ಅಥ್ಲೆಟಿಕ್ಸ್‌ನಲ್ಲೂ ಮಿನುಗಿದ ಭಾರತ; ಸೀಮಾಗೆ ಬೆಳ್ಳಿ, ಕಂಚು ಜಯಿಸಿದ ನವಜೀತ್

ಭಾರಿ ನಿರೀಕ್ಷೆ ಮೂಡಿಸಿದ್ದ ರನ್ನರ್ ಮುಹಮದ್, ಹಿಮಾ ದಾಸ್ ಪದಕ ಗೆಲ್ಲಲು ವಿಫಲವಾದ ಬೆನ್ನಲ್ಲೇ, ಡಿಸ್ಕಸ್ ಎಸೆತದಲ್ಲಿ ಸೀಮಾ ಪುನಿಯಾ ಮತ್ತು ನವಜೀತ್ ಧಿಲ್ಲೋನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ. ಗೋಲ್ಡ್ ಕೋಸ್ಟ್‌ನಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲೆರಡು ಪದಕಗಳಿವು

ಗೋಲ್ಡ್‌ಕೋಸ್ಟ್‌ನಲ್ಲಿ ಗುರುವಾರ ಭಾರತೀಯ ಅಥ್ಲೀಟ್‌ಗಳ ಪದಕಗಳ ವರ್ಷಧಾರೆ ಸುರಿದದ್ದು ಕೂಟದ ಎಂಟನೇ ದಿನದ ವಿಶೇಷಗಳಲ್ಲೊಂದು. ಬೆಳಗ್ಗೆ ಶೂಟರ್ ತೇಜಸ್ವಿನಿ ಸಾವಂತ್ ೫೦ ಮೀಟರ್ ರೈಫಲ್ ಪ್ರೊನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಶುರುವಾದ ಪದಕ ಬೇಟೆ ಅಭಿಯಾನ, ಆನಂತರದಲ್ಲಿ ಕುಸ್ತಿಯಲ್ಲಿ ಎರಡು ಒಲಿಂಪಿಯನ್ ಸುಶೀಲ್ ಕುಮಾರ್ ಮತ್ತು ಯುವ ಕುಸ್ತಿಪಟು ರಾಹುಲ್ ಅವೇರ್ ಸ್ವರ್ಣ ಗೆದ್ದರೆ, ಮಹಿಳಾ ಕುಸ್ತಿಪಟುಗಳಾದ ಬಬಿತಾ ಕುಮಾರಿ ಹಾಗೂ ಕಿರಣ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಬಳಿಕ ದಿನದ ಕೊನೆಯಲ್ಲಿ ಭಾರತಕ್ಕೆ ಸೀಮಾ ಪುನಿಯಾ ಹಾಗೂ ಧಿಲ್ಲೋನ್ ಇನ್ನೆರಡು ಪದಕಗಳನ್ನು ದೊರಕಿಸಿಕೊಟ್ಟರು. ಇದರಿಂದಾಗಿ ಎಂಟನೇ ದಿನದಾಟದ ಅಂತ್ಯಕ್ಕೆ ಭಾರತ ೧೪ ಸ್ವರ್ಣ, ಏಳು ಬೆಳ್ಳಿ ಹಾಗೂ ೧೦ ಕಂಚಿನ ಪದಕಗಳೊಂದಿಗೆ ತೃತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡಿತು. ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟ ಹೆಚ್ಚೂಕಮ್ಮಿ ಮುಗಿಯುವ ಹಂತದಲ್ಲಿದ್ದು, ಭಾರತ ಬಾಕ್ಸಿಂಗ್, ಹಾಕಿ ಹಾಗೂ ಬ್ಯಾಡ್ಮಿಂಟನ್ ವಿಭಾಗಗಳಲ್ಲಿ ಇನ್ನಷ್ಟು ಚಿನ್ನ ಗೆಲ್ಲುವ ಗುರಿ ಹೊತ್ತಿದೆ.

ಸ್ವರ್ಣ ವಂಚಿತೆ ಸೀಮಾ: ಅಂದಹಾಗೆ, ಕರಾರಾ ಕ್ರೀಡಾಂಗಣದಲ್ಲಿ ಗುರುವಾರ (ಏ.೧೨) ನಡೆದ ಮಹಿಳೆಯರ ಡಿಸ್ಕ್ ಎಸೆಯುವ ಸ್ಪರ್ಧೆಯಲ್ಲಿ ಸೀಮಾ ಪುನಿಯಾ ಎರಡನೇ ಸ್ಥಾನ ಗಳಿಸಿದರು. ಮೊದಲ ಯತ್ನದಲ್ಲಿ ೬೦.೪೧ ಮೀಟರ್ ಸಾಧನೆ ಮೆರೆದ ಅವರ ಕೊನೇ ಯತ್ನದಲ್ಲಿನ ಎಸೆತ ಅಮಾನ್ಯವೆನಿಸಿತು. ಅಂದಹಾಗೆ, ಸೀಮಾ ಪಾಲಿಗಿದು ನಾಲ್ಕನೇ ಕಾಮನ್ವೆಲ್ತ್ ಪದಕ. ೨೦೦೬ರ ಮೆಲ್ಬೋರ್ನ್ ಕೂಟದಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಸೀಮಾ, ಇದನ್ನೂ ಒಳಗೊಂಡಂತೆ ಗ್ಲಾಸ್ಗೊ ಕೂಟದಲ್ಲಿ ಬೆಳ್ಳಿ ಗೆದ್ದಿದ್ದರು. ಆದರೆ, ತವರಿನಲ್ಲಿ ನಡೆದ ೨೦೧೦ರ ದೆಹಲಿ ಕೂಟದಲ್ಲಿ ಅವರು ಕಂಚಿಗೆ ತೃಪ್ತವಾಗಿದ್ದರು. ೨೦೧೪ರ ಇಂಚಾನ್ ಏಷ್ಯಾಡ್‌ನಲ್ಲಿ ಸ್ವರ್ಣ ಗೆದ್ದದ್ದು ಸೀಮಾ ವೃತ್ತಿಬದುಕಿನ ಶ್ರೇಷ್ಠ ಸಾಧನೆ.

