ಹರ್ಮನ್‌ಪ್ರೀತ್ ಡಬಲ್ ಗೋಲು; ಕಾಮನ್ವೆಲ್ತ್ ಹಾಕಿ ಸೆಮಿಗೆ ಭಾರತ ದಾಪುಗಾಲು 

ಹರ್ಮನ್‌ಪ್ರೀತ್ ಸಿಂಗ್ ಅವರ ಡಬಲ್ ಗೋಲುಗಳ ನೆರವಿನಿಂದ ಮಲೇಷಿಯಾ ವಿರುದ್ಧ ಭಾರತ ೨-೧ ಗೋಲುಗಳ ಗೆಲುವು ಪಡೆಯಿತು. ಈ ಮೂಲಕ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಇಪ್ಪತ್ತೊಂದನೇ ಕಾಮನ್ವೆಲ್ತ್ ಪಂದ್ಯಾವಳಿಯ ಹಾಕಿಯಲ್ಲಿ ಭಾರತ ಸೆಮಿಫೈನಲ್‌ಗೆ ದಾಪುಗಾಲಿಟ್ಟಿತು

ಮತ್ತೊಮ್ಮೆ ಆಕರ್ಷಕ ಪ್ರದರ್ಶನ ನೀಡಿದ ಭಾರತ ಹಾಕಿ ತಂಡ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಗುರಿಯತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಮಂಗಳವಾರ (ಏಪ್ರಿಲ್ ೧೦) ಗೋಲ್ಡ್ ಕೋಸ್ಟ್‌ನ ಹಾಕಿ ಸೆಂಟರ್‌ನಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಭಾರತ, ಮಲೇಷಿಯಾ ವಿರುದ್ಧ ಜಯ ಸಾಧಿಸುತ್ತಿದ್ದಂತೆ ಅದರ ಉಪಾಂತ್ಯದ ಹಾದಿ ಸುಗಮವಾಯಿತು.

ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧ ೨-೨ ಗೋಲುಗಳ ಡ್ರಾ ಸಾಧಿಸುವುದರೊಂದಿಗೆ ಕೂಟದಲ್ಲಿ ತನ್ನ ಅಭಿಯಾನ ಆರಂಭಿಸಿದ್ದ ಭಾರತ, ಆ ಬಳಿಕ ವೇಲ್ಸ್ ತಂಡವನ್ನು ೪-೩ ಗೋಲುಗಳಿಂದ ಹಣಿದಿತ್ತು. ಇದೀಗ ಮಲೇಷಿಯಾ ವಿರುದ್ಧದ ಗೆಲುವಿನಿಂದಾಗಿ ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ಭಾರತ ಕೂಟದಲ್ಲಿ ಎರಡನೇ ಗೆಲುವು ಸಾಧಿಸಿದಂತಾಗಿದೆ.

ಮೊದಲ ಕ್ವಾರ್ಟರ್‌ನಲ್ಲೇ ಭಾರತ ಗೋಲಿನ ಖಾತೆ ತೆರೆಯಿತು. ಪಂದ್ಯದ ಮೂರನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸಿ ಭಾರತಕ್ಕೆ ೧-೦ ಮುನ್ನಡೆ ತಂದಿತ್ತರು. ಇದಕ್ಕೆ ಪ್ರತಿಯಾಗಿ ಮಲೇಷಿಯಾ ಕೂಡ ಪ್ರತಿರೋಧ ಒಡ್ಡಿತು. ಎರಡನೇ ಕ್ವಾರ್ಟರ್ ಶುರುವಾದ ಒಂದು ನಿಮಿಷದ ಅಂತರದಲ್ಲೇ ಫೈಜಲ್ ಸಾರಿ ಆಕರ್ಷಕ ಫೀಲ್ಡ್ ಗೋಲು ಬಾರಿಸಿ ಭಾರತದ ಜತೆಗೆ ಸಮಬಲ ಸಾಧಿಸಿದರು.

