ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್‌ ಸೋದರ ಬ್ರೆಂಡನ್ ಸ್ಟಾರ್ಕ್‌ಗೆ ದಾಖಲೆ ಸ್ವರ್ಣ

ಆಸ್ಟ್ರೇಲಿಯಾ ಕ್ರೀಡಾರಾಷ್ಟ್ರ ಎಂಬುದಕ್ಕೆ ಇಲ್ಲಿದೆ ಮತ್ತೊಂದು ನಿದರ್ಶನ. ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಸದ್ಯ ಗಾಯದ ಸಮಸ್ಯೆಯಿಂದ ಈ ಋತುವಿನ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಆದರೆ, ಅವರ ಕುಟುಂಬದ ಮತ್ತೋರ್ವ ಸ್ಟಾರ್ ಅಥ್ಲೀಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದಿದ್ದಾರೆ!

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ವೆಲ್ತ್ ಕೂಟದಲ್ಲಿ ಆಸ್ಟ್ರೇಲಿಯಾದ ಪ್ರಭುತ್ವಕ್ಕೆ ಸ್ಟಾರ್ಕ್ ಸೋದರ ಬ್ರೆಂಡನ್ ಸ್ಟಾರ್ಕ್ ಕೈಜೋಡಿಸಿದ್ದಾರೆ. ಬುಧವಾರ (ಏ.೧೧) ಕರಾರಾ ಕ್ರೀಡಾಂಗಣದಲ್ಲಿ ನಡೆದ ಪುರುಷರ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ೨೪ರ ಹರೆಯದ ಬ್ರೆಂಡನ್ ಸ್ಟಾರ್ಕ್, ತನ್ನ ಸೋದರ ಹಾಗೂ ತನ್ನ ಮಿಂಚಿನ ದಾಳಿಯಿಂದ ಕ್ರಿಕೆಟ್ ಜಗತ್ತಿನ ಸ್ಟಾರ್ ಬೌಲರ್ ಎನಿಸಿರುವ ಮಿಚೆಲ್ ಅವರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.

ಮೂರು ಸುತ್ತಿನ ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಬ್ರೆಂಡನ್ ಸ್ಟಾರ್ಕ್ ೨.೩೨ ಮೀಟರ್ ಜಿಗಿದು ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಂಡರು. ೧೯೯೪ರ ಕೆನಡಾ ಕಾಮನ್ವೆಲ್ತ್ ಕ್ರೀಡಾಕೂಟದ ನಂತರ ಹೈಜಂಪ್ ವಿಭಾಗದಲ್ಲಿ ಆಸ್ಟ್ರೇಲಿಯಾ ಪಡೆದ ಮೊದಲ ಸ್ವರ್ಣ ಪದಕವಿದು. ಈ ನಿಟ್ಟಿನಲ್ಲಿ ಬ್ರೆಂಡನ್ ಸ್ಟಾರ್ಕ್ ಐತಿಹಾಸಿಕ ಸಾಧನೆ ಮಾಡಿದಂತಾಗಿದೆ. ಸದ್ಯ, ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ೫೮ ಚಿನ್ನ, ೪೩ ಬೆಳ್ಳಿ ಹಾಗೂ ೪೫ ಕಂಚಿನ ಪದಕಗಳೊಂದಿಗೆ ೧೪೬ ಪದಕ ಗೆದ್ದು ಮೊದಲ ಸ್ಥಾನದಲ್ಲಿದೆ. ಬೆಳ್ಳಿ ಮತ್ತು ಕಂಚಿಗಿಂತಲೂ ಮಿಗಿಲಾಗಿ ಚಿನ್ನದ ಗಳಿಕೆಯಲ್ಲಿ ಕಾಂಗರೂ ನಾಡು ಮುಂದಿರುವುದು ಅಲ್ಲಿನ ಕ್ರೀಡಾ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ.

