ಅತಿ ಶೀಘ್ರದಲ್ಲೇ ನನಸಾಗಲಿದೆ ಕಿಡಾಂಬಿ ಶ್ರೀಕಾಂತ್ ಬಹುದಿನಗಳ ಕನಸು

ವಿಶ್ವದ ನಂ.೧ ಆಟಗಾರನಾಗಬೇಕೆಂಬ ಕಿಡಾಂಬಿ ಶ್ರೀಕಾಂತ್ ಕನಸು ಸದ್ಯದಲ್ಲೇ ನನಸಾಗಲಿದೆ. ಭಾರತದ ಅಗ್ರ ಕ್ರಮಾಂಕಿತ ಬ್ಯಾಡ್ಮಿಂಟನ್ ಪಟು ಶ್ರೀಕಾಂತ್, ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ (ಬಿಡಬ್ಲ್ಯೂಎಫ್) ಶೀಘ್ರವೇ ಬಿಡುಗಡೆ ಮಾಡಲಿರುವ ಶ್ರೇಯಾಂಕ ಪಟ್ಟಿಯಲ್ಲಿ ಮೇರು ಸ್ಥಾನ ಅಲಂಕರಿಸಲಿದ್ದಾರೆ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಾಂಬಿ ಶ್ರೀಕಾಂತ್ ವೃತ್ತಿಬದುಕಿನ ಶ್ರೇಷ್ಠ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಪ್ರಸಕ್ತ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಿಶ್ರ ತಂಡದ ವಿಭಾಗದಲ್ಲಿ ಚಿನ್ನ ಗೆಲ್ಲಲು ನೆರವಾದ ಶ್ರೀಕಾಂತ್, ಇಷ್ಟರಲ್ಲೇ ವರ್ಲ್ಡ್ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯೂಎಫ್) ಬಿಡುಗಡೆ ಮಾಡಲಿರುವ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ ಶ್ರೀಕಾಂತ್ ಅಧಿಕೃತವಾಗಿ ಜಗತ್ತಿನ ನಂ ೧ ಆಟಗಾರ ಎನಿಸಲಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಆಧುನಿಕ ಶ್ರೇಯಾಂಕ ಪಟ್ಟಿಗೆ ಚಾಲನೆ ಸಿಕ್ಕಾಗಿನಿಂದ ಜಗತ್ತಿನ ನಂ ೧ ಸ್ಥಾನಕ್ಕೇರಿದ ಮೊಟ್ಟಮೊದಲ ಭಾರತೀಯ ಆಟಗಾರ ಶ್ರೀಕಾಂತ್ ಎಂಬುದು ಕೂಡ ಗಮನಾರ್ಹ. (ಕನ್ನಡಿಗ ಪ್ರಕಾಶ್ ಪಡುಕೋಣೆ ಕೂಡ ೧೯೮೦ರಲ್ಲಿ ವಿಶ್ವದ ಅಗ್ರಪಟ್ಟ ಪಡೆದಿದ್ದರಾದರೂ, ಆಗ ಆಧುನಿಕ ಶ್ರೇಯಾಂಕ ವ್ಯವಸ್ಥೆ ಇರಲಿಲ್ಲ). ಇನ್ನು, ಅಂತೆಯೇ, ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಡ್ಮಿಂಟನ್ ಪಟು ಕೂಡ. ಈ ಮೊದಲು ಈ ಐತಿಹಾಸಿಕ ಸಾಧನೆ ಮಾಡಿದ್ದು ಸೈನಾ ನೆಹ್ವಾಲ್. ಮಾರ್ಚ್ ೧, ೨೦೧೫ರಲ್ಲಿ ಸೈನಾ ವಿಶ್ವ ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಅಗ್ರಸ್ಥಾನ ಪಡೆದಿದ್ದರು. ವಾಸ್ತವವಾಗಿ, ಕಳೆದ ವರ್ಷವೇ ಶ್ರೀಕಾಂತ್ ಈ ಮುಂಚೂಣಿ ಸ್ಥಾನಕ್ಕೇರುವ ಅವಕಾಶವಿತ್ತಾದರೂ, ಗಾಯದ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ.

ಸದ್ಯ, ಬಿಡಬ್ಲ್ಯೂಎಫ್ ಶ್ರೇಯಾಂಕ ಪಟ್ಟಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ಶ್ರೀಕಾಂತ್, ೭೬,೮೯೫ ಪಾಯಿಂಟ್ಸ್‌ಗಳೊಂದಿಗೆ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕಲಿದ್ದಾರೆ. ಅದಕ್ಕೂ ಮುನ್ನ ಅವರು ಪ್ರಸ್ತುತ ಕಾಮನ್ವೆಲ್ತ್ ಕೂಟದ ಸಿಂಗಲ್ಸ್‌ ವಿಭಾಗದಲ್ಲಿ ಚೊಚ್ಚಲ ಕಾಮನ್ವೆಲ್ತ್ ಸ್ವರ್ಣ ಪದಕ ಪಡೆಯುವ ಗುರಿ ಹೊತ್ತಿದ್ದಾರೆ. ಕಳೆದ ವರ್ಷ ಇಂಡೋನೇಷಿಯಾ, ಆಸ್ಟ್ರೇಲಿಯಾ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಸೂಪರ್ ಸಿರೀಸ್‌ಗಳನ್ನು ಗೆದ್ದಿದ್ದ ಶ್ರೀಕಾಂತ್, ಒಂದೇ ಋತುವಿನಲ್ಲಿ ನಾಲ್ಕು ಸೂಪರ್ ಸಿರೀಸ್ ಗೆದ್ದು ಅಪರೂಪದ ಸಾಧನೆ ಮೆರೆದಿದ್ದರು.

