾ ಬಾಕ್ಸಿಂಗ್‌ನಲ್ಲಿ ಸ್ಥಳೀಯ ಬಾಕ್ಸರ್ ಸ್ಕೈ ನಿಕೋಲ್ಸನ್ ಪದಕದ ಭರವಸೆ ಮೂಡಿಸಿದ್ದಾರೆ. ಗೋಲ್ಡ್ ಕೋಸ್ಟ್‌ಗೆ ಕೇವಲ ೧೫ ಮೈಲಿ ದೂರದಲ್ಲಿ ವಾಸಿಸುತ್ತಿರುವ ನಿಕೋಲ್ಸನ್, ೫೭ ಕೆಜಿ ವಿಭಾಗದಲ್ಲಿ ಬಾಕ್ಸಿಂಗ್ ರಿಂಗ್‌ಗೆ ಇಳಿಯಲಿದ್ದಾರೆ. ೨೦೧೬ರ ರಿಯೊ ಒಲಿಂಪಿಕ್ಸ್ ಕೂಟವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದ ನಿಕೋಲ್ಸನ್, ತವರಿನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಅಂದಹಾಗೆ ನಿಕೋಲ್ಸನ್ ಅವರ ಸೋದರ ಜೇಮಿ ಕೂಡ ಬಾಕ್ಸರ್ ಆಗಿದ್ದು, ಆಕ್ಲೆಂಡ್‌ನಲ್ಲಿ ನಡೆದಿದ್ದ ೧೯೯೦ರ ಕಾಮನ್ವೆಲ್ತ್ ಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ. ಆದರೆ, ದುರದೃಷ್ಟವಶಾತ್ ಜೇಮಿ ಮತ್ತು ನಿಕೋಲ್ಸನ್ ಅವರ ಕಿರಿಯ ಸೋದರ ಗವಿನ್ ನಾಲ್ಕು ವರ್ಷಗಳ ಬಳಿಕ ತರಬೇತಿ ಮುಗಿಸಿಕೊಂಡು ಬರುತ್ತಿದ್ದಾಗ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದರು. ನಿಕೋಲ್ಸನ್ ಹುಟ್ಟುವ ಒಂದು ವರ್ಷ ಮುಂಚೆ ಈ ದುರ್ಘಟನೆ ಸಂಭವಿಸಿತ್ತು.

ಮಹಿಳೆಯರ ೫೭ ಕೆಜಿ ಫೈನಲ್: ಏಪ್ರಿಲ್ ೧೪ರಂದು ನಡೆಯಲಿದೆ.

ರಾಕೇಶ್ ಪಾತ್ರಾ

ಮೆಲ್ಬೋರ್ನ್‌ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯ ಕಂಡ ವಿಶ್ವಕಪ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಭಾರತದ ಈ ಪ್ರತಿಭಾನ್ವಿತ ಜಿಮ್ನಾಸ್ಟ್ ರಾಕೇಶ್ ಪಾತ್ರಾ ನಾಲ್ಕನೇ ಸ್ಥಾನ ಗಳಿಸಿದ್ದರು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕೂಟಕ್ಕೆ ಆಯ್ಕೆಯಾಗಿದ್ದ ಭಾರತದ ಅಥ್ಲೀಟ್‌ಗಳ ಪಟ್ಟಿಯಿಂದ ರಾಕೇಶ್ ಅವರನ್ನು ಕೈಬಿಡಲಾಗಿತ್ತು. ಇದಕ್ಕೆ ಕಾರಣ, ರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಒಕ್ಕೂಟ ಮತ್ತು ಭಾರತೀಯ ಒಲಿಂಪಿಕ್ ಸಮಿತಿ ಜತೆಗಿನ ತಿಕ್ಕಾಟ ಕಾರಣವಾಗಿತ್ತು. ಆದರೆ, ಪಟ್ಟು ಬಿಡದ ರಾಕೇಶ್, ದೆಹಲಿ ಉಚ್ಚ ನ್ಯಾಯಾಲಯದಲ್ಲಿ ವಾದಾಡಿ ಅಂತಿಮವಾಗಿ ಗೋಲ್ಡ್ ಕೋಸ್ಟ್‌ಗೆ ಕಾಲಿಟ್ಟಿದ್ದಾರೆ.

