ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಹಣಿದ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಕಿವೀಸ್ ಸವಾಲು

ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತೊಂದು ಗೆಲುವು ಸಾಧಿಸಿದ ಎಂಟು ಬಾರಿಯ ಒಲಿಂಪಿಕ್ಸ್ ಹಾಕಿ ಚಾಂಪಿಯನ್ ಭಾರತ, ಉಪಾಂತ್ಯದಲ್ಲಿ ಕಿವೀಸ್ ವಿರುದ್ಧ ಸೆಣಸಲಿದೆ. ಬುಧವಾರ (ಏ.೧೧) ನಡೆದ ಗುಂಪು ಹಂತದ ಕೊನೇ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 4-3 ಗೋಲುಗಳಿಂದ ಜಯಿಸಿತು

ಜಿದ್ದಾಜಿದ್ದಿನಿಂದ ಕೂಡಿದ್ದ ಮತ್ತೊಂದು ಬಿ ಗುಂಪಿನ ಪಂದ್ಯದಲ್ಲಿ ಅದ್ಭುತ ಸಾಂಘಿಕ ಹೋರಾಟ ನಡೆಸಿದ ಭಾರತ ಹಾಕಿ ತಂಡ, ಪ್ರತಿಷ್ಠಿತ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತವಾಗಿದ್ದ ಭಾರತ ಹಾಕಿ ತಂಡ, ಈ ಬಾರಿ ಬಂಗಾರ ಗೆಲ್ಲಲು ಪಣ ತೊಟ್ಟಿದೆ. ಅಂದಹಾಗೆ, ಕೂಟದ ಏಳನೇ ದಿನದ ಮುಕ್ತಾಯಕ್ಕೆ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು. ಇತ್ತಂಡಗಳ ನಡುವೆ ದಾಖಲಾದ ಏಳು ಗೋಲುಗಳ ಪೈಕಿ ಕೊನೆಯ ಐದು ಗೋಲುಗಳು ದಾಖಲಾದದ್ದು ಕಟ್ಟಕಡೆಯ ಕ್ವಾರ್ಟರ್‌ನಲ್ಲಿ ಎಂಬುದು ಗಮನಾರ್ಹ. ಈ ಗೆಲುವಿನೊಂದಿಗೆ ಭಾರತ ಗುಂಪಿನಲ್ಲಿ ಮೊದಲ ಸ್ಥಾನ ಗಳಿಸಿತು. ಏತನ್ಮಧ್ಯೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಕಾದಾಡಲಿದೆ.

ಮಹಿಳೆಯರ ಡಬಲ್ ಟ್ರ್ಯಾಪ್‌ನಲ್ಲಿ ಶ್ರೇಯಸಿ ಸಿಂಗ್ ಇಂದು ಸ್ವರ್ಣ ಪದಕ ತಂದುಕೊಡುವುದರೊಂದಿಗೆ ಪ್ರಸಕ್ತ, ೧೨ ಸ್ವರ್ಣ, 4 ಬೆಳ್ಳಿ ಮತ್ತು ೮ ಕಂಚಿನ ಪದಕಗಳೊಂದಿಗೆ ಒಟ್ಟು ೨೪ ಪದಕಗಳನ್ನು ಗೆದ್ದಿದೆ. ೫೭ ಮತ್ತು ೨೫ ಸ್ವರ್ಣ ಗೆದ್ದಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊದಲೆರಡು ಸ್ಥಾನದಲ್ಲಿದ್ದು, ಬಹುತೇಕ ಭಾರತ, ಮೂರನೇ ಸ್ಥಾನದೊಂದಿಗೆ ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿನ ಹೋರಾಟವನ್ನು ಮುಗಿಸುವ ಸುಳಿವು ಸಿಕ್ಕಿದೆ. ಏಕೆಂದರೆ, ಇಂಗ್ಲೆಂಡ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ಗಳಿಸಲು ಭಾರತಕ್ಕೆ ಇನ್ನೂ ೧೩ ಚಿನ್ನದ ಪದಕಗಳು ಬೇಕಿದ್ದು, ಇದಂತೂ ಕಷ್ಟಸಾಧ್ಯವೆನಿಸಿದೆ.

