ರಸೆಲ್ ಆಟ ವ್ಯರ್ಥ; ಚೆನ್ನೈಗೆ ಗೆಲುವು ತಂದುಕೊಟ್ಟ ಸ್ಯಾಮ್ ಬಿಲ್ಲಿಂಗ್ಸ್ 

ತಂಡದ ಇನ್ನಿಂಗ್ಸ್ ತಳ ಕಚ್ಚುತ್ತಿದ್ದ ವೇಳೆಯಲ್ಲಿ ಸ್ಫೋಟಕ ಆಟವಾಡಿದ ಆ್ಯಂಡ್ರೆ ರಸೆಲ್ ಆಟ ಹೊಳೆಯಲ್ಲಿ ಹುಣಸೆ ಹಣ್ಣು ತೀಡಿದಂತಾಯಿತು. ಏಟಿಗೆ ಎದಿರೇಟು ಎಂಬಂತೆ ರಸೆಲ್ ವಿಚ್ಛಿದ್ರಕಾರಿ ಆಟಕ್ಕೆ ಅಂಥದ್ದೇ ಪ್ರತಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಸ್ಯಾಮ್ ಬಿಲ್ಲಿಂಗ್ಸ್ ಚೆನ್ನೈಗೆ ಸತತ ೨ನೇ ಜಯ ತಂದಿತ್ತರು

ಬೆಟ್ಟಿಂಗ್ ಪ್ರಕರಣದಲ್ಲಿ ಎರಡು ವರ್ಷ ನಿಷೇಧ ಶಿಕ್ಷೆ ಪೂರೈಸಿ ಮೊದಲ ಬಾರಿಗೆ ತವರು ಮೈದಾನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಪೂರ್ವ ಗೆಲುವು ಸಾಧಿಸಿತು. ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ ೨೦೩ ರನ್ ಗುರಿಯನ್ನು ಇನ್ನೂ ಒಂದು ಎಸೆತ ಬಾಕಿ ಇರುವಂತೆ ಚೆನ್ನೈ ೫ ವಿಕೆಟ್ ಕಳೆದುಕೊಂಡು ೨೦೫ ಗಳಿಸಿ ಜಯಭೇರಿ ಬಾರಿಸಿತು. ಕೇವಲ ೩೬ ಎಸೆತಗಳಲ್ಲಿ ೧೧ ಸಿಕ್ಸರ್, ೧ ಬೌಂಡರಿ ಸೇರಿದ ಅಜೇಯ ೮೮ ರನ್ ಸಿಡಿಸಿ ತಂಡದ ಮೊತ್ತವನ್ನು ೨೦೦ರ ಗಡಿ ದಾಟಿಸಿದ ರಸೆಲ್ ಕೂಡ ಸ್ಯಾಮ್ ಬಿಲ್ಲಿಂಗ್ಸ್ ಆಟಕ್ಕೆ ತಲೆದೂಗಿದರು.

ಅಂದಹಾಗೆ, ವಾಂಖೆಡೆ ಮೈದಾನದಲ್ಲಿ ನಡೆದ ಈ ಋತುವಿನ ಮೊದಲ ಪಂದ್ಯದಲ್ಲಿಯೂ ಸೋಲಿನ ಸುಳಿಯಿಂದ ಮೇಲೆದ್ದುಬಂದಿದ್ದ ಚೆನ್ನೈ ಸೂಪರ್ ಕಿಂಗ್ಸ್, ಎರಡನೇ ಪಂದ್ಯದಲ್ಲಿಯೂ ಜಯದ ನಗಾರಿ ಬಾರಿಸಿತು. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಶುರುವಿನಿಂದಲೇ ಹಿನ್ನಡೆ ಅನುಭವಿಸಿದ ಚೆನ್ನೈ ಪರಾಭವದ ಭೀತಿಗೆ ಸಿಲುಕಿತ್ತು. ಆದರೆ, ವಿಂಡೀಸ್‌ನ ಆಲ್ರೌಂಡರ್ ಡ್ವೇನ್ ಬ್ರಾವೊ ಅವರ ಸ್ಫೋಟಕ ಆಟ ಚೆನ್ನೈ ಕೈಹಿಡಿದಿತ್ತು. ಇನ್ನು, ಎರಡನೇ ಪಂದ್ಯದಲ್ಲಿ ಚೆನ್ನೈನ ಗೆಲುವು ಮೊದಲ ಐದು ಓವರ್‌ಗಳಲ್ಲೇ ನಿರ್ಧರಿತವಾಗಿತ್ತು.

