ಕುಸ್ತಿಯಲ್ಲಿ ರಾಹುಲ್‌ಗೆ ಸ್ವರ್ಣ, ಬಬಿತಾ ಕುಮಾರಿಗೆ ರಜತ, ಕಂಚು ಗೆದ್ದ ಕಿರಣ್

ನಿರೀಕ್ಷೆಯಂತೆಯೇ ಗೋಲ್ಡ್ ಕೋಸ್ಟ್‌ನಲ್ಲಿ ಭಾರತದ ಕುಸ್ತಿ ಮೆರೆದಾಡಿದೆ. ಈ ವಿಭಾಗದಲ್ಲಿ ರಾಹುಲ್ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟರು. ಇನ್ನು, ಬಬಿತಾ ಕುಮಾರಿ ಫೈನಲ್‌ನಲ್ಲಿ ಹಿನ್ನಡೆ ಅನುಭವಿಸಿ ಬೆಳ್ಳಿಗೆ ತೃಪ್ತರಾದರು. ಇತ್ತ, ಒಲಿಂಪಿಯನ್ ಸುಶೀಲ್ ಕುಮಾರ್ ಕೂಡ ಸ್ವರ್ಣ ಬೇಟೆಗೆ ಅಣಿಯಾಗಿದ್ದರು

ಮೊಟ್ಟಮೊದಲ ಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಂಥ ಪ್ರತಿಷ್ಠಿತ ಸ್ಪರ್ಧಾಕಣದಲ್ಲಿ ಭಾಗವಹಿಸುತ್ತಿದ್ದೇನೆ ಎಂಬ ಅರಿವಿದ್ದರೂ, ನಿರ್ಭಿಡೆಯಿಂದ ಸೆಣಸಿದ ಯುವ ಕುಸ್ತಿಪಟು ರಾಹುಲ್ ಅವಾರೆ ಗೋಲ್ಡ್ ಕೋಸ್ಟ್‌ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದರು. ೨೦೧೧ರ ಯುವ ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿದ್ದ ೨೬ರ ಹರೆಯದ ರಾಹುಲ್ ಪುರುಷರ ೫೭ ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದರು.

ಇತ್ತ, ಮಹಿಳೆಯರ ವಿಭಾಗದಲ್ಲಿ ಅನುಭವಿ ಅಥ್ಲೀಟ್ ಬಬಿತಾ ಕುಮಾರಿ ಫೈನಲ್‌ನಲ್ಲಿ ಕೊಂಚದರಲ್ಲೇ ಎಡವಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ೫೩ ಕೆಜಿ ಫ್ರೀಸ್ಟೈಲ್‌ನಲ್ಲಿ ಬಬಿತಾ ಕುಸ್ತಿ ಅಖಾಡಕ್ಕಿಳಿದಿದ್ದರು. ಏತನ್ಮಧ್ಯೆ, ಇದೇ ಕುಸ್ತಿಯ ಮತ್ತೊಂದು ವಿಭಾಗದಲ್ಲಿ ಅಂದರೆ ೭೬ ಕೆಜಿ ಫ್ರೀಸ್ಟೈಲ್‌ನಲ್ಲಿ ಕಿರಣ್ ಕಂಚಿನ ಪದಕ ಜಯಿಸಿದರು. ಇದರೊಂದಿಗೆ ಕುಸ್ತಿಯಲ್ಲಿ ಒಮ್ಮೆಲೇ ಭಾರತ ಹ್ಯಾಟ್ರಿಕ್ ಬಾರಿಸಿದಂತಾಯಿತು. ಇದರೊಂದಿಗೆ ಭಾರತ ಒಟ್ಟು ೨೭ ಪದಕ ಗೆದ್ದಂತಾಗಿದೆ.

ಫೈನಲ್ ಸೆಣಸಾಟದಲ್ಲಿ ರಾಹುಲ್ ವಿರುದ್ಧ ಕೆನಡಾ ರೆಸ್ಲರ್ ಸ್ಟೀವನ್ ಟಕಾಶಿ ವಿರುದ್ಧ ರಾಹುಲ್ ೧೫-೭ರಿಂದ ಜಯ ಸಾಧಿಸಿದರು. ಟಕಾಶಿ ದಿಟ್ಟ ಪೈಪೋಟಿಯನ್ನೇ ನೀಡಿದರಾದರೂ, ಕಾದಾಟದ ದ್ವಿತೀಯಾರ್ಧದಲ್ಲಿ ಗಾಯಗೊಂಡರು. ಈ ಮಧ್ಯೆ ಸರಿಯಾಗಿ ನೋಡಲೂ ಅವರಿಂದ ಸಾಧ್ಯವಾಗಲಿಲ್ಲ. ಈ ದೃಷ್ಟಿ ದೋಷ ಅವರನ್ನು ಕಂಗೆಡಿಸಿತು. ಇತ್ತ, ರಾಹುಲ್ ಮರುಕ್ಷಣದಲ್ಲೇ ಟಕಾಶಿ ಅವರನ್ನು ಕೆಡವಿಹಾಕುತ್ತಿದ್ದಂತೆ ತೀರ್ಪುಗಾರರು ಅವರನ್ನು ವಿಜಯಿ ಎಂದು ಘೋಷಿಸಿದರು.

