ಮೇರಿ ಫೈನಲ್‌ಗೆ; ಸೆಮಿ ತಲುಪಿದ ವಿಕಾಸ್, ಸೋಲಂಕಿಯಿಂದ ಪದಕ ಖಚಿತ

ಚೊಚ್ಚಲ ಕಾಮನ್ವೆಲ್ತ್ ಚಿನ್ನದ ಪದಕಕ್ಕಾಗಿನ ಹೋರಾಟದಲ್ಲಿ ಮೇರಿ ಕೋಮ್ ಕೊನೇ ಘಟ್ಟ ಪ್ರವೇಶಿಸಿದ್ದಾರೆ. ೪೮ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಚಿನ್ನ ಗೆಲ್ಲುವ ಭರವಸೆಯಲ್ಲಿದ್ದಾರೆ. ಇತ್ತ, ಪುರುಷರ ವಿಭಾಗದಲ್ಲಿ ವಿಕಾಸ್, ಸೋಲಂಕಿ ಕೂಡ ಪದಕ ಖಚಿತಪಡಿಸಿದ್ದಾರೆ

ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆಲ್ಲುವ ೩೫ರ ಹರೆಯದ ಮೇರಿ ಕೋಮ್ ತುಡಿತಕ್ಕೆ ಇನ್ನೊಂದು ಹೆಜ್ಜೆಯಷ್ಟೇ ಬಾಕಿ. ಬುಧವಾರ (ಏಪ್ರಿಲ್ ೧೧) ನಡೆದ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಶ್ರೀಲಂಕಾದ ಅನುಷಾ ದಿಲ್ರುಕ್ಷಿ ಕೊಡಿತ್ತುವಾಕ್ಕು ವಿರುದ್ಧ ೫-೦ ಅಂತರದಿಂದ ಗೆಲುವು ಪಡೆದ ಮೇರಿ, ಫೈನಲ್‌ಗೆ ಧಾವಿಸಿದರು. ಆ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನಂತೂ ಅವರು ಈಗಾಗಲೇ ಖಚಿತಪಡಿಸಿಕೊಂಡರು.

ಮೇರಿಗಿಂತ ಸಾಕಷ್ಟು ಎತ್ತರವಾಗಿದ್ದ ೩೯ರ ಹರೆಯದ ಅನುಷಾ ದಿಲ್ರುಷಿ ಅತ್ಯಂತ ನೀರಸ ಪ್ರದರ್ಶನ ನೀಡಿದರು. ಹೀಗಾಗಿ, ಸೆಮಿಫೈನಲ್ ಬೌಟ್ ಸಂಪೂರ್ಣ ಏಕಪಕ್ಷೀಯವಾಗಿತ್ತು. ಹಣಾಹಣಿಯ ಬಹುತೇಕ ಹಂತಗಳಲ್ಲಿ ಮೇರಿಯ ಆಕರ್ಷಕ ಪಂಚ್‌ಗೆ ಪ್ರತಿ ಪಂಚ್ ಬಾರಿಸಲು ದಿಲ್ರುಷಾ ತಿಣುಕಾಡಿದರು. ಇಷ್ಟಾದರೂ, ಕೊನೇ ಘಟ್ಟದಲ್ಲಿ ಆಕೆ ತುಸು ಪ್ರತಿರೋಧ ನೀಡುವ ಸುಳಿವು ನೀಡಿದರಾದರೂ, ಅನುಭವಿ ಬಾಕ್ಸರ್ ಮೇರಿ ಕೋಮ್ ಆಕೆಯ ಎಲ್ಲ ಯತ್ನಗಳನ್ನೂ ವಿಫಲಗೊಳಿಸಿದರು.

ಹಾಲಿ ರಾಜ್ಯಸಭಾ ಸದಸ್ಯೆ ಹಾಗೂ ೨೦೧೨ರ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಮೇರಿ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಉತ್ತರ ಐರ್ಲೆಂಡ್‌ನ ಕ್ರಿಸ್ಟಿನಾ ಒ’ಹರಾ ವಿರುದ್ಧ ಕಾದಾಡಲಿದ್ದಾರೆ. ತನ್ನ ದೇಶದಲ್ಲಿ ನರ್ಸಿಂಗ್ ಹೋಂ ನಡೆಸುತ್ತಿರುವ ಒ’ಹರಾ, ಮತ್ತೊಂದು ಸೆಮಿಫೈನಲ್‌ನಲ್ಲಿ ೧೯ರ ಹರೆಯದ ನ್ಯೂಜಿಲೆಂಡ್‌ನ ಟಾಸ್ಮಿನ್ ಬೆನ್ನಿ ವಿರುದ್ಧ ಜಯ ಪಡೆದರು. ಬಹುತೇಕ ಫೈನಲ್‌ನಲ್ಲಿ ಕಠಿಣ ಕಾದಾಟದ ನಿರೀಕ್ಷೆ ಇದೆ.

ಇದನ್ನೂ ಓದಿ : ಸಿರಿಂಜ್ ಪತ್ತೆ ಪ್ರಕರಣ: ಭಾರತೀಯ ಬಾಕ್ಸಿಂಗ್ ತಂಡದ ವೈದ್ಯರಿಗೆ ವಾಗ್ದಂಡನೆ!

