ಜಾವೆಲಿನ್ ಪಟು ನೀರಜ್ ಹಾಗೂ ಪುರುಷರ ರಿಲೇ ತಂಡ ಫೈನಲ್‌ ಪ್ರವೇಶ

ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಗುರುವಾರ (ಏ.೧೨) ಡಿಸ್ಕ್ ಎಸೆತದಲ್ಲಿ ಸೀಮಾ ಪುನಿಯಾ ಮತ್ತು ನವಜೀತ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದಿದ್ದರು. ನೀರಜ್ ಮತ್ತು ರಿಲೇ ತಂಡವೀಗ ನಿರೀಕ್ಷೆ ಹೆಚ್ಚಿಸಿದೆ

ನಿರೀಕ್ಷೆಯಂತೆಯೇ, ಭಾರತದ ಪ್ರತಿಭಾನ್ವಿತ ಜಾವೆಲಿನ್ ಪಟು ನೀರಜ್ ಚೋಪ್ರಾ ಇಪ್ಪತ್ತೊಂದನೇ ಕಾಮನ್ವೆಲ್ತ್ ಕೂಟದಲ್ಲಿ ಪದಕ ಗೆಲ್ಲುವ ಆಶಾಭಾವ ಮೂಡಿಸಿದ್ದಾರೆ. ಶುಕ್ರವಾರ (ಏ.೧೩) ಕರಾರಾ ಕ್ರೀಡಾಂಗಣದಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ಫೈನಲ್‌ಗೆ ಬೇಕಾದ ನಿಗದಿತ ಗೆರೆಯನ್ನು ಮೊದಲ ಯತ್ನದಲ್ಲೇ ಮುಟ್ಟಿದರು. ಮಾತ್ರವಲ್ಲದೆ, ಅರ್ಹತಾ ಸುತ್ತಿನ ಸ್ಪರ್ಧಿಗಳ ಪೈಕಿ ಎರಡನೇ ಸ್ಥಾನ ಗಳಿಸಿದರು. ಇನ್ನು, ನೀರಜ್ ಜೊತೆಗೆ ಭಾರತದ ಮತ್ತೋರ್ವ ಜಾವೆಲಿನ್ ಎಸೆತಗಾರ ವಿಪಿನ್ ಕಸಾನ ಕೂಡ ಫೈನಲ್‌ಗೆ ಅರ್ಹತೆ ಪಡೆದರು.

ಚೋಪ್ರಾ ಮೊದಲ ಯತ್ನದಲ್ಲೇ ೮೦.೪೨ ಮೀಟರ್‌ ಸಾಧನೆ ಮಾಡಿದರು. ಅವರಂತೆಯೇ ಇನ್ನೂ ನಾಲ್ವರು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾದರು. ಅಂದಹಾಗೆ, ಅರ್ಹತಾ ಸುತ್ತಿನಲ್ಲಿ ೧೨ ಸ್ಪರ್ಧಿಗಳು ಶನಿವಾರ (ಏ.೧೪) ನಡೆಯಲಿರುವ ಫೈನಲ್ ಸುತ್ತಿಗೆ ಅರ್ಹತೆ ಗಳಿಸಿದರು. ಅಂದಹಾಗೆ, ವಿಪಿನ್ ಕಸಾನ ಕೂಡ ಮೊದಲ ಯತ್ನದಲ್ಲೇ ೭೮.೮೮ ಮೀ.ವರೆಗೆ ಜಾವೆಲಿನ್ ಎಸೆದರು. “ಫೈನಲ್ ತಲುಪಲು ೭೮ ಮೀ.ವರೆಗೆ ಜಾವೆಲಿನ್ ಅನ್ನು ಎಸೆದಿದ್ದರೆ ಸಾಕಾಗಿತ್ತು. ಆದರೆ, ಇಂದಿನ ನನ್ನ ಪ್ರಯತ್ನ ಖುಷಿ ತಂದಿದೆ,’’ ಎಂದು ಅರ್ಹತಾ ಸುತ್ತಿನ ಸ್ಪರ್ಧೆಯ ಬಳಿಕ ನೀರಜ್ ಚೋಪ್ರಾ ತಿಳಿಸಿದರು.

