ಓಂಪ್ರಕಾಶ್‌ಗೆ ಡಬಲ್ ಸಂಭ್ರಮ; ಮತ್ತೊಂದು ಕಂಚು ಗೆದ್ದ ಭಾರತೀಯ ಗುರಿಕಾರ

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಇಪ್ಪತ್ತೊಂದನೇ ಕಾಮನ್ವೆಲ್ತ್ ಕೂಟದಲ್ಲಿ ಶೂಟರ್ ಓಂಪ್ರಕಾಶ್ ಬ್ಯಾಕ್ ಟು ಬ್ಯಾಕ್ ಪದಕ ಗೆದ್ದ ಎರಡನೇ ಅಥ್ಲೀಟ್ ಎನಿಸಿದರು. ಕೂಟದ ಏಳನೇ ದಿನವಾದ ಬುಧವಾರ (ಏ.೧೧) ಅವರು ೫೦ ಮೀ. ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದರು 

ಕೂಟದ ಏಳನೇ ದಿನವನ್ನು ಭಾರತ ಕಂಚಿನ ಪದಕದೊಂದಿಗೆ ಆರಂಭಿಸಿತು. ಬ್ರಿಸ್ಬೇನ್‌ನ ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ೫೦ ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಓಂ ಪ್ರಕಾಶ್ ಓಂ ಮಿಥಾರ್ವಲ್ ಫೈನಲ್‌ನಲ್ಲಿ ೨೦೧.೧ ಪಾಯಿಂಟ್ಸ್ ಸ್ಕೋರ್ ಮಾಡಿ ತೃತೀಯ ಸ್ಥಾನ ಪಡೆದರು. ಎರಡು ದಿನಗಳ ಹಿಂದಷ್ಟೇ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಓಂಪ್ರಕಾಶ್ ಕಂಚು ಗೆದ್ದಿದ್ದರು.

ಆದರೆ, ಇದೇ ೧೦ ಮೀಟರ್ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಚಿನ್ನದ ನಗೆಬೀರಿದ್ದ ಭಾರತದ ಅನುಭವಿ ಶೂಟರ್ ಜಿತು ರೈ ಮಾತ್ರ ಈ ಬಾರಿ ನಿರಾಸೆ ಅನುಭವಿಸಿದರು. ೧೦ ಮಂದಿ ಶೂಟರ್‌ಗಳಿದ್ದ ಫೈನಲ್‌ನಲ್ಲಿ ಓಂಪ್ರಕಾಶ್ ಕಂಚಿಗೆ ಗುರಿ ಇಟ್ಟರಾದರೂ, ಹಾಲಿ ಚಾಂಪಿಯನ್ ಜಿತು ರೈ ಮಾತ್ರ ಕೇವಲ ೧೦೫ ಪಾಯಿಂಟ್ಸ್ ಗಳಿಸಿ ಕೊನೇ ಸ್ಥಾನಕ್ಕೆ ಕುಸಿದು ಹಿನ್ನಡೆ ಅನುಭವಿಸಿದರು.

ಮಿತ್ರವಾಳ್ ಮೊದಲ ಸುತ್ತಿನಲ್ಲೇ ನಿಖರ ಗುರಿ ಸಾಮರ್ಥ್ಯ ತೋರಿದರು. ಆದರೆ, ಕ್ರಮೇಣ ಅವರು ಎರಡನೇ ಸ್ಥಾನಕ್ಕೆ ಕುಸಿಯುವಂತಾಯಿತು. ಸಿಂಗಾಪುರದ ಸ್ವೀ ಹಾನ್ ಲಿಮ್ ಅವರಿಗೆ ಪ್ರಬಲ ಪೈಪೋಟಿ ನೀಡಿದರು. ಎರಡನೇ ಹಂತದ ಎಲಿಮಿನೇಷನ್‌ನಲ್ಲಿ ಸಿಂಗಪುರ ಶೂಟರ್ ೯.೪, ೧೦.೧ ಸ್ಕೋರ್‌ನೊಂದಿಗೆ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇತ್ತ, ಎರಡು ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದ ಸ್ವರ್ಣ ವಿಜೇತ ಆಸ್ಟ್ರೇಲಿಯಾದ ಡೇನಿಯಲ್ ರೆಪಚೊಲಿ ಪ್ರಖರ ಗುರಿಯಿಂದ ೧೦, ೧೦.೧, ೧೦.೨ ಹಾಗೂ ೯.೭ ಪಾಯಿಂಟ್ಸ್ ಪಡೆದರು. ಈ ಮಧ್ಯೆ ಮಿತ್ರವಾಳ್ ಕೂಡ ೧೦.೨, ೧೦ ಸ್ಕೋರ್‌ನೊಂದಿಗೆ ಲಿಮ್ ಅವರನ್ನು ಹಿಂದಿಕ್ಕಿದರು.

