ಕಾಮನ್ವೆಲ್ತ್‌ನಲ್ಲಿ ಕಡೆಗೂ ಬಂಗಾರಕ್ಕೆ ಗುರಿ ಇಟ್ಟು ನಸುನಕ್ಕ ಶೂಟರ್ ಹೀನಾ ಸಿಧು

ಗೋಲ್ಡ್ ಕೋಸ್ಟ್‌ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರಿದಿದೆ. ಕೂಟದ ಏಳನೇ ದಿನವಾದ ಮಂಳವಾರ (ಏ. ೧೦) ವಿಶ್ವದ ಮಾಜಿ ನಂ ೧ ಶೂಟರ್ ಹೀನಾ ಸಿಧು ೨೫ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟರು. ದಿನದ ಹಿಂದಷ್ಟೇ ಅವರು ೧೦ ಮೀ. ಏರ್‌ ರೈಫಲ್‌ನಲ್ಲಿ ಬೆಳ್ಳಿ ಗೆದ್ದಿದ್ದರು

ಎರಡು ದಿನಗಳ ಹಿಂದೆ ಅನುಭವಿಸಿದ್ದ ಏಕಾಗ್ರತೆಯ ಕೊರತೆ ಈ ಬಾರಿ ಹೀನಾ ಸಿಧುವನ್ನು ಕಾಡಲಿಲ್ಲ. ಬ್ರಿಸ್ಬೇನ್‌ನ ಬೆಲ್ಮೌಂಟ್‌ನ ಶೂಟಿಂಗ್ ರೇಂಜ್‌ನಲ್ಲಿ ನಡೆದ ಗುರಿ ಇಡುವ ಸ್ಪರ್ಧೆಯಲ್ಲಿ ಎಲ್ಲಿಯೂ ಬೆವರದ ಹಿನಾ ಸಿಧು, ಆರನೇ ದಿನದಂದು ತಡವಾಗಿಯಾದರೂ ಭಾರತಕ್ಕೆ ಚಿನ್ನ ತಂದುಕೊಟ್ಟರು. ಅಂದಹಾಗೆ, ವೈಯಕ್ತಿಕ ವಿಭಾಗದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹೀನಾ ಗೆದ್ದ ಮೊಟ್ಟಮೊದಲ ಚಿನ್ನದ ಪದಕವಿದು. ಇನ್ನು, ಈ ಬಾರಿಯ ಕೂಟದಲ್ಲಿ ಭಾರತ ಜಯಿಸಿದ ೧೧ನೇ ಚಿನ್ನ ಕೂಡ. ಅವರ ಈ ಸಾಧನೆಯೊಂದಿಗೆ ಪದಕ ಪಟ್ಟಿಯಲ್ಲಿ ಭಾರತ, ಒಟ್ಟಾರೆ ೨೦ನೇ ಪದಕ ಗೆದ್ದಂತಾಗಿದೆ.

ಭಾನುವಾರ ನಡೆದಿದ್ದ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಭಾರತದವರೇ ಆದ ಹಾಗೂ ತನಗಿಂತಲೂ ಕಿರಿಯ ವಯಸ್ಸಿನ ಮನು ಭಾಕರ್ ಒಡ್ಡಿದ ಪ್ರಬಲ ಪೈಪೋಟಿಯಿಂದ ಹೀನಾ ಬೆಳ್ಳಿ ಪದಕಕ್ಕೆ ತೃಪ್ತವಾಗಿದ್ದರು. ಆದರೆ, ಮಂಗಳವಾರ ೩೮ ಪಾಯಿಂಟ್ಸ್‌ ಸ್ಕೋರ್‌ನೊಂದಿಗೆ ಕೂಟ ದಾಖಲೆಯೊಂದಿಗೆ ಸ್ವರ್ಣ ಗೆದ್ದು ತನ್ನಲ್ಲಿನ ಗುರಿ ಸಾಮರ್ಥ್ಯವನ್ನು ನಿರೂಪಿಸಿದರು. ಆಸ್ಟ್ರೇಲಿಯಾದ ಎಲೆನಾ ಗಲಿಯಾಬೊಟಿಚ್ ೩೫ ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಪಡೆದರೆ, ಮಲೇಷಿಯಾದ ಅಲಿಯಾ ಅಜಾರಿ ೨೬ ಪಾಯಿಂಟ್ಸ್ ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಅರ್ಹತಾ ಸುತ್ತಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಭಾರತದ ಮತ್ತೋರ್ವ ಶೂಟರ್ ಅನ್ನು ಸಿಂಗ್ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಕೇವಲ ೧೫ ಪಾಯಿಂಟ್ಸ್ ಸ್ಕೋರ್ ಮಾಡಿದ ಆಕೆ, ಆರನೇ ಸ್ಥಾನಕ್ಕೆ ಕುಸಿದರು. ಏತನ್ಮಧ್ಯೆ, ೨೦೧೦ರ ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ಟೀಂ ಇವೆಂಟ್‌ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಹೀನಾ ಸಿಧು, ಇದೇ ಮೊದಲ ಬಾರಿಗೆ ವೈಯಕ್ತಿಕ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದರು. ೨೦೧೪ರ ಗ್ಲಾಸ್ಗೊ ಕೂಟದಲ್ಲಿ ೧೦ ಮೀಟರ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರಾದರೂ, ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರು.

ಇದನ್ನೂ ಓದಿ : ಶೂಟಿಂಗ್‌ನಲ್ಲೂ ಶುರುವಾಯ್ತು ಚಿನ್ನದ ಬೇಟೆ; ಮನು ಭಾಕರ್‌ಗೆ ದಾಖಲೆ ಸ್ವರ್ಣ

ಅಂದಹಾಗೆ, ಅರ್ಹತಾ ಸುತ್ತಿನಲ್ಲಿ ಹೀನಾ ಸಿಧು ಮತ್ತು ಅನ್ನು ಸಿಂಗ್ ಕ್ರಮವಾಗಿ ೫೮೪-೧೩x ಮತ್ತು ೫೭೯-೨೧x ಪಾಯಿಂಟ್ಸ್ ಪಡೆದು ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಹೀನಾ ಸಿಧುವಿನ ಈ ಚಿನ್ನದ ಸಾಧನೆಯೊಂದಿಗೆ ಶೂಟಿಂಗ್ ವಿಭಾಗದಲ್ಲಿಯೇ ಭಾರತ ಒಟ್ಟು ಎಂಟು ಪದಕಗಳನ್ನು ಜಯಿಸಿದಂತಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More