ಗೋಲ್ಡ್ ಕೋಸ್ಟ್‌ ಹಾಕಿ: ಆಸೀಸ್‌ಗೆ ಮಣಿದ ಭಾರತ ವನಿತೆಯರ ಫೈನಲ್ ಕನಸು ಭಗ್ನ

ದಿಟ್ಟ ಪೈಪೋಟಿಯ ಹೊರತಾಗಿಯೂ ಬಲಿಷ್ಠ ಆಸ್ಟ್ರೇಲಿಯಾ ವನಿತಾ ತಂಡದ ಎದುರು ೦-೧ ಗೋಲಿನಿಂದ ಮಣಿದ ಭಾರತ ಹಾಕಿ ವನಿತಾ ತಂಡದ ಫೈನಲ್ ಕನಸು ಕಮರಿದೆ. ಹೀಗಾಗಿ, ಕಂಚಿನ ಪದಕಕ್ಕಾಗಿ ಇಂಗ್ಲೆಂಡ್ ವಿರುದ್ಧ ರಾಣಿ ರಾಂಪಾಲ್ ಸಾರಥ್ಯದ ಹಾಕಿ ತಂಡ ಕಾದಾಡಲಿದೆ

ಕೂಟದ ಆರಂಭದಲ್ಲಿ ವೇಲ್ಸ್ ತಂಡದ ವಿರುದ್ಧ ೨-೩ ಗೋಲುಗಳಿಂದ ಸೋಲನುಭವಿಸಿದ ಬಳಿಕ ಸತತ ಮೂರು ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ವನಿತಾ ಹಾಕಿ ತಂಡ, ಗುರುವಾರ (ಏ.೧೨) ತೀವ್ರ ನಿರಾಸೆ ಅನುಭವಿಸಿತು. ಆತಿಥೇಯ ಆಟಗಾರ್ತಿಯರ ಎದುರು ಪ್ರಬಲ ಪ್ರತಿರೋಧ ನೀಡಿದ ಹೊರತಾಗಿಯೂ ಪಂದ್ಯದ ೩೭ನೇ ನಿಮಿಷದಲ್ಲಿ ಗ್ರೇಸ್ ಸ್ಟೀವರ್ಟ್ ಬಾರಿಸಿದ ಏಕೈಕ ಗೋಲಿನಿಂದ ಭಾರತ ವನಿತೆಯರ ಫೈನಲ್ ಕನಸು ಭಗ್ನಗೊಂಡಿತು. ಹೀಗಾಗಿ ಶನಿವಾರ (ಏಪ್ರಿಲ್ ೧೪) ನಡೆಯಲಿರುವ ೩ಮತ್ತು ೪ನೇ ಸ್ಥಾನಕ್ಕಾಗಿನ ಪ್ಲೇಆಫ್ ಪಂದ್ಯ ಭಾರತ ವನಿತೆಯರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಗೋಲ್ಡ್ ಕೋಸ್ಟ್‌ನಲ್ಲಿ ಆಕರ್ಷಕ ಪ್ರದರ್ಶನ ನೀಡುತ್ತಾ ಸಾಗಿದ್ದ ರಾಣಿ ಪಡೆ ಇದುವರೆಗೆ ಗೋಲು ಗಳಿಸಲು ನಡೆಸಿದ ೪೮ ಯತ್ನಗಳಲ್ಲಿ ಕೇವಲ ೯ ಗೋಲುಗಳನ್ನಷ್ಟೇ ದಾಖಲಿಸಿದೆ. ಇಂದು ನಡೆದ ಸೆಮಿಫೈನಲ್‌ನಲ್ಲಿ ಕೂಡ ಭಾರತ ವನಿತಾ ತಂಡ ಕೆಲವೊಂದು ಅವಕಾಶಗಳನ್ನು ಕೈಚೆಲ್ಲಿದರು. ಇದೇ ಮಾತು ಆಸ್ಟ್ರೇಲಿಯಾಗೂ ಅನ್ವಯವಾಗಿತ್ತೆಂಬುದು ಕೂಡ ಅಷ್ಟೇ ಸೋಜಿಗ. ಇತ್ತಂಡಗಳಿಂದಲೂ ನಾಲ್ಕೂ ಕ್ವಾರ್ಟರ್‌ಗಳಲ್ಲಿ ದಿಟ್ಟ ಪೈಪೋಟಿ ವ್ಯಕ್ತವಾಯಿತಾದರೂ, ಗೋಲು ಗಳಿಕೆಯಲ್ಲಿ ಮಿಂಚಿದ್ದು ಮಾತ್ರ ಆಸ್ಟ್ರೇಲಿಯಾ.

