ಗೋಲ್ಡ್ ಕೋಸ್ಟ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇನ್ನೂ ಮೂಡದ ಪದಕದ ಆಶಾಕಿರಣ

ಅಥ್ಲೆಟಿಕ್ಸ್‌ನಲ್ಲಿ ಪದಕ ಗಳಿಸುವ ಯಾವೊಂದು ಆಶಾಕಿರಣವೂ ಭಾರತದ ಪಾಲಿಗೆ ಮೂಡದಾಗಿದೆ. ಮಂಗಳವಾರ (ಏ.೧೦) ನಡೆದ ೪೦೦ ಮೀ. ಓಟದಲ್ಲಿ ಮುಹಮದ್ ಅನಾಸ್ 45.31 ಸೆಕೆಂಡ್‌ನಲ್ಲಿ ಕ್ರಮಿಸಿ ದಾಖಲೆ ಬರೆದರೂ, ಪದಕ ಗೆಲ್ಲುವಲ್ಲಿ ವಿಫಲರಾದರು. ಬುಧವಾರವೂ ಅದು ಮುಂದುವರೆಯಿತು

ಮಿಕ್ಕೆಲ್ಲಾ ಕ್ರೀಡೆಗಳಲ್ಲಿ ಸಾಧ್ಯವಾದಷ್ಟೂ ಪ್ರಭುತ್ವ ಮೆರೆಯುತ್ತಿರುವ ಭಾರತದ ಕ್ರೀಡಾಪಟುಗಳು, ಕ್ರೀಡಾಲೋಕದ ಹೃದಯ ಭಾಗದಂತಿರುವ ಅಥ್ಲೆಟಿಕ್ಸ್‌ನಲ್ಲಿ ಮಾತ್ರ ನಿರಾಸೆ ಅನುಭವಿಸುತ್ತಿದ್ದಾರೆ. ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಈ ವಿಭಾಗದಿಂದ ಪದಕ ಬರುವುದೋ ಇಲ್ಲವೋ ಎಂಬ ಭೀತಿ ಮೂಡಿಸಿದೆ. ಮಂಗಳವಾರ ಅನಾಸ್ ಕೂದಲೆಳೆಯ ಅಂತರದಿಂದ ಪದಕ ಕೈಚೆಲ್ಲಿದ ನಂತರ ಇಂದು ನಡೆದ ಪುರುಷರ ಹೈಜಂಪ್‌ನಲ್ಲಿ ತೇಜಸ್ವಿನ್ ಶಂಕರ್ ಆರನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರು.

ಜಿಗಿತದ ಮೂರು ಯತ್ನಗಳಲ್ಲಿ ಮೂರು ಬಾರಿಯೂ ೨.೨೭ ಮೀಟರ್ ಗೆರೆ ಮೀರಲು ವಿಫಲವಾದ ತೇಜಸ್ವಿನ್ ಸ್ಪರ್ಧಾವಳಿಯಿಂದ ಹೊರಬಿದ್ದರು. ೧೯ರ ಹರೆಯದ ತೇಜಸ್ವಿನ್‌ಗೆ ಇದು ಮೊಟ್ಟಮೊದಲ ಕಾಮನ್ವೆಲ್ತ್ ಕೂಟವಾಗಿತ್ತು. ಆತ್ಮವಿಶ್ವಾಸದೊಂದಿಗೆ ಆಸ್ಟ್ರೇಲಿಯಾಗೆ ತೆರಳಿದ್ದ ಅವರು ಭ್ರಮನಿರಸನ ಕಂಡಿದ್ದಾರೆ. ಇತ್ತ, ಮಹಿಳೆಯರ ವಿಭಾಗದಲ್ಲಿ ಭಾರತದ ಮತ್ತೋರ್ವ ಯುವ ಅಥ್ಲೀಟ್ ಹಿಮಾ ದಾಸ್ ಕೂಡ ಆರನೇ ಸ್ಥಾನಕ್ಕೆ ಕುಸಿದರು. ಆದಾಗ್ಯೂ ಇಂದಿನ ಸ್ಪರ್ಧೆಯಲ್ಲಿ ಆಕೆ ೫೧.೩೨ ಸೆ.ಗಳ ಸಾಧನೆಯಿಂದಾಗಿ ತನ್ನ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದಿದ್ದ ಹಿಮಾ ದಾಸ್, ಬುಧವಾರ (ಏಪ್ರಿಲ್ ೧೧) ನಡೆದ ಅಂತಿಮ ಸುತ್ತಿನಲ್ಲಿ ಮಾತ್ರ ಪದಕ ಗೆಲ್ಲಲು ಸಾಧ್ಯವಾಗದೆ ಕೈಚೆಲ್ಲಿದರು. ಈ ಇಬ್ಬರ ವೈಫಲ್ಯದಿಂದ ಭಾರತ ಅಥ್ಲೆಟಿಕ್ಸ್‌ನಲ್ಲಿ ಪದಕದ ಖಾತೆ ತೆರೆಯದಂತಾಗಿದ್ದು, ಇದೀಗ ಎಲ್ಲರ ಗಮನ ನೀರಜ್ ಚೋಪ್ರಾ ಅವರ ಮೇಲಿದೆ. ಜಾವೆಲಿನ್ ಎಸೆತದಲ್ಲಿ ಅವರು ಭಾರತಕ್ಕೆ ಪದಕ ತಂದುಕೊಡುವ ಬಗ್ಗೆ ವಿಶ್ವಾಸ ಇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಕಾಮನ್ವೆಲ್ತ್ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲೂ ಭಾರತ ಆಟಗಾರರ ಪಾರಮ್ಯ 