ರಿಯೊ ವಂಚಿತ ರಾಹುಲ್: ಭಾರತ ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ ಹಣಕಾಸು ನೆರವು ಪಡೆದಿದ್ದ ೪೫ ಅಥ್ಲೀಟ್‌ಗಳ ಪೈಕಿ ಕೊಲ್ಲಾಪುರ ಮೂಲದ ರಾಹುಲ್ ೨೦೧೬ರ ರಿಯೊ ಒಲಿಂಪಿಕ್ಸ್ ಕೂಟದಿಂದ ವಂಚಿತರಾಗಿದ್ದರು. ಆದರೆ, ಇಂದು ಗಳಿಸಿದ ಚಿನ್ನದ ಪದಕವು ಅವರ ರಿಯೊ ಕೂಟದ ಪದಕ ಕನಸನ್ನು ಒಂದು ಬಗೆಯಲ್ಲಿ ನನಸಾಗಿಸಿದಂತಾಗಿದೆ. ಅಂದಹಾಗೆ, ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ರಾಹುಲ್ ಈ ಸಾಧನೆಯಿಂದ ಹಿರಿಹಿಗ್ಗಿದರು.

ಬಬಿತಾಗೆ ನಿರಾಸೆ: ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟದಲ್ಲಿ ಸ್ವರ್ಣ ಪದಕ ಗೆದ್ದಿದ್ದ ಬಬಿತಾ ಕುಮಾರಿ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಒಟ್ಟಾರೆ ಹ್ಯಾಟ್ರಿಕ್ ಪದಕ ಜಯಿಸಿದರು. ೨೦೧೦ರ ದೆಹಲಿ ಕಾಮನ್ವೆಲ್ತ್‌ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಬಬಿತಾ, ಈ ಬಾರಿ ಮತ್ತದಕ್ಕೇ ತೃಪ್ತಿಪಟ್ಟರು. ನೈಜೀರಿಯಾದ ಸ್ಯಾಮುಯೆಲ್ ಬೋಸ್‌, ಶ್ರೀಲಂಕಾದ ದೀಪಿಕಾ, ಆಸ್ಟ್ರೇಲಿಯಾದ ಕಾರಿಸ್ಸಾ ಹಾಲಂಡ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ತಲುಪಿದ್ದ ಬಬಿತಾ, ಕೆನಡಾದ ಡಯಾನ ವೀಕರ್‌ ಎದುರು ಮಣಿದರು.

ಬಬಿತಾ ಕುಮಾರಿ

ರಿಯೊ ನಂತರದಲ್ಲಿ ಮೊದಲ ಪಂದ್ಯ: ಎರಡು ವರ್ಷಗಳ ಹಿಂದಿನ ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಿದ್ದ ೨೮ರ ಹರೆಯದ ಬಬಿತಾ ಮೊದಲ ಸುತ್ತಿನಲ್ಲೇ ಗ್ರೀಕ್ ದೇಶದ ಮರಿಯಾ ಪ್ರೆವೊಲಾರಕಿ ಎದುರು ೧-೫ರಿಂದ ಸೋತಿದ್ದರು. ಅದಾದ ನಂತರ ಬಬಿತಾ ಸ್ಪರ್ಧಿಸಿದ ಮೊಟ್ಟಮೊದಲ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯವಿದು. ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರು, ಚೇತರಿಸಿಕೊಂಡು ಕಾಮನ್ವೆಲ್ತ್ ಕೂಟದಲ್ಲಿ ಭಾಗವಹಿಸಿದ್ದರು. ರಿಯೊ ಹಾಗೂ ಕಾಮನ್ವೆಲ್ತ್ ಕೂಟದ ಮಧ್ಯೆ ಆಕೆ ಪ್ರೊ ರೆಸ್ಲಿಂಗ್ ಲೀಗ್‌ನಲ್ಲಿ ಸ್ಪರ್ಧಿಸಿದ್ದರಾದರೂ, ಕೇವಲ ೪೬ ಸೆಕೆಂಡುಗಳಲ್ಲಿಯೇ ಎದುರಾಳಿಗೆ ಮಣಿದಿದ್ದರು. ಆ ಬಳಿಕ ಅವರು ಮತ್ತೆ ಕುಸ್ತಿ ಅಖಾಡಕ್ಕೆ ಇಳಿದಿರಲಿಲ್ಲ.

ಕಿರಣ್‌ಗೆ ಏಕಪಕ್ಷೀಯ ಜಯ: ಇನ್ನು, ಮಹಿಳೆಯರ ವಿಭಾಗದ ೭೬ ಕೆಜಿ ಫ್ರೀಸ್ಟೈಲ್‌ನಲ್ಲಿ ಭಾರತದ ಮತ್ತೋರ್ವ ಜಗಜಟ್ಟಿ ಕಿರಣ್ ಏಕಪಕ್ಷೀಯ ಜಯ ಪಡೆದರು. ಅಂತಿಮ ಸುತ್ತಿನಲ್ಲಿ ಅವರು ಮಾರಿಷಸ್‌ನ ಕಟೌಸ್ಕಿಯಾ ಪರಿಯಧಾವೆನ್ ವಿರುದ್ಧ ಕಿರಣ್ ೧೦-೦ ಅಂತರದಿಂದ ಜಯಿಸಿದರು. ಕಿರಣ್ ಆಕ್ರಮಣಕಾರಿ ಹಾಗೂ ಅವರು ಹಾಕಿದ ಪಟ್ಟಿಗೆ ಮಾರಿಷಸ್ ಕುಸ್ತಿಪಟುವಿನಿಂದ ಪ್ರತ್ಯಾಕ್ರಮಣ ವ್ಯಕ್ತವಾಗಲೇ ಇಲ್ಲ. ಹೀಗಾಗಿ ಕಿರಣ್, ನಿರೀಕ್ಷೆಗೂ ಮೀರಿದ ಸುಲಭ ಗೆಲುವು ಪಡೆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More