ಕಡೇ ಕ್ವಾರ್ಟರ್‌ನಲ್ಲಿ ಗೋಲು ಬಾರಿಸಿ ಭಾರತಕ್ಕೆ ಸೆಮಿ ದಾರಿ ತೋರಿದ ರಾಣಿ

ದಕ್ಷಿಣ ಆಫ್ರಿಕಾ ಒಡ್ಡಿದ ತೀವ್ರ ಪ್ರತಿರೋಧದ ಪಂದ್ಯದಲ್ಲಿ ಕೊನೆಗೂ ಗೋಲು ಬಾರಿಸಿದ ಭಾರತ ವನಿತಾ ತಂಡ, ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸೆಮಿಫೈನಲ್ ತಲುಪಿದೆ. ಕಡೇ ಕ್ವಾರ್ಟರ್‌ನಲ್ಲಿ ನಾಯಕಿ ರಾಣಿ ರಾಂಪಾಲ್ ಗೋಲು ಬಾರಿಸಿ ತಂಡವನ್ನು ಅಂತಿಮ ನಾಲ್ಕರ ಘಟ್ಟಕ್ಕೆ ಕೊಂಡೊಯ್ದರು

ಕೌತುಕದ ಆಗರವಾಗಿದ್ದ ಪಂದ್ಯದಲ್ಲಿ ಭಾರತ ವನಿತಾ ತಂಡ ಜಯದ ನಗೆಬೀರಿತು. ಮಂಗಳವಾರ (ಏ.೧೦) ನಡೆದ ಮಹಿಳೆಯರ ‘ಎ’ ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ರಾಣಿ ರಾಂಪಾಲ್ ನಾಯಕತ್ವದ ಭಾರತ ಮಹಿಳಾ ಹಾಕಿ ತಂಡ, ಹರಿಣಿಗಳು ಒಡ್ಡಿದ ದಿಟ್ಟ ಪೈಪೋಟಿಯನ್ನು ಕೊನೇ ಘಟ್ಟದಲ್ಲಿ ೧-೦ ಗೋಲಿನಿಂದ ಮೆಟ್ಟಿ ನಿಂತಿತು. ಪಂದ್ಯದ ೪೮ನೇ ನಿಮಿಷದಲ್ಲಿ ಆಕರ್ಷಕ ಡ್ರ್ಯಾಗ್ ಫ್ಲಿಕ್‌ನೊಂದಿಗೆ ಚೆಂಡನ್ನು ಗುರಿ ಮುಟ್ಟಿಸಿದ ರಾಣಿ ರಾಂಪಾಲ್, ದಕ್ಷಿಣ ಆಫ್ರಿಕಾ ವನಿತೆಯರಿಗೆ ಸೋಲುಣಿಸಿದರು.

ಕೂಟದ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ೨-೩ ಗೋಲುಗಳಿಂದ ಸೋಲನುಭವಿಸಿದ್ದ ಭಾರತ ವನಿತಾ ತಂಡ, ಆ ನಂತರ ಪುಟಿದೆದ್ದು ನಿಂತಿದೆ. ಮಲೇಷ್ಯಾ ವಿರುದ್ಧ ೪-೧ ಗೋಲುಗಳಿಂದ ಗೆಲುವು ಸಾಧಿಸಿ ಜಯದ ಹಾದಿಗೆ ಮರಳಿದ್ದ ರಾಣಿ ಪಡೆ, ಮೂರನೇ ಪಂದ್ಯದಲ್ಲಿ ರಿಯೊ ಒಲಿಂಪಿಕ್ಸ್ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ೨-೧ ಗೋಲುಗಳಿಂದ ಜಯ ಪಡೆದಿತ್ತು. ಹೀಗಾಗಿ, ದಕ್ಷಿಣ ಆಫ್ರಿಕಾ ವಿರುದ್ಧದ ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದ್ದರೂ, ರಾಣಿ ಬಳಗ ಸೆಮಿಫೈನಲ್‌ ತಲುಪುತ್ತಿತ್ತು. ಆದರೆ, ಗೆಲುವಿನೊಂದಿಗೆ ಉಪಾಂತ್ಯಕ್ಕೆ ಕಾಲಿಟ್ಟದ್ದು ಭಾರತ ವನಿತಾ ತಂಡದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ.

ಜಿದ್ದಾಜಿದ್ದಿನ ಕಾದಾಟ: ಪಂದ್ಯ ಆರಂಭವಾದಾಗಿನಿಂದಲೂ ಇತ್ತಂಡಗಳು ಗೋಲಿಗಾಗಿ ಇನ್ನಿಲ್ಲದಂತೆ ಸೆಣಸಿದವು. ಆದರೆ, ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಕೆಲವೊಂದು ಅವಕಾಶಗಳು ಒದಗಿಬಂದರೂ ಅವನ್ನು ಗೋಲಾಗಿ ಪರಿವರ್ತಿಸಲು ಎರಡೂ ತಂಡಗಳು ವಿಫಲವಾದವು. ಅಂತೆಯೇ, ಪರಸ್ಪರರ ಗೋಲುಪೆಟ್ಟಿಗೆಯನ್ನು ಕಾಯುವಲ್ಲಿ ಇಬ್ಬರೂ ಸಫಲವಾದರು.

ಇತ್ತಂಡಗಳ ಈ ಜಿದ್ದಾಜಿದ್ದಿನ ಸೆಣಸಾಟದಿಂದಾಗಿ, ಇನ್ನೇನು ಪಂದ್ಯ ಡ್ರಾನಲ್ಲಿ ಕೊನೆಕಾಣುತ್ತದೆ ಎನ್ನುವಾಗ, ರಾಣಿ ಗೋಲು ಹೊಡೆದು ಇಡೀ ಪಂದ್ಯದ ಚಿತ್ರಣವನ್ನು ಬದಲಿಸಿದರು. ವಂದನಾ ಪಾಸ್ ಮಾಡಿದ ಚೆಂಡನ್ನು ಹಿಡಿತಕ್ಕೆ ಪಡೆದ ರಾಣಿ, ತಡಮಾಡದೆ ದಕ್ಷಿಣ ಆಫ್ರಿಕಾ ಗೋಲಿಯನ್ನು ವಂಚಿಸಿ ನೆಟ್‌ನತ್ತ ಫ್ಲಿಕ್ ಮಾಡುತ್ತಿದ್ದಂತೆ ಭಾರತ ಮುನ್ನಡೆ ಕಂಡಿತು.

ಅಂದಹಾಗೆ, ದಿನದ ಆರಂಭದಲ್ಲಿ ಭಾರತ, ಪುರುಷರ ವಿಭಾಗದಲ್ಲಿಯೂ ಸೆಮಿಫೈನಲ್‌ಗೆ ಧಾವಿಸುವಲ್ಲಿ ಯಶಸ್ವಿಯಾಯಿತು. ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಬಾರಿಸಿದ ಎರಡು ಗೋಲುಗಳ ನೆರವಿನೊಂದಿಗೆ ೨-೧ ಗೆಲುವು ಸಾಧಿಸಿದ, ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ಕಳೆದ ಆವೃತ್ತಿಯ ರಜತ ವಿಜೇತ ಭಾರತ ತಂಡ ಸೆಮಿಫೈನಲ್‌ಗೆ ಸುನಾಯಾಸವಾಗಿ ಧಾವಿಸಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More