ಸ್ಪರ್ಧೆಗೂ ಮುಂಚೆ ಮೊದಲ ಪದಕ ಖಚಿತಪಡಿಸಿದ ಆತಿಥೇಯ ಆಸ್ಟ್ರೇಲಿಯಾ!

೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಉದ್ಘಾಟನೆ ನಡೆಯುತ್ತಿರುವ ಬೆನ್ನಲ್ಲೇ ಕೂಟದ ಆತಿಥ್ಯ ಹೊತ್ತಿರುವ ಆಸ್ಟ್ರೇಲಿಯಾ ಮೊದಲ ಪದಕವನ್ನು ಖಚಿತಪಡಿಸಿಕೊಂಡಿದೆ! ಮಹಿಳಾ ಬಾಕ್ಸರ್ ಟೇಲಾಹ್ ರಾಬರ್ಟ್ಸನ್ ಬಾಕ್ಸಿಂಗ್ ರಿಂಗ್‌ಗೆ ಇಳಿಯದೆಯೇ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿಕೊಂಡಿದ್ದಾರೆ

ಕಾಮನ್ವೆಲ್ತ್ ಕ್ರೀಡಾಕೂಟದ ಚರಿತ್ರೆಯಲ್ಲಿ ಗರಿಷ್ಠ ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮೆರೆದಿರುವ ಆಸ್ಟ್ರೇಲಿಯಾ, ಈ ಬಾರಿಯ ಕ್ರೀಡಾಕೂಟ ಶುರುವಾಗುವ ಮುನ್ನವೇ ಪದಕ ಖಾತ್ರಿಪಡಿಸಿಕೊಂಡಿದೆ. ಆಸ್ಟ್ರೇಲಿಯಾದ ಈ ಅದೃಷ್ಟಕ್ಕೆ ಕಾರಣ ೫೧ ಕೆಜಿ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಏಳು ಬಾಕ್ಸರ್‌ಗಳಷ್ಟೇ ಕಾದಾಡಲಿದ್ದಾರೆ. ೧೯ರ ಹರೆಯದ ಟೇಲಾಹ್ ರಾಬರ್ಟ್ಸನ್ ಸೆಮಿಫೈನಲ್‌ಗೆ ಬೈ ಪಡೆದಿದ್ದು ಆಸ್ಟ್ರೇಲಿಯಾಗೆ ಮೊದಲ ಪದಕವನ್ನು ತಂದುಕೊಟ್ಟಿದೆ.

ಅಂತಿಮ ನಾಲ್ಕರ ಘಟ್ಟದ ಕಾದಾಟದಲ್ಲಿ ಸೋಲನುಭವಿಸಿದ ಇಬ್ಬರೂ ಸ್ಪರ್ಧಿಗಳು ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಯುವ ಬಾಕ್ಸರ್ ನಿಸ್ಸಂಶಯವಾಗಿಯೂ ಪದಕ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ. “ಕಾಮನ್ವೆಲ್ತ್ ಕೂಟದಲ್ಲಿ ಪದಕ ಖಚಿತವಾಗಿರುವುದು ಸಂತಸ ತಂದಿದೆ. ಆದರೆ, ನಾನು ಬಂಗಾರದ ಪದಕ ಗೆಲ್ಲುವ ಗುರಿ ಹೊತ್ತಿದ್ದೇನೆ. ಎಲ್ಲ ಬಗೆಯ ತರಬೇತಿಯನ್ನೂ ನಾನು ಪೂರೈಸಿದ್ದೇನೆ. ಸೆಮಿಫೈನಲ್‌ನಲ್ಲಿ ನನ್ನ ಎದುರು ಯಾರು ಕಾದಾಡಲಿದ್ದಾರೆ ಎಂಬುದರ ಬಗ್ಗೆ ನನಗೆ ಚಿಂತೆ ಇಲ್ಲ. ಈ ಕದನಕ್ಕೆ ನಾನು ಸಿದ್ಧಳಿದ್ದೇನೆ,’’ ಎಂದು ರಾಬರ್ಟಸನ್ ಪ್ರತಿಕ್ರಿಯಿಸಿದ್ದಾರೆ.

