ಗೋಲ್ಡ್ ಕೋಸ್ಟ್‌ನಲ್ಲಿ ಮುದಗೊಳಿಸಿದ ಸಾಧಕರ ಮಧ್ಯೆ ಮತ್ತೆ ಎದುರಾದ ಮುಜುಗರ

ಕೂಟ ಶುರುವಾಗುವ ಮುಂಚೆ ‘ಸೂಜಿ ಮುಕ್ತ’ ನೀತಿಗೆ ಧಕ್ಕೆ ತಂದದ್ದರಿಂದ ಭಾರತ ಮುಜುಗರ ಅನುಭವಿಸಿತು. ಸದ್ಯ, ೧೭ ಸ್ವರ್ಣದೊಂದಿಗೆ ಗ್ಲಾಸ್ಗೊ ಸಾಧನೆಯನ್ನು ಮೀರಿನಿಂತ ಭಾರತ, ಮತ್ತೆ ಇದೇ ಸೂಜಿ ಮುಕ್ತ ಪ್ರಕರಣದಲ್ಲಿ ಶುಕ್ರವಾರ (ಏ.೧೩) ಮುಜುಗರ ಅನುಭವಿಸಿದ್ದು ಅವಿವೇಕತನಕ್ಕೆ ಸಂದ ಶಿಕ್ಷೆ

ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ನಿಯೋಗದ ದಿವ್ಯ ನಿರ್ಲಕ್ಷ್ಯಕ್ಕೆ ಭಾರತ ಮತ್ತೊಮ್ಮೆ ಮುಜುಗರ ಅನುಭವಿಸಿದೆ. ತ್ರಿವಿಧ ಜಿಗಿತಗಾರ ರಾಕೇಶ್ ಬಾಬು ಹಾಗೂ ವೇಗದ ನಡಿಗೆಗಾರ ಇರ್ಫಾನ್ ಕೊಲ್ತುಮ್ ಥೋಡಿ ಕ್ರೀಡಾಕೂಟದ ‘ಸೂಜಿ ಮುಕ್ತ’ ನಿಯಮವನ್ನು ಉಲ್ಲಂಘಿಸಿದ ತಪ್ಪಿಗಾಗಿ ತಕ್ಷಣವೇ ಕ್ರೀಡಾಗ್ರಾಮವನ್ನು ತೊರೆಯಬೇಕೆಂದು ಕಾಮನ್ವೆಲ್ತ್ ಕ್ರೀಡಾ ಒಕ್ಕೂಟ (ಸಿಜಿಎಫ್) ಭಾರತದ ಅಧಿಕಾರಿಗಳಿಗೆ ಸೂಚಿಸಿರುವುದು ಅತ್ಯಂತ ಮುಜುಗರದ ಸಂಗತಿ.

ಆಸ್ಟ್ರೇಲಿಯಾದಿಂದ ಭಾರತಕ್ಕೆ ಹೊರಡುವ ಮೊದಲ ವಿಮಾನದಲ್ಲೇ ಈ ಇಬ್ಬರೂ ಅಥ್ಲೀಟ್‌ಗಳನ್ನು ಕಳುಹಿಸಬೇಕೆಂದು ಅಧ್ಯಕ್ಷ ಲೂಸಿ ಮಾರ್ಟಿನ್ ಫರ್ಮಾನು ಹೊರಡಿಸಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಮಧ್ಯೆ ಈ ಇಬ್ಬರೂ ಅಥ್ಲೀಟ್‌ಗಳ ಮಾನ್ಯತಾ ಪತ್ರಗಳನ್ನು ಬೆಳಗ್ಗೆ ೯ ಗಂಟೆಯಿಂದಲೇ ರದ್ದುಗೊಳಿಸಲಾಯಿತು. ಆದರೆ, ಈ ಕುರಿತು ಸಿಜಿಎಫ್‌ ಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿರುವುದಾಗಿ ಭಾರತದ ಕಾಮನ್ವೆಲ್ತ್ ನಿಯೋಗ ಹೇಳಿದೆ. ಆದರೆ, ಭಾರತೀಯ ಬಾಕ್ಸಿಂಗ್ ತಂಡವಿದ್ದ ಕೊಠಡಿಯಲ್ಲಿ ಸಿರಿಂಜ್ ಪತ್ತೆಯಾದ ಘಟನೆಯಲ್ಲಿ ಬಾಕ್ಸಿಂಗ್ ತಂಡದ ವೈದ್ಯ ಅಮೋಲ್ ಪಾಟೀಲ್‌ಗೆ ಸಿಜಿಎಫ್ ವಾಗ್ದಂಡನೆ ವಿಧಿಸಿತ್ತು.

