ಶ್ರೀಕಾಂತ್ ಐತಿಹಾಸಿಕ ಸಾಧನೆಯೊಂದಿಗೆ ಮತ್ತೆ ಮಿಂಚಿದ ಭಾರತದ ಶಟ್ಲರ್‌ಗಳು

ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ನಂ.೧ ಸ್ಥಾನಕ್ಕೇರಿದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎನಿಸಿ ಚಾರಿತ್ರಿಕ ಸಾಧನೆ ಮಾಡಿದ ಕೆ ಶ್ರೀಕಾಂತ್ ಜೊತೆಗೆ ಭಾರತದ ಶಟ್ಲರ್‌ಗಳು ಗೋಲ್ಡ್ ಕೋಸ್ಟ್‌ನಲ್ಲಿ ಮಿಂಚು ಹರಿಸಿದ್ದಾರೆ. ಸೈನಾ, ಸಿಂಧು ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ತಲುಪಿದ್ದು, ಅಶ್ವಿನಿ ಜೋಡಿ ಸಹ ಪ್ರಗತಿ ಸಾಧಿಸಿದೆ

ಮಿಶ್ರ ಟೀಂ ವಿಭಾಗದಲ್ಲಿ ಭಾರತಕ್ಕೆ ಐತಿಹಾಸಿಕ ಸ್ವರ್ಣ ಪದಕ ತಂದುಕೊಟ್ಟ ಭಾರತದ ಶಟ್ಲರ್‌ಗಳ ಮನಮೋಹಕ ಆಟ ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅವ್ಯಾಹತವಾಗಿ ಸಾಗಿದೆ. ಕೂಟದ ಎಂಟನೇ ದಿನವಾದ ಗುರುವಾರ (ಏಪ್ರಿಲ್ ೧೨) ಭಾರತದ ಸ್ಟಾರ್ ಆಟಗಾರ್ತಿಯರಾದ ಪಿ ವಿ ಸಿಂಧು, ಸೈನಾ ನೆಹ್ವಾಲ್ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿನ ಸವಾಲನ್ನು ಸುಲಭವಾಗಿ ಮೆಟ್ಟಿನಿಂತು ಎಂಟರ ಘಟ್ಟಕ್ಕೆ ಧಾವಿಸಿದರು.

ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಆಸ್ಟ್ರೇಲಿಯಾದ ವೆಂಡಿ ಚಾನ್ ವಿರುದ್ಧ ೨೧-೧೫, ೨೧-೯ರಿಂದ ಗೆಲುವು ಸಾಧಿಸಿದರು. ೩೪ ನಿಮಿಷಗಳ ಕಾದಾಟದಲ್ಲಿ ಮೊದಲ ಗೇಮ್‌ನಲ್ಲಿ ತುಸು ಪ್ರತಿರೋಧ ಎದುರಿಸಿದ ಸಿಂಧು, ಆನಂತರದ ಎರಡನೇ ಗೇಮ್‌ನಲ್ಲಿ ಸುಲಭವಾಗಿಯೇ ಆಸೀಸ್ ಆಟಗಾರ್ತಿಯನ್ನು ಮಣಿಸಿದರು. ಮತ್ತೊಂದು ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಯುವ ಆಟಗಾರ್ತಿ ಋತ್ವಿಕಾ ಗದ್ದೆ ಸಿಂಗಪುರದ ಜಿಯಾ ಮಿನ್ ಯಿಯೊ ವಿರುದ್ಧ ಕಠಿಣ ಹೋರಾಟ ನಡೆಸಿ ೨೧-೧೦, ೨೩-೨೧ ಹಾಗೂ ೨೧-೧೦ರಿಂದ ಜಯಿಸಿದರು.