ಒಡಿಶಾ ಮೂಲದ ರಾಕೇಶ್ ಕಡುಬಡತನ ಕುಟುಂಬದಿಂದ ಬಂದವರು. ಕೇವಲ ಐದು ವರ್ಷದವರಿದ್ದಾಗಲೇ ಪುರಿಯಲ್ಲಿನ ಅವರ ಪುಟ್ಟ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು. ಬ್ರಹ್ಮಗಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಮಾಸ್ತರ್ ಆಗಿದ್ದ ಅವರ ತಂದೆ ದಯಾನಿಧಿ ಪಾತ್ರಾ, ತಿಂಗಳಿಗೆ ಗಳಿಸುತ್ತಿದ್ದ ೪೦೦ ರು.ಗಳಲ್ಲಿ ಅರ್ಧದಷ್ಟು ಮೊತ್ತವನ್ನು ಮಗನ ಅಭ್ಯಾಸಕ್ಕೆಂದೇ ವಿನಿಯೋಗಿಸುತ್ತಿದ್ದರು. ೨೦೧೦ರಿಂದ ಪ್ರಮುಖ ಸ್ಪರ್ಧಾಕಣಗಳಲ್ಲಿ ಸ್ಪರ್ಧಿಸುತ್ತಾ ಬರುತ್ತಿರುವ ಅವರು ಚೊಚ್ಚಲ ಅಂತಾರಾಷ್ಟ್ರೀಯ ಪದಕಕ್ಕಾಗಿ ಹೆಣಗಾಡುತ್ತಿದ್ದಾರೆ.

ಪುರುಷರ ರಿಂಗ್ಸ್ ಫೈನಲ್: ಏಪ್ರಿಲ್ ೮ರಂದು ನಡೆಯಲಿದೆ.

ಎಮ್ಮಾ ಮ್ಯಾಕ್ವಿನ್

ಆಸ್ಟ್ರೇಲಿಯಾದ ಪ್ರಚಂಡ ಈಜುಗಾರ್ತಿ ಎಮ್ಮಾ ಮ್ಯಾಕ್ವಿನ್, ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಾಲ್ಕು ಸ್ವರ್ಣ ಪದಕ ಗೆದ್ದು ಸುದ್ದಿ ಮಾಡಿದ್ದಾಕೆ. ಈ ಬಾರಿ ಆರು ಪದಕಗಳನ್ನು ಗೆದ್ದು ಒಂದೇ ಕೂಟದಲ್ಲಿ ಈ ಸಾಧನೆ ಮಾಡಿದ ಇಯಾನ್ ಥೋರ್ಫ್ ಅವರಂಥ ಸಾಧನೆ ಗೈಯುವುದು ಎಮ್ಮಾ ಹೆಗ್ಗುರಿಯಾಗಿದೆ. ಅಂದಹಾಗೆ, ಕಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ಈಜು ವಿಭಾಗದಲ್ಲೇ ೧೯ ಪದಕಗಳನ್ನು ಬಾಚಿಕೊಂಡಿತ್ತು.

೨೦೧೪ರ ೨೦೦ ಮೀಟರ್ ಫ್ರೀಸ್ಟೈಲ್ ಚಾಂಪಿಯನ್ ಎಮ್ಮಾ, ಈ ಬಾರಿ ಮೂರು ವೈಯಕ್ತಿಕ ವಿಭಾಗಗಳಲ್ಲಿ ಮತ್ತು ಮೂರು ರಿಲೇ ವಿಭಾಗಗಳಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಸ್ಥಳೀಯರ ಬೆಂಬಲದೊಂದಿಗೆ ಈ ಬಾರಿಯೂ ಎಮ್ಮಾ ಈಜುಕೊಳದಲ್ಲಿ ಚಿನ್ನ ದೋಚುವ ಕನಸು ಹೊತ್ತಿದ್ದಾರೆ.