ಬಿಡಬ್ಲ್ಯೂಎಫ್ ಶ್ರೇಯಾಂಕ ಪಟ್ಟಿ
ಇದನ್ನೂ ಓದಿ : ಬ್ಯಾಡ್ಮಿಂಟನ್‌ ಪ್ರೀತಿಯೇ ಇರದಿದ್ದ ಕಿಡಾಂಬಿ ಚಾಂಪಿಯನ್ ಆದದ್ದು ಹೇಗೆ ಗೊತ್ತೇ?

“ಶ್ರೀಕಾಂತ್ ವಿಶ್ವದ ನಂ.೧ ಆಟಗಾರನಾಗಿ ಹೊರಹೊಮ್ಮುತ್ತಾನೆ ಎಂಬುದು ನಮಗೆ ಚೆನ್ನಾಗಿ ಗೊತ್ತಿತ್ತು. ಬಹುಶಃ, ಇನ್ನೊಂದೆರಡು ವಾರಗಳಲ್ಲಿ ಆತನ ಅಗ್ರ ಸ್ಥಾನ ಅಧಿಕೃತವಾಗಿ ಘೋಷಿಸಲ್ಪಡುತ್ತದೆ. ಖಂಡಿತಾ ಇದು ನಮಗೆಲ್ಲಾ ಹೆಮ್ಮೆಯ ಕ್ಷಣವಾಗಿದೆ,’’ ಎಂದು ಶ್ರೀಕಾಂತ್ ತಂದೆ ಕೆವಿಎಸ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ತಿಳಿಸಿದೆ.

ಅಗ್ರಪಟ್ಟ ಕಳೆದುಕೊಳ್ಳಲಿರುವ ವಿಕ್ಟರ್: ಸದ್ಯ, ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವವರು ಡೆನ್ಮಾರ್ಕ್ ಆಟಗಾರ ವಿಕ್ಟರ್ ಅಕ್ಸೆಲ್ಸನ್. ಅವರೀಗ ೭೭೧೩೦ ಪಾಯಿಂಟ್ಸ್ ಗಳಿಸಿದ್ದಾರೆ. ಕಳೆದ ವರ್ಷ ಮಲೇಷಿಯಾ ಓಪನ್‌ನಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಅವರೀಗ ೧೬೬೦ ಪಾಯಿಂಟ್ಸ್ ಕಳೆದುಕೊಳ್ಳಲಿದ್ದಾರೆ. ಕಳೆದ ವರ್ಷ ಮಲೇಷಿಯಾ ಓಪನ್‌ ಏಪ್ರಿಲ್ ೪ರಿಂದ ೯ರವರೆಗೆ ನಡೆದಿತ್ತು. ಆದರೆ, ಈ ಬಾರಿ ಅದು ತಡವಾಗಿ ಜರುಗಲಿದೆ.

ಶ್ರೀಕಾಂತ್‌ಗೆ ಒಲಿದ ಅದೃಷ್ಟ: ಅಂದಹಾಗೆ, ಬ್ಯಾಡ್ಮಿಂಟನ್ ಶ್ರೇಯಾಂಕವನ್ನು ೫೨ ವಾರಗಳಿಗೆ ಲೆಕ್ಕಾಚಾರ ಹಾಕಲಾಗುತ್ತದೆ. ಈ ಅವಧಿಯಲ್ಲಿ ಆಟಗಾರರು ನೀಡುವ ಪ್ರದರ್ಶನದ ಮೇಲೆ ರೇಟಿಂಗ್ ಪಾಯಿಂಟ್ಸ್‌ಗಳನ್ನು ನೀಡಲಾಗುತ್ತದೆ. ಅದರಲ್ಲೂ ೧೦ ಅತ್ಯುತ್ತಮ ಟೂರ್ನಿಗಳಲ್ಲಿನ ಪ್ರದರ್ಶನ ಪರಿಗಣಿಸಲ್ಪಡುತ್ತದೆ. ಹೀಗಾಗಿ ಶ್ರೀಕಾಂತ್ ಅಗ್ರಸ್ಥಾನಕ್ಕೇರುವುದು ನಿಶ್ಚಿತವಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More