ಗೋಲ್ಡ್‌ಕೋಸ್ಟ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಮಾಲೆ ತೊಡಿಸಿದ ಶ್ರೇಯಸಿ

ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಭಾರತದ ಬಯಕೆಗೆ ಶ್ರೇಯಸಿ ಸಿಂಗ್ ಬಲ ತುಂಬಿದ್ದಾರೆ. ಮಹಿಳೆಯರ ಡಬಲ್ ಟ್ರ್ಯಾಪ್‌ನಲ್ಲಿ ಶ್ರೇಯಸಿ ಸಿಂಗ್ ಚಿನ್ನ ಗೆದ್ದರೆ, ಪುರುಷರ ವಿಭಾಗದಲ್ಲಿ ಅಂಕುರ್ ಮಿತ್ತಲ್ ಕಂಚಿನ ಪದಕ ಪಡೆದರು

ಮೊದಲ ಸ್ಥಾನಕ್ಕಾಗಿ ತನ್ನೊಂದಿಗೆ ಪ್ರಬಲ ಸೆಣಸಾಟ ನಡೆಸಿದ ಆಸ್ಟ್ರೇಲಿಯಾ ಶೂಟರ್ ಎಮ್ಮಾ ಕಾಕ್ಸ್ ಅವರನ್ನು ಹಿಂದಿಕ್ಕಿದ ಭಾರತದ ಮಹಿಳಾ ಶೂಟರ್ ಶ್ರೇಯಸಿ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಸ್ವರ್ಣ ಗಳಿಕೆಗೆ ಮತ್ತೊಂದನ್ನು ಸೇರ್ಪಡೆಗೊಳಿಸಿದರು. ಬುಧವಾರ (ಏಪ್ರಿಲ್ ೧೧) ನಡೆದ ಬ್ರಿಸ್ಬೇನ್‌ನ ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ನಡೆದ ಮಹಿಳೆಯರ ಡಬಲ್ ಟ್ರ್ಯಾಪ್ ಸ್ಪರ್ಧಾವಳಿಯಲ್ಲಿ ಶ್ರೇಯಸಿ ಸಿಂಗ್ ೯೬ + ೨ ಸ್ಕೋರ್ ಮಾಡಿ ಆಸೀಸ್ ಶೂಟರ್ ಎಮ್ಮಾ ಅವರನ್ನು ಎರಡನೇ ಸ್ಥಾನಕ್ಕೆ ದೂಡಿದರು.

ಶ್ರೇಯಸಿ ಮತ್ತು ಅಂಕುರ್ ಮಿತ್ತಲ್ ಅವರ ಸಾಧನೆಯೊಂದಿಗೆ ಭಾರತ ಪದಕ ಪಟ್ಟಿಯಲ್ಲಿ ಒಟ್ಟು ೧೨ ಸ್ವರ್ಣ, ೪ ಬೆಳ್ಳಿ, ೮ ಕಂಚು ಸೇರಿ ೨೪ ಪದಕಗಳನ್ನು ಗೆದ್ದಂತಾಗಿದೆ. ಇತ್ತ, ೫೨ ಚಿನ್ನ, ೩೯ ಬೆಳ್ಳಿ, ೪೨ ಕಂಚು ಸೇರಿ ಒಟ್ಟು ೧೩೩ ಪದಕಗಳನ್ನು ಜಯಿಸಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ೨೪ ಚಿನ್ನ, ೩೦ ಬೆಳ್ಳಿ, ೨೧ ಕಂಚು ಗೆದ್ದಿರುವ ಇಂಗ್ಲೆಂಡ್ ಒಟ್ಟಾರೆ ೭೫ ಪದಕಗಳೊಂದಿಗೆ ಎರಡನೇ ಸ್ಥಾನದಲ್ಲೇ ಮುಂದುವರೆದಿದೆ.

