ಕಾಮನ್ವೆಲ್ತ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲೂ ಭಾರತ ಆಟಗಾರರ ಪಾರಮ್ಯ 

ಮಿಶ್ರ ಟೀಂ ವಿಭಾಗದಲ್ಲಿ ಪ್ರಚಂಡ ಪ್ರದರ್ಶನದೊಂದಿಗೆ ಐತಿಹಾಸಿಕ ಸ್ವರ್ಣ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ಆಟಗಾರರು ಇದೀಗ ಸಿಂಗಲ್ಸ್‌ನಲ್ಲೂ ಪ್ರಭುತ್ವ ಮೆರೆದಿದ್ದಾರೆ. ಸೈನಾ, ಪಿ ವಿ ಸಿಂಧು ಮತ್ತು ಪುರುಷರ ವಿಭಾಗದಲ್ಲಿ ಶ್ರೀಕಾಂತ್ ಮತ್ತು ಎಚ್ ಎಸ್ ಪ್ರಣಯ್ ಕೂಡ ಪ್ರೀಕ್ವಾರ್ಟರ್ ತಲುಪಿದ್ದಾರೆ

ಗೋಲ್ಡ್ ಕೋಸ್ಟ್‌ನಲ್ಲಿ ಬುಧವಾರದಿಂದ (ಏಪ್ರಿಲ್ ೧೧) ಶುರುವಾಗಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಸಿಂಗಲ್ಸ್ ವಿಭಾಗದಲ್ಲಿ ಭಾರತ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಅರ್ಥಾತ್ ಇಂದು ನಡೆದ ಅಂತಿಮ ೩೨ರ ಘಟ್ಟದ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಭಾರತ ಪ್ರೀಕ್ವಾರ್ಟರ್‌ಫೈನಲ್ ತಲುಪಿತು. ಭಾರತದ ನಾಲ್ವರು ಸ್ಟಾರ್ ಸಿಂಗಲ್ಸ್ ಆಟಗಾರರೂ ಗೆಲುವಿನೊಂದಿಗೆ ಅಂತಿಮ ಹದಿನಾರರ ಘಟ್ಟಕ್ಕೆ ಕಾಲಿಟ್ಟರು.

ಮೊದಲಿಗೆ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್, ದಕ್ಷಿಣ ಆಫ್ರಿಕಾದ ಎಲ್ಸಿ ಡಿವಿಲಿಯರ್ಸ್ ವಿರುದ್ಧ ಎರಡು ನೇರ ಗೇಮ್‌ಗಳಲ್ಲಿ ಜಯ ಪಡೆದರು. ಅತ್ಯಂತ ಬಿಡುಬೀಸಿನ ಆಟವಾಡಿದ ಸೈನಾ, ಕೇವಲ ೧೮ ನಿಮಿಷಗಳಲ್ಲೇ ಜಯಶಾಲಿಯಾದರು. ಅನನುಭವಿ ಆಟಗಾರ್ತಿ ಎಲ್ಸಿ ವಿರುದ್ಧ ನಿರ್ದಯಿ ಆಟವಾಡಿದ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ, ೨೧-೩, ೨೧-೧ರಿಂದ ಜಯಭೇರಿ ಬಾರಿಸಿದರು. ಈ ಗೆಲುವು ಸೈನಾ ವೃತ್ತಿಬದುಕಿನಲ್ಲೇ ಅತ್ಯಂತ ಶೀಘ್ರಗತಿಯದ್ದು ಹಾಗೂ ಕಡಿಮೆ ಸಮಯದ್ದಾಗಿದೆ.

ಇತ್ತ, ಬಳಿಕ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿಯೂ ಭಾರತ ವಿಜಯಿಯಾಯಿತು. ಒಲಿಂಪಿಯನ್ ಕಿಡಾಂಬಿ ಶ್ರೀಕಾಂತ್, ಮಾರಿಷಸ್‌ ಆಟಗಾರ ಆತಿಶ್ ಲುಬಾಹ್ ವಿರುದ್ಧ ೨೧-೧೩, ೨೧-೧೦ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದು ಮುಂದಿನ ಘಟ್ಟಕ್ಕೆ ಕಾಲಿಟ್ಟರು. ಸೈನಾ ಅವರಂತೆಯೇ ಶ್ರೀಕಾಂತ್ ಕೂಡ ಪ್ರತಿಸ್ಪರ್ಧಿಯನ್ನು ಅತ್ಯಲ್ಪ ಅವಧಿಯಲ್ಲೇ ಮಣಿಸಿದರು. ಆದರೆ, ಸೈನಾ ಹದಿನೆಂಟು ನಿಮಿಷ ತೆಗೆದುಕೊಂಡರೆ ಶ್ರೀಕಾಂತ್ ೨೬ ನಿಮಿಷಗಳಲ್ಲಿ ಮಾರಿಷಸ್ ಆಟಗಾರನ ಹೋರಾಟಕ್ಕೆ ಇತಿಶ್ರೀ ಹಾಡಿದರು.

