ಕರಾರಾ ಅಂಗಣದಲ್ಲಿ ಮೈದಳೆದ ಆಸೀಸ್ ಸಂಸ್ಕೃತಿಯ ಕಿನ್ನರಲೋಕ

ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಕ್ಷಣಗಳು ಕರಾರಾ ಕ್ರೀಡಾಂಗಣದಲ್ಲಿ ಕಾಂಗರೂಗಳ ಪೂರ್ವಜರ ಸಂಸ್ಕೃತಿಯನ್ನು ಅಕ್ಷರಶಃ ಅನಾವರಣಗೊಳಿಸಿತು. ಇದೇ ವೇಳೆ ಕಾಮನ್ವೆಲ್ತ್ ಕಲ್ಪನೆಯ ವಿರುದ್ಧ ಸ್ಥಳೀಯ ಮೂಲನಿವಾಸಿಗಳು ವಸಾಹತುಶಾಹಿಯ ಕ್ರೌರ್ಯಗಳನ್ನೂ ನೆನಪಿಸಿದರು

ಮೋಡ ಕವಿದ ವಾತಾವರಣದಿಂದಾಗಿ ಆಗಾಗ್ಗೆ ಜಿನುಗುತ್ತಿದ್ದ ಮಳೆಯ ನಡುವೆ ಗೋಲ್ಡ್ ಕೋಸ್ಟ್‌ನಲ್ಲಿನ ಐತಿಹಾಸಿಕ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನೆಗೆ ಜಗತ್ತಿನ ೭೧ ರಾಷ್ಟ್ರಗಳ ಅಥ್ಲೀಟ್‌ಗಳು ಸಾಕ್ಷಿಗಳಾದರು. ವಿಪರ್ಯಾಸವೆಂದರೆ ಉದ್ಘಾಟನಾ ಕಾರ್ಯಕ್ರಮದ ಮೂಲವಸ್ತುವಾಗಿದ್ದ ಆಸ್ಟ್ರೇಲಿಯಾದ ಮೂಲನಿವಾಸಿಗಳ ಪರಂಪರೆಯ ಸಮಾರಂಭ ಎರಡು ಗಂಟೆಗಳ ಅವಧಿಯಲ್ಲಿ ಮುಗಿಯಿತು.

ಅಥ್ಲೆಟಿಕ್ಸ್ ಕೂಟದ ಪ್ರಮುಖ ತಾಣವಾಗಿರುವ ಕರಾರಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭಗಳಿಗೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾಗಲಿಲ್ಲ. ಮೂಲನಿವಾಸಿಗಳ ಗುಂಪು ಕಾಮನ್ವೆಲ್ತ್ ಕಲ್ಪನೆಯ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಬ್ರಿಟನ್ ಸಾಮ್ರಾಜ್ಞಿಯ ಬೇಟನ್ ರಿಲೇಯನ್ನು ನಗರದ ಸ್ಪಿಟ್ ಪ್ರದೇಶದಲ್ಲಿ ಸರಿಸುಮಾರು ಒಂದು ತಾಸಿನವರೆಗೆ ತಡೆಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

“ವಿಶ್ವದ ಅತ್ಯಂತ ಸ್ನೇಹಪರ ದೇಶಗಳೆಲ್ಲಾ ಒಂದಾಗಿ ಈ ಮನರಂಜನಾ ಕ್ರೀಡೆಯನ್ನು ನಡೆಸುತ್ತಾ ಬರುತ್ತಿದ್ದು, ನಾವಿಲ್ಲಿ ಮತ್ತೊಮ್ಮೆ ಈ ಕೂಟದ ಅತಿಥಿಗಳಾಗಿದ್ದೇವೆ. ಕಾಮನ್ವೆಲ್ತ್ ಕ್ರೀಡಾಕೂಟವನ್ನು ‘ಫ್ರೆಂಡ್ಲಿ ಗೇಮ್ಸ್’ ಎಂದು ಕರೆಯಲಾಗುತ್ತಿದ್ದು, ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ,’’ ಎಂದು ಬ್ರಿಟನ್ ರಾಣಿ ಪ್ರತಿನಿಧಿಯಾಗಿ ಪ್ರಿನ್ಸ್ ಚಾರ್ಲ್ಸ್ ಉದ್ಘೋಷಿಸುತ್ತಿದ್ದಂತೆ ಕ್ರೀಡಾಂಗಣ ಹರ್ಷೋದ್ಗಾರದಲ್ಲಿ ಮುಳುಗಿತು.