ಭಾರತದ ಮಿಡ್‌ಫೀಲ್ಡ್ ಇಂದು ಅತ್ಯಂತ ಬಲಿಷ್ಠವಾಗಿತ್ತು. ಮಲೇಷಿಯಾದ ರಕ್ಷಣಾ ಪಡೆಯನ್ನು ಹೆಜ್ಜೆ ಹೆಜ್ಜೆಗೂ ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾಯಿತು. ಆದರೆ, ಮಿಡ್‌ಫೀಲ್ಡ್ ಆಟಗಾರರ ಪರಿಶ್ರಮವನ್ನು ಫಾರ್ವರ್ಡ್ ಬಳಗ ಸರಿಯಾಗಿ ಬಳಸಿಕೊಳ್ಳಲಿಲ್ಲ. ಇದಕ್ಕೆ ಕಾರಣ, ಸಿಕ್ಕ ಏಳು ಪೆನಾಲ್ಟಿ ಕಾರ್ನರ್ ಅವಕಾಶಗಳ ಪೈಕಿ ಭಾರತ ಯಶಸ್ವಿಯಾದದ್ದು ಕೇವಲ ಎರಡರಲ್ಲಷ್ಟೇ. ಪಂದ್ಯದ ಶುರುವಿನಲ್ಲಿ ಗೋಲು ಬಾರಿಸಿದ್ದ ಹರ್ಮನ್‌ನ ಆನಂತರ, ೪೩ನೇ ನಿಮಿಷದಲ್ಲಿಯೂ ಗೋಲು ಹೊಡೆದು ಮಲೇಷಿಯಾಗೆ ಸೋಲುಣಿಸಿದರು.

ಇದನ್ನೂ ಓದಿ : ಕಾಮನ್ವೆಲ್ತ್ ಹಾಕಿ: ವನಿತೆಯರ ನಂತರ ಪುರುಷರಿಗೂ ಗೆಲುವಿನ ಸಂಭ್ರಮ

ಶೂಟಿಂಗ್‌ನಲ್ಲಿ ಪದಕದ ನಿರೀಕ್ಷೆ

ಅಂದಹಾಗೆ, ಕೂಟದ ಆರನೇ ದಿನವಾದ ಇಂದು ಭಾರತ ಶೂಟಿಂಗ್‌ನಲ್ಲಿ ಇನ್ನಷ್ಟು ಪದಕ ಗೆಲ್ಲುವ ನಿರೀಕ್ಷೆ ಇತ್ತು. ಗಗನ್ ನಾರಂಗ್ ಮತ್ತು ಚಿಯಾನ್ ಸಿಂಗ್ ೫೦ ಮೀಟರ್ ರೈಫಲ್ ಪ್ರೊನ್ ವಿಭಾಗದಲ್ಲಿ ಫೈನಲ್ ತಲುಪಿದ್ದರು. ಹನ್ನೊಂದನೇ ಕಾಮನ್ವೆಲ್ತ್ ಪದಕಕ್ಕಾಗಿ ಗುರಿ ಇಡುತ್ತಿರುವ ನಾರಂಗ್, ಅರ್ಹತಾ ಸುತ್ತಿನಲ್ಲಿ ೬೧೭.೦ ಪಾಯಿಂಟ್ಸ್ ಗಳಿಸಿದರೆ, ಚಿಯಾನ್ ೬೧೪.೨ ಪಾಯಿಂಟ್ಸ್ ಪಡೆದರು.

ಅಂತೆಯೇ, ವನಿತೆಯರ ವಿಭಾಗದಲ್ಲಿ ೨೫ ಮೀಟರ್ ಪಿಸ್ತೂಲ್‌ (ರಾಪಿಡ್) ಶೂಟಿಂಗ್‌ನಲ್ಲಿ ಅನ್ನು ಸಿಂಗ್ ಮತ್ತು ಹೀನಾ ಸಿಧು ಕ್ರಮವಾಗಿ ೫೮೪-೧೩x ಮತ್ತು ೫೭೯-೨೧x ಪಾಯಿಂಟ್ಸ್ ಪಡೆದು ಫೈನಲ್‌ಗೆ ಅರ್ಹತೆ ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More