ಸೈನಾಗೂ ಸುಲಭ ಜಯ: ಇತ್ತ, ೨೦೧೨ರ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ನೆಹ್ವಾಲ್ ಸಹ ಗೋಲ್ಡ್ ಕೋಸ್ಟ್‌ನಲ್ಲಿನ ತನ್ನ ಜಯದ ಓಟ ಮುಂದುವರಿಸಿದರು. ಪ್ರೀಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಐಸ್ಲ್ ಆಫ್ ಮ್ಯಾನ್‌ನ ಜೆಸ್ಸಿಕಾ ಲೀ ವಿರುದ್ಧ ಆಕ್ರಮಣಕಾರಿ ಆಟದೊಂದಿಗೆ ಜಯ ಪಡೆದರು. ಮೊದಲ ಗೇಮ್ ಅನ್ನು ೨೧-೪ರಿಂದ ವಶಕ್ಕೆ ಪಡೆದ ಸೈನಾ, ಎರಡನೇ ಗೇಮ್‌ನಲ್ಲಿ ೨-೦ ಮುನ್ನಡೆ ಸಾಧಿಸಿದ್ದಾಗ ಜೆಸ್ಸಿಕಾ ಲೀ ಗಾಯದಿಂದಾಗಿ ಪಂದ್ಯದಿಂದ ಹಿಮ್ಮೆಟ್ಟಿದರು.

ಇದನ್ನೂ ಓದಿ : ಅತಿ ಶೀಘ್ರದಲ್ಲೇ ನನಸಾಗಲಿದೆ ಕಿಡಾಂಬಿ ಶ್ರೀಕಾಂತ್ ಬಹುದಿನಗಳ ಕನಸು

ಪ್ರಣಯ್ ಗೆಲುವು: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್ ಎಸ್ ಪ್ರಣಯ್ ಕೂಡ ಮುನ್ನಡೆ ಕಂಡರು. ಅವರು ಹದಿನಾರರ ಘಟ್ಟದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಂಟನಿ ಜೋ ವಿರುದ್ಧ ೨೧-೧೮, ೨೧-೧೧ರ ಎರಡು ನೇರ ಗೇಮ್‌ಗಳಲ್ಲಿ ಜಯಶಾಲಿಯಾದರು. ಮೊದಲ ಗೇಮ್‌ನಲಿ ಆಂಟನಿ, ಪ್ರಣಯ್‌ ಎದುರು ಉತ್ತಮ ಆಟವಾಡಿದರಾದರೂ, ಮೂರು ಪಾಯಿಂಟ್ಸ್‌ಗಳ ಅಂತರದಲ್ಲಿ ನಿರಾಸೆ ಅನುಭವಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಪ್ರಣಯ್ ಅಬ್ಬರಕ್ಕೆ ಮಂಕಾದ ಅವರು, ಕೇವಲ ೧೧ ಪಾಯಿಂಟ್ಸ್‌ಗಳನ್ನಷ್ಟೇ ಗಳಿಸಲು ಶಕ್ತರಾದರು.

ಅಶ್ವಿನಿ ಜೋಡಿಗೆ ಗೆಲುವು: ಕನ್ನಡತಿ ಅಶ್ವಿನಿ ಪೊನ್ನಪ್ಪ ಕೂಡ ಗೋಲ್ಡ್ ಕೋಸ್ಟ್‌ನಲ್ಲಿ ಯಶಸ್ವಿ ಅಭಿಯಾನ ನಡೆಸಿದ್ದಾರೆ. ಮಿಶ್ರ ಹಾಗೂ ಡಬಲ್ಸ್ ವಿಭಾಗದಲ್ಲಿ ಅವರು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಮತ್ತು ಎನ್ ಸಿಕಿ ರೆಡ್ಡಿ ಜೋಡಿ ಸಿಂಗಪುರದ ರೆನ್-ನಿ-ಓಂಗ್ ಹಾಗೂ ಜಿಯಾ ಯಿಂಗ್ ವಿರುದ್ಧ ೨೧-೧೮, ೨೧-೧೩ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆಯಿತು. ಇದಕ್ಕೂ ಮುನ್ನ ನಡೆದ ಮಿಶ್ರ ಡಬಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಕ್ರಿಸ್ಟೆನ್ ಮತ್ತು ಟ್ಸಾಯ್ ಯಾಕುರಾ ಜೋಡಿಯನ್ನು ಸಾತ್ವಿಕ್ ರಂಕಿ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ೨೧-೧೦, ೨೧-೭ರಿಂದ ಮಣಿಸಿ ಎಂಟರ ಘಟ್ಟಕ್ಕೆ ಧಾವಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More