ಈಜು ವೇಳಾಪಟ್ಟಿ: ಮಹಿಳೆಯರ ೨೦೦ ಮೀಟರ್ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೫; ೪/೧೦೦ ಮೀಟರ್ ಫ್ರೀಸ್ಟೈಲ್ ರಿಲೇ ಫೈನಲ್: ಏಪ್ರಿಲ್ ೫; ೧೦೦ ಮೀಟರ್ ಬಟರ್‌ಫ್ಲೈ ಫೈನಲ್: ಏಪ್ರಿಲ್ ೬; ೪/೨೦೦ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೭; ೨೦೦ ಮೀಟರ್ ಬಟರ್‌ಫ್ಲೈ ಫೈನಲ್: ಏಪ್ರಿಲ್ ೯; ೪/೧೦೦ ಮೀಟರ್ ಮೆಡ್ಲೆ ಫೈನಲ್: ಏಪ್ರಿಲ್ ೧೦ರಂದು ನಡೆಯಲಿದೆ.

ಇದನ್ನೂ ಓದಿ : ಕ್ರಿಕೆಟ್ ನಾಡಿನಲ್ಲಿ ಶುರುವಾಯ್ತು ಕಾಮನ್ವೆಲ್ತ್ ಕ್ರೀಡಾಕೂಟದ ಕಲರವ

ಚಾಡ್ ಲೀ ಕ್ಲೋಸ್

ಡರ್ಬಾನ್ ಮೂಲದ ಈಜುಗಾರ ಈ ಚಾಡ್ ಲೀ ಕ್ಲೋಸ್. ೨೦೧೨ರ ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ೨೦೦ ಮೀಟರ್ ಬಟರ್ ಫ್ಲೈ ವಿಭಾಗದಲ್ಲಿ ವಿಶ್ವದ ಸರ್ವಶ್ರೇಷ್ಠ ಈಜುಗಾರ ಮೈಕೆಲ್ ಫೆಲ್ಫ್ಸ್ ಅವರನ್ನು ಮಣಿಸಿ ವಿಶ್ವ ಈಜು ತಜ್ಞರನ್ನು ಬೆಚ್ಚಿಬೀಳಿಸಿದ್ದ. ೨೫ರ ಹರೆಯದ ಚಾಡ್, ಎಂಟನೇ ಕಾಮನ್ವೆಲ್ತ್ ಪದಕಕ್ಕಾಗಿ ಗೋಲ್ಡ್ ಕೋಸ್ಟ್‌ ಸವಾಲಿಗೆ ಅಣಿಯಾಗಿದ್ದಾರೆ.

೨೦೧೪ರ ಗ್ಲಾಸ್ಗೋ ಕೂಟದಲ್ಲಿ ೧೦೦ ಮೀಟರ್ ಮತ್ತು ೨೦೦ ಮೀಟರ್ ಬಟರ್‌ಫ್ಲೈ ವಿಭಾಗಗಳೆರಡರಲ್ಲೂ ಚಿನ್ನದ ಪದಕ ಜಯಿಸಿದ್ದಲ್ಲದೆ, ಸ್ಪರ್ಧೆಯ ಏಳು ವಿಭಾಗಗಳಲ್ಲಿಯೂ ಪದಕ ಗೆದ್ದ ದಾಖಲೆ ಈ ಚಾಡ್ ಲೀಯದ್ದು. ಒಂದೊಮ್ಮೆ ಈ ಬಾರಿ ತಾನು ಸ್ಪರ್ಧಿಸಿದ ಎಲ್ಲ ವಿಭಾಗಗಳಲ್ಲೂ ಪದಕ ಗೆದ್ದದ್ದೇ ಆದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದ ಚರಿತ್ರೆಯಲ್ಲೇ ಯಶಸ್ವಿ ಈಜುಗಾರ ಎನಿಸಿ ದಾಖಲೆ ಬರೆಯಲಿದ್ದಾರೆ. ಪ್ರಸಕ್ತ ಗುರಿಕಾರರಾದ ಮಿಕ್ ಗಾಲ್ಟ್ ಮತ್ತು ಫಿಲಿಪ್ ಆ್ಯಡಮ್ಸ್ ತಲಾ ೧೮ ಪದಕಗಳನ್ನು ಗಳಿಸಿ ಮೇರು ಸ್ಥಾನದಲ್ಲಿದ್ದಾರೆ. ಎರಡು ಕೂಟಗಳಿಂದ ಕ್ಲೋಸ್ ೧೨ ಪದಕಗಳನ್ನು ಜಯಿಸಿದ್ದಾರೆ.

