ಗೋಲ್ಡ್ ಕೋಸ್ಟ್ ಶೂಟಿಂಗ್‌ನಲ್ಲಿ ತೇಜಸ್ವಿನಿ ಸಾವಂತ್‌ಗೆ ಬೆಳ್ಳಿಯ ಸಡಗರ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತ ಮತ್ತೊಂದು ಬೆಳ್ಳಿ ಗೆದ್ದಿದೆ. ತೇಜಸ್ವಿನಿ ಸಾವಂತ್ ಗುರುವಾರ (ಏ.೧೨) ೫೦ ಮೀಟರ್ ರೈಫಲ್ ಪ್ರೊನ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದರು. ಇದರೊಂದಿಗೆ ಶೂಟಿಂಗ್‌ನಲ್ಲಿ ಭಾರತ ೧೨ ಪದಕ ಗೆದ್ದಂತಾಗಿದೆ

ಬ್ರಿಸ್ಬೇನ್‌ನ ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ಭಾರತ ಮತ್ತೊಮ್ಮೆ ಪದಕದ ಸವಿಯುಂಡಿತು. ತೇಜಸ್ವಿನಿ ಸಾವಂತ್ ಬೆಳ್ಳಿ ಪದಕಕ್ಕೆ ಗುರಿ ಇಡುವುದರೊಂದಿಗೆ ಕೂಟದಲ್ಲಿ ಭಾರತ ೨೫ನೇ ಪದಕ ಗೆದ್ದುಕೊಂಡಿತು. ಇನ್ನು, ನೀರಜ್ ಕುಮಾರ್ ಹಾಗೂ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಸಂಚಲನ ಸೃಷ್ಟಿಸಿರುವ ಯುವ ಶೂಟರ್ ಅನಿಶ್ ಭನ್ವಾಲ ಪುರುಷರ ೨೫ ಮೀಟರ್ ರಾಪಿಡ್ ಪಿಸ್ತೂಲ್ ಶೂಟಿಂಗ್‌ನ ಮೊದಲ ಹಂತದ ಅಹFತಾ ಸ್ಪರ್ಧೆಯಲ್ಲಿ ಕ್ರಮವಾಗಿ ೧ ಮತ್ತು ೨ನೇ ಸ್ಥಾನ ಗಳಿಸುವ ಮೂಲಕ ಭಾರತಕ್ಕೆ ಶೂಟಿಂಗ್‌ನಲ್ಲಿ ಮತ್ತಷ್ಟು ಪದಕಗಳನ್ನು ಗೆದ್ದುಕೊಡುವ ವಿಶ್ವಾಸ ಮೂಡಿಸಿದ್ದರು.

ತೇಜಸ್ವಿನಿ ಸಾವಂತ್‌ಗೂ ಮುನ್ನ ವಿವಿಧ ವಿಭಾಗಗಳಲ್ಲಿ ಭಾರತ ಎಂಟು ಪದಕಗಳನ್ನು ಜಯಿಸಿತ್ತು. ಮನು ಭಾಕರ್, ಜಿತು ರೈ, ಹೀನಾ ಸಿಧು ಮತ್ತು ಶ್ರೇಯಸಿ ಸಿಂಗ್ ಚಿನ್ನ ಗೆದ್ದರೆ, ಹೀನಾ ಸಿಧು, ಮೆಹುಲಿ ಘೋಷ್ ಬೆಳ್ಳಿ ಗೆದ್ದಿದ್ದರು. ಇನ್ನು, ಓಂ ಪ್ರಕಾಶ್ ಮಿಥರ್ವಾಲ್ ಎರಂಡು ಕಂಚು ಗೆದ್ದರೆ, ರವಿಕುಮಾರ್, ಅಪೂರ್ವಿ ಚಾಂಡೇಲಾ ಮತ್ತು ಅಂಕುರ್ ಮಿತ್ತಲ್ ಮೂರನೇ ಸ್ಥಾನ ಗಳಿಸಿದ್ದರು.