ಶುರುವಿನಲ್ಲೇ ಖಾತ್ರಿ: ಸವಾಲಿನ ಗುರಿ ಮುಂದಿದೆ ಎಂಬುದನ್ನು ಅರಿತ ಚೆನ್ನೈಗೆ ಆರಂಭಿಕರಾದ ಶೇನ್ ವಾಟ್ಸನ್ (೪೨: ೩ ಬೌಂಡರಿ,೩ ಸಿಕ್ಸರ್) ಮತ್ತು ಅಂಬಟಿ ರಾಯುಡು (೩೯: ೩ ಬೌಂಡರಿ, ೨ ಸಿಕ್ಸರ್) ಮೊದಲ ವಿಕೆಟ್‌ಗೆ ೩೫ ಎಸೆತಗಳಲ್ಲೇ ೭೫ ರನ್ ಕಲೆಹಾಕಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು. ಆರಂಭದಲ್ಲಿ ಈ ಜೋಡಿ ತೋರಿದ ಸ್ಫೋಟಕ ಆಟದಿಂದ ಚೆನ್ನೈ ಕೇವಲ ೯ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೮೫ ರನ್ ಕಲೆಹಾಕಿ ವಿಜಯದ ಸೂಚನೆ ನೀಡಿತು. ಆದರೆ, ವಾಟ್ಸನ್ ಔಟಾದ ಬಳಿಕ ಆಡಲಿಳಿದ ಎಡಗೈ ಆಟಗಾರ ಸುರೇಶ್ ರೈನಾ ಕೇವಲ ೧೪ ರನ್ ಗಳಿಸಿ ಕ್ರೀಸ್ ತೊರೆದಾಗ ಚೆನ್ನೈ ೧೨ ಓವರ್‌ಗಳಲ್ಲಿ ೩ ವಿಕೆಟ್‌ಗೆ ೧೦೧ ರನ್ ಗಳಿಸಿ ಕೊಂಚ ಸಂಕಷ್ಟಕ್ಕೆ ಸಿಲುಕಿದಂತೆ ಭಾಸವಾಯಿತು.

ಇದನ್ನೂ ಓದಿ : ಆಲ್ರೌಂಡರ್ ಬ್ರಾವೊ ಬೆಂಗಾವಲಿನಲ್ಲಿ ಗೆದ್ದ ಚೆನ್ನೈ ಕಪ್ಪು ಪಟ್ಟಿ ತೊಡುವುದೇ?