"ಈ ಸ್ವರ್ಣ ಸಾಧನೆ ನನ್ನ ಹೆಸರನ್ನು ದೇಶದಾಚೆಗೂ ಪಸರಿಸುವಂತೆ ಮಾಡಿದೆ. ಶೇ. ೧೦೦ರಷ್ಟು ಇದು ಸತ್ಯ. ನಾನು ಮಿಚೆಲ್ ಮೇಲೆ ಯಾವುದನ್ನೂ ಹೇರಲಿಲ್ಲ. ಓರ್ವ ಕ್ರಿಕೆಟಿಗನಾಗಿ ಆತ ಏನೇನು ಸಾಧನೆ ಮಾಡಿದ್ದಾನೋ ಅದೆಲ್ಲಾ ನಂಬಲಶಕ್ಯವೆನಿಸುವಂತಿದೆ. ನನ್ನ ಹಿಮ್ಮಡಿ ಸ್ನಾಯು ಸ್ವಲ್ಪ ಮಟ್ಟಿಗೆ ಸೆಳೆತವನ್ನುಂಟುಮಾಡಿತ್ತು. ಆದರೆ, ಉತ್ತಮ ಲಯದಲ್ಲಿದ್ದ ನಾನು ಫೈನಲ್‌ನಲ್ಲಿ ಎಡವದಿರಲು ನಿರ್ಧರಿಸಿದೆ. ಕಡೆಗೂ ಅಂದುಕೊಂಡಿದ್ದನ್ನು ಸಾಧಿಸಿದ್ದು, ನನ್ನಲ್ಲಿ ಹೊಸದೊಂದು ಪುಳಕವನ್ನುಂಟುಮಾಡಿದೆ,'' ಎಂದು ಹೈಜಂಪ್‌ನಲ್ಲಿ ಚಾಂಪಿಯನ್ ಆಗುತ್ತಲೇ ಬ್ರೆಂಡನ್ ಸ್ಟಾರ್ಕ್ ಉದ್ಗರಿಸಿದರು.

ಇದನ್ನೂ ಓದಿ : ಗೋಲ್ಡ್ ಕೋಸ್ಟ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇನ್ನೂ ಮೂಡದ ಪದಕದ ಆಶಾಕಿರಣ

ಅಂದಹಾಗೆ, ಅಥ್ಲೆಟಿಕ್ಸ್‌ಗೆ ಇಳಿಯುವ ಮುನ್ನ ಬ್ರೆಂಡನ್ ಸ್ಟಾರ್ಕ್ ತನ್ನ ಸೋದರನಂತೆ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ, ಫುಟ್ಬಾಲ್ ಕ್ರೀಡೆಯಲ್ಲಿಯೂ ಯಶ ಗಳಿಸಲು ಯತ್ನಿಸಿದ್ದರು. ಆದರೆ, ಇವೆರಡೂ ತನಗೆ ಒಗ್ಗುತ್ತಿಲ್ಲ ಎಂಬುದನ್ನು ಬಹುಬೇಗ ಮನಗಂಡ ಬ್ರೆಂಡನ್, ಅಥ್ಲೆಟಿಕ್ಸ್‌ ಅನ್ನು ಆಯ್ದುಕೊಂಡರು.

"ನಾನೇನೂ ಕ್ರಿಕೆಟ್ ಅನ್ನು ಹೆಚ್ಚು ಇಷ್ಟಪಡುವುದಿಲ್ಲ. ಅದೇನಿದ್ದರೂ ನನ್ನ ಸೋದರನ ಕ್ರೀಡೆ. ನಿಜ, ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡಿದ್ದೇನೆ. ನಾನು ಮತ್ತು ಮಿಚೆಲ್ ಸಣ್ಣ ವಯಸ್ಸಿನಲ್ಲಿ ಕ್ರಿಕೆಟ್ ಅಡಿದ ನೆನಪಿದೆ. ಆದರೆ, ಇದನ್ನು ನಾನು ವೃತ್ತಿಬದುಕಾಗಿ ಸ್ವೀಕರಿಸಲಿಲ್ಲ,'' ಎಂದೂ ೨೪ರ ಹರೆಯದ ಬ್ರೆಂಡನ್ ತಿಳಿಸಿದರು.

ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟದಲ್ಲಿ ಸ್ಪರ್ಧಿಸಿದ್ದ ಬ್ರೆಂಡನ್ ಸ್ಟಾರ್ಕ್, ಫೈನಲ್‌ಗೆ ಅರ್ಹತೆ ಪಡೆದಿದ್ದರಾದರೂ, ೮ನೇ ಸ್ಥಾನಕ್ಕೆ ಕುಸಿದಿದ್ದರು. ಇನ್ನು, ರಿಯೊ ಒಲಿಂಪಿಕ್ಸ್ ಕೂಟಕ್ಕೆ ಅರ್ಹತೆ ಪಡೆದಿದ್ದರಾದರೂ, ಗಾಯದ ನಿಮಿತ್ತ ಇದಕ್ಕೂ ಮುಂಚಿನ ವಿಶ್ವ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಬೇಕಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More