ಚೊಚ್ಚಲ ಕಾಮನ್ವೆಲ್ತ್ ಕೂಟದಲ್ಲೇ ಮಿಂಚು ಹರಿಸಿದ್ದಾರೆ ಅನೀಶ್ ಭನ್ವಾಲ. ಬ್ರಿಸ್ಬೇನ್ನ ಬೆಲ್ಮಾಂಟ್ ಶೂಟಿಂಗ್ ಸೆಂಟರ್ನಲ್ಲಿ ಶುಕ್ರವಾರ (ಏಪ್ರಿಲ್ ೧೩) ನಡೆದ ಪುರುಷರ ೨೫ ಮೀಟರ್ ರಾಪಿಡ್ ಫೈರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಈ ಉದಯೋನ್ಮುಖ ಗುರಿಕಾರ ಬಂಗಾರದ ಪದಕ ಜಯಿಸಿದರು. ಇದರೊಂದಿಗೆ ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೋ ಕೂಟದಲ್ಲಿ ಗೆಲ್ಲಲಾಗಿದ್ದ ೧೫ ಸ್ವರ್ಣ ಪದಕಗಳ ಸಾಧನೆಯನ್ನು ಭಾರತ ಮೀರಿನಿಂತಿತು. ಬಾಕ್ಸಿಂಗ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ನಲ್ಲೂ ಚಿನ್ನದ ಪದಕ ಬರುವ ನಿರೀಕ್ಷೆ ಇದ್ದು, ನಿಸ್ಸಂಶಯವಾಗಿಯೂ ಇದು ಭಾರತೀಯ ಅಥ್ಲೀಟ್ಗಳ ಅಮೋಘ ಸಾಧನೆ ಎನಿಸಿದೆ.
ಆರು ಮಂದಿ ಇದ್ದ ಫೈನಲ್ ಸ್ಪರ್ಧೆಯಲ್ಲಿ ಅನೀಶ್ ಭನ್ವಾಲ್ ೩೦ ಪಾಯಿಂಟ್ಸ್ ಸ್ಕೋರ್ ಮಾಡಿ ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಅಂದಹಾಗೆ, ಅರ್ಹತಾ ಸುತ್ತಿನಲ್ಲಿ ಅವರು ಒಟ್ಟಾರೆ ೫೮೦-೨೨x ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಗಳಿಸಿದ್ದರು. ಆಸ್ಟ್ರೇಲಿಯಾದ ೨೦ರ ಹರೆಯದ ಸರ್ಗೆ ಎವ್ಗ್ಲೇವ್ಸ್ಕಿ ಒಡ್ಡಿದ ಪ್ರಬಲ ಪ್ರತಿರೋಧದ ಜತೆಗೆ ೨೮ರ ಹರೆಯದ ಇಂಗ್ಲೆಂಡ್ನ ಸ್ಯಾಮ್ ಗೊವಿನ್ ಕೂಡ ಅನೀಶ್ ಜತೆಗೆ ಜಿದ್ದಿಗೆ ಬಿದ್ದರು.
ಆದರೆ, ಯುವ ಶೂಟರ್ ಅನೀಶ್, ಈ ಇಬ್ಬರ ಪೈಪೋಟಿಯನ್ನೂ ಅತೀವ ಏಕಾಗ್ರತೆಯಿಂದಲೇ ಹಿಂದಿಕ್ಕಿದರು. ಪರಿಣಾಮ, ಆಸ್ಟ್ರೇಲಿಯಾ ಶೂಟರ್ ಸರ್ಗೆ ೨೮ ಪಾಯಿಂಟ್ಸ್ ಗಳಿಸಿ ಬೆಳ್ಳಿ ಪದಕ ಜಯಿಸಿದರೆ, ಇಂಗ್ಲೆಂಡ್ನ ಗೊವಿನ್ ೧೭ ಪಾಯಿಂಟ್ಸ್ ಪಡೆದು ತೃತೀಯ ಸ್ಥಾನಕ್ಕೆ ಅಂದರೆ ಕಂಚಿಗೆ ತೃಪ್ತಿಪಟ್ಟುಕೊಂಡರು. ಏತನ್ಮಧ್ಯೆ, ಇದೇ ವಿಭಾಗದಲ್ಲಿದ್ದ ಭಾರತದ ಮತ್ತೋರ್ವ ಶೂಟರ್ ನೀರಜ್ ಕುಮಾರ್ ನಾಲ್ಕನೇ ಸ್ಥಾನಕ್ಕೆ ಕುಸಿದರು. ನೀರಜ್ ಅರ್ಹತಾ ಸುತ್ತಿನಲ್ಲಿ ೫೭೯.೧೪x ಸ್ಕೋರ್ನೊಂದಿಗೆ ಎರಡನೇ ಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಗಳಿಸಿದ್ದರು.
ಭರವಸೆ ಮೂಡಿಸಿದ್ದ ಅನೀಶ್: ಗೋಲ್ಡ್ ಕೋಸ್ಟ್ನಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಅಪೂರ್ವ ಸಾಧನೆ ಮೆರೆದಿರುವ ಅನೀಶ್, ಕಳೆದ ವರ್ಷವೇ ಕಾಮನ್ವೆಲ್ತ್ ಕೂಟದಲ್ಲಿ ಚಾಂಪಿಯನ್ ಆಗುವ ಲಕ್ಷಣ ತೋರಿದ್ದರು. ಐಎಸ್ಎಸ್ಎಫ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದ ಅನೀಶ್, ೨೫ ಮೀಟರ್ ಸ್ಟಾಂಡರ್ಡ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ವಿಶ್ವ ದಾಖಲೆಯ ೫೭೯ ಸ್ಕೋರ್ನೊಂದಿಗೆ ಚಿನ್ನ ಗೆದ್ದಿದ್ದರು.
ಇದಲ್ಲದೆ, ಇದೇ ಬ್ರಿಸ್ಬೇನ್ನಲ್ಲಿ ಕಳೆದ ವರ್ಷ ನಡೆದಿದ್ದ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಇದೇ ೨೫ ಮೀಟರ್ ಪಿಸ್ತೂಲ್ ಶೂಟಿಂಗ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇನ್ನು, ಕಳೆದ ವರ್ಷ ನಡೆದಿದ್ದ ಕುಮಾರ್ ಸುರೇಂದ್ರ ಸಿಂಗ್ ಸ್ಮಾರಕ ಚಾಂಪಿಯನ್ಶಿಪ್ನಲ್ಲಿ ೨೦೧೨ರ ಲಂಡನ್ ಒಲಿಂಪಿಕ್ಸ್ ರಜತ ವಿಜೇತ ವಿಜಯ್ ಕುಮಾರ್ ಅವರನ್ನು ಹಿಂದಿಕ್ಕಿ ಸ್ವರ್ಣ ಗೆದ್ದಿದ್ದರಲ್ಲದೆ, ೬೧ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿಯೂ ಚಿನ್ನ ಗೆದ್ದಿದ್ದರು.