ಇದನ್ನೂ ಓದಿ : ಅಥ್ಲೆಟಿಕ್ಸ್‌ನಲ್ಲೂ ಮಿನುಗಿದ ಭಾರತ; ಸೀಮಾಗೆ ಬೆಳ್ಳಿ, ಕಂಚು ಜಯಿಸಿದ ನವಜೀತ್

“ಕಳೆದ ೨೫ ದಿನಗಳಲ್ಲಿ ನಾನು ಜರ್ಮನಿಯಲ್ಲಿ ನನ್ನ ಕೋಚ್ ಉವೆ ಹಾನ್ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸಿದೆ. ಈ ವ‍ರ್ಷ ಅವರು ಭಾರತದಲ್ಲಿ ತರಬೇತಿ ನೀಡಲಿದ್ದು, ನಾನು ಇನ್ನೂ ಮೂರು ತಿಂಗಳು ಜರ್ಮನಿಯಲ್ಲೇ ತರಬೇತಿ ನಡೆಸುತ್ತೇನೆ,’’ ಎಂತಲೂ ನೀರಜ್ ಹೇಳಿದರು. ಅಂದಹಾಗೆ, ಇದೇ ಹಾನ್ ಅವರಿಂದ ತರಬೇತಿ ಪಡೆಯುತ್ತಿರುವ ಆಸ್ಟ್ರೇಲಿಯಾದ ಮಹಿಳಾ ಜಾವೆಲಿನ್ ಎಸೆತಗಾರ್ತಿ ಕ್ಯಾಥರಿನ್ ಮಿಚೆಲ್ ಇದೇ ಕರಾರಾ ಕ್ರೀಡಾಂಗಣದಲ್ಲಿ ಏ.೧೧ರಂದು ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

ವಿಶ್ವಾಸದಲ್ಲಿ ರಿಲೇ ತಂಡ

ಮೊಹಮದ್ ಅನಾಸ್ ಯಾಹಿಯಾ

ಭಾರತದ ಪುರುಷರ ರಿಲೇ ತಂಡ ಪದಕ ಗೆಲ್ಲುವ ಹಾದಿಯಲ್ಲಿ ದಿಟ್ಟ ಓಟ ಆರಂಭಿಸಿತು. ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ಜೀವನ್ ಸುರೇಶ್, ಜೇಕಬ್ ಅಮೋಜ್ ಹಾಗೂ ಮೊಹಮದ್ ಅನಾಸ್ ಅಲ್ಲದೆ, ರಾಜೀವ್ ಅರೋಗ್ಯ ಅವರಿದ್ದ ಭಾರತದ ಪುರುಷರ ರಿಲೇ ತಂಡ ೪X೪೦೦ ಓಟವನ್ನು ೩ ನಿಮಿಷ ೦೪.೦೫ ಸೆಕೆಂಡುಗಳಲ್ಲಿ ಕ್ರಮಿಸಿ ಎರಡನೇ ಸ್ಥಾನ ಗಳಿಸಿತು.

ಹೀಟ್ ಎರಡರಲ್ಲಿ ಸ್ಪರ್ಧಿಸಿದ್ದ ಭಾರತದ ರಿಲೇ ತಂಡಕ್ಕೆ ಪ್ರಬಲ ಪೈಪೋಟಿ ಒಡ್ಡಿದ ಹಾಗೂ ಓಟದ ಜಗತ್ತಿನಲ್ಲಿ ಪ್ರಭುತ್ವ ಮೆರೆಯುತ್ತಿರುವ ಜಮೈಕಾ ಮೊದಲ ಸ್ಥಾನ ಗಳಿಸಿತು. ಜಮೈಕಾ ತಂಡ ೩ ನಿಮಿಷ ೦೩.೯೭ ಸೆ.ಗಳಲ್ಲಿ ಗಮ್ಯ ಸ್ಥಾನ ಮುಟ್ಟಿತು. ಇನ್ನು, ಇದೇ ವಿಭಾಗದಲ್ಲಿ ಬಹಮಾಸ್‌ನ ತಂಡ ೩:೦೪.೬೨ ಸೆ.ಗಳಲ್ಲಿ ಮೂರನೇ ಸ್ಥಾನ ಗಳಿಸಿ ಫೈನಲ್ ತಲುಪಿತು. ಇತ್ತ, ಹೀಟ್ ೧ರಲ್ಲಿ ಬೊಸ್ವಾನಾದ ರಿಲೇ ತಂಡ ಋತುವಿನ ಶ್ರೇಷ್ಠ ಸಾಧನೆಯೊಂದಿಗೆ ಅಂದರೆ ೩:೦೫.೦೧ ಸೆ.ಗಳಲ್ಲಿ ಫೈನಲ್‌ಗೆ ಅರ್ಹತೆ ಪಡೆಯಿತು.

ಇನ್ನುಳಿದಂತೆ, ಕೀನ್ಯಾ (೩:೧೩.೫೨ ಸೆ.) ಮತ್ತು ಫಿಜಿ ತಂಡ ೩ ನಿಮಿಷ ೧೯.೧೯ ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿ ಫೈನಲ್‌ಗೆ ಧಾವಿಸಿತು. ಅಂದಹಾಗೆ, ಭಾರತದ ರಿಲೇ ತಂಡ, ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಕಾಂಟಿನೆಂಟಲ್ ಮೀಟ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಏಷ್ಯಾ ಚಾಂಪಿಯನ್ ಆಗಿರುವ ಮೊಹಮದ್ ಅನಾಸ್ ಸಾರಥ್ಯದ ರಿಲೇ ತಂಡ ಗೋಲ್ಡ್‌ ಕೋಸ್ಟ್‌ನಲ್ಲಿ ಪದಕ ವೇದಿಕೆ ಏರುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More