ಈಜು ವೇಳಾಪಟ್ಟಿ: ಪುರುಷರ ೨೦೦ ಮೀಟರ್ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೬; ೫೦ ಮೀಟರ್ ಬಟರ್‌ಫ್ಲೈ ಫೈನಲ್: ಏಪ್ರಿಲ್ ೬; ೧೦೦ ಮೀಟರ್ ಬಟರ್‌ಫ್ಲೈ ಫೈನಲ್: ಏಪ್ರಿಲ್ ೯; ೨೦೦ ಮೀಟರ್ ಬರ್‌ಫ್ಲೈ ಫೈನಲ್: ಏಪ್ರಿಲ್ ೭; ೪/೧೦೦ ಮೀಟರ್ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೬; ೧೦ ಮೀಟರ್ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೮; ೪/೨೦೦ ಮೀಟರ್ ಫ್ರೀಸ್ಟೈಲ್ ಫೈನಲ್: ಏಪ್ರಿಲ್ ೮; ೪/೧೦೦ ಮೀಟರ್ ಮೆಡ್ಲೆ ಫೈನಲ್: ಏಪ್ರಿಲ್ ೧೦

ಸೋಫಿ ಪಾಸ್ಕೊ

೨೦೦೮ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರೊಂದಿಗೆ ವೃತ್ತಿಬದುಕಿಗೆ ಕಾಲಿಟ್ಟ ನ್ಯೂಜಿಲೆಂಡ್‌ನ ಅತ್ಯಂತ ಯಶಸ್ವಿ ಪ್ಯಾರಾಥ್ಲೀಟ್ ಎನಿಸಿರುವ ಸೋಫಿ ಪಾಸ್ಕೊ ಇದುವರೆಗೆ ಒಂಬತ್ತು ಚಿನ್ನದ ಪದಕಗಳನ್ನು ಜಯಿಸಿದ್ದಾರೆ. ಗ್ಲಾಸ್ಗೊ ಕೂಟದಲ್ಲಿ ಎರಡು ಸ್ವರ್ಣ ಗೆದ್ದ ಸೋಫಿ, ೧೩ ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.

ಸೋಫಿ ಎರಡನೇ ವರ್ಷದಲ್ಲಿದ್ದಾಗ ಅಪಘಾತವೊಂದರಲ್ಲಿ ಎಡಗಾಲಿನ ಕೆಳಭಾಗವನ್ನು ಕಳೆದುಕೊಂಡರು. ಆನಂತರ ಹುಲ್ಲುಗಾವಲನ್ನು ಹದಗೊಳಿಸುವ ಯಂತ್ರ ಆಕೆಯ ಬಲಗಾಲಿಗೆ ಹರಿದು ಅದರಿಂದಲೂ ಆಕೆ ಘಾಸಿಗೊಂಡಿದ್ದರು. ಇಷ್ಟಾದರೂ, ತನ್ನ ಏಳನೇ ವಯಸ್ಸಿನಲ್ಲೇ ನೀರಿಗೆ ಇಳಿದ ಸೋಫಿ ಇದೀಗ ನ್ಯೂಜಿಲೆಂಡ್‌ನ ಯಶಸ್ವಿ ಮಹಿಳಾ ಪ್ಯಾರಾಥ್ಲೀಟ್ ಆಗಿ ರೂಪುತಳೆದಿದ್ದಾರೆ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಸೋಫಿಗೆ ಸವಾಲೊಡ್ಡುವುದು ದುಸ್ತರದ ಸಂಗತಿ.

