ಚಿನ್ನ ಕೈಚೆಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡ ಪೈಲ್ವಾನ ಮೌಸಮ್ ಖತ್ರಿ

ಕುಸ್ತಿಯಲ್ಲಿನ ತನ್ನ ಅಪಾರ ಅನುಭವವನ್ನು ಸದ್ಬಳಕೆ ಮಾಡಿಕೊಳ್ಳಲು ವಿಫಲವಾದ ಭಾರತದ ಪೈಲ್ವಾನ ಮೌಸಮ್ ಖತ್ರಿ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನದ ಅವಕಾಶವನ್ನು ಕೈಚೆಲ್ಲಿ ಬೆಳ್ಳಿಗೆ ತೃಪ್ತಿಪಟ್ಟರು. ಇನ್ನು, ಮಹಿಳೆಯರ ವಿಭಾಗದಲ್ಲಿ ೬೮ ಕೆಜಿ ವಿಭಾಗದಲ್ಲಿ ದಿವ್ಯಾ ಕಾಕ್ರನ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು

ನಿರೀಕ್ಷೆಯಂತೆಯೇ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್‌ನಲ್ಲಿ ಭಾರತದ ಪೈಲ್ವಾನರು ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ರಾಹುಲ್ ಅವಾರಿ ಮತ್ತು ಸುಶೀಲ್ ಕುಮಾರ್ ಗುರುವಾರ (ಏ.೧೨) ಎರಡು ಸ್ವರ್ಣ ತಂದುಕೊಟ್ಟರೆ, ಶುಕ್ರವಾರ (ಏ.೧೩) ಬಜರಂಗ್ ಪುನಿಯಾ ಚಿನ್ನ ಗೆದ್ದು ಹ್ಯಾಟ್ರಿಕ್‌ಗೆ ನೆರವಾದರು. ಆದರೆ, ಅನುಭವಿ ಕುಸ್ತಿಪಟು ಮೌಸಮ್ ಖತ್ರಿ ಮಾತ್ರ ಅಪೂರ್ವ ಅವಕಾಶವೊಂದನ್ನು ಕೈಚೆಲ್ಲಿ ಎರಡನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು.

ಕರಾರಾ ಕ್ರೀಡಾ ಅರೇನಾದಲ್ಲಿನ ಕುಸ್ತಿ ಅಖಾಡದಲ್ಲಿ ನಡೆದ ಅಂತಿಮ ಕಾದಾಟದ ೯೭ ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ೨೭ರ ಹರೆಯದ ಹರ್ಯಾಣದ ಈ ಪೈಲ್ವಾನ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಮಾರ್ಟಿನ್ ಎರಾಸ್ಮುಸ್ ಅವರೆದುರು ಕಳಾಹೀನ ಪ್ರದರ್ಶನ ನೀಡಿ ೨-೧೨ರಿಂದ ಹೀನಾಯವಾಗಿ ಸೋತರು. ವಯಸ್ಸಿನಲ್ಲಿ ತನಗಿಂತ ನಾಲ್ಕು ವರ್ಷ ಕಿರಿಯವರಾದ ಮಾರ್ಟಿನ್ ಅವರ ಕುಸ್ತಿ ಪಟ್ಟುಗಳು ಬೆರಗು ಮೂಡಿಸುವಂತಿದ್ದವು. ಅದರಲ್ಲೂ ತಾಂತ್ರಿಕವಾಗಿ ದಕ್ಷಿಣ ಆಫ್ರಿಕಾ ರೆಸ್ಲರ್ ಚಾಕಚಕ್ಯತೆ ಮೆರೆದರು.

