ಮೊದಲ ಗೆಲುವಿನ ಕಾತರ ತಣಿಸಲು ಅಣಿಯಾದ ರಾಯಲ್ ಚಾಲೆಂಜರ್ಸ್

ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಇದೀಗ ತವರಿನಲ್ಲಿ ಮೊದಲ ಗೆಲುವಿನ ತುಡಿತದಲ್ಲಿದೆ. ತವರು ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಲು ಸಜ್ಜಾಗಿರುವ ಕೊಹ್ಲಿ ಪಡೆಗೆ ಪ್ರೀತಿ ಪಡೆಯ ಸವಾಲು ಎದುರಾಗಿದೆ

ಈ ಋತುವಿನ ಐಪಿಎಲ್ ಪಂದ್ಯಾವಳಿಯ ಮತ್ತೊಂದು ಅಯಸ್ಕಾಂತೀಯ ಸೆಳೆತ ಶುರುವಾಗಿದೆ. ಶುಕ್ರವಾರ (ಏ.೧೩) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಂಟನೇ ಪಂದ್ಯ ಕ್ರಿಕೆಟ್‌ಪ್ರಿಯರ, ಅದರಲ್ಲೂ ಬೆಂಗಳೂರು ಕ್ರಿಕೆಟಿಗರ ನಿದ್ದೆಗೆಡಿಸುವ ಎಲ್ಲ ಲಕ್ಷಣಗಳನ್ನೂ ಒಳಗೊಂಡಿದೆ. ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಬಾಲಿವುಡ್ ನಟಿ ಪ್ರೀತಿ ಜಿಂಟಾ ಸಹ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿ ಆಗುತ್ತಿದ್ದು, ಸ್ಫೋಟಕ ಆಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಭಾನುವಾರ (ಏ.೮) ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ನೈಟ್ ರೈಡರ್ಸ್, ಆರ್‌ಸಿಬಿಯನ್ನು ೪ ವಿಕೆಟ್‌ಗಳಿಂದ ಮಣಿಸಿತ್ತು. ಇದೀಗ, ತವರಿನಲ್ಲಿ ನಡೆಯುತ್ತಿರುವ ಪಂದ್ಯ ಕೊಹ್ಲಿ ಪಡೆಗೆ ಮಹತ್ವಪೂರ್ಣ ಎನಿಸಿದೆ. ತವರಿನಲ್ಲಿ ಜಯದ ಖಾತೆ ತೆರೆಯುವ ಹಿನ್ನೆಲೆಯಲ್ಲಿ ಈ ಪಂದ್ಯ ಬಹುಮುಖ್ಯ. ಇತ್ತ, ಕೊಹ್ಲಿ ಪಡೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಬಲ ಪೈಪೋಟಿ ನೀಡುವ ಸನ್ನಾಹದಲ್ಲಿದೆ.

ಆರ್‌ಸಿಬಿ ಮತ್ತು ಕೆಕೆಆರ್ ನಡುವಣದ ಪಂದ್ಯದ ದಿನವೇ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್‌ ಅನ್ನು ೬ ವಿಕೆಟ್‌ಗಳಿಂದ ಹಣಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತವರು ತಾಣ ಮೊಹಾಲಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನೊಂದಿಗೆ ಪ್ರೀತಿ ಪಡೆ ವೈಭವದ ಗೆಲುವು ದಾಖಲಿಸಿತ್ತು. ಕೇವಲ ೧೪ ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದ ರಾಹುಲ್, ಐಪಿಎಲ್ ಇತಿಹಾಸದಲ್ಲೇ ಶರವೇಗದ ಅರ್ಧಶತಕದ ದಾಖಲೆ ಬರೆಯುವುದರೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಇತ್ತ, ಮತ್ತೋರ್ವ ಕನ್ನಡಿಗ ಕರುಣ್ ನಾಯರ್ ಕೂಡ ಅರ್ಧಶತಕದೊಂದಿಗೆ ವಿಜೃಂಭಿಸಿದ್ದರು.

