ಕುಸ್ತಿಯಲ್ಲಿ ಭಾರತದ ಹ್ಯಾಟ್ರಿಕ್‌ ಸ್ವರ್ಣಕ್ಕೆ ನೆರವಾದ ಬಜರಂಗ್ ಪುನಿಯಾ

೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಭಾರತ ಹ್ಯಾಟ್ರಿಕ್ ಸ್ವರ್ಣ ಗೆದ್ದ ಸಾಧನೆ ಮಾಡಿದೆ. ಗುರುವಾರ (ಏ.೧೨) ರಾಹುಲ್ ಮತ್ತು ಸುಶೀಲ್ ಕುಮಾರ್ ಚಿನ್ನ ಗೆದ್ದ ಬಳಿಕ ಬಜರಂಗ್ ಪುನಿಯಾ ಸಹ ಬಂಗಾರ ಗೆದ್ದರು. ಇತ್ತ, ಮಹಿಳೆಯರ ವಿಭಾಗದಲ್ಲಿ ಪೂಜಾ ಧಂಡಾ ಬೆಳ್ಳಿ ಪದಕ ಪಡೆದರು

ಆರಂಭದಿಂದಲೇ ಆಕ್ರಮಣಕಾರಿಯಾಗಿ ಸೆಣಸಿದ ಬಜರಂಗ್ ಪುನಿಯಾ, ಪುರುಷರ ೬೫ ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಚಾಂಪಿಯನ್ ಆದರು. ೨೦೧೪ರ ಗ್ಲಾಸ್ಗೊ ಕೂಟದಲ್ಲಿ ಬೆಳ್ಳಿ ಪದಕಕ್ಕೇ ಹೋರಾಟ ಮುಗಿಸಿದ್ದ ಬಜರಂಗ್, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಸೀಮ ಸಾಧನೆ ಮೆರೆದರು. ಫೈನಲ್‌ನಲ್ಲಿ ಬಜರಂಗ್, ವೇಲ್ಸ್‌ನ ಕುಸ್ತಿಮಲ್ಲ ಚರೀಗ್ ಕೇನ್ ವಿರುದ್ಧ ವಿಭಿನ್ನ ತಂತ್ರಗಾರಿಕೆಯಿಂದ ೧೦-೦ ಅಂತರದಲ್ಲಿ ಜಯಶಾಲಿಯಾದರು. ಪಟ್ಟಿನ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಬಜರಂಗ್ ಏಕಪಕ್ಷೀಯ ಗೆಲುವು ಪಡೆದರು.

೨೦೧೬ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಕೇನ್ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಅವರು ಸ್ವರ್ಣ ಪದಕದ ಮೇಲೆ ಕಣ್ಣಿಟ್ಟಿದ್ದರಾದರೂ, ಭಾರತೀಯ ಪೈಲ್ವಾನ ಹಾಕಿದ ಪಟ್ಟಿಗೆ ಪ್ರತಿ ಪಟ್ಟು ಹಾಕಲು ವಿಫಲವಾದರು. ಗ್ಲಾಸ್ಗೊ ಕೂಟದಲ್ಲಿ ಎರಡನೇ ಸ್ಥಾನ ಪಡೆದಿದ್ದ ಬಜರಂಗ್ ಆಗ ೬೧ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಏತನ್ಮಧ್ಯೆ, ೨೦೧೬ರ ಕಾಮನ್ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಇನ್ನು, ಪದಕ ಸುತ್ತಿನ ೩ ನಿಮಿಷಗಳ ಅಂತಿಮ ಕಾದಾಟದಲ್ಲಿ ಬಜರಂಗ್ ಶುರುವಿನಲ್ಲೇ ೨-೦ ಮುನ್ನಡೆ ಸಾಧಿಸಿದರು. ಚಾರಿಗ್ ಕೂಡ ಆರಂಭದಲ್ಲೇ ಬಜರಂಗ್ ಅವರನ್ನು ಕೆಳಬೀಳಿಸಲು ಯತ್ನಿಸಿದರಾದರೂ, ಅದನ್ನು ಭಾರತೀಯ ಕುಸ್ತಿಮಲ್ಲ ಯಶಸ್ವಿಯಾಗಿ ತಡೆದರು. ಮಾತ್ರವಲ್ಲ, ಎದುರಾಳಿಯ ತಂತ್ರಗಾರಿಕೆಯನ್ನು ವಿಫಲಗೊಳಿಸಿ ಅವರನ್ನೇ ಅಖಾಡಕ್ಕೆ ಕೆಡವಿದರು.