ಗೋಲ್ಡ್ ಕೋಸ್ಟ್‌ನಲ್ಲಿ ಬಾಕ್ಸಿಂಗ್ ಸೆಣಸಾಟ ಗುರುವಾರದಿಂದಲೇ (ಏಪ್ರಿಲ್ ೫) ಶುರುವಾಗಲಿದೆ. ಅಂದಹಾಗೆ ಬಾಕ್ಸರ್ ಒಬ್ಬರು ಬಾಕ್ಸಿಂಗ್ ರಿಂಗ್‌ಗೆ ಇಳಿಯದೇ ಪದಕವನ್ನು ಖಚಿತಪಡಿಸಿಕೊಂಡದ್ದು ಇದೇ ಮೊದಲೇನಲ್ಲ. ಎಡಿನ್‌ಬರ್ಗ್‌ನಲ್ಲಿ ೧೯೮೬ರಲ್ಲಿ ನಡೆದಿದ್ದ ವೇಳೆಯೂ ಹೀಗೆ ನಡೆದಿತ್ತು. ಆಫ್ರಿಕಾದ ಬಹುಪಾಲು ದೇಶಗಳು ಕೂಟವನ್ನು ಬಹಿಷ್ಕರಿಸಿದ್ದರಿಂದ ಸೂಪರ್ ಹೆವಿವೇಟ್ ವಿಭಾಗಕ್ಕೆ ಕೇವಲ ಮೂವರು ಬಾಕ್ಸರ್‌ಗಳಷ್ಟೇ ಪ್ರವೇಶ ಪಡೆದಿದ್ದರು.

ಇದನ್ನೂ ಓದಿ : ಆರಂಭಿಕ ಬೌಟ್‌ನಲ್ಲಿ ಗೆದ್ದರೆ ಸಾಕು, ಮೇರಿಗೆ ಕಾಮನ್ವೆಲ್ತ್ ಪದಕ ಗ್ಯಾರಂಟಿ

ವೇಲ್ಸ್‌ನ ಅನೇರಿನ್ ಈವನ್ಸ್ ನೇರ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಇದು ಸಹಜವಾಗಿಯೇ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿತ್ತು. ಅಂತಿಮ ಸುತ್ತಿನ ಈ ಕಾದಾಟದಲ್ಲಿ ಕೆನಡಾವನ್ನು ಪ್ರತಿನಿಧಿಸಿದ್ದ ಲೆನಾಕ್ಸ್ ಲೆವಿಸ್ ಎದುರು ಈವನ್ಸ್ ಮಣಿದಿದ್ದರು. ಕುತೂಹಲದ ಸಂಗತಿ ಎಂದರೆ, ಇವರಿಬ್ಬರಿಗೂ ಪದಕ ಭಾಗ್ಯ ಲಭ್ಯವಿರಲಿಲ್ಲ. ಕಾರಣ ಏನಾಗಿತ್ತೆಂದರೆ, ಕನಿಷ್ಠ ಐವರು ಬಾಕ್ಸರ್‌ಗಳು ಪ್ರವೇಶ ಪಡೆಯದೆ ಹೋದರೆ ಯಾವ ಸ್ಪರ್ಧಿಗೂ ಪದಕ ನೀಡಕೂಡದೆಂಬ ನಿಯಮವಿತ್ತು. ಆದರೆ, ಈ ಬಾರಿ ರಾಬರ್ಟ್ಸನ್‌ ಪದಕಕ್ಕೆ ಯಾವುದೇ ಅಡ್ಡಿಯಿಲ್ಲ. ಏಕೆಂದರೆ, ಏಳು ಸ್ಪರ್ಧಿಗಳು ಈಗಾಗಲೇ ಪ್ರವೇಶ ಪಡೆದಿರುವುದು ಆಸ್ಟ್ರೇಲಿಯಾದ ಮೊದಲ ಪದಕವನ್ನು ಖಾತ್ರಿಪಡಿಸಿದೆ.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More