ಜಯದ ಖಾತೆ ತೆರೆದ ರಾಜಸ್ಥಾನ ರಾಯಲ್ಸ್; ಡೆವಿಲ್ಸ್‌ಗೆ ಸತತ ಎರಡನೇ ಸೋಲು

ಮಳೆಬಾಧಿತ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್ ಈ ಋತುವಿನ ಐಪಿಎಲ್‌ನಲ್ಲಿ ಜಯದ ಖಾತೆ ತೆರೆದಿದೆ. ಆದರೆ, ಗೌತಮ್ ಗಂಭೀರ್ ನಾಯಕತ್ವದ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸತತ ಎರಡನೇ ಸೋಲನುಭವಿಸಿ ತತ್ತರಿಸಿತು. ಡಕ್‌ವರ್ಥ್ ನಿಯಮ ರಾಯಲ್ಸ್ ಕೈಹಿಡಿಯಿತು

ವರುಣನ ಉಪಟಳದಿಂದಾಗಿ ಸರಿಸುಮಾರು ಎರಡೂವರೆ ತಾಸಿನ ತನಕ ಸ್ತಬ್ಧವಾಗಿದ್ದ ಪಂದ್ಯದಲ್ಲಿ ರಹಾನೆ ಬಳಗ ಜಯದ ಸಿಂಚನ ಪಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅದರ ಮನೆಯಂಗಣದಲ್ಲಿ ಸೋಲನುಭವಿಸಿ ತವರಿಗೆ ಮರಳಿದ್ದ ರಾಯಲ್ಸ್, ಡಕ್‌ವರ್ಥ್ ನಿಯಮಾನುಸಾರ ೧೦ ರನ್‌ಗಳ ಗೆಲುವು ಸಾಧಿಸಿತು.

ಬುಧವಾರ ಸವಾಯ್ ಮಾನ್‌ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಳೆಯ ನಿಮಿತ್ತ ಪರಿಷ್ಕೃತ ೬ ಓವರ್‌ಗಳಲ್ಲಿ ೭೧ ರನ್ ಪೇರಿಸಲು ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಗುರಿ ನೀಡಲಾಯಿತು. ಆದರೆ, ನಿಗದಿತ ಓವರ್‌ಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಕಲೆಹಾಕಿದ್ದು ಕೇವಲ ೬೦ ರನ್‌ಗಳನ್ನಷ್ಟೆ. ಬೆನ್ ಲಾಫ್ಲಿನ್ ಎರಡು ಓವರ್‌ಗಳಲ್ಲಿ ಎರಡು ವಿಕೆಟ್ ಪಡೆದರೆ, ಜೈದೇವ್ ಉನದ್ಕಟ್ ೧ ವಿಕೆಟ್ ಉರುಳಿಸಿದರು.

ಜಯದ ಗುರಿ ಬೆನ್ನುಹತ್ತಿದ ಡೆಲ್ಲಿ ಡೇರ್‌ಡೆವಿಲ್ಸ್ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಎಡವಟ್ಟು ಮಾಡಿಕೊಂಡಿತು. ಕಾಲಿನ್ ಮನ್ರೊ ಖಾತೆ ತೆರೆಯದೆಯೇ ಶೂನ್ಯಕ್ಕೆ ರನೌಟ್ ಅಗಿ ಕ್ರೀಸ್ ತೊರೆದರು. ಬಳಿಕ ಬಂದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅದೇ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ್ದರಿಂದ ಡೆವಿಲ್ಸ್ ೧ ವಿಕೆಟ್‌ಗೆ ೧೦ ರನ್ ಗಳಿಸಿತು.