ಇತ್ತ, ಎರಡನೇ ಬೌಟ್‌ನಲ್ಲಿಯೂ ಬಜರಂಗ್ ಬಡಪೆಟ್ಟಿಗೆ ಬಗ್ಗಲಿಲ್ಲ. ಬದಲಿಗೆ, ಎದುರಾಳಿಯನ್ನು ನಡುವನ್ನು ಬಳಸಿ ಆತ ಕದಲದಂತೆ ಮಾಡುವುದರೊಂದಿಗೆ ಇನ್ನೆರಡು ಪಾಯಿಂಟ್ಸ್‌ಗಳನ್ನು ಗಳಿಸಿದರು. ತದನಂತರವೂ ಇಂಥದ್ದೇ ತಂತ್ರವನ್ನು ಪುನರಾವರ್ತಿಸಿದ ಬಜರಂಗ್ ಈ ಬಾರಿ ಇನ್ನೂ ನಾಲ್ಕು ಪಾಯಿಂಟ್ಸ್‌ಗಳನ್ನು ಹೆಕ್ಕಿದರು. ೦-೮ರಿಂದ ಹಿನ್ನಡೆ ಅನುಭವಿಸಿದ ವೇಲ್ಸ್ ಪೈಲ್ವಾನ ಚೇತರಿಸಿಕೊಳ್ಳುವ ಮುನ್ನವೇ ಮತ್ತೆ ಎರಗಿದ ಬಜರಂಗ್ ಈ ಬಾರಿ ಹೆಚ್ಚು ಆತುರಪಡದೆ ಅವಕಾಶಕ್ಕಾಗಿ ಕಾದಿದ್ದು, ಅವರನ್ನು ಚಲಿಸದಂತೆ ಮಾಡಿದರು.

ಆದರೆ, ಪ್ರಬಲ ಪೈಪೋಟಿಯೊಂದಿಗೆ ತಿರುಗಿಬಿದ್ದ ಚಾರಿಗ್ ತಿರುಗಿಬಿದ್ದರು. ಈ ಹಂತದಲ್ಲಿ ಚಾರಿಗ್ ಅವರ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ ಅವರು ಮ್ಯಾಟ್‌ಗೆ ಕೆಡವುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅವರ ಸ್ವರ್ಣ ಪದಕ ಖಚಿತವಾಯಿತು. ಮೂರು ನಿಮಿಷಗಳ ಈ ಹೊಯ್ದಾಟ ಕೇವಲ ಒಂದೇ ನಿಮಿಷದಲ್ಲಿ ಕೊನೆಕಂಡು ಬಜರಂಗ್ ಚಿನ್ನದ ನಗೆಬೀರಿದ್ದು ವಿಶೇಷ.

ಇದನ್ನೂ ಓದಿ : ಕಾಮನ್ವೆಲ್ತ್ ಕೂಟದಲ್ಲಿ ಹ್ಯಾಟ್ರಿಕ್ ಮೆರೆದ ಜಗಜಟ್ಟಿ ಸುಶೀಲ್ ಕುಮಾರ್

ಪೂಜಾ ಕಠಿಣ ಕಾದಾಟ

ಪುನಿಯಾ ಸ್ವರ್ಣ ಗೆದ್ದ ಬಳಿಕ ನಡೆದ ಮಹಿಳೆಯರ ೫೭ ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪೂಜಾ ಧಂಡಾ, ನೈಜೀರಿಯಾದ ಒಡುನಾಯೊ ಅಡೆಕುವೊರಾಯ್ ವಿರುದ್ಧ ಪೂಜಾ ಕಠಿಣ ಕಾದಾಟದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ಮೊದಲ ಪಾಯಿಂಟ್ಸ್ ಕಲೆಹಾಕಿ ೧-೦ಯೊಂದಿಗೆ ಹೋರಾಟಕ್ಕಿಳಿದ ಪೂಜಾ ಧಂಡಾ ಹಾಲಿ ಚಾಂಪಿಯನ್ ಒಡುನಾಯೊ ನೀಡಿದ ಶ್ರೇಷ್ಠ ಪ್ರದರ್ಶನಕ್ಕೆ ಕೊನೆಗೂ ೫-೭ರಿಂದ ಮಣಿಯಬೇಕಾಯಿತು.

