ಕಂಚು ಗೆದ್ದ ಪ್ಯಾರಾ ಪವರ್‌ ಲಿಫ್ಟರ್ ಸಚಿನ್; ಕನ್ನಡಿಗ ಫರ್ಮಾನ್‌ಗೆ ನಿರಾಸೆ

ಗೋಲ್ಡ್ ಕೋಸ್ಟ್‌ನಲ್ಲಿನ ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದ ಕಳೆದ ಐದು ದಿನಗಳಿಗೆ ಹೋಲಿಸಿದರೆ ಭಾರತ ಮಂಗಳವಾರ (ಏಪ್ರಿಲ್ ೧೦) ಕೇವಲ ಎರಡೇ ಪದಕಕ್ಕೆ ತೃಪ್ತವಾಯಿತು. ಶೂಟಿಂಗ್‌ನಲ್ಲಿ ಹೀನಾ ಸಿಧು ಚಿನ್ನ ಗೆದ್ದ ಬಳಿಕ, ಪ್ಯಾರಾ ಪವರ್ ಲಿಫ್ಟರ್ ಸಚಿನ್ ಚೌಧರಿ ಕಂಚಿನ ಪದಕ ಜಯಿಸಿದರು

ಪ್ರಸಕ್ತ ಕೂಟದಲ್ಲಿ ಭಾರತಕ್ಕೆ ಪ್ಯಾರಾ ಅಥ್ಲೆಟಿಕ್ ವಿಭಾಗದಿಂದ ಮೊದಲ ಪದಕ ತಂದುಕೊಡುವಲ್ಲಿ ಸಚಿನ್ ಚೌಧರಿ ಯಶಸ್ವಿಯಾದರು. ಈ ಮೂಲಕ ಕಾಮನ್ವೆಲ್ತ್ ಕೂಟದಲ್ಲಿ ಭಾರತದ ಪದಕ ಗಳಿಕೆ ೨೧ಕ್ಕೆ ಏರಿದೆ. ಮಂಗಳವಾರ (ಏ.೧೦) ಕರಾರಾ ಕ್ರೀಡಾ ಅರೇನಾ ಒಂದರಲ್ಲಿ ನಡೆದ ಭಾರ ಎತ್ತುವ ಸ್ಪರ್ಧೆಯಲ್ಲಿ ಪುರುಷರ ಹೆವಿವೇಟ್ ಫೈನಲ್‌ನಲ್ಲಿ ಸಚಿನ್ ತೃತೀಯ ಸ್ಥಾನ ಪಡೆದರು.

ಸಚಿನ್ ಜೊತೆಗೆ ಭಾರತದ ಇನ್ನೂ ಮೂವರು ಪ್ಯಾರಾ ಪವರ್‌ ಲಿಫ್ಟರ್‌ಗಳು ಫೈನಲ್‌ಗೆ ತಲುಪಿದ್ದರು. ೧೦ ಮಂದಿಯಿದ್ದ ಫೈನಲ್‌ ಸುತ್ತಿನಲ್ಲಿ ಚೌಧರಿ ಒಟ್ಟಾರೆ ೧೮೧ ಕೆಜಿ ನಿಭಾಯಿಸುವಲ್ಲಿ ಯಶ ಕಂಡರು.ಇನ್ನುಳಿದಂತೆ ಈ ವಿಭಾಗದಲ್ಲಿ ನೈಜೀರಿಯಾದ ಅಬ್ದುಲಾಜೀಜ್ ಇಬ್ರಾಹಿಂ ಬೆಳ್ಳಿ ಗೆದ್ದರೆ, ಮಲೇಷಿಯಾದ ಯೀ ಖೀ-ಜಾಂಗ್ ವಿರುದ್ಧ ಚಿನ್ನದ ಪದಕ ಪಡೆದರು. ಇವರಿಬ್ಬರೂ ಕ್ರಮವಾಗಿ ೧೯೧.೯ ಕೆಜಿ ಮತ್ತು ೧೮೮.೭ ಕೆಜಿ ಭಾರ ಎತ್ತುವಲ್ಲಿ ಸಫಲರಾದರು.

೩೫ರ ಹರೆಯದ ಚೌಧರಿ ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಪವರ್‌ಲಿಫ್ಟಿಂಗ್ ವಿಶ್ವಕಪ್‌ನಲ್ಲಿ ೨೦೦ ಕೆಜಿ ಭಾರ ಎತ್ತುವುದರೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು. ಇದಿವರ ವೃತ್ತಿಪರ ಶ್ರೇಷ್ಠ ಸಾಧನೆ ಎನಿಸಿತ್ತು. ಇನ್ನು, ೨೦೧೨ರ ಬೇಸಿಗೆ ಪ್ಯಾರಾಲಿಂಪಿಕ್ಸ್ ಸ್ಪರ್ಧಾವಳಿಯಲ್ಲಿ ಪುರುಷರ ೮೨.೫೦ ಕೆಜಿ ವಿಭಾಗದಲ್ಲಿ ಒಂಬತ್ತನೇ ಸ್ಥಾನ ಗಳಿಸಿದ್ದ ಚೌಧರಿ ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರು.

ಫರ್ಮಾನ್‌ಗೆ ನಿರಾಸೆ: ಕರ್ನಾಟಕದ ಪವರ್ ಲಿಫ್ಟರ್ ಫರ್ಮಾನ್ ಬಾಷಾ ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ನಿರಾಸೆ ಅನುಭವಿಸಿದರು. ಪುರುಷರ ಲೈಟ್‌ವೇಟ್ ಫೈನಲ್‌ನಲ್ಲಿ ಅವರು ಐದನೇ ಸ್ಥಾನಕ್ಕೆ ಕುಸಿದರೆ, ಮತ್ತೋರ್ವ ಪ್ಯಾರಾ ಪವರ್‌ಲಿಫ್ಟರ್ ಅಶೋಕ್ ಕುಮಾರ್ ೧೧ನೇ ಸ್ಥಾನಕ್ಕೆ ಕುಸಿದರು. ಏತನ್ಮಧ್ಯೆ, ಸೈನಾ ಖಾತುನ್ ಮಹಿಳೆಯರ ಲೈಟ್‌ವೇಟ್ ಫೈನಲ್‌ನಲ್ಲಿ ಐದನೇ ಸ್ಥಾನ ಗಳಿಸಿ ಪದಕ ಗೆಲ್ಲಲು ವಿಫಲವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More