ಇನ್ನು, ಎರಡನೇ ಓವರ್‌ನಲ್ಲಿ ಧವಳ್ ಕುಲಕರ್ಣಿ ಚಾಣಾಕ್ಷ ಬೌಲಿಂಗ್ ನಡೆಸಿ ಕೇವಲ ೫ ರನ್‌ಗಳನ್ನಷ್ಟೇ ನೀಡಿದರು. ಈ ಹಂತದಲ್ಲಿ ಆರಂಭಿಕ ಗ್ಲೆನ್ ಮ್ಯಾಕ್ಸ್‌ವೆಲ್ ಜೈದೇವ್ ಉನದ್ಕಟ್ ಬೌಲಿಂಗ್‌ನಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ತಂಡದಲ್ಲಿ ಗೆಲುವಿನ ಆಸೆ ಚಿಮ್ಮಿಸಿದರು. ಮೊದಲ ಮೂರು ಎಸೆತಗಳಲ್ಲಿ ಯಾವುದೇ ರನ್ ನೀಡದ ಉನದ್ಕಟ್ ಆನಂತರದಲ್ಲಿ ಸತತ ಎರಡು ಬೌಂಡರಿ, ಒಂದು ಸಿಕ್ಸರ್ ನೀಡಿದರು. ಆದರೆ, ನಾಲ್ಕನೇ ಓವರ್‌ನಲ್ಲಿ ಬೆನ್ ಲಾಫ್ಲಿನ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಜೋಸ್ ಬಟ್ಲರ್‌ಗೆ ಕ್ಯಾಚೀಯುತ್ತಿದ್ದಂತೆ ೧೪ ಎಸೆತಗಳಲ್ಲಿ ೩೭ ರನ್ ಪೇರಿಸಬೇಕಾದ ಒತ್ತಡಕ್ಕೆ ಡೆಲ್ಲಿ ಸಿಲುಕಿತು. ಮ್ಯಾಕ್ಸ್‌ವೆಲ್ ೧೨ ಎಸೆತಗಳಲ್ಲಿ ೨ ಬೌಂಡರಿ, ೧ ಸಿಕ್ಸರ್ ಸೇರಿದ ೧೭ ರನ್‌ಗೆ ವಿಕೆಟ್ ಒಪ್ಪಿಸಿದರು.

ಮರು ಓವರ್‌ನಲ್ಲಿ ರಿಷಭ್ ಪಂತ್ (೨೦) ಅವರನ್ನು ಕರ್ನಾಟಕದ ಕೆ ಗೌತಮ್ ಬಲಿ ಪಡೆದರು. ಹೀಗಾಗಿ, ಕೊನೇ ಓವರ್‌ನಲ್ಲಿ ೨೫ ರನ್ ಪೇರಿಸಬೇಕಾಗಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ಮುಗ್ಗರಿಸಿ, ಅಂತಿಮವಾಗಿ ೬೦ ರನ್‌ಗಳಿಗೆ ಹೋರಾಟ ಮುಗಿಸಿತು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಕೂಡ, ಮೊದಲ ಓವರ್‌ನಲ್ಲೇ ಆರಂಭಿಕ ಡಿಆರ್ಕಿ ಶಾರ್ಟ್ ಅವರನ್ನು ಕಳೆದುಕೊಂಡಿತು. ಬಳಿಕ ಬಂದ ಬೆನ್ ಸ್ಟೋಕ್ಸ್ ಜೊತೆಗೂಡಿದ ನಾಯಕ ಅಜಿಂಕ್ಯ ರಹಾನೆ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದರೆ, ಅವರಂದುಕೊಂಡಂತೆ ಆಗಲಿಲ್ಲ. ಇಂಗ್ಲೆಂಡ್‌ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಐದನೇ ಓವರ್‌ನ ಮೊದಲ ಎಸೆತದಲ್ಲೇ ಟ್ರೆಂಟ್ ಬೌಲ್ಟ್ ಬೌಲಿಂಗ್‌ನಲ್ಲಿ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ದಾರಿ ತುಳಿದರು. ೧೨ ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ ೧ ಬೌಂಡರಿ, ೧ ಸಿಕ್ಸರ್ ಎತ್ತಿ ಕ್ರೀಸ್ ತೊರೆದರು.