ಮೊದಲು ಪಾಯಿಂಟ್ಸ್ ಗಳಿಕೆಯಲ್ಲಿ ಹಿಂದೆ ಬಿದ್ದರೂ, ಒಡನೆಯೇ ಪುಟಿದೆದ್ದ ನೈಜೀರಿಯಾ ಅಥ್ಲೀಟ್ ೧-೧ ಸಮಬಲ ಸಾಧಿಸಿದರು. ತದನಂತರ ಪೂಜಾ ಧಂಡಾ ಅವರನ್ನು ಮ್ಯಾಟ್‌ಗೆ ಕೆಡವಿ ಇನ್ನೆರಡು ಪಾಯಿಂಟ್ಸ್ ಕಲೆಹಾಕಿದರು. ಪೂಜಾಗಿಂತ ಎತ್ತರವಾಗಿದ್ದ ಒಡುನಾಯೊ ಇದನ್ನು ಪ್ರಬಲ ಅಸ್ತ್ರವನ್ನಾಗಿಸಿಕೊಂಡರು. ಈ ಮಧ್ಯೆ ಧಂಡಾ ಅವರ ಆಕ್ರಮಣವು ತಿರುಗುಬಾಣವಾಗಿ ಪರಿಣಮಿಸಿದ್ದು ನೈಜೀರಿಯಾ ಅಥ್ಲೀಟ್‌ ಇನ್ನೆರಡು ಪಾಯಿಂಟ್ಸ್ ಗಳಿಸಲು ಆಸ್ಪದವಾಯಿತು. ನೋಡ ನೋಡುತ್ತಿದ್ದಂತೆ ೬-೧ ಪಾಯಿಂಟ್ಸ್ ಮುನ್ನಡೆ ಪಡೆದರು.

ಮೊದಲ ಬೌಟ್‌ ಮುಗಿಯುತ್ತಾ ಬಂದರೂ, ಧಂಡಾ ಯಾವುದೇ ತಾಂತ್ರಿಕ ಅಂಕವನ್ನು ಗಳಿಸಲು ವಿಫಲವಾದರು. ಒಂದು ಪೆನಾಲ್ಟಿ ಅಂಕವನ್ನಷ್ಟೇ ಆಕೆ ಪಡೆಯುವುದು ಸಾಧ್ಯವಾಯಿತು. ಇನ್ನು, ಎರಡನೇ ರೌಂಡ್‌ನಲ್ಲಿ ಒಡುನಾಯೊ ಇನ್ನಷ್ಟು ಆಕ್ರಮಣಕಾರಿಯಾಗಿ ಪರಿಣಮಿಸಿದರು. ಆದರೆ, ಈ ಸುತ್ತಿನಲ್ಲಿ ಇಬ್ಬರೂ ಯಾವುದೇ ಪಾಯಿಂಟ್ಸ್ ಗಳಿಸಲು ವಿಫಲವಾದರು.

ಪರಿಸ್ಥಿತಿ ಕೈಮೀರುತ್ತಿದೆ ಎಂಬುದರ ಅರಿವಾಗಿ ಪೂಜಾ, ಒಡುನಾಯೊ ಅವರ ಕಾಲನ್ನು ಸುತ್ತುವರೆದರು. ಆದರೆ, ಈ ಆಕ್ರಮಣಕ್ಕೆ ಪ್ರತ್ಯಾಕ್ರಮಣವೆಸಗಿದ ಒಡುನಾಯೊ, ಯಶಸ್ವಿಯಾಗಿ ತಿರುಗಿಬಿದ್ದರು. ಎರಡು ಹಂತಗಳಲ್ಲಿ ಪೂಜಾ ತಲಾ ಎರಡು ಪಾಯಿಂಟ್ಸ್ ಗಳಿಸಿದರೆ, ತದನಂತರದಲ್ಲಿ ಒಡುನಾಯೊ ಎರಡು ಪಾಯಿಂಟ್ಸ್ ಗಳಿಸುತ್ತಿದ್ದಂತೆ ಚಾಂಪಿಯನ್ ಆದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More