ಪದಕ ನಿರೀಕ್ಷೆ ಮೂಡಿಸಿದ್ದ ನಾರಂಗ್‌ಗೆ ಗೋಲ್ಡ್ ಕೋಸ್ಟ್‌ನಲ್ಲಿ ಭ್ರಮನಿರಸನ

೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತದ ಪ್ರಮುಖ ಶೂಟರ್‌ಗಳಲ್ಲಿ ಒಬ್ಬರಾದ ಗಗನ್ ನಾರಂಗ್ ಗೋಲ್ಡ್ ಕೋಸ್ಟ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ. ೫೦ ಮೀಟರ್ ರೈಫಲ್‌ ಪ್ರೊನ್‌ನಲ್ಲಿ ಫೈನಲ್ ತಲುಪಿದರೂ, ನಾಲ್ಕನೇ ಸ್ಥಾನಕ್ಕೆ ಕುಸಿದ ಗಗನ್ ನಾರಂಗ್ ವೈಫಲ್ಯ ಅನುಭವಿಸಿದರು

ಶೂಟಿಂಗ್‌ನಲ್ಲಿ ಗರಿಷ್ಠ ಪದಕಗಳನ್ನು ನಿರೀಕ್ಷಿಸುತ್ತಿದ್ದ ಭಾರತ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಮಂಗಳವಾರ (ಏ.೧೦) ಬ್ರಿಸ್ಬೇನ್‌ನ ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಮಹಿಳಾ ಶೂಟರ್ ಹೀನಾ ಸಿಧು ಚಿನ್ನ ಗೆದ್ದರಾದರೂ, ಭಾರಿ ಭರವಸೆ ಮೂಡಿಸಿದ್ದ ಗಗನ್ ನಾರಂಗ್ ಮಾತ್ರ ವೈಫಲ್ಯ ಅನುಭವಿಸಿದರು. ಇದು, ಈ ವಿಭಾಗದಲ್ಲಿ ಮತ್ತೊಂದು ಸ್ವರ್ಣ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೂ ಹಿನ್ನಡೆ ಉಂಟುಮಾಡಿತು.

ಅರ್ಹತಾ ಸುತ್ತಿನಲ್ಲಿ ೬೧೯.೪ ಪಾಯಿಂಟ್ಸ್ ಗಳಿಸಿ ಫೈನಲ್‌ಗೆ ಅರ್ಹತೆ ಗಳಿಸಿದ್ದ ನಾರಂಗ್, ಎಲಿಮಿನೇಷನ್‌ ಸುತ್ತಿನ ಮೊದಲ ಘಟ್ಟದಲ್ಲೇ ಹೊರನಡೆದರು. ಮೊದಲ ಸರಣಿಯಲ್ಲಿ ಜಂಟಿ ಎರಡನೇ ಸ್ಥಾನ ಪಡೆದಿದ್ದ ಅವರು, ಆನಂತರದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರು. ಬಹುಶಃ ಶೂಟಿಂಗ್ ವೇಳೆ ಬೀಸುತ್ತಿದ್ದ ತಣ್ಣನೆಯ ಗಾಳಿ ಅವರ ನಿಖರ ಗುರಿಯ ದಿಕ್ಕು ತಪ್ಪಿಸಿತೇನೋ. ಇದೆಲ್ಲದರಿಂದಾಗಿ ಗಗನ್, ೧೪೨.೩ ಸ್ಕೋರ್‌ನೊಂದಿಗೆ ನಾಲ್ಕನೇ ಸ್ಥಾನ ಗಳಿಸಿ ಹೋರಾಟ ಮುಗಿಸಿದರು.

ಪ್ರಸಕ್ತ ಸಾಗುತ್ತಿರುವ ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ೩೪ರ ಹರೆಯದ ಗಗನ್ ನಾರಂಗ್ ಮೊದಲ ಬಾರಿಗೆ ಕಾಮನ್ವೆಲ್ತ್ ಕೂಟದಿಂದ ಪದಕರಹಿತರಾಗಿ ವಾಪಸಾಗುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯಲಿರುವ ಈ ಕೂಟದಲ್ಲಿ ಇದುವರೆಗೆ ಗಗನ್ ನಾರಂಗ್ ಎಂಟು ಸ್ವರ್ಣ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ : ಕಾಮನ್ವೆಲ್ತ್‌ನಲ್ಲಿ ಕಡೆಗೂ ಬಂಗಾರಕ್ಕೆ ಗುರಿ ಇಟ್ಟು ನಸುನಕ್ಕ ಶೂಟರ್ ಹೀನಾ ಸಿಧು

ಚೈನ್‌ ಸಿಂಗ್‌ಗೂ ನಿರಾಸೆ: ಇನ್ನು, ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಶೂಟರ್ ಚೈನ್ ಸಿಂಗ್ ಕೂಡ ಪದಕ ಗೆಲ್ಲುವಲ್ಲಿ ವಿಫಲವಾದರು. ಎರಡನೇ ಎಲಿಮಿನೇಷನ್ ಹಂತದಲ್ಲಿ ಅವರು ೨೦೪.೮ ಸ್ಕೋರ್ ಮಾಡಿ ನಾಲ್ಕನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಸಿಂಗ್ ೬೧೪.೨ ಪಾಯಿಂಟ್ಸ್ ಗಳಿಸಿ ಆರನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸಿದ್ದರು.

ಇನ್ನುಳಿದಂತೆ, ಈ ವಿಭಾಗದಲ್ಲಿ ವೇಲ್ಸ್‌ನ ಡೇವಿಡ್ ಫೆಲ್ಪ್ಸ್ ೨೪೮.೮ ಸ್ಕೋರ್‌ನೊಂದಿಗೆ ಕೂಟ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಅಂದಹಾಗೆ, ಇಂದು ಡೇವಿಡ್ ೪೧ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು. ಈ ಸಾಧನೆ ಅವರಲ್ಲಿ ದುಪ್ಪಟ್ಟು ಸಂಭ್ರಮವನ್ನು ಉಂಟುಮಾಡಿದ್ದರೆ ಅಚ್ಚರಿಯಿಲ್ಲ. ೨೪೭.೭ ಪಾಯಿಂಟ್ಸ್ ಸ್ಕೋರ್ ಮಾಡಿದ ಸ್ಕಾಟ್ಲೆಂಡ್ ಶೂಟರ್ ನೀಲ್ ಸ್ಟಿರ್ಟಾನ್ ಬೆಳ್ಳಿ ಗೆದ್ದರೆ, ಇಂಗ್ಲೆಂಡ್‌ನ ಕೆನ್ನೆತ್ ಪಾರ್ ೨೨೬.೬ ಪಾಯಿಂಟ್ಸ್ ಕಲೆಹಾಕಿ ಕಂಚು ಪದಕ ಪಡೆದರು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More