ರೋಚಕ ಗೆಲುವು: ಅಂದಹಾಗೆ, ಇಂಗ್ಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ ಕಟ್ಟಕಡೆಯ ನಿಮಿಷದಲ್ಲಿ ಗೋಲು ಬಾರಿಸಿ ರೋಚಕ ಜಯ ಕಂಡಿತು. ಪಂದ್ಯದ ೫೯ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ದೊರಕಿಸಿಕೊಟ್ಟ ಗೋಲು ಆಂಗ್ಲರ ಎದುರು ಭಾರತ ಗೆದ್ದುಬೀಗಲು ನೆರವಾಯಿತು. ಇನ್ನುಳಿದಂತೆ ಮನ್ಪ್ರೀತ್ ಸಿಂಗ್ (೩೨ನೇ ನಿ.), ರೂಪೀಂದರ್ ಪಾಲ್ ಸಿಂಗ್ (೫೧ನೇ ನಿ.) ಹಾಗೂ ವರುಣ್ ಕುಮಾರ್ ೫೮ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ತಂದಿತ್ತರು. ಸೋತ ಇಂಗ್ಲೆಂಡ್ ಪರ ಡೇವಿಡ್ ಕಾಂಡನ್ (೧೭ನೇ ನಿ.), ಲಿಯಾಮ್ ಆನ್ಸೆಲ್ (೫೨ನೇ ನಿ.), ಸ್ಯಾಮ್ ವಾರ್ಡ್ ೫೬ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಇದನ್ನೂ ಓದಿ : ಹರ್ಮನ್‌ಪ್ರೀತ್ ಡಬಲ್ ಗೋಲು; ಕಾಮನ್ವೆಲ್ತ್ ಹಾಕಿ ಸೆಮಿಗೆ ಭಾರತ ದಾಪುಗಾಲು 

ಹಿನ್ನಡೆ ಮೆಟ್ಟಿನಿಂತ ಭಾರತ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸಿಕ್ಕ ಎರಡು ಅವಕಾಶಗಳನ್ನು ಭಾರತ ಕೈಚೆಲ್ಲಿತು. ಇತ್ತ, ಎರಡನೇ ಕ್ವಾರ್ಟರ್ ಶುರುವಾದ ಎರಡು ನಿಮಿಷಗಳಲ್ಲೇ ಡೇವಿಡ್ ಕಾಂಡನ್ ಗೋಲು ಬಾರಿಸಿ ತಂಡಕ್ಕೆ ೧-೦ ಮುನ್ನಡೆ ತಂದುಕೊಟ್ಟರು. ಆನಂತರದಲ್ಲಿ ಭಾರತ ಸಮಬಲ ಸಾಧಿಸಿದ್ದು ಮನ್ಪ್ರೀತ್ ಸಿಂಗ್ ಮುಖಾಂತರ. ಆನಂತರದಲ್ಲಿ ಇಬ್ಬರ ನಡುವೆ ಎಷ್ಟೇ ದಾಳಿ, ಪ್ರತಿದಾಳಿ ನಡೆದರೂ, ಪರಸ್ಪರರ ರಕ್ಷಣಾವ್ಯೂಹವನ್ನು ಭೇದಿಸುವುದು ಸಾಧ್ಯವಾಗಲಿಲ್ಲ.

ಕಡೇ ಕ್ವಾರ್ಟರ್‌ನಲ್ಲಿ ಐದು ಗೋಲು!: ಭಾರತದ ಆಟ ಯಾವ ಪರಿಯಲ್ಲಿ ಅದ್ಭುತವಾಗಿತ್ತು ಎನ್ನಲು ಈ ಕೊನೆಯ ಕ್ವಾರ್ಟರ್‌ ಸಾಕ್ಷಿಯಾಯಿತು. ಪಂದ್ಯ ಮುಗಿಯಲು ಕೇವಲ ಎರಡು ನಿಮಿಷಳಷ್ಟೇ ಇರುವಾಗ ೨-೩ ಹಿನ್ನಡೆಯಲ್ಲಿದ್ದ ಭಾರತದ ಪಾಳೆಯದಲ್ಲಿ ತೀವ್ರ ಚಡಪಡಿಕೆ ಶುರುವಾಗಿತ್ತು. ಈ ಹಂತದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ವರುಣ್ ಗೋಲಾಗಿ ಪರಿವರ್ತಿಸಿ ೩-೩ ಸಮಬಲ ಸಾಧಿಸಿದರು. ಏತನ್ಮಧ್ಯೆ, ಕಡೇ ಘಳಿಗೆಯಲ್ಲಿ ಹಾಫ್‌ಲೈನ್‌ನಿಂದ ನಾಯಕ ಮನ್‌ದೀಪ್ ಸಿಂಗ್ ಗೋಲು ಹೊಡೆಯುತ್ತಿದ್ದಂತೆ ಭಾರತ ೪-೩ ಮುನ್ನಡೆ ಪಡೆಯಿತು. ಇತ್ತ, ಇಂಗ್ಲೆಂಡ್ ಮೇಲ್ಮನವಿ ಸಲ್ಲಿಸಿತಾದರೂ, ಅದು ರೆಫರಿಯಿಂದ ತಿರಸ್ಕರಿಸಲ್ಪಟ್ಟಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More