ಮಾತ್ರವಲ್ಲದೆ, ಭಾರತದ ಚೆಫ್ ಡಿ ಮಿಷನ್‌ಗೂ ಛೀಮಾರಿ ಹಾಕಿ ಕೂಟದಲ್ಲಿ ಮತ್ತೆ ಇಂಥದ್ದು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಎಚ್ಚರಿಸಿತ್ತು. ಇಷ್ಟರ ಮಧ್ಯೆಯೂ ಭಾರತದ ಅಥ್ಲೀಟ್‌ಗಳು ಹಾಗೂ ಅಧಿಕಾರಿ ವರ್ಗ ಎಡವಿರುವುದು ಅಕ್ಷಮ್ಯ. ಇವರುಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಭಾರತದ ಘನತೆ ಮಣ್ಣುಪಾಲಾಗಿದೆ. ಅಂದಹಾಗೆ, ಟ್ರಿಪಲ್ ಜಂಪರ್ ರಾಕೇಶ್ ಬಾಬು ಶನಿವಾರ (ಏ.೧೩) ನಡೆಯಲಿದ್ದ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಯಾವುದೇ ಕಾರಣಕ್ಕೂ ಕೂಟದ ನಿಯಮವನ್ನು ಉಲ್ಲಂಘಿಸುವಂತಿಲ್ಲ. ‘ಸೂಜಿ ಮುಕ್ತ’ ನಿಯಮಕ್ಕಂತೂ ಧಕ್ಕೆ ಎಸಗಿದರೆ ಸಹಿಸಲಾಗದು ಎಂದು ಸಿಜಿಎಫ್ ಕಟ್ಟುನಿಟ್ಟಾಗಿ ಸೂಚನೆ ನೀಡಿದ ಮೇಲೂ ಮುಂಜಾಗ್ರತೆ ವಹಿಸದ ಭಾರತದ ಅಥ್ಲೀಟ್‌ಗಳು ಹಾಗೂ ಅಧಿಕಾರಿ ವರ್ಗದ ಬೇಜವಾಬ್ದಾರಿತನ ಇಲ್ಲಿ ಪ್ರಶ್ನಾರ್ಹ.

ಪರೀಕ್ಷೆಯಲ್ಲಿ ನಿರ್ದೋಷಿಗಳು: ಬೆಡ್ ರೂಂನ ಟೇಬಲ್ ಮೇಲೆ ಇರಿಸಲಾಗಿದ್ದ ಕಪ್‌ ಒಂದರಲ್ಲಿ ಸಿರಿಂಜ್ ಈ ಬಾರಿ ಪತ್ತೆಯಾಗಿದೆ. ಕೊಠಡಿಯನ್ನು ಶುಚಿಗೊಳಿಸುವವರಿಗೆ ಇದು ಸಿಕ್ಕಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಜಿಎಫ್ ತನಿಖಾ ಸಿಬ್ಬಂದಿ ಭಾರತದ ಇಬ್ಬರೂ ಅಥ್ಲೀಟ್‌ಗಳ ರಕ್ತ ಮತ್ತು ಮೂತ್ರ ಮಾದರಿಯನ್ನು ಕಲೆಹಾಕಿ ಪರೀಕ್ಷೆಗೆ ಗುರಿಪಡಿಸಿತು. ಪರೀಕ್ಷಾ ವರದಿಯಲ್ಲಿ ಇಬ್ಬರೂ ನಿರ್ದೋಷಿಗಳಾಗಿ ಕಂಡುಬಂದಿರುವುದು ತುಸು ಸಮಾಧಾನದ ಸಂಗತಿ.

ಕಠಿಣ ಕ್ರಮದ ಸುಳಿವು: ಇತ್ತ, ಕೂಟದಲ್ಲಿ ಎರಡು ಬಾರಿ ಎದುರಾದ ನಿಯಮ ಉಲ್ಲಂಘನೆ ಪ್ರಕರಣದಿಂದ ಭಾರತದ ಘನತೆಗೆ ಕುಂದುಂಟಾಗಿದೆ ಎಂದಿರುವ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಸಿ ಕೆ ಖನ್ನಾ, ಕಠಿಣ ಕ್ರಮದ ಸುಳಿವು ನೀಡಿದ್ದಾರೆ. ಈಗಾಗಲೇ ಶಿಸ್ತುಸಮಿತಿಯಿಂದ ವಿಚಾರಣೆಗೆ ಗುರಿಪಪಡಿಸಲಾಗಿದೆ. ವರದಿ ಸಿಕ್ಕ ಬಳಿಕ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ. ಏತನ್ಮಧ್ಯೆ, ಪ್ರಕರಣದ ಕುರಿತು ಇರ್ಫಾನ್ ಯಾವುದೇ ಪ್ರತಿಕ್ರಿಯೆ ನೀಡದಾದರೆ, ಬಾಬು ಮಾತ್ರ ಸಂಪರ್ಕಕಕ್ಕೇ ಸಿಕ್ಕಿಲ್ಲ ಎನ್ನಲಾಗಿದೆ.

ಇದನ್ನೂ ಓದಿ : ಸಿರಿಂಜ್ ಪತ್ತೆ ಪ್ರಕರಣ: ಭಾರತೀಯ ಬಾಕ್ಸಿಂಗ್ ತಂಡದ ವೈದ್ಯರಿಗೆ ವಾಗ್ದಂಡನೆ!

"ಬೆಡ್‌ರೂಂ ಎರಡರಲ್ಲಿ ಪತ್ತೆಯಾಗಿರುವ ಸಿರಿಂಜ್ ಹೇಗೆ ಕೊಠಡಿಯೊಳಗೆ ಬಂದವು ಎಂಬುದು ಗೊತ್ತಿಲ್ಲ ಎಂದು ಇಬ್ಬರೂ ಅಥ್ಲೀಟ್‌ಗಳು ವಿಚಾರಣೆಯ ವೇಳೆ ತಾವು ಅಮಾಯಕರು ಎಂದು ತಿಳಿಸಿದ್ದಾರೆ. ಆದರೆ, ಕೂಟವು ‘ಸಿರಿಂಜ್ ಮುಕ್ತ’ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಶೂನ್ಯ ಸೈರಣೆ ನೀತಿಯನ್ನು ಅನುಸರಿಸುತ್ತಿದೆ ಎಂಬ ಅರಿವಿದ್ದೂ, ಬೇಜವಾಬ್ದಾರಿ ಮೆರೆದಿರುವುದು ಸ್ಪಷ್ಟವಾಗುತ್ತದೆ,’’ ಎಂದು ಸಿಜಿಎಫ್ ಕಟು ಮಾತುಗಳಲ್ಲಿ ಇಬ್ಬರಿಗೂ ವಾಗ್ದಂಡನೆ ವಿಧಿಸಿದೆ.

ಶುಕ್ರವಾರದ ವಿಶೇಷ: ಅಂದಹಾಗೆ, ಈ ಸಿರಿಂಜ್ ಪ್ರಕರಣದ ಮಧ್ಯೆಯೂ ಭಾರತ ಶುಕ್ರವಾರದಂದು ಗರಿಷ್ಠ ಮಟ್ಟದ ಪದಕಗಳನ್ನು ಗೆದ್ದದ್ದು ವಿಶೇಷವೆನಿಸಿತು. ಶೂಟಿಂಗ್‌ನಲ್ಲಿ ತೇಜಸ್ವಿನಿ ಸಾವಂತ್ ಚಿನ್ನಕ್ಕೆ ಗುರಿ ಇಟ್ಟ ಮೇಲೆ ಕುಸ್ತಿ ಹಾಗೂ ಶೂಟಿಂಗ್‌ನಲ್ಲಿ ತಲಾ ಒಂದೊಂದು ಚಿನ್ನ ಭಾರತಕ್ಕೆ ಬಂದವು. ಒಟ್ಟಾರೆ ೯ನೇ ದಿನದಂದು ೧೧ ಪದಕಗಳು ಭಾರತಕ್ಕೆ ಸಿಕ್ಕಿತಾದರೂ, ಸಿರಿಂಜ್ ಪತ್ತೆ ಪ್ರಕರಣ ಈ ಎಲ್ಲ ಸಾಧಕರ ಮಧ್ಯೆಯೂ ಮುಜುಗರ ತಂದಿತೆಂಬುದು ಮಾತ್ರ ಸುಳ್ಳಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More