ವಿಶ್ವಾಸದಲ್ಲಿ ಕೊಹ್ಲಿ ಬಳಗ: ಅಂದಹಾಗೆ, ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದರೂ, ತವರು ಅಭಿಮಾನಿಗಳ ಸಮ್ಮುಖದಲ್ಲಿ ಜಯದ ಖಾತೆ ತೆರೆಯುವ ಭರಪೂರ ವಿಶ್ವಾಸದಿಂದ ಕೂಡಿದೆ ಕೊಹ್ಲಿ ಬಳಗ. ಕೋಲ್ಕತಾ ವಿರುದ್ಧ ಸೋತರೂ, ತಂಡ ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿಯೇನೂ ಹಿನ್ನಡೆ ಅನುಭವಿಸಿರಲಿಲ್ಲ. ಆದರೆ, ನಾಯಕ ಕೊಹ್ಲಿ ಮಂದಗತಿಯ ಆಟ ಮತ್ತು ನಿರ್ಣಾಯಕ ಹಂತದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಕ್ರೀಸ್ ತೊರೆಯುವಂತಾಗಿದ್ದು ಆರ್‌ಸಿಬಿಯ ರನ್‌ಗತಿಗೆ ಕಡಿವಾಣ ಹಾಕಿತ್ತು.

ಕಿವೀಸ್ ಆಟಗಾರ ಬ್ರೆಂಡನ್ ಮೆಕಲಮ್, ವಿಕೆಟ್‌ ಕೀಪರ್ ಕ್ವಿಂಟಾನ್ ಡಿ’ಕಾಕ್ ಕಳೆದ ಪಂದ್ಯದಲ್ಲಿ ತಂಡಕ್ಕೆ ಭದ್ರ ತಳಪಾಯ ಹಾಕಲು ವಿಫಲವಾಗಿದ್ದರು. ಮುಖ್ಯವಾಗಿ, ದಕ್ಷಿಣ ಆಫ್ರಿಕಾದ ಯುವ ಆಟಗಾರ ಡಿ’ಕಾಕ್ ಎರಡಂಕಿ ದಾಟಿರಲಿಲ್ಲ. ಅವರು ಈ ವೈಫಲ್ಯವನ್ನು ಮೆಟ್ಟಿನಿಂತು ಮೆಕಲಮ್ ಜೊತೆಗೆ ಕೆಲಹೊತ್ತು ಕ್ರೀಸ್‌ಗೆ ಕಚ್ಚಿನಿಂತರೆ ತಂಡ ಉತ್ತಮ ಆರಂಭ ಕಾಣಲೇನೂ ಅಡ್ಡಿಯಾಗದು. ಇನ್ನು, ಮೇರು ಆಟಗಾರರಾದ ಕೊಹ್ಲಿ, ಎಬಿಡಿಯೂ ಮಿಂಚಿದರೆ ಆರ್‌ಸಿಬಿ ಸ್ಫೋಟಕ ಇನ್ನಿಂಗ್ಸ್ ಕಟ್ಟುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಷ್ಟಲ್ಲದೆ, ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್, ಮನ್‌ದೀಪ್ ಸಿಂಗ್ ಹಾಗೂ ಕನ್ನಡಿಗ ಪವನ್ ದೇಶಪಾಂಡೆಯಂಥ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳಿದ್ದು, ಕಿಂಗ್ಸ್ ಇಲೆವೆನ್‌ ವಿರುದ್ಧ ಸವಾಲಿನ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದೆ ಆರ್‌ಸಿಬಿ.

ಇದನ್ನೂ ಓದಿ : ಕಪ್ ನಮ್ಮದೇ ಎಂದ ಕೊಹ್ಲಿಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸುನೀಲ್ ನರೇನ್