ಇದನ್ನೂ ಓದಿ : ಶೂಟಿಂಗ್‌ನಲ್ಲಿ ಎರಡನೇ ಸ್ವರ್ಣ ಪದಕ ತಂದುಕೊಟ್ಟ ಗುರಿಕಾರ ಜಿತು ರೈ

ಈ ಹಂತದಲ್ಲಿ ಓಂ ಮಿಥಾರ್ವಲ್ ಮತ್ತು ಆಸ್ಟ್ರೇಲಿಯಾ ಶೂಟರ್ ನಡುವೆ ನಿಕಟ ಪೈಪೋಟಿ ಶುರುವಾಯಿತು. ರೆಪಚೊಲಿ ೯.೮, ೧೦.೧ ಪಾಯಿಂಟ್ಸ್ ಗಳಿಸಿದರೆ, ಮಿತ್ರವಾಳ್ ೮.೬, ೯.೨ ಪಾಯಿಂಟ್ಸ್ ಸ್ಕೋರ್ ಮಾಡಿದರು. ಆನಂತರದಲ್ಲಿ ೯.೬, ೧೦.೭, ೯.೩, ೯.೨ರೊಂದಿಗೆ ಆಸ್ಟ್ರೇಲಿಯಾ ಶೂಟರ್ ಸ್ವರ್ಣ ಪದಕ ಖಚಿತಪಡಿಸಿಕೊಂಡರು. ಓಂ ಮಿಥಾರ್ವಲ್ ಬೆಳ್ಳಿ ಪದಕ ಗೆಲ್ಲಲು ಸಾಕಷ್ಟು ಅವಕಾಶವಿತ್ತು.

ಆದರೆ, ನೋಡ ನೋಡುತ್ತಿದ್ದಂತೆ ತೀವ್ರ ಹಿನ್ನಡೆಯಲ್ಲಿದ್ದ ಬಾಂಗ್ಲಾದೇಶ ಶೂಟರ್ ಪ್ರಬಲವಾಗಿ ಬೆಳೆದುನಿಂತರು. ೯.೧, ೯.೫, ೯.೬ ಮತ್ತು ೮.೭ ಸ್ಕೋರ್ ಮಾಡಿದ ಅವರು ಅಂತಿಮವಾಗಿ ಒಟ್ಟಾರೆ ೨೨೦.೫ ಪಾಯಿಂಟ್ಸ್ ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇತ್ತ, ಕೊನೆ ಕೊನೆಗೆ ಏಕಾಗ್ರತೆ ಕಳೆದುಕೊಂಡ ಮಿತ್ರವಾಳ್, ೭.೨, ೭.೬ ಸ್ಕೋರ್ ಮಾಡಿ ಮತ್ತೊಮ್ಮೆ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಅಂದಹಾಗೆ, ಅರ್ಹತಾ ಸುತ್ತಿನಲ್ಲಿ ಜಿತು ರೈ ೫೪೨-೮x ಸ್ಕೋರ್‌ನೊಂದಿಗೆ ಆರನೆಯವರಾಗಿ ಫೈನಲ್‌ಗೆ ಅರ್ಹತೆ ಪಡೆದರೆ, ಮಿತ್ರವಾಳ್ ೫೪೯-೬x ಪಾಯಿಂಟ್ಸ್ ಪಡೆದು ಮೊದಲಿಗರಾಗಿ ಫೈನಲ್‌ಗೆ ಧಾವಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More