ಇದನ್ನೂ ಓದಿ : ಕಾವೇರಿ ಗಲಭೆ ಹಿನ್ನೆಲೆ; ಚೆನ್ನೈ ಐಪಿಎಲ್ ಪಂದ್ಯಗಳು ಸ್ಥಳಾಂತರ ಸಾಧ್ಯತೆ

ಸ್ಟೋಕ್ಸ್ ನಿರ್ಗಮನದ ನಂತರ ಕ್ರೀಸ್‌ಗಿಳಿದ ಸಂಜು ಸ್ಯಾಮ್ಸನ್ ಮತ್ತು ರಹಾನೆ ಕೆಲ ಸಮಯ ಉತ್ತಮ ಜೊತೆಯಾಟವಾಡಿದ್ದು ತಂಡದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿತು. ಉತ್ತಮ ಫಾರ್ಮ್‌ನಲ್ಲಿರುವ ಸ್ಯಾಮ್ಸನ್ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಆದರೆ, ಹನ್ನೊಂದನೇ ಓವರ್‌ನ ಕೊನೇ ಎಸೆತದಲ್ಲಿ ಶಾಬಾಜ್ ನದೀಮ್ ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿ ರಾಯಲ್ಸ್‌ಗೆ ಆಸರೆಯಾಗಿದ್ದ ಜೋಡಿಯನ್ನು ಬೇರ್ಪಡಿಸಿದರು. ೨೨ ಎಸತಗಳಿಂದ ಸ್ಯಾಮ್ಸನ್ ೨ ಬೌಂಡರಿ, ೨ ಸಿಕ್ಸರ್ ಸಿಡಿಸಿ ಹೊರನಡೆದರು.

ಇತ್ತ, ಅರ್ಧಶತಕದ ಹೊಸ್ತಿಲಲ್ಲಿದ್ದ ಅಜಿಂಕ್ಯ ರಹಾನೆ ಇದೇ ನದೀಮ್ ಬೌಲಿಂಗ್‌ನಲ್ಲಿ ಕ್ರಿಸ್ ಮೋರಿಸ್‌ಗೆ ಕ್ಯಾಚ್ ನೀಡಿದರು. ರಹಾನೆ ೪೦ ಎಸೆತಗಳಲ್ಲಿ ೫ ಬೌಂಡರಿಗಳುಳ್ಳ ೪೫ ರನ್‌ಗಳ ಕೊಡುಗೆ ನೀಡಿದರು. ಆನಂತರ ಜೋಸ್ ಬಟ್ಲರ್ (೨೯: ೧೮ ಎಸೆತ, ೨ ಬೌಂಡರಿ, ೨ ಸಿಕ್ಸರ್) ಸ್ಫೋಟಕ ಆಟಕ್ಕೆ ಮೊಹಮದ್ ಶಮಿ ತಡೆಯೊಡ್ಡಿದರು. ಈ ಹಂತದಲ್ಲಿ ಜೊತೆಯಾದ ರಾಹುಲ್ ತ್ರಿಪಾಠಿ (೧೫) ಮತ್ತು ಕನ್ನಡಿಗ ಕೆ ಗೌತಮ್ ೨ ರನ್ ಗಳಿಸಿ ಆಡುತ್ತಿದ್ದಾಗ ಸುರಿಯಲಾರಂಭಿಸಿದ ಮಳೆ ಸತತ ಎರಡೂವರೆ ತಾಸು ಆಟಕ್ಕೆ ಅಡ್ಡಿ ಉಂಟುಮಾಡಿತು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೧೭.೫ ಓವರ್‌ಗಳಲ್ಲಿ ೧೫೩/೫ (ಅಜಿಂಕ್ಯ ರಹಾನೆ ೪೫, ಸಂಜು ಸ್ಯಾಮ್ಸನ್ ೩೭; ಶಾಬಾಜ್ ನದೀಮ್ ೩೪ಕ್ಕೆ ೨) ಡೆಲ್ಲಿ ಡೇರ್‌ಡೆವಿಲ್ಸ್: ಪರಿಷ್ಕೃತ ೬ ಓವರ್‌ಗಳಲ್ಲಿ ೬೦/೪ (ರಿಷಭ್ ಪಂತ್ ೨೦; ಬೆನ್ ಲಾಫ್ಲಿನ್ ೨೦ಕ್ಕೆ ೨) ಫಲಿತಾಂಶ: ಡಕ್‌ವರ್ಥ್ ನಿಯಮಾನುಸಾರ ರಾಯಲ್ಸ್‌ಗೆ ೧೦ ರನ್ ಗೆಲುವು ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More