ವಿರಾಮದವರೆಗೂ ಗೋಲುರಹಿತವಾಗಿ ಸಾಗಿದ ಆಟದಲ್ಲಿ ಮೂರನೇ ಕ್ವಾರ್ಟರ್‌ ಆಸ್ಟ್ರೇಲಿಯಾ ಪರವಾಯಿತು. ಮೂರನೇ ಕ್ವಾರ್ಟರ್‌ ಮುಗಿಯಲು ಇನ್ನೇನು ಕೆಲವೇ ನಿಮಿಷಗಳು ಬಾಕಿ ಇವೆ ಎನ್ನುವಾಗ ಗ್ರೇಸ್ ಸ್ಟೀವರ್ಟ್ ಬಾರಿಸಿದ ಗೋಲು ಆಸ್ಟ್ರೇಲಿಯಾ ಪಾಳೆಯದಲ್ಲಿ ಹರ್ಷದ ಬುಗ್ಗೆ ಹರಿಸಿತು. ಇದಾದ ನಂತರ ಭಾರತ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆಯಿತಾದರೂ, ಗೋಲು ಗಳಿಸಲು ಮಾತ್ರ ಅದರಿಂದ ಸಾಧ್ಯವಾಗಲಿಲ್ಲ. ಇನ್ನೊಂದೆಡೆ ಆಸ್ಟ್ರೇಲಿಯಾ ವನಿತೆಯರ ಬಲಾಢ್ಯ ರಕ್ಷಣಾ ಕೋಟೆಯನ್ನು ಭೇದಿಸಲೂ ರಾಣಿ ಪಡೆಗೆ ದುಸ್ತರವಾಯಿತು.

ಇದನ್ನೂ ಓದಿ : ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಹಣಿದ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಕಿವೀಸ್ ಸವಾಲು

ಇಂಗ್ಲೆಂಡ್ ವಿರುದ್ಧ ಮತ್ತೆ ಗೆಲುವು?: ಅಂದಹಾಗೆ, ಬಿ ಗುಂಪಿನಲ್ಲಿದ್ದ ಭಾರತ, ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಕಂಚು ಪದಕಕ್ಕಾಗಿನ ಕಾದಾಟದಲ್ಲಿ ಇಂಗ್ಲೆಂಡ್ ಎದುರು ಸೆಣಸಬೇಕಾದ ಅನಿವಾರ್ಯತೆ ಎದುರಾಗಿದೆ. ಗುಂಪು ಹಂತದಲ್ಲಿ ೨-೧ ಗೋಲುಗಳಿಂದ ಇಂಗ್ಲೆಂಡ್ ವನಿತೆಯರನ್ನು ಮಣಿಸಿದ್ದ ರಾಣಿ ಪಡೆಗೆ ಶನಿವಾರ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ರಿಯೋ ಒಲಿಂಪಿಕ್ಸ್ ಚಾಂಪಿಯನ್ ಪಟ್ಟಧಾರಿಯಾಗಿರುವ ಇಂಗ್ಲೆಂಡ್ ವನಿತಾ ತಂಡ, ಭಾರತಕ್ಕೆ ಈ ಬಾರಿ ಪ್ರಬಲ ಪೈಪೋಟಿ ಒಡ್ಡಲು ಕಾರ್ಯತಂತ್ರ ಹೆಣೆಯುವುದು ನಿಶ್ಚಯವಾಗಿದ್ದು, ರಾಣಿ ಪಡೆ ಎಚ್ಚರವಹಿಸಬೇಕಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More