ಸರಿತಾ ದೇವಿಗೆ ನಿರಾಸೆ: ಇನ್ನು, ಮಹಿಳೆಯರ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಹಿರಿಯ ಹಾಗೂ ಅನುಭವಿ ಬಾಕ್ಸರ್ ಎಲ್ ಸರಿತಾ ದೇವಿ ಪದಕ ಸುತ್ತಿಗೆ ಧಾವಿಸಲು ವಿಫಲವಾದರು. ೬೦ ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಸರಿತಾ, ಆಸ್ಟ್ರೇಲಿಯಾದ ಅಂಜಾ ಸ್ಟ್ರಿಡ್ಸ್‌ಮನ್ ವಿರುದ್ಧ ಪರಾಭವಗೊಂಡರು. ಮಾಜಿ ವಿಶ್ವ ಹಾಗೂ ಏಷ್ಯಾ ಚಾಂಪಿಯನ್ ಸರಿತಾ ದೇವಿ, ಬಾಕ್ಸಿಂಗ್ ರಿಂಗ್‌ನ ಸುತ್ತ ನೆರೆದಿದ್ದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದರು. ಆದರೆ, ಆಕೆ ನೆರೆದಿದ್ದ ಬಾಕ್ಸಿಂಗ್ ಪ್ರಿಯರನ್ನು ನಿರಾಸೆಗೊಳಿಸಿದರು. ಏತನ್ಮಧ್ಯೆ ಆಕೆ ತೊಟ್ಟಿದ್ದ ಹೆಡ್ ಗಾರ್ಡ್ ಕೂಡ ಸಮರ್ಪಕವಾಗಿಲ್ಲದೆ ಹೋದದ್ದು ಆಕೆಗೆ ತೊಡಕಾಯಿತು.

ಸೋಲಂಕಿ ಗೆಲುವು: ಪುರುಷರ ವಿಭಾಗದಲ್ಲಿ ಪಪುವಾ ನ್ಯೂಗಿನಿ ಬಾಕ್ಸರ್ ಚಾರ್ಲ್ಸ್ ಕೀಮಾ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ೫-೦ ಅಂತರದಿಂದ ಮಣಿಸಿ ಸೆಮಿಫೈನಲ್ ತಲುಪಿದರು. ೨೧ರ ಹರೆಯದ ಸೋಲಂಕಿ ಎದುರಾಳಿಯ ಹಲವಾರು ಹೊಡೆತಗಳನ್ನು ಚಾಣಾಕ್ಷ ರೀತಿಯಲ್ಲಿ ಟ್ಯಾಕಲ್ ಮಾಡಿದರು. “ಚಾರ್ಲ್ಸ್ ವಿರುದ್ಧದ ಕಾದಾಟ ಕಷ್ಟಕರವಾಗಿತ್ತು. ಹಲವಾರು ಬಾರಿ ಆಕೆ ನನಗೆ ಪಂಚ್ ನೀಡಲು ಯತ್ನಿಸಿದರು. ಆದರೆ, ಅವರ ಬಹುಪಾಲು ಯತ್ನಗಳನ್ನು ಹತ್ತಿಕ್ಕುವಲ್ಲಿ ಸಫಲನಾದೆ,’’ ಎಂದು ಗೆಲುವಿನ ಬಳಿಕ ಸೋಲಂಕಿ ತಿಳಿಸಿದರು.

ವಿಕಾಸ್ ಉಪಾಂತ್ಯಕ್ಕೆ: ಇತ್ತ, ಪುರುಷರ ವಿಭಾಗದಲ್ಲಿ ಭಾರತದ ಮತ್ತೋರ್ವ ಯುವ ಬಾಕ್ಸರ್ ವಿಕಾ ಕೃಷ್ಣ (೭೫ ಕೆಜಿ) ಅಂತಿಮ ನಾಲ್ಕರ ಘಟ್ಟಕ್ಕೆ ಧಾವಿಸಿದರು. ಕಿಕ್ಕಿರಿದು ನೆರೆದಿದ್ದ ಬೌಟ್‌ನಲ್ಲಿ ಏಷ್ಯಾ ಚಾಂಪಿಯನ್ ವಿಕಾಸ್, ಜಾಂಬಿಯಾದ ಬೆನ್ನಿ ಮುಜಿಯೊ ವಿರುದ್ಧ ಜಯ ಪಡೆದರು. ಅಂದಹಾಗೆ, ಇತ್ತೀಚೆಗಷ್ಟೇ ನಡೆದಿದ್ದ ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಕಾಸ್ ಚಿನ್ನ ಗೆದ್ದಿದ್ದರು. ಉತ್ತಮ ಲಯದಲ್ಲಿದ್ದ ಅವರು, ಜಾಂಬಿಯಾ ಬಾಕ್ಸರ್‌ನ ಪಂಚಿಂಗ್ ತಂತ್ರಗಳನ್ನು ಯಶಸ್ವಿಯಾಗಿ ಹತ್ತಿಕ್ಕಿ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More