ಅವಕಾಶ ಕೈಚೆಲ್ಲಿದ ಶಂಕರ್: ಅಂದಹಾಗೆ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವ ಅವಕಾಶ ತೇಜಸ್ವಿನ್ ಶಂಕರ್‌ ಅವರಿಗಿತ್ತು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ೨.೨೮ ಮೀಟರ್. ಈ ಸಾಧನೆಯನ್ನು ಮೀರಿ ನಿಂತಿದ್ದರೂ ಅವರು ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನ ಗೆಲ್ಲಬಹುದಾಗಿತ್ತು. ಆದರೆ, ಅವರು ಅಂತಿಮ ಪರೀಕ್ಷೆಯಲ್ಲಿ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿ ಮಾಡಿದರು. ಹೀಗಾಗಿ ಬುಧವಾರವೂ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಪದಕದ ಭಾಗ್ಯ ಬರಲಿಲ್ಲ.

ಅನಾಸ್‌ ರಾಷ್ಟ್ರೀಯ ದಾಖಲೆ: ಇನ್ನು, ಮಂಗಳವಾರ ನಡೆದಿದ್ದ ಸ್ಪರ್ಧೆಯಲ್ಲಿ ಕೇರಳ ಮೂಲದ ಮುಹಮದ್ ಅನಾಸ್, ಕೊಂಚದರಲ್ಲೇ ಕಂಚು ಪದಕವನ್ನು ಕೈಚೆಲ್ಲಿದರು. ಅರಾರಾ ಕ್ರೀಡಾಂಗಣದಲ್ಲಿ ನಡೆದ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ೪೫.೩೧ ಸೆ.ಗಳಲ್ಲಿ ಗುರಿಮುಟ್ಟಿದ ಅವರು, ಆ ಮೂಲಕ ಕಳೆದ ವರ್ಷ ನವದೆಹಲಿಯಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್ ಪ್ರೀಯಲ್ಲಿ ತಾವೇ ನಿರ್ಮಿಸಿದ್ದ ೪೫.೩೨ ಸೆ.ಗಳ ಸಾಧನೆಯನ್ನು ಹಿಂದಿಕ್ಕಿದರು. ಅಂದಹಾಗೆ, ೧೯೫೮ರ ನಂತರ ಮಿಲ್ಖಾ ಸಿಂಗ್ ಬಳಿಕ ಕಾಮನ್ವೆಲ್ತ್ ಕ್ರೀಡಾಕೂಟದ ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೊದಲ ರನ್ನರ್ ಎನಿಸಿದ್ದ ಅನಾಸ್, ಐತಿಹಾಸಿಕ ಸಾಧನೆಯಿಂದ ವಂಚಿತರಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More