ತಿರುವು ನೀಡಿದ ಬಿಲ್ಲಿಂಗ್ಸ್: ಈ ಹಂತದಲ್ಲಿ ಕ್ರೀಸ್‌ಗಿಳಿದ ಸ್ಯಾಮ್ ಬಿಲ್ಲಿಂಗ್ಸ್, ಬಿಡುಬೀಸಿನ ಬ್ಯಾಟಿಂಗ್‌ನಿಂದ ಪಂದ್ಯದ ಚಿತ್ರಣವನ್ನು ಬದಲಿಸಿದರು. ಕೇವಲ ೨೩ ಎಸೆತಗಳಲ್ಲಿ ೫ ಸಿಕ್ಸರ್, ೨ ಬೌಂಡರಿಗಳುಳ್ಳ ೫೬ ರನ್ ಚಚ್ಚಿದ ಸ್ಯಾಮ್ ಬಿಲ್ಲಿಂಗ್ಸ್, ಕೆಕೆಆರ್‌ ಕೈಯಿಂದ ಪಂದ್ಯವನ್ನು ಕಸಿದುಕೊಂಡರು. ನಾಯಕ ಎಂ ಎಸ್ ಧೋನಿ (೨೫: ೨ ಬೌಂಡರಿ, ೧ ಸಿಕ್ಸರ್) ಜತೆಗೆ ನಾಲ್ಕನೇ ವಿಕೆಟ್‌ಗೆ ೩೦ ಎಸೆತಗಳಲ್ಲಿ ೫೪ ರನ್ ಪೇರಿಸಿದ ಬಿಲ್ಲಿಂಗ್ಸ್, ಒಂದೊಮ್ಮೆ ಧೋನಿ ೧೭ನೇ ಓವರ್‌ನಲ್ಲಿ ನಿರ್ಗಮನದ ನಂತರವೂ ತಂಡದ ಸ್ಟ್ರೈಕ್ ರೇಟ್‌ನ್ನು ಕಾಯ್ದುಕೊಳ್ಳುವಲ್ಲಿ ಸಫಲವಾದರು.

ಟಾಮ್ ಕುರ್ರನ್ ಬೌಲಿಂಗ್‌ನಲ್ಲಿ ರಾಬಿನ್ ಉತ್ತಪ್ಪಗೆ ಬಿಲ್ಲಿಂಗ್ಸ್ ಕ್ಯಾಚಿತ್ತು ಹೊರನಡೆದಾಗ ಡ್ವೇನ್ ಬ್ರಾವೊ ಮತ್ತು ರವೀಂದ್ರ ಜಡೇಜಾ ತಲಾ ಒಂದು ಸಿಕ್ಸರ್ ಸಿಡಿಸಿ ೧೧ ರನ್‌ಗಳೊಂದಿಗೆ ಔಟಾಗದೆ ಉಳಿದರು. ಕೊನೆಯ ಓವರ್ ನಿರ್ವಹಿಸಿದ ಕನ್ನಡಿಗ ಆರ್ ವಿನಯ್ ಕುಮಾರ್ ೩೫ ರನ್ ನೀಡಿ ದುಬಾರಿಯಾದರು.

ರಸೆಲ್ ಬಿರುಸು: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಆಲ್ರೌಂಡರ್ ಆಂಡ್ರೆ ರಸೆಲ್ ಅವರ ಬಿರುಸಾದ ಬ್ಯಾಟಿಂಗ್ ನೆರವಿನಿಂದ ಸವಾಲಿನ ಮೊತ್ತ ಕಲೆಹಾಕಿತು. ಕ್ರಿಸ್ ಲಿನ್ (೨೨: ೪ ಬೌಂಡರಿ), ರಾಬಿನ್ ಉತ್ತಪ್ಪ (೨೯: ೨ ಬೌಂಡರಿ, ೩ ಸಿಕ್ಸರ್) ಸ್ಫೋಟಕ ಆಟದೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ಯತ್ನಿಸಿದರಾದರೂ, ಈ ಇಬ್ಬರೂ ವಿಫಲವಾದರು.