ಕಂಚಿಗೆ ಧಿಲ್ಲೋನ್ ತೃಪ್ತ: ಇನ್ನು, ಇದೇ ಮಹಿಳೆಯರ ಡಿಸ್ಕ್ ಎಸೆತದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಅಥ್ಲೀಟ್ ನವಜೀತ್ ಧಿಲ್ಲೋನ್ ತೃತೀಯ ಸ್ಥಾನಕ್ಕೆ ತೃಪ್ತರಾದರು. ಫೈನಲ್‌ನಲ್ಲಿ ನವಜೀತ್ ಧಿಲ್ಲೋನ್ ಆರನೇ ಹಾಗೂ ಅಂತಿಮ ಎಸೆತದಲ್ಲಿ ೫೭.೪೩ ಮೀಟರ್‌ವರೆಗಷ್ಟೇ ಡಿಸ್ಕ್ ಎಸೆಯಲು ಶಕ್ತರಾದರು. ಇನ್ನುಳಿದಂತೆ ಈ ವಿಭಾಗದಲ್ಲಿ ಆಸ್ಟ್ರೇಲಿಯಾದ ಡ್ಯಾನಿ ಸ್ಟೀವನ್ಸ್ ೬೮.೨೬ ಮೀಟರ್ ಸಾಧನೆಯಿಂದ ಕೂಟ ದಾಖಲೆಯೊಂದಿಗೆ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಇದನ್ನೂ ಓದಿ : ಗೋಲ್ಡ್ ಕೋಸ್ಟ್ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇನ್ನೂ ಮೂಡದ ಪದಕದ ಆಶಾಕಿರಣ

ಟ್ರಿಪಲ್ ಜಂಪ್ ವಿಭಾಗದಲ್ಲಿ ಅರ್ಪೀಂದರ್ ಫೈನಲ್‌ಗೆ

ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಅರ್ಪೀಂದರ್ ಸಿಂಗ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶ ಕಂಡರು. ಗುರುವಾರ ನಡೆದ ಅರ್ಹತಾ ಸುತ್ತಿನಲ್ಲಿ ಅವರು ಎರಡನೇ ಸ್ಥಾನ ಗಳಿಸಿದರು. ೨೦೧೪ರ ಕಾಮನ್ವೆಲ್ತ್ ಕೂಟದಲ್ಲಿ ಕಂಚು ಗೆದ್ದಿದ್ದ ಅರ್ಪೀಂದರ್, ಈ ಬಾರಿ ಅರ್ಹತಾ ಸುತ್ತಿನಲ್ಲಿ ೧೬.೩೯ ಮೀಟರ್ ದೂರ ಜಿಗಿದರು. ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ೧೭.೧೭ ಮೀಟರ್ ದೂರ ಜಿಗಿದು ದಾಖಲೆ ಬರೆದಿರುವ ಅವರು ಡೊಮಿನಿಕಾದ ಯೊರ್ಡಾನ್ಯ ಗ್ರೇಸಿಯಾ ಅವರ ನಂತರದ ಸ್ಥಾನ ಗಳಿಸಿದರು. ಅಂದಹಾಗೆ, ಗ್ರೇಸಿಯಾ ಅರ್ಹತಾ ಸುತ್ತಿನಲ್ಲಿ ೧೬.೭೫ ಮೀಟರ್ ದೂರ ಜಿಗಿದ ಸಾಧನೆ ಮಾಡಿದರು.

ಇನ್ನು, ಇದೇ ವಿಭಾಗದ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಟ್ರಿಪಲ್ ಜಂಪರ್ ಎ ವಿ ರಾಕೇಶ್ ಬಾಬು ೧೫.೯೮ ಮೀಟರ್ ಸಾಧನೆಯಿಂದ ೧೨ನೇ ಸ್ಥಾನದೊಂದಿಗೆ ಪದಕ ಸುತ್ತಿಗೆ ಅರ್ಹತೆ ಪಡೆದರು. ಇಬ್ಬರೂ ಕೂಟದ ಅಂತಿಮ ದಿನವಾದ ಶನಿವಾರ (ಏ.೧೪) ನಡೆಯಲಿರುವ ಫೈನಲ್‌ನಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.

“೧೦೦, ೨೦೦ ಮತ್ತು ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಅಲ್ಲಿ ಯಶಸ್ಸು ಸಾಧಿಸಲಾಗದು ಎಂದು ಮನವರಿಕೆಯಾದ ನಂತರ ಟ್ರಿಪಲ್ ಜಂಪ್‌ಗೆ ಕಾಲಿಟ್ಟೆ. ನನ್ನ ಸೋದರ ಸಂಬಂಧಿ ಅಂದೀಪ್ ಇದೇ ಗೋಲ್ಡ್ ಕೋಸ್ಟ್‌ನಲ್ಲಿ ವಾಸಿಸುತ್ತಿದ್ದು, ಇಂದು ಕ್ರೀಡಾಂಗಣದಲ್ಲಿದ್ದು ನನ್ನನ್ನು ಪ್ರೋತ್ಸಾಹಿಸಿ ಬೆಂಬಲಿಸಿದರು,’’ ಎಂದು ಸ್ಪರ್ಧೆಯ ಬಳಿಕ ಅರ್ಪೀಂದರ್ ತಿಳಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More