ಕುಸ್ತಿ ಸ್ಪರ್ಧಾವಳಿಯ ಮೊದಲ ದಿನದಂದು ನಾಲ್ಕು ಪದಕಗಳನ್ನು ಗೆದ್ದಿದ್ದ ಭಾರತ ಎರಡನೇ ದಿನವೂ ಪ್ರಭುತ್ವ ಮೆರೆಯಿತು. ಇದರಿಂದಾಗಿ ಪದಕ ಪಟ್ಟಿಯಲ್ಲಿ ಭಾರತ ೧೭ ಚಿನ್ನ, ೧೧ ಬೆಳ್ಳಿ, ೧೪ ಕಂಚು ಸೇರಿದ ಒಟ್ಟು ೪೨ ಪದಕಗಳೊಂದಿಗೆ ಮೂರನೇ ಸ್ಥಾನ ಕಾಯ್ದುಕೊಂಡಿತು. ಆಸ್ಟ್ರೇಲಿಯಾ ೬೫ ಚಿನ್ನ ಸೇರಿ ೧೬೮ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ೩೧ ಸ್ವರ್ಣ ಪದಕ ಸೇರಿದ ೯೯ ಪದಕ ಗಳಿಸಿ ಎರಡನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ : ಕುಸ್ತಿಯಲ್ಲಿ ಭಾರತದ ಹ್ಯಾಟ್ರಿಕ್‌ ಸ್ವರ್ಣಕ್ಕೆ ನೆರವಾದ ಬಜರಂಗ್ ಪುನಿಯಾ

ಕುಸ್ತಿಯ ಬಹುತೇಕ ಹಂತದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ ಮಾರ್ಟಿನ್, ಅತ್ಯುತ್ಕೃಷ್ಟ ತಾಂತ್ರಿಕ ಪಟ್ಟುಗಳಿಂದ ಮೌಸಮ್‌ಗೆ ಸೋಲುಣಿಸಿದರು. ಅಂದಹಾಗೆ, ಫೈನಲ್ ತಲುಪುವ ಮುನ್ನ ಮೌಸಮ್, ಸೈಪ್ರಸ್‌ನ ಅಲೆಕ್ಸಿಯೊಸ್ ಕೌಸ್ಲಿಡಿಸ್ ವಿರುದ್ಧ ೪-೧ರಿಂದ ಗೆದ್ದರೆ, ಸೆಮಿಫೈನಲ್‌ನಲ್ಲಿ ನೈಜೀರಿಯಾದ ಸೊಸೊ ತಾಮರು ವಿರುದ್ಧ ಗೆಲುವು ಪಡೆದಿದ್ದರು. ೨೦೧೦ರ ಏಷ್ಯಾಡ್‌ನಲ್ಲಿ ಕಂಚು ಗೆದ್ದಿದ್ದ ಖತ್ರಿ, ೨೦೦೯, ೨೦೧೧ರ ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ವಿಜೇತರಾಗಿದ್ದರು. ಆದರೆ, ಕಾಮನ್ವೆಲ್ತ್‌ನ ಪ್ರಧಾನ ಕ್ರೀಡಾಕೂಟದಲ್ಲಿ ಅವರು ಸಿಕ್ಕಿದ ಅಪೂರ್ವ ಅವಕಾಶವನ್ನು ಕೈಚೆಲ್ಲಿದರು.

ದಿವ್ಯಾಗೆ ಕಂಚು: ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕವನ್ನು ತಂದುಕೊಟ್ಟದ್ದು ದಿವ್ಯಾ. ೬೮ ಕೆಜಿ ವಿಭಾಗದಲ್ಲಿ ಬಾಂಗ್ಲಾದೇಶದ ಶೆರಿನ್ ಸುಲ್ತಾನ ವಿರುದ್ಧ ಗೆಲುವು ಸಾಧಿಸಿ ದಿವ್ಯಾ ಕಂಚು ಗೆದ್ದರು. ಸೆಮಿಫೈನಲ್‌ನಲ್ಲಿ ನೈಜೀರಿಯಾದ ಬ್ಲೆಸಿಂಗ್ ಒಬೊರುಡುಡು ವಿರುದ್ಧದ ಹೋರಾಟದಲ್ಲಿ ದಿವ್ಯಾ ನೀರಸ ಪ್ರದರ್ಶನ ನೀಡಿ ಸೋಲನುಭವಿಸಿದರು. ಇಲ್ಲಿಯೂ ನೈಜೀರಿಯಾ ಬಾಕ್ಸರ್ ಉತ್ಕೃಷ್ಟ ತಾಂತ್ರಿಕ ನೈಪುಣ್ಯದ ಆಧಾರದಲ್ಲಿ ೧೧-೧ರಿಂದ ದಿವ್ಯಾ ಎದುರು ಜಯ ಪಡೆದು ಫೈನಲ್ ತಲುಪಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More