ಕಾಮನ್ವೆಲ್ತ್ ಕೂಟದಲ್ಲಿ ಹ್ಯಾಟ್ರಿಕ್ ಮೆರೆದ ಜಗಜಟ್ಟಿ ಸುಶೀಲ್ ಕುಮಾರ್

ಭಾರತದ ಮೊಟ್ಟಮೊದಲ ಹಾಗೂ ಏಕೈಕ ಡಬಲ್ ಒಲಿಂಪಿಕ್ ಚಾಂಪಿಯನ್ ಎನಿಸಿರುವ ಕುಸ್ತಿಪಟು ಸುಶೀಲ್ ಕುಮಾರ್, ಗೋಲ್ಡ್ ಕೋಸ್ಟ್‌ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ, ಭಾಗವಹಿಸಿದ್ದ ಮೂರೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದ ಸಾಧಕ ಎನಿಸಿದರು

ಭಾರತದ ನಂ.೧ ಕುಸ್ತಿಪಟು ಸುಶೀಲ್ ಕುಮಾರ್ ವೃತ್ತಿಬದುಕಿನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು. ಗುರುವಾರ (ಏ.೧೨) ಗೋಲ್ಡ್ ಕೋಸ್ಟ್‌ನಲ್ಲಿ ಅವರು ನಿರೀಕ್ಷೆಯಂತೆಯೇ ಚಿನ್ನದ ನಗೆಬೀರಿದರು. ೭೪ ಕೆಜಿ ವಿಭಾಗದಲ್ಲಿ ಮತ್ತೊಮ್ಮೆ ಅವರು ಚಾಂಪಿಯನ್ ಎನಿಸಿದರು. ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟದಲ್ಲಿ ಚಾಂಪಿಯನ್ ಆಗಿದ್ದ ಸುಶೀಲ್ ಕುಮಾರ್, ೨೦೧೦ರ ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ಮೊಟ್ಟಮೊದಲ ಚಿನ್ನದ ಪದಕ ಜಯಿಸಿದ್ದರು.

ಫೈನಲ್ ಬೌಟ್‌ನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ನೆಸ್ ಬೋಥಾ ಅವರನ್ನು ಅತ್ಯುತ್ಕೃಷ್ಟ ತಂತ್ರಗಾರಿಕೆಯಿಂದ ಮಣಿಸಿದ ಅವರು, ಜಯಶಾಲಿಯಾದರು. ಕುಸ್ತಿಪಟು ವಿಭಿನ್ನ ಹಾಗೂ ಶ್ರೇಷ್ಠ ತಂತ್ರಗಾರಿಕೆಯಿಂದ ಪ್ರತಿಸ್ಪರ್ಧಿಯ ವಿರುದ್ಧ ೧೦ ಮತ್ತು ಅದಕ್ಕಿಂತಲೂ ಹೆಚ್ಚಿನ ಪಾಯಿಂಟ್ಸ್ ಮುನ್ನಡೆ ಪಡೆದಾಗ ಸಹಜವಾಗಿ ಆತ ಚಾಂಪಿಯನ್ ಎಂಬ ಆಧಾರದಲ್ಲಿ ಸುಶೀಲ್ ಕುಮಾರ್ ಕಾಮನ್ವೆಲ್ತ್ ಕ್ರೀಡಾಕೂಟದ ವೃತ್ತಿಬದುಕಿನಲ್ಲಿ ಮೂರನೇ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಇನ್ನು, ದಕ್ಷಿಣ ಆಫ್ರಿಕಾ ಕುಸ್ತಿಪಟು ಬೋಥಾ, ಸ್ಪರ್ಧೆಯ ಯಾವ ಹಂತದಲ್ಲಿಯೂ ಸುಶೀಲ್‌ಗೆ ಸರಿಸಾಟಿ ಪ್ರದರ್ಶನ ನೀಡಲಿಲ್ಲ. ಮೊದಲ ಸುತ್ತಿನಲ್ಲೇ ಆರಂಭಿಕ ಸೆಕೆಂಡ್‌ನಲ್ಲಿಯೇ ಅವರು ನಾಲ್ಕು ಪಾಯಿಂಟ್ಸ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕೆ ಪ್ರತಿಯಾಗಿ ಸರಣಿಯೋಪಾದಿಯಲ್ಲಿ ಎರಡು ಪಾಯಿಂಟ್ಸ್ ಗಳಿಸಿದ ಸುಶೀಲ್, ೧೦-೦ ಮುನ್ನಡೆ ಸಾಧಿಸುತ್ತಿದ್ದಂತೆ ತೀರ್ಪುಗಾರರು ಅವರನ್ನು ವಿಜೇತರೆಂದು ಘೋಷಿಸಿದರು.

ಇದನ್ನೂ ಓದಿ : ಕುಸ್ತಿಯಲ್ಲಿ ರಾಹುಲ್‌ಗೆ ಸ್ವರ್ಣ, ಬಬಿತಾ ಕುಮಾರಿಗೆ ರಜತ, ಕಂಚು ಗೆದ್ದ ಕಿರಣ್

ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ೬೬ ಕೆಜಿ ವಿಭಾಗದಲ್ಲಿ ಸುಶೀಲ್ ಚಿನ್ನ ಗೆದ್ದಿದ್ದರು. ಆದರೆ, ಸ್ಕಾಟ್ಲೆಂಡ್‌ನ ಗ್ಲಾಸ್ಗೊ ಕೂಟದಲ್ಲಿ ಅವರು ೭೪ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಾಂಪಿಯನ್ ಆಗಿದ್ದರು. ಅಂದಹಾಗೆ, ಸುಶೀಲ್ ಅವರ ಈ ಸ್ವರ್ಣ ಸಾಧನೆಯಿಂದಾಗಿ ಭಾರತ, ಕುಸ್ತಿ ವಿಭಾಗದಲ್ಲಿ ಒಂದೇ ದಿನ ನಾಲ್ಕು ಪದಕಗಳನ್ನು ಗೆದ್ದ ಸಾಧನೆ ಮೆರೆಯಿತು. ಮೊದಲಿಗೆ ೫೭ ಕೆಜಿ ವಿಭಾಗದಲ್ಲಿ ರಾಹುಲ್ ಚಿನ್ನ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಬಬಿತಾ ಕುಮಾರಿ ಮತ್ತು ಕಿರಣ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More