ಇದನ್ನೂ ಓದಿ : ಮಿಶ್ರ ಟೀಂ ಬ್ಯಾಡ್ಮಿಂಟನ್‌ನಲ್ಲಿ ಸ್ವರ್ಣ ಗೆದ್ದ ಭಾರತ ತಂಡದ ಚಾರಿತ್ರಿಕ ಸಾಧನೆ

ಸಿಂಧು ಶುಭಾರಂಭ: ಇತ್ತ, ಗಾಯದ ಸಮಸ್ಯೆಯಿಂದಾಗಿ ಮಿಶ್ರ ಟೀಂ ಇವೆಂಟ್‌ನ ಒಂದೂ ಪಂದ್ಯದಲ್ಲಿ ಆಡದ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಇಂದು ಕಾದಾಟಕ್ಕಿಳಿದು ಶುಭಾರಂಭ ಮಾಡಿದರು. ಅಂತಿಮ ೩೨ರ ಘಟ್ಟದ ಈ ಪಂದ್ಯ ಕೂಡ ಏಕಪಕ್ಷೀಯವಾಗಿತ್ತು. ಫಿಜಿ ಆಟಗಾರ್ತಿ ಆಂಡ್ರಾ ವೈಟ್‌ಸೈಡ್ ವಿರುದ್ಧ ಸುನಾಮಿ ಎರಗಿದಂತೆ ಎರಗಿದ ಸಿಂಧು ೨೧-೬, ೨೧-೩ ಎರಡು ನೇರ ಗೇಮ್‌ಗಳಲ್ಲಿ ಜಯ ಪಡೆದರು. ಅಂದಹಾಗೆ ಈ ಪಂದ್ಯ ಕೂಡ ಕೇವಲ ೧೮ ನಿಮಿಷಗಳಲ್ಲೇ ಪರ್ಯವಸಾನಕಂಡದ್ದು ವಿಶೇಷ!

ಶಿವಾನಿ ಗದ್ದೆಗೂ ಗೆಲುವು: ಮಹಿಳೆಯರ ಸಿಂಗಲ್ಸ್ ವಿಭಾಗದ ಇನ್ನೊಂದು ಪ್ರಾಥಮಿಕ ಸುತ್ತಿನ ಹಣಾಹಣಿಯಲ್ಲಿ ಯುವ ಆಟಗಾರ್ತಿ ಋತ್ವಿಕಾ ಗದ್ದೆ ಘಾನಾದ ಪ್ರತಿಸ್ಪರ್ಧಿ ಗ್ರೇಸ್ ಅಟಿಪಾಕ ವಿರುದ್ಧ ೨೧-೫, ೨೧-೭ ನೇರ ಗೇಮ್‌ಗಳಲ್ಲಿ ಗೆಲುವು ಪಡೆದು ಪ್ರೀಕ್ವಾರ್ಟರ್‌ ತಲುಪಿದರು. ಶಿವಾನಿ ಕೂಡ ಕೇವಲ ೧೮ ನಿಮಿಷಗಳಲ್ಲೇ ಜಯ ಸಾಧಿಸಿ ಗಮನ ಸೆಳೆದರು.

ಪ್ರಣಯ್ ಜಯದ ನಗೆ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ಹನ್ನೆರಡನೇ ಶ್ರೇಯಾಂಕಿತ ಆಟಗಾರ ಎಚ್ ಎಸ್ ಪ್ರಣಯ್ ಸಹ ಜಯದ ನಗೆಬೀರಿದರು. ಮಾರಿಷಸ್ ಆಟಗಾರ ಜೀನ್ ಪಾಲ್ ವಿರುದ್ಧ ೨೫ರ ಹರೆಯದ ಪ್ರಣಯ್, ೨೧-೧೪, ೨೧-೧೬ರಿಂದ ಜಯಭೇರಿ ಬಾರಿಸಿದರು. ೩೦ ನಿಮಿಷಗಳ ಕಾದಾಟದಲ್ಲಿ ಪ್ರಣಯ್ ಯಾವುದೇ ಹಂತದಲ್ಲಿಯೂ ಹಿನ್ನಡೆ ಅನುಭವಿಸಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More