ತೇಜಸ್ವಿನಿ ಸಾವಂತ್ ಚಿನ್ನದ ನಗೆಯೊಂದಿಗೆ ಗ್ಲಾಸ್ಗೊ ಸಾಧನೆ ಸರಿಗಟ್ಟಿದ ಇಂಡಿಯಾ

ಗೋಲ್ಡ್ ಕೋಸ್ಟ್‌ನಲ್ಲಿ ಭಾರತದ ಶೂಟರ್‌ಗಳ ಶ್ರೇಷ್ಠ ಸಾಧನೆ ಮುಂದುವರಿದಿದೆ. ಶುಕ್ರವಾರ (ಏ.೧೩) ಬೆಳ್ಳಂಬೆಳಗ್ಗೆಯೇ ಭಾರತಕ್ಕೆ ತೇಜಸ್ವಿನಿ ಸಾವಂತ್ ಚಿನ್ನದ ಪದಕ ತಂದಿತ್ತರು. ಇದರೊಂದಿಗೆ ಕೂಟದಲ್ಲಿ ೧೫ ಚಿನ್ನ ಗೆದ್ದಂತಾಗಿದ್ದು, ೪ ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟದ ಸಾಧನೆಯನ್ನು ಭಾರತ ಸರಿಗಟ್ಟಿತು

ದಿನದ ಹಿಂದಷ್ಟೇ ೫೦ ಮೀಟರ್ ರೈಫಲ್ ಪ್ರೊನ್‌ನಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇಟ್ಟಿದ್ದ ಭಾರತದ ಮಹಿಳಾ ಶೂಟರ್ ತೇಜಸ್ವಿನಿ ಸಾವಂತ್, ೨೪ ತಾಸುಗಳಲ್ಲೇ ಮತ್ತೊಂದು ಪದಕಕ್ಕೆ ಅದರಲ್ಲೂ, ಬಂಗಾರದ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ಅವರು ೪೫೭.೯ ಪಾಯಿಂಟ್ಸ್ ಗಳಿಸಿ ಕಾಮನ್ವೆಲ್ತ್ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಪಡೆದರು. ಇನ್ನು, ಇದೇ ವಿಭಾಗದಲ್ಲಿದ್ದ ಭಾರತದ ಮತ್ತೋರ್ವ ಶೂಟರ್ ಅಂಜುಮ್ ಮೌಡ್ಗಿಲ್ ಬೆಳ್ಳಿ ಪದಕ ಜಯಿಸಿದರು.

ಇಂದಿನ ಚಿನ್ನದ ಪದಕ ಸಾಧನೆಯೊಂದಿಗೆ ಕೂಟದಲ್ಲಿ ಅವರು ಎರಡು ಪದಕಗಳನ್ನು ಜಯಿಸಿದಂತಾಯಿತು. ಅಂತೆಯೇ ಕಾಮನ್ವೆಲ್ತ್ ಕೂಟದ ವೃತ್ತಿಬದುಕಿನಲ್ಲಿ ಆಕೆಗಿದು ಏಳನೇ ಪದಕ. ೨೦೦೬ರ ಮೆಲ್ಬೋರ್ನ್ ಕೂಟದಲ್ಲಿ ಎರಡು ಸ್ವರ್ಣ ಗೆದ್ದಿದ್ದ ತೇಜಸ್ವಿನಿ, ೨೦೧೦ರ ದೆಹಲಿ ಕೂಟದಲ್ಲಿ ಎರಡು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದ್ದರು. ಇನ್ನು, ಇದೇ ೨೦೧೦ರಲ್ಲಿ ನಡೆದಿದ್ದ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಮೊಟ್ಟಮೊದಲ ಭಾರತೀಯ ಮಹಿಳಾ ಶೂಟರ್ ಎನಿಸಿದ್ದರು.