೨೦೧೪ರ ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೇಯಸಿ, ಈ ಬಾರಿ ಸ್ವರ್ಣ ಪದಕದ ಒಡತಿಯಾದರು. ಇತ್ತ, ಭಾರತೀಯ ಶೂಟರ್ ಜತೆಗೆ ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದ ಎಮ್ಮಾ, ಬೆಳ್ಳಿ ಪದಕಕ್ಕೆ ತೃಪ್ತರಾದರು. ಇನ್ನುಳಿದಂತೆ ಈ ವಿಭಾಗದ ತೃತೀಯ ಸ್ಥಾನ ಸ್ಕಾಟ್ಲೆಂಡ್ ಶೂಟರ್ ಲಿಂಡಾ ಪಿಯರ್ಸನ್ ಪಾಲಾಯಿತು. ಅಂದಹಾಗೆ, ಇದೇ ವಿಭಾಗದಲ್ಲಿ ಭಾರತದ ಮತ್ತೋರ್ವ ಶೂಟರ್‌ ವರ್ಷ ವರ್ಮಾ ಕೂಡ ಸ್ಪರ್ಧಿಸಿದ್ದರು. ಆದರೆ, ಕೇವಲ ಒಂದು ಪಾಯಿಂಟ್ಸ್ ಅಂತರದಿಂದ ಆಕೆ ಕಂಚು ಪದಕದಿಂದ ವಂಚಿತರಾದರು. ವರ್ಷಾ ೮೬ ಸ್ಕೋರ್ ಮಾಡಿದರೆ, ಪಿಯರ್ಸನ್ ೮೭ ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿದರು.

ಮೊದಲ ಮೂರು ಸುತ್ತಿನ ಗುರಿ ಇಡುವ ಸ್ಪರ್ಧೆ ಮುಗಿದಾಗ ೨೬ರ ಹರೆಯದ ಶ್ರೇಯಸಿ ಸಿಂಗ್ ಎರಡನೇ ಸ್ಥಾನದಲ್ಲಿದ್ದರೆ, ವರ್ಷಾ ಮೂರನೇ ಸ್ಥಾನ ಕಾಯ್ದುಕೊಂಡರು. ಆದರೆ, ಪದಕಕ್ಕಾಗಿನ ಪೈಪೋಟಿಯುಕ್ತ ಸ್ಪರ್ಧೆಯಲ್ಲಿ ವರ್ಷಾ ನಾಲ್ಕನೇ ಸ್ಥಾನಕ್ಕೆ ಕುಸಿದಂತಾದುದು ದುರದೃಷ್ಟವೆನಿಸಿತು. ಆದರೆ, ಒತ್ತಡದ ಮಧ್ಯೆಯೂ ಸ್ಥಿಮಿತತೆಯಿಂದ ನಿಖರತೆ ಮೆರೆದ ಶ್ರೇಯಸಿ ಸಿಂಗ್, ಎಮ್ಮಾ ಅವರನ್ನು ಕೇವಲ ೨ ಪಾಯಿಂಟ್ಸ್‌ಗಳಿಂದ ಮಣಿಸಿ ಸ್ವರ್ಣವಿಜೇತೆ ಎನಿಸಿಕೊಂಡರು.

ಇದನ್ನೂ ಓದಿ : ಓಂಪ್ರಕಾಶ್‌ಗೆ ಡಬಲ್ ಸಂಭ್ರಮ; ಮತ್ತೊಂದು ಕಂಚು ಗೆದ್ದ ಭಾರತೀಯ ಗುರಿಕಾರ

ಚೊಚ್ಚಲ ಸ್ವರ್ಣ: ದೆಹಲಿ ಮೂಲದ ಶ್ರೇಯಸಿ ಮೊದಲ ಬಾರಿಗೆ ೨೦೧೦ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರಾದರೂ, ಪದಕ ಗೆಲ್ಲುವಲ್ಲಿ ವಿಫಲವಾಗಿದ್ದರು. ಆದರೆ, ಗ್ಲಾಸ್ಗೊ ಆವೃತ್ತಿಯಲ್ಲಿ ಡಬಲ್ ಟ್ರ್ಯಾಪ್‌ನ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು, ಇದೇ ೨೦೧೪ರ ಏಷ್ಯಾ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಇನ್ನು, ೨೦೧೭ರ ಕೊನೇ ಭಾಗದಲ್ಲಿ ನಡೆದ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ ಬೆಳ್ಳಿ ಪದಕ ಜಯಿಸಿದ್ದರು. ಇದೇ ಮೊದಲ ಬಾರಿಗೆ ಶ್ರೇಯಸಿ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು.