ಇನ್ನು, ಬೌಲಿಂಗ್‌ನಲ್ಲಿಯೂ ಆರ್‌ಸಿಬಿ ಪಾಳೆಯದಲ್ಲಿ ಪ್ರತಿಭಾನ್ವಿತರಿದ್ದಾರೆ. ವೇಗಿ ಕ್ರಿಸ್ ವೋಕ್ಸ್ ಕಳೆದ ಪಂದ್ಯದಲ್ಲಿ ೩ ವಿಕೆಟ್ ಪಡೆದಿದ್ದರು. ಮತ್ತೊಬ್ಬ ವೇಗಿ ಉಮೇಶ್ ಯಾದವ್ ಕೂಡ ಆಕರ್ಷಕ ಸ್ಪೆಲ್‌ನಿಂದ ಗಮನ ಸೆಳೆದಿದ್ದರು. ೪ ಓವರ್‌ಗಳಲ್ಲಿ ಅವರು ಕೇವಲ ೨೭ ರನ್ ನೀಡಿ ೨ ವಿಕೆಟ್ ಗಳಿಸಿದ್ದರು. ಇನ್ನು, ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ತಮ್ಮ ಸ್ಪಿನ್ ತಂತ್ರದಿಂದ ಕಿಂಗ್ಸ್ ಇಲೆವೆನ್‌ ಅನ್ನು ಕಾಡುವಷ್ಟು ಸಮರ್ಥರಿದ್ದಾರೆ.

ಗೇಲ್, ಯುವಿ ಭೀತಿ: ಇತ್ತ, ಚುಟುಕು ಕ್ರಿಕೆಟ್‌ನ ಮೇರು ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಆಲ್ರೌಂಡರ್ ಯುವರಾಜ್ ಸಿಂಗ್ ಪ್ರೀತಿ ಪಡೆಯ ಬ್ಯಾಟಿಂಗ್‌ ಬತ್ತಳಿಕೆಯಲ್ಲಿರುವ ಇನ್ನೆರಡು ಪ್ರಬಲಾಸ್ತ್ರಗಳು. ಆರಂಭಿಕ ಆಟಗಾರ ಗೇಲ್ ಮೊದಲ ಮೂರು ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿ ವೈಫಲ್ಯ ಅನುಭವಿಸಿದ ನಂತರ, ಆರ್‌ಸಿಬಿಯನ್ನು ಹೊಕ್ಕಿದ್ದರು. ಕಳೆದ ಆವೃತ್ತಿಯನ್ನು ಹೊರತುಪಡಿಸಿ ಮಿಕ್ಕ ಏಳು ಆವೃತ್ತಿಗಳಲ್ಲೂ ಬಹುತೇಕ ಅಬ್ಬರಿಸಿದ್ದ ಗೇಲ್, ಇದೀಗ ಆರ್‌ಸಿಬಿ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.

ಇನ್ನು, ಮತ್ತೋರ್ವ ಎಡಗೈ ಆಟಗಾರ ಯುವರಾಜ್ ಸಿಂಗ್ ಅಂತೂ ಪಂದ್ಯದ ಗತಿಯನ್ನು ಯಾವ ಕ್ಷಣದಲ್ಲಿ ಬೇಕಾದರೂ ತಿರುವುಮುರುವು ಮಾಡುವಷ್ಟು ಅಪಾಯಕಾರಿ ಆಟಗಾರ. ಬೌಲಿಂಗ್ ಮತ್ತು ಬ್ಯಾಟಿಂಗ್‌ ಈ ಎರಡರಲ್ಲಿಯೂ ಮಿಂಚಬಲ್ಲ ಯುವರಾಜ್ ಸಿಂಗ್ ಕೂಡ ಹಿಂದೊಮ್ಮೆ ಆರ್‌ಸಿಬಿ ಪರ ಆಡಿದ್ದವರೇ. ಹೀಗಾಗಿ, ಈ ಇಬ್ಬರೂ ಎಡಗೈ ಆಟಗಾರರತ್ತ ಕೊಹ್ಲಿ ಪಡೆ ಗಂಭೀರ ಲಕ್ಷ್ಯ ವಹಿಸಬೇಕಿದೆ. ಬೌಲಿಂಗ್‌ನಲ್ಲಿಯೂ ಕಿಂಗ್ಸ್ ಇಲೆವೆನ್ ಸಶಕ್ತವಾಗಿದೆ. ನಾಯಕ ಆರ್ ಅಶ್ವಿನ್ ಸೇರಿದಂತೆ ಅಕ್ಷರ್ ಪಟೇಲ್, ಮುಜೀಬ್ ಉರ್ ರೆಹಮಾನ್ ಸ್ಪಿನ್‌ ಅಸ್ತ್ರಗಳಾಗಿದ್ದರೆ, ಮೋಹಿತ್ ಶರ್ಮಾ ಮತ್ತು ಆಂಡ್ರ್ಯೂ ಟೈ ವೇಗದ ದಾಳಿಕೋರರಾಗಿದ್ದಾರೆ.