ಗೋಲ್ಡ್ ಕೋಸ್ಟ್‌ನ ಕರಾರಾ ಕ್ರೀಡಾಂಗಣದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು
ಇದನ್ನೂ ಓದಿ : ಕಾಮನ್ವೆಲ್ತ್ ಕ್ರೀಡಾ ಕೂಟದ ಉದ್ಘಾಟನೆಗೆ ರಂಗು ತುಂಬಲಿರುವ ಬೆಡಗಿ ಡೆಲ್ಟಾ

ಮುನ್ನಡೆಸಿದ ಸಿಂಧು: ಸರಿಸುಮಾರು ೨೫ ಸಹಸ್ರ ಪ್ರೇಕ್ಷಕರ ಸಮ್ಮುಖದಲ್ಲಿ ಭಾರತ ತಂಡದ ನಿಯೋಗವನ್ನು ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ತ್ರಿವರ್ಣವನ್ನು ಹಿಡಿದು ಮುನ್ನಡೆಸಿದರು. ಈ ಬಾರಿ ಭಾರತ ವನಿತೆಯರು ಸಾಂಪ್ರದಾಯಿಕ ಸೀರೆಯಲ್ಲಿರದೆ ಬ್ಲೇಜರ್ ಹಾಗೂ ಪ್ಯಾಂಟ್ ಧರಿಸಿದ್ದರು. ಕ್ರೀಡಾಂಗಣದಲ್ಲಿ ನೆರೆದಿದ್ದ ದೇಶದ ಮಿಕ್ಕ ಕ್ರೀಡಾಪಟುಗಳಿಗೆ ಹಾಗೂ ಪ್ರೇಕ್ಷಕರಿಗೆ ವಂದಿಸುತ್ತಾ ನಡೆದ ಭಾರತದ ನಿಯೋಗ ಇದೀಗ ಪದಕ ಬೇಟಗೆ ಮುಂದಾಗಿದೆ.

ತನ್ನ ಕಾಮನ್ವೆಲ್ತ್ ಕ್ರೀಡಾಕೂಟದ ಚರಿತ್ರೆಯಲ್ಲಿ ಭಾರತ ತವರಿನಲ್ಲಿ ನಡೆದ ೨೦೧೦ರ ಆವೃತ್ತಿಯಲ್ಲಿ ಶ್ರೇಷ್ಠ ಸಾಧನೆ ಮಾಡಿತ್ತು. ಕೂಟ ನಡೆಯುವ ಆತಿಥೇಯ ನಾಡಿನ ಅಥ್ಲೀಟ್‌ಗಳು ಪ್ರಾಬಲ್ಯ ಮೆರೆಯುವಂತೆ ಭಾರತ ಕೂಡ ಎಂಟು ವರ್ಷಗಳ ಹಿಂದೆ ತನ್ನ ನೆಲದಲ್ಲಿ ನಡೆದ ಕೂಟದಲ್ಲಿ ೩೮ ಚಿನ್ನ, ೨೭ ಬೆಳ್ಳಿ, ೩೬ ಕಂಚು ಸೇರಿದ ಒಟ್ಟು ೧೦೧ ಪದಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತ್ತು.

ಇನ್ನು, ನಾಲ್ಕು ವರ್ಷಗಳ ಹಿಂದೆ ನಡೆದ ಗ್ಲಾಸ್ಗೊ ಕೂಟದಲ್ಲಿ ಭಾರತ ಚಿನ್ನದ ಪದಕ ಗಳಿಕೆಯಲ್ಲಿ ಹಿಂದೆ ಬಿದ್ದಿತು. ೨೦೧೪ರ ಆವೃತ್ತಿಯಲ್ಲಿ ಕೇವಲ ೧೫ ಚಿನ್ನದ ಪದಕಗಳಿಗೆ ತೃಪ್ತವಾಗಿದ್ದ ಭಾರತ, ೩೦ ಬೆಳ್ಳಿ, ೧೯ ಕಂಚು ಸೇರಿದ ಒಟ್ಟು ೬೪ ಪದಕಗಳನ್ನು ಗಳಿಸಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಆದರೆ, ಈ ಬಾರಿ ಶೂಟಿಂಗ್, ಬ್ಯಾಡ್ಮಿಂಟನ್, ಕುಸ್ತಿಯಂಥ ಕ್ರೀಡೆಗಳಲ್ಲಿ ಪ್ರಭುತ್ವ ಮೆರೆಯುವ ವಿಶ್ವಾಸದಲ್ಲಿರುವ ಭಾರತ ಮತ್ತೊಮ್ಮೆ ಕಾಮನ್ವೆಲ್ತ್ ಕೂಟದಲ್ಲಿ ಆಕರ್ಷಕ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More