ಬೆಲ್ಮಾಂಟ್ ಶೂಟಿಂಗ್ ಸೆಂಟರ್‌ನಲ್ಲಿ ಶುರುವಿನಿಂದಲೇ ತೇಜಸ್ವಿನಿ ಮುನ್ನಡೆ ಕಾಯ್ದುಕೊಂಡರು. ನಿಖರ ಗುರಿಯಿಂದ ತನ್ನೊಂದಿಗಿನ ಎಲ್ಲ ಸ್ಪರ್ಧಿಗಳನ್ನೂ ಹಿಂದಿಕ್ಕಿದ ಅವರು ಮೊದಲಿಗರಾಗಿ ಬಂಗಾರ ಜಯಿಸಿದರು. ೩೭ರ ಹರೆಯದ ಸಾವಂತ್ ಜತೆಗೆ ಪದಕ ಕಣದಲ್ಲಿ ಒಟ್ಟು ಎಂಟು ಮಂದಿ ಶೂಟರ್‌ಗಳಿದ್ದರು. ಅರ್ಹತಾ ಸುತ್ತಿನಲ್ಲಿ ೫೮೨-೩೧x ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನದೊಂದಿಗೆ ಸಾವಂತ್ ಫೈನಲ್ ತಲುಪಿದರೆ, ಸಹ ಶೂಟರ್ ಮೌಡ್ಗಿಲ್ ೫೮೯-೩೨x ಪಾಯಿಂಟ್ಸ್ ಗಳಿಸಿ ಮೊದಲ ಸ್ಥಾನದಲ್ಲಿದ್ದರು.

ಇದನ್ನೂ ಓದಿ : ಗೋಲ್ಡ್ ಕೋಸ್ಟ್ ಶೂಟಿಂಗ್‌ನಲ್ಲಿ ತೇಜಸ್ವಿನಿ ಸಾವಂತ್‌ಗೆ ಬೆಳ್ಳಿಯ ಸಡಗರ

ಹಿಂದೆ ಬಿದ್ದ ಮೌಡ್ಗಿಲ್: ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿದರೂ, ಫೈನಲ್‌ನಲ್ಲಿ ಮಾತ್ರ ಮೌಡ್ಗಿಲ್ ಕೊಂಚ ಹಿನ್ನಡೆ ಅನುಭವಿಸಿದರು. ಆದರೆ, ಫೈನಲ್‌ ಹಂತದ ಗುರಿ ಇಡುವ ಸ್ಪರ್ಧೆ ಸಾಗುತ್ತಾ ಹೋದಂತೆಲ್ಲಾ, ಪಾಯಿಂಟ್ಸ್ ಗಳಿಕೆಯಲ್ಲಿ ಸಾವಂತ್ ಮುನ್ನಡೆ ಸಾಧಿಸಿದರು. ಹೀಗಾಗಿ ೪೫೫.೭ ಪಾಯಿಂಟ್ಸ್‌ಗಳೊಂದಿಗೆ ಮೌಡ್ಗಿಲ್ ಬೆಳ್ಳಿ ಪದಕಕ್ಕೆ ತೃಪ್ತಿಪಡುವಂತಾಯಿತು.

ಕಳೆದ ತಿಂಗಳು ಮಾರ್ಚ್‌ನಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಮೌಡ್ಗಿಲ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಮೊಟ್ಟಮೊದಲ ಅಂತಾರಾಷ್ಟ್ರೀಯ ಪದಕ ಜಯಿಸಿದ್ದರು. ಇಲ್ಲಿ ಚಿನ್ನ ಗೆಲ್ಲುವ ಅವರ ಬಯಕೆ ಮತ್ತೊಮ್ಮೆ ರಜತ ಪದಕಕ್ಕೆ ಸೀಮಿತವಾಯಿತು. ಏತನ್ಮಧ್ಯೆ, ಇಂದು ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನವನ್ನು ಸ್ಕಾಟ್ಲೆಂಡ್ ಪಡೆಯಿತು. ಸಿಯೊನೇಡ್ ಮೆಕಿಂತೋಷ್ ಒಟ್ಟಾರೆ ೪೪೪.೬ ಪಾಯಿಂಟ್ಸ್ ಗಳಿಸಿ ಕಂಚಿನ ಪದಕ ಗೆದ್ದರು.

ಏಷ್ಯಾ ಕಪ್| ಆಲ್ರೌಂಡರ್‌ಗಳ ಭಾರತಕ್ಕೆ ಸಾಟಿಯಾಗದ ಪಾಕ್‌ಗೆ ಹೀನಾಯ ಸೋಲು!
ಏಷ್ಯಾಕಪ್ ವಿಡಿಯೋ | ೧೬೨ ರನ್‌ಗಳಿಗೆ ಪಾಕ್ ಇನ್ನಿಂಗ್ಸ್‌ಗೆ ಇತಿಶ್ರೀ ಹಾಡಿದ ಭಾರತದ ಬೌಲರ್‌ಗಳು
ಚೀನಾ ಓಪನ್ ಬ್ಯಾಡ್ಮಿಂಟನ್: ಶುಭಾರಂಭ ಮಾಡಿದ ಶ್ರೀಕಾಂತ್, ಪ್ರಣಯ್‌ಗೆ ಆಘಾತ
Editor’s Pick More