ಎಡವಿದ ವರ್ಷಾ: ಮೆಸಾಚುಸೆಟ್ಸ್‌ನ ಕೇಂಬ್ರಿಜ್‌ನಲ್ಲಿ ಹಾರ್ವರ್ಡ್ ವಿವಿ ಅರ್ಥಶಾಸ್ತ್ರ ವಿಭಾಗದಲ್ಲಿ ಸೀನಿಯರ್ ಆಗಿರುವ ವರ್ಷಾ, ವಾಸ್ತವವಾಗಿ ಅಂತಿಮ ಸುತ್ತಿನ ಆರಂಭದಲ್ಲಿ ತೀರಾ ಹಿಂದೆ ಬಿದ್ದಿದ್ದರು. ಆದಾಗ್ಯೂ ಕಂಚಿನ ಪದಕಕ್ಕಾಗಿ ಆಕೆ ೫೪ರ ಹರೆಯದ ಪಿಯರ್ಸನ್ ಅವರಿಗೆ ಪ್ರಬಲ ಪೈಪೋಟಿ ನೀಡಿದರು. ಆದರೆ, ಅನುಭವಿ ಶೂಟರ್ ಪಿಯರ್ಸನ್ ಕೇವಲ ಒಂದು ಪಾಯಿಂಟ್ಸ್ ಅಂತರದಲ್ಲಿ ಮೂರನೇ ಸ್ಥಾನವನ್ನು ತನ್ನದನ್ನಾಗಿ ಮಾಡಿಕೊಂಡರು.

ಮಿತ್ತಲ್‌ಗೆ ಕಂಚು: ಪುರುಷರ ಶೂಟಿಂಗ್‌ನ ಇದೇ ವಿಭಾಗದಲ್ಲಿ ಅಂಕುರ್ ಮಿತ್ತಲ್ ಮೂರನೇ ಸ್ಥಾನ ಪಡೆದರು. ದಿನದ ಆರಂಭದಲ್ಲಿ ಓಂಪ್ರಕಾಶ್ ಕಂಚು ಗೆದ್ದಿದ್ದರು. ೫೩ ಪಾಯಿಂಟ್ಸ್ ಕಲೆಹಾಕಿದ ಮಿತ್ತಲ್ ಕಂಚಿನ ಪದಕಕ್ಕೆ ತೃಪ್ತರಾದರು. ಆರು ಮಂದಿಯಿದ್ದ ಫೈನಲ್‌ನಲ್ಲಿ ಭಾರತದ ಮತ್ತೋರ್ವ ಶೂಟರ್ ಮೊಹಮದ್ ಅರಬ್ ಕೂಡ ಸೇರಿದ್ದರು. ಗ್ಲಾಸ್ಗೊ ಕೂಟದಲ್ಲಿ ಕಂಚು ಗೆದ್ದಿದ್ದ ಮೊಹಮದ್, ಈ ಬಾರಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಸ್ಕಾಟ್ಲೆಂಡ್ ಶೂಟರ್ ಡೇವಿಡ್ ಮೆಕ್‌ಮ್ಯಾತ್ ೭೪ ಸ್ಕೋರ್‌ ಮಾಡುವುದರ ಮೂಲಕ ಕೂಟ ದಾಖಲೆ ಬರೆದು ಚಿನ್ನ ಗೆದ್ದರೆ, ಟಿಮ್ ನಿಯಾಲೆ 70 ಪಾಯಿಂಟ್ಸ್ ಕಲೆಹಾಕಿ ಕಂಚು ಜಯಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More