ಆದರೆ, ನಿರ್ಣಾಯಕ ಹಂತದಲ್ಲಿ ತಂಡದ ಪರ ಅಮೋಘ ಬ್ಯಾಟಿಂಗ್ ನಡೆಸಿದ ರಸೆಲ್, ಸಿಕ್ಸರ್‌ಗಳ ಸುರಿಮಳೆಗರೆದರು. ೧೨ನೇ ಓವರ್‌ನಲ್ಲಿ ಶೇನ್ ವಾಟ್ಸನ್ ಬೌಲಿಂಗ್ ಮಾಡಿದಾಗ ಒಂದು ಬೌಂಡರಿ ಬಾರಿಸಿದ್ದು ಬಿಟ್ಟರೆ, ೨೯ರ ಹರೆಯದ ರಸೆಲ್, ಆನಂತರದಲ್ಲಿ ಡ್ವೇನ್ ಬ್ರಾವೊ, ಶಾರ್ದೂಲ್ ಠಾಕೂರ್ ಅವರುಗಳನ್ನು ಭರ್ಜರಿ ಸಿಕ್ಸರ್‌ಗಳೊಂದಿಗೆ ದಂಡಿಸಿದರು. ಕೊನೆಯ ೫ ಓವರ್‌ಗಳಲ್ಲಿ ೭೯ ರನ್ ಕಲೆಹಾಕಿದ ರಸೆಲ್, ತಂಡದ ಮೊತ್ತವನ್ನು ೨೦೦ರ ಗಡಿ ದಾಟಿಸಿದರು. ಆದರೆ, ಅವರ ಈ ಹೋರಾಟ ಸ್ಯಾಮ್ ಬಿಲ್ಲಿಂಗ್ಸ್ ಆಟದಲ್ಲಿ ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: ೨೦ ಓವರ್‌ಗಳಲ್ಲಿ ೨೦೨/೬ (ದಿನೇಶ್ ಕಾರ್ತಿಕ್ ೨೬; ಆ್ಯಂಡ್ರೆ ರಸೆಲ್ ಅಜೇಯ ೮೮; ಶೇನ್ ವಾಟ್ಸನ್ ೩೯ಕ್ಕೆ ೨); ಚೆನ್ನೈ ಸೂಪರ್ ಕಿಂಗ್ಸ್: ೧೯.೫ ಓವರ್‌ಗಳಲ್ಲಿ ೨೦೫/೫ (ಶೇನ್ ವಾಟ್ಸನ್ ೪೨, ಸ್ಯಾಮ್ ಬಿಲ್ಲಿಂಗ್ಸ್ ೫೬; ಟಾಮ್ ಕುರ್ರನ್ ೩೯ಕ್ಕೆ ೨); ಫಲಿತಾಂಶ: ಚೆನ್ನೈಗೆ ೫ ವಿಕೆಟ್ ಗೆಲುವು; ಪಂದ್ಯಶ್ರೇಷ್ಠ: ಸ್ಯಾಮ್ ಬಿಲ್ಲಿಂಗ್ಸ್

ಶೂ ಎಸೆದ ಕಿಡಿಗೇಡಿಗಳು: ಅಂದಹಾಗೆ, ಪಂದ್ಯದ ವೇಳೆ ಅಹಿತಕರ ಘಟನೆಯೊಂದು ನಡೆದು ಆಟಗಾರರು ಮುಜುಗರ ಅನುಭವಿಸಬೇಕಾಗಿಬಂದಿತು. ಪಂದ್ಯದ ವೇಳೆ ಮೈದಾನದಲ್ಲಿದ್ದ ಕೆಲವು ಕಿಡಿಗೇಡಿಗಳು ಕಾವೇರಿ ನೀರಿನ ವಿಷಯದಲ್ಲಿ ಕೇಂದ್ರ ಸರ್ಕಾರ ಅನ್ಯಾಯವೆಸಗಿದೆ ಎಂದು ದ. ಆಫ್ರಿಕಾ ಆಟಗಾರ ಫಾಫ್ ಡು ಪ್ಲೆಸಿಸ್ ಮತ್ತು ರವೀಂದ್ರ ಜಡೇಜಾ ಅವರತ್ತ ಶೂಗಳನ್ನು ಎಸೆದು ದಾಂದಲೆ ನಡೆಸಿದರು. ಇದಕ್ಕೆ ಭದ್ರತಾ ವೈಫಲ್ಯವೇ ಕಾರಣ ಎಂದು ದೂರಲಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More