ಆರನೇ ಕಾಮನ್ವೆಲ್ತ್ ಪದಕ: ಗುರುವಾರ ಬೆಳ್ಳಿ ಪದಕ ಗೆದ್ದ ತೇಜಸ್ವಿನಿ ಸಾವಂತ್ ಆ ಮೂಲಕ ಒಟ್ಟಾರೆ ತಮ್ಮ ವೃತ್ತಿಬದುಕಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆರನೇ ಪದಕ ಗೆದ್ದ ಸಾಧನೆ ಮಾಡಿದರು. ೨೦೦೬ರ ಸಿಡ್ನಿ ಕೂಟದಲ್ಲಿ ಎರಡು ಸ್ವರ್ಣ ಗೆದ್ದಿದ್ದ ತೇಜಸ್ವಿನಿ, ೨೦೧೦ರ ದೆಹಲಿ ಕೂಟದಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಅವರು ಪದಕ ಗೆದ್ದು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ : ಗೋಲ್ಡ್‌ಕೋಸ್ಟ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ ಮಾಲೆ ತೊಡಿಸಿದ ಶ್ರೇಯಸಿ

ಸ್ವರ್ಣ ಸಾಧಕಿ: ಅರ್ಜುನ ಪ್ರಶಸ್ತಿ ಪುರಸ್ಕೃತೆ ತೇಜಸ್ವಿನಿ ಸಾವಂತ್ ೨೦೧೦ರಲ್ಲಿ ನಡೆದಿದ್ದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಜಯಿಸಿದ್ದರು. ಆ ಮೂಲಕ ವಿಶ್ವ ಶೂಟಿಂಗ್‌ನಲ್ಲಿ ಸ್ವರ್ಣ ಗೆದ್ದ ಭಾರತದ ಮೊಟ್ಟಮೊದಲ ಮಹಿಳಾ ಶೂಟರ್ ಎನಿಸಿಕೊಂಡಿದ್ದರು. ಆದರೆ, ೨೦೧೬ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ತೇಜಸ್ವಿನಿ ನಿರಾಸೆ ಮೂಡಿಸಿದ್ದರು.

ಅಂದಹಾಗೆ, ೨೦ ಮಂದಿ ಇದ್ದ ಫೈನಲ್‌ನಲ್ಲಿ ಸಾವಂತ್ ೧೦೨.೧, ೧೦೨.೪, ೧೦೩.೩, ೧೦೨.೮, ೧೦೩.೭ ಹಾಗೂ ೧೦೪.೭ ಪಾಯಿಂಟ್ಸ್‌ಗಳೊಂದಿಗೆ ಒಟ್ಟಾರೆ ೬೧೮.೯ ಸ್ಕೋರ್ ಮಾಡಿದರು. ಸಾವಂತ್‌ಗಿಂತಲೂ ಹೆಚ್ಚಿನ ನಿಖರತೆ ಕಾಯ್ದುಕೊಂಡ ಸಿಂಗಪುರದ ಮಾರ್ಟಿನಾ ಲಿಂಡ್ಸೆ ವೆಲೊಸೊ ೬೨೧ ಪಾಯಿಂಟ್ಸ್ ಕಲೆಹಾಕಿ ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡರು. ಇತ್ತ, ಸ್ಕಾಟ್ಲೆಂಡ್‌ನ ಸಿಯೊನೇಡ್ ಮೆಕಿಂತೋಷ್ ೬೧೮.೧ ಪಾಯಿಂಟ್ಸ್ ಗಳಿಸುವುದರೊಂದಿಗೆ ಕಂಚಿನ ಪದಕಕ್ಕೆ ತೃಪ್ತರಾದರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಶೂಟರ್ ಅಂಜುಮ್ ಮೌಡ್‌ಗಿಲ್ ಫೈನಲ್‌ಗೆ ಅರ್ಹತೆ ಪಡೆದರಾದರೂ, ಅಂತಿಮವಾಗಿ ೬೦೨.೨ ಪಾಯಿಂಟ್ಸ್ ಪೇರಿಸಿ ಆರನೇ ಸ್ಥಾನಕ್ಕೆ ಕುಸಿದು ಪದಕ ಗೆಲ್ಲಲು ವಿಫಲವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More