ಶಿಖರ್ ಧವನ್ ನೀಡಿದ ಕ್ಯಾಚ್ ಬಿಟ್ಟು ಪಂದ್ಯ ಕೈ ಚೆಲ್ಲಿದ ರಹಾನೆ ಬಳಗ

ಶಿಸ್ತುಬದ್ಧ ಬೌಲಿಂಗ್ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್‌ನೊಂದಿಗೆ ಆಲ್ರೌಂಡ್ ಆಟವಾಡಿದ ಸನ್‌ರೈಸರ್ಸ್ ಹೈದರಾಬಾದ್, ಈ ಋತುವಿನ ಐಪಿಎಲ್‌ನಲ್ಲಿ ಶುಭಾರಂಭ ಮಾಡಿದೆ. ಇತ್ತ, ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ೨ ವರ್ಷ ನಿಷೇಧ ಶಿಕ್ಷೆ ಅನುಭವಿಸಿದ್ದ ರಾಜಸ್ಥಾನ ರಾಯಲ್ಸ್ ಸೋಲಿನೊಂದಿಗೆ ತತ್ತರಿಸಿತು

ಶಿಸ್ತಿನ ದಾಳಿಯಿಂದ ಪ್ರವಾಸಿ ತಂಡವನ್ನು ಕೇವಲ ೧೨೫ ರನ್‌ಗಳಿಗೆ ಕಟ್ಟಿಹಾಕಿದ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್, ೯ ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಎರಡನೇ ವಿಕೆಟ್‌ಗೆ ಶಿಖರ್ ಧವನ್ (೭೭: ೫೭ ಎಸೆತ, ೧೩ ಬೌಂಡರಿ, ೧ ಸಿಕ್ಸರ್) ಹಾಗೂ ನಾಯಕ ಕೇನ್ ವಿಲಿಯಮ್ಸನ್ (೩೬: ೩೫ ಎಸೆತ, ೩ ಬೌಂಡರಿ, ೧ ಸಿಕ್ಸರ್) ಮುರಿಯದ ೧೨೧ ರನ್ ಕಲೆಹಾಕಿ ತಂಡಕ್ಕೆ ಸುಲಭ ಗೆಲುವು ದೊರಕಿಸಿಕೊಟ್ಟರು.

ಸೋಮವಾರ (ಏ.೯) ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಋತುವಿನ ನಾಲ್ಕನೇ ಐಪಿಎಲ್ ಪಂದ್ಯ ಒಂದು ವಿಧದಲ್ಲಿ ಸಂಪೂರ್ಣ ಏಕಪಕ್ಷೀಯವಾಗಿತ್ತು. ಜಯದ ಗುರಿಯನ್ನು ಸನ್‌ರೈಸರ್ಸ್ ಕೇವಲ ೧೫.೫ ಓವರ್‌ಗಳಲ್ಲೇ ಮುಟ್ಟಿತು. ಆರಂಭಿಕ ವೃದ್ಧಿಮಾನ್ ಸಾಹ (೫) ವೇಗಿ ಜೈದೇವ್ ಉನದ್ಕಟ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದ ಬಳಿಕ ಸನ್‌ರೈಸರ್ಸ್ ಎಲ್ಲಿಯೂ ಎಡವಲಿಲ್ಲ.

ರಹಾನೆ ಎಡವಟ್ಟು: ಅಂದಹಾಗೆ, ಧವನ್ ಇನ್ನೂ ರನ್ ಖಾತೆ ತೆರೆಯದೆ ಇದ್ದ ಸಂದರ್ಭದಲ್ಲಿ ಸ್ಲಿಪ್‌ನಲ್ಲಿ ನೀಡಿದ ಕ್ಯಾಚ್ ಅನ್ನು ನಾಯಕ ಅಜಿಂಕ್ಯ ರಹಾನೆ ಕೈಬಿಟ್ಟು ತಂಡದ ಸೋಲಿಗೆ ತಾವೇ ಪ್ರಮುಖ ಕಾರಣಕರ್ತರಾದರು. ರಹಾನೆ ನೀಡಿದ ಈ ಜೀವದಾನದ ಲಾಭ ಪಡೆದ ಧವನ್, ಮೂರನೇ ಓವರ್‌ನಲ್ಲಿ ಧವಳ್ ಕುಲಕರ್ಣಿ ಬೌಲಿಂಗ್‌ನಲ್ಲಿ ಪಂದ್ಯದ ಮೊದಲ ಸಿಕ್ಸರ್ ಸಿಡಿಸಿದರು. ಇತ್ತ, ವಿಲಿಯಮ್ಸನ್ ನಾಲ್ಕನೇ ಓವರ್‌ನಲ್ಲಿ ಉನದ್ಕಟ್ ಬೌಲಿಂಗ್‌ನಲ್ಲಿ ಸಿಕ್ಸರ್ ಎತ್ತಿ ಧವನ್ ಬಿರುಸಿಗೆ ಸಾಥ್ ನೀಡಿದರು. ಈ ಜೋಡಿ ೫.೩ ಓವರ್‌ಗಳಲ್ಲೇ ೫೦ ರನ್ ಕಲೆಹಾಕಿತಲ್ಲದೆ, ಆನಂತರ ಬೌಂಡರಿಗಳ ಸುರಿಮಳೆಗರೆಯಿತು.