ಮಹಿಳೆಯರ ಎಸ್‌ಎಂ ೧೦ ೨೦೦ ಮೀಟರ್ ವೈಯಕ್ತಿಕ ಮೆಡ್ಲೆ: ಏಪ್ರಿಲ್ ೭; ಎಸ್‌ಬಿ೯ ೧೦೦ ಮೀಟರ್ ಬ್ರೆಸ್ಟ್‌ಸ್ಟ್ರೋಕ್: ಏಪ್ರಿಲ್ ೯.

ಡೇವಿಡ್ ಕಟೊಟಾವು

೨೦೧೪ರ ಕಾಮನ್ವೆಲ್ತ್ ಕ್ರೀಡಾಕೂಟವಲ್ಲದೆ, ೨೦೧೬ರ ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದ ಡೇವಿಡ್ ಕಟೊಟಾವು ಗೋಲ್ಡ್ ಕೋಸ್ಟ್‌ನಲ್ಲಿ ಪದಕ ಗೆಲ್ಲುವ ಭರವಸೆಯಲ್ಲಿದ್ದಾರೆ. ೩೩ರ ಹರೆಯದ ಡೇವಿಡ್, ವೇಟ್‌ಲಿಫ್ಟಿಂಗ್ ಸ್ಪರ್ಧೆಯ ೮೫ ಕೆಜಿ ವಿಭಾಗದಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಕಿರಿಬಾಟಿಗೆ ಮೊಟ್ಟಮೊದಲ ಕಾಮನ್ವೆಲ್ತ್ ಪದಕ ತಂದುಕೊಟ್ಟ ಹಿರಿಮೆಗೆ ಭಾಜನವಾಗಿರುವ ಡೇವಿಡ್, ನಾಲ್ಕು ವರ್ಷಗಳ ಹಿಂದಿನ ಸಾಧನೆಯನ್ನು ಪುನರಾವರ್ತಿಸಲು ಪಣ ತೊಟ್ಟಿದ್ದಾರೆ.

ಪುರುಷರ ೮೫ ಕೆಜಿ ವೇಟ್‌ಲಿಫ್ಟಿಂಗ್ ಫೈನಲ್: ಏಪ್ರಿಲ್ ೭ರಂದು ನಡೆಯಲಿದೆ

ಸಾರಾ-ಮೆಲಿಸ್ಸಾ ಮೋಡಿ

ಬೀಚ್ ವಾಲಿಬಾಲ್‌ನಲ್ಲಿ ಇದುವರೆಗೆ ಪಾರಮ್ಯ ಮೆರೆದದ್ದು ಬ್ರೆಜಿಲ್, ಅಮೆರಿಕ ಹಾಗೂ ಆಸ್ಟ್ರೇಲಿಯಾ ಸ್ಪರ್ಧಿಗಳು. ಆದರೆ, ಈ ಬಾರಿಯ ಗೋಲ್ಡ್ ಕೋಸ್ಟ್ ಕ್ರೀಡಾಕೂಟದಲ್ಲಿ ಮೋಡಿ ಮಾಡಲು ತುದಿಗಾಲಲ್ಲಿ ನಿಂತಿರುವುದು ಕೆನಡಾದ ಮೆಲಿಸ್ಸಾ ಹುಮಾನ ಮತ್ತು ಸಾರಾ ಪವನ್ ಜೋಡಿ. ೨೫ ವರ್ಷದ ಮೆಲಿಸಾ ಹಾಗೂ ೩೧ರ ಹರೆಯದ ಸಾರಾ ಬೀಚ್ ವಾಲಿಬಾಲ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಫೇವರಿಟ್ ಎನಿಸಿದ್ದಾರೆ.

ಮಹಿಳಾ ಬೀಚ್ ವಾಲಿಬಾಲ್ ಫೈನಲ್: ಏಪ್ರಿಲ್ ೧೨

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More