ಪ್ರೀತಿ ಪಡೆಯದ್ದೇ ಮೇಲುಗೈ: ಇಷ್ಟೆಲ್ಲದರ ಮಧ್ಯೆ ಎರಡೂ ತಂಡಗಳ ಈ ಹಿಂದಿನ ಒಟ್ಟಾರೆ ಮುಖಾಮುಖಿಯಲ್ಲಿ ಪ್ರೀತಿ ಪಡೆಯೇ ಮೇಲುಗೈ ಮೆರೆದಿದೆ. ಇಲ್ಲೀವರೆಗೆ ಇತ್ತಂಡಗಳೂ ೨೦ ಬಾರಿ ಸೆಣಸಿದ್ದು, ಈ ಪೈಕಿ ಕಿಂಗ್ಸ್ ಇಲೆವೆನ್ ಪಂಜಾಬ್ ೧೨ ಬಾರಿ ಗೆದ್ದಿದ್ದರೆ ಕೇವಲ ಎಂಟು ಬಾರಿ ಆರ್‌ಸಿಬಿ ಜಯ ಪಡೆದಿದೆ. ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟು ೯ ಪಂದ್ಯಗಳು ನಡೆದಿದ್ದು, ೫ರಲ್ಲಿ ಕಿಂಗ್ಸ್ ಇಲೆವೆನ್ ಹಾಗೂ ೪ರಲ್ಲಿ ಆರ್‌ಸಿಬಿ ಗೆದ್ದಿದೆ. ಬಿಗ್‌ಬ್ಯಾಶ್ ಬೋರ್ಡ್‌ನ ಈ ಅಂಕಿಅಂಶಗಳು ಎರಡೂ ತಂಡಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷ್ಯ ಒದಗಿಸುತ್ತದೆ.

ಸಂಭವನೀಯ ಇಲೆವೆನ್

ಆರ್‌ಸಿಬಿ: ಬ್ರೆಂಡನ್ ಮೆಕಲಮ್, ಕ್ವಿಂಟಾನ್ ಡಿ’ಕಾಕ್ (ವಿಕೆಟ್‌ಕೀಪರ್), ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮನ್‌ದೀಪ್ ಸಿಂಗ್, ಕ್ರಿಸ್ ವೋಕೆಸ್, ವಾಷಿಂಗ್ಟನ್ ಸುಂದರ್ / ಪವನ್ ದೇಶಪಾಂಡೆ, ಕುಲವಂತ್ ಖೆಜ್ರೋಲಿಯಾ, ಉಮೇಶ್ ಯಾದವ್ ಮತ್ತು ಯಜುವೇಂದ್ರ ಚಾಹಲ್.

ಕಿಂಗ್ಸ್ ಇಲೆವೆನ್ ಪಂಜಾಬ್: ಕೆ ಎಲ್ ರಾಹುಲ್ (ವಿಕೆಟ್‌ ಕೀಪರ್), ಮಯಾಂಕ್ ಅಗರ್ವಾಲ್, ಯುವರಾಜ್ ಸಿಂಗ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, ಮಾರ್ಕುಸ್ ಸ್ಟಾಯ್ನಿಸ್, ಅಕ್ಷರ್ ಪಟೇಲ್, ಆರ್ ಅಶ್ವಿನ್ (ನಾಯಕ), ಆಂಡ್ರ್ಯೂ ಟೈ, ಮೋಹಿತ್ ಶರ್ಮಾ ಹಾಗೂ ಮುಜೀಬ್ ಉರ್ ರೆಹಮಾನ್.

ಪಂದ್ಯ ಆರಂಭ: ರಾತ್ರಿ ೮.೦೦ | ನೇರ ಪ್ರಸಾರ: ಸೋನಿ ಸಿಕ್ಸ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More