ಇದನ್ನೂ ಓದಿ : ಕಪ್ ನಮ್ಮದೇ ಎಂದ ಕೊಹ್ಲಿಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸುನೀಲ್ ನರೇನ್

ಕೇವಲ ೩೩ ಎಸೆತಗಳಲ್ಲೇ ೫೦ ರನ್ ಗಳಿಸಿದ ಧವನ್, ಆ ಮೂಲಕ ೨೯ನೇ ಐಪಿಎಲ್ ಅರ್ಧಶತಕ ಬಾರಿಸಿದರು. ವಿಲಿಯಮ್ಸನ್ ಎಚ್ಚರಿಕೆಯ ಆಟಕ್ಕೆ ಮೊರೆಹೋದರೆ, ಧವನ್ ಎಂದಿನ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಹೀಗಾಗಿ, ಮೊದಲ ೧೦ ಓವರ್‌ಗಳಲ್ಲಿ ಕೇವಲ ೧ ವಿಕೆಟ್‌ಗೆ ೮೯ ರನ್ ಪೇರಿಸಿದ ಸನ್‌ರೈಸರ್ಸ್ ಹೈದರಾಬಾದ್, ಇನ್ನೂ ೨೫ ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆಬೀರಿತು.

ಶಿಸ್ತುಬದ್ಧ ದಾಳಿ: ಇದಕ್ಕೂ ಮುನ್ನ ಟಾಸ್ ಗೆದ್ದು ಪ್ರವಾಸಿ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದ ವಿಲಿಯಮ್ಸನ್ ನಿರ್ಣಯವನ್ನು ಬೌಲರ್‌ಗಳು ತಮ್ಮ ಶಿಸ್ತುಬದ್ಧ ದಾಳಿಯಿಂದ ಸಮರ್ಥಿಸಿಕೊಂಡರು. ರಾಯಲ್ಸ್‌ ಪಂದ್ಯದ ಯಾವ ಹಂತದಲ್ಲಿಯೂ ಉತ್ತಮ ಜತೆಯಾಟ ಕಾಣಲೇ ಇಲ್ಲ. ಬದಲಿಗೆ, ರನ್ ಗಳಿಸಲೇ ಅದು ತಿಣುಕಿತು. ತಂಡದ ಪರ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ೪೨ ಎಸೆತಗಳಲ್ಲಿ ೪೯ ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರ ಕೊಡುಗೆ ನಗಣ್ಯ ಎನಿಸುವಷ್ಟರಮಟ್ಟಿಗೆ ನಿಕೃಷ್ಠವಾಗಿತ್ತು.

ನಾಯಕ ಅಜಿಂಕ್ಯ ರಹಾನೆ (೧೩) ಜೊತೆಗೆ ಎರಡನೇ ವಿಕೆಟ್‌ಗೆ ೪೬ ರನ್ ಜೊತೆಯಾಟವಷ್ಟೇ ರಾಯಲ್ಸ್ ಇನ್ನಿಂಗ್ಸ್‌ನಲ್ಲಿ ಕಂಡುಬಂದ ಹೊಂದಾಣಿಕೆಯ ಆಟವೆನಿಸಿತು. ಕೇವಲ ಒಂದು ರನ್‌ನಿಂದ ಅರ್ಧಶತಕವಂಚಿತವಾದ ಸ್ಯಾಮ್ಸನ್, ಒಂದು ಹಂತದಲ್ಲಿ ತಂಡದ ಇನ್ನಿಂಗ್ಸ್‌ಗೆ ಇನ್ನಷ್ಟು ಬಲ ತುಂಬಲು ಯತ್ನಿಸಿದರಾದರೂ, ಶಕೀಬ್ ಅಲ್ ಹಸನ್ ಅದಕ್ಕೆ ಆಸ್ಪದ ಕಲ್ಪಿಸಲಿಲ್ಲ. ಇನ್ನಿಂಗ್ಸ್‌ನ ೧೪ನೇ ಓವರ್‌ನ ಐದನೇ ಎಸೆತದಲ್ಲಿ ಸ್ಯಾಮ್ಸನ್, ರಶೀದ್ ಖಾನ್‌ಗೆ ಕ್ಯಾಚಿತ್ತು ಹೊರನಡೆಯುತ್ತಿದ್ದಂತೆ ರಾಯಲ್ಸ್‌ನ ಇನ್ನಿಂಗ್ಸ್‌ ತಳಕಚ್ಚಿತು.

ಸನ್‌ರೈಸರ್ಸ್ ಪರ ಶಕೀಬ್ (೨೩ಕ್ಕೆ ೨) ಮತ್ತು ಸಿದ್ಧಾರ್ಥ್ ಕೌಲ್ (೧೭ಕ್ಕೆ ೨) ತಲಾ ಎರಡು ವಿಕೆಟ್ ಗಳಿಸಿದರೆ, ಭುವನೇಶ್ವರ್ ಕುಮಾರ್, ಬಿಲ್ಲಿ ಸ್ಟ್ಯಾನ್‌ಲೇಕ್ ಮತ್ತು ರಶೀದ್ ಖಾನ್ ಒಂದೊಂದು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೨೦ ಓವರ್‌ಗಳಲ್ಲಿ ೧೨೫/೯ (ಸಂಜು ಸ್ಯಾಮ್ಸನ್ ೪೯; ಸಿದ್ಧಾರ್ಥ್ ಕೌಲ್ ೧೭ಕ್ಕೆ ೨) ಸನ್‌ರೈಸರ್ಸ್ ಹೈದರಾಬಾದ್: ೧೫.೫ ಓವರ್‌ಗಳಲ್ಲಿ ೧೨೭/೧ (ಶಿಖರ್ ಧವನ್ ಅಜೇಯ ೭೭, ಕೇನ್ ವಿಲಿಯಮ್ಸನ್ ಅಜೇಯ ೩೬; ಜೈದೇವ್ ಉನದ್ಕಟ್ ೨೮ಕ್ಕೆ ೧) ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್‌ಗೆ ೯ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಶಿಖರ್ ಧವನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More