ಕಡೇ ಎಸೆತದಲ್ಲಿ ಮುಂಬೈ ಮಣಿಸಿ ಸತತ ಎರಡನೇ ಜಯ ಕಂಡ ಸನ್‌ರೈಸರ್ಸ್

ಅತೀವ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ೧ ವಿಕೆಟ್ ಜಯ ಸಾಧಿಸಿದ ಸನ್‌ರೈಸರ್ಸ್, ೧೧ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ ಎರಡು ಜಯ ಸಾಧಿಸಿತು. ರಶೀದ್ ಖಾನ್ ಸೊಗಸಾದ ಬೌಲಿಂಗ್ ಅಲ್ಲದೆ, ದೀಪಕ್ ಹೂಡಾ ಸನ್‌ರೈಸರ್ಸ್‌ ಗೆಲುವಿಗೆ ನೆರವಾದರು

ಸೋಲಿನ ತುತ್ತತುದಿಯಲ್ಲಿ ಹೊಯ್ದಾಡುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ಕಡೆಗೂ ಒತ್ತಡ ಹಾಗೂ ಉದ್ವೇಗದ ಸ್ಥಿತಿಯನ್ನು ಮೆಟ್ಟಿನಿಂತು ಜಯದ ನಗೆ ಬೀರಿತು. ಗುರುವಾರ (ಏ.೧೨) ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯವು ಜಿದ್ದಾಜಿದ್ದಿನ ಹೋರಾಟದಿಂದ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ಉದ್ವೇಗದ ಅಂಚಿಗೆ ಕೊಂಡೊಯ್ದಿತ್ತು.

ಕೊನೆಯ ಮೂರು ಓವರ್‌ಗಳಂತೂ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟವು. ಈ ಮೂರು ಓವರ್‌ಗಳ ಪೈಕಿ ಕೊನೆಯ ಓವರ್ ಇತ್ತಂಡಗಳ ಹಣೆಬರಹವನ್ನು ನಿರ್ಧರಿಸುವಂತಿತ್ತಾದ್ದರಿಂದ ಇತ್ತಂಡಗಳಲ್ಲೂ ಹೇಳಲಾಗದ ಚಡಪಡಿಕೆ ಬೇರೆ. ಬೆನ್ ಕಟ್ಟಿಂಗ್ ನಿರ್ವಹಿಸಿದ ಈ ಓವರ್‌ನ ಕಡೇ ಎಸೆತವನ್ನು ಹೈದರಾಬಾದ್‌ನ ಹನ್ನೊಂದನೇ ಆಟಗಾರ ಬಿಲ್ಲಿ ಸ್ಟ್ಯಾನ್‌ಲೇಕ್ ಬೌಂಡರಿಗೆ ಅಟ್ಟುತ್ತಿದ್ದಂತೆ ಸನ್‌ರೈಸರ್ಸ್ ಗೆಲುವಿನ ಕೇಕೆ ಹಾಕಿತು. ಅಂದಹಾಗೆ, ಈ ಕೊನೆಯ ಎಸೆತದಲ್ಲಿ ಸನ್‌ರೈಸರ್ಸ್‌ಗೆ ಬೇಕಿದ್ದುದು ಕೇವಲ ಒಂದೇ ಒಂದು ರನ್ ಅಷ್ಟೆ!

ಗೆಲುವಿಗಾಗಿ ಕಟ್ಟಕಡೆಯವರೆಗೂ ಹೋರಾಡಿದ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಸತತ ಎರಡನೇ ಸೋಲುಂಡರೆ; ಮನೆಯಂಗಣದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್ ರೈಸರ್ಸ್ ಎರಡು ಗೆಲುವು ಕಂಡಿತಲ್ಲದೆ, ಇದೀಗ ಹ್ಯಾಟ್ರಿಕ್ ಜಯದ ಗುರಿ ಹೊತ್ತಿದೆ.

ದೀಪಕ್ ಆಸರೆ: ಪ್ರಮುಖ ಆಟಗಾರರು ವಿಕೆಟ್ ಕಳೆದುಕೊಂಡಿದ್ದರಿಂದ ಸನ್‌ರೈಸರ್ಸ್ ಸೋಲಿನತ್ತ ಮುಖ ಮಾಡಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಥಿರವಾಗಿ ನಿಂತ ದೀಪಕ್ ಹೂಡಾ ಹೆಜ್ಜೆ ಹೆಜ್ಜೆಗೂ ಮುಂಬೈ ಬೌಲರ್‌ಗಳು ಒಡ್ಡುತ್ತಿದ್ದ ಉಪದ್ರವದ ಮಧ್ಯೆಯೂ ತಂಡಕ್ಕೆ ಆಸರೆಯಾಗಿ ನಿಂತರು. ಇನ್ನಿಂಗ್ಸ್‌ನ ಕೊನೆಯವರೆಗೂ ಅಚಲವಾಗಿ ಕ್ರೀಸ್‌ಗೆ ಕಚ್ಚಿನಿಂತು ಆಡಿದ ದೀಪಕ್ ಹೂಡಾ, ಕೇವಲ ೨೫ ಎಸೆತಗಳಲ್ಲಿ ೧ ಬೌಂಡರಿ, ೧ ಸಿಕ್ಸರ್ ಸೇರಿದ ಅಜೇಯ ೩೨ ರನ್ ಗಳಿಸಿದರು. ಅವರ ಈ ಅಜೇಯ ಆಟ ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿತು.

ತಿರುವು ನೀಡಿದ ಮಾರ್ಕಂಡೆ: ಗೆಲ್ಲಲು ಮುಂಬೈ ನೀಡಿದ್ದ ೧೪೮ ರನ್ ಗುರಿಯನ್ನು ಬೆನ್ನುಹತ್ತಿದ ಸನ್‌ರೈಸರ್ಸ್ ಹೈದರಾಬಾದ್ ಒಂದು ಹಂತದಲ್ಲಿ ಕೇವಲ ೧ ವಿಕೆಟ್ ಕಳೆದುಕೊಂಡು ೭೩ ರನ್ ಗಳಿಸುವುದರೊಂದಿಗೆ ಸರಿದಿಸೆಯಲ್ಲೇ ಹೆಜ್ಜೆ ಇಟ್ಟಿತ್ತು. ಆದರೆ, ಯುವ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ (೨೩ಕ್ಕೆ ೪) ಬೌಲಿಂಗ್‌ಗೆ ಇಳಿಯುತ್ತಲೇ ಇಡೀ ಪಂದ್ಯ ಮತ್ತೊಂದು ಮಜಲಿಗೆ ಹೊರಳಿತು. ಅದುವರೆಗೆ ಏಕಪಕ್ಷೀಯವಾಗಿ ಸಾಗುತ್ತಿದ್ದ ಪಂದ್ಯ ದಿಢೀರ್ ಎಂದು ಇತ್ತಂಡಗಳಿಗೂ ಗೆಲುವಿನ ಅವಕಾಶವನ್ನು ತೆರೆಯುವಂತೆ ಮಾಡಿತು. ಮತ್ತೊಮ್ಮೆ ಆಕರ್ಷಕ ಸ್ಪೆಲ್‌ನಿಂದ ಗಮನ ಸೆಳೆದ ಮಾರ್ಕಂಡೆ, ಅರಂಭಿಕರಾದ ವೃದಿಮಾನ್ ಸಾಹ (೨೨), ಶಿಖರ್ ಧವನ್ (೪೫: ೨೮ ಎಸೆತ, ೮ ಬೌಂಡರಿ) ಅಲ್ಲದೆ, ಮನೀಶ್ ಪಾಂಡೆ (೧೧), ಶಕೀಬ್ ಅಲ್ ಹಸನ್ (೧೨) ಅವರಂಥ ಅಪಾಯಕಾರಿ ಆಟಗಾರರನ್ನು ಪೆವಿಲಿಯನ್‌ಗೆ ಅಟ್ಟಿ ಪಂದ್ಯವನ್ನು ಮುಂಬೈ ಕಡೆ ತಿರುಗಿಸಿದರು.

ಇದನ್ನೂ ಓದಿ : ಶಿಖರ್ ಧವನ್ ನೀಡಿದ ಕ್ಯಾಚ್ ಬಿಟ್ಟು ಪಂದ್ಯ ಕೈ ಚೆಲ್ಲಿದ ರಹಾನೆ ಬಳಗ

ಬುಮ್ರಾ, ಮುಸ್ತಾಫಿಜುರ್ ಮೋಡಿ: ಅಂದಹಾಗೆ, ಹದಿನೆಂಟು ಹಾಗೂ ಹತ್ತೊಂಬತ್ತನೇ ಓವರ್‌ ನಿರ್ವಹಿಸಿದ ಜಸ್ಪ್ರೀತ್ ಬುಮ್ರಾ ಮತ್ತು ಬಾಂಗ್ಲಾದೇಶದ ಯುವ ಬೌಲರ್ ಮುಸ್ತಾಫಿಜುರ್ ರೆಹಮಾನ್ ತಲಾ ಎರಡೆರಡು ವಿಕೆಟ್ ಪಡೆದದ್ದು ಕೂಡ ಪಂದ್ಯದ ಮತ್ತೊಂದು ರೋಚಕ ಘಟ್ಟವಾಗಿತ್ತು. ಹದಿನೆಂಟನೇ ಓವರ್‌ನಲ್ಲಿ ಬುಮ್ರಾ ಎಂಟು ರನ್ ನೀಡಿ ಅಪಾಯಕಾರಿ ಆಟಗಾರ ಯೂಸುಫ್ ಪಠಾಣ್ (೧೪) ಮತ್ತು ರಶೀದ್ ಖಾನ್ (೦) ವಿಕೆಟ್ ಎಗರಿಸಿದರೆ, ಮರು ಓವರ್‌ನಲ್ಲಿ ಕೇವಲ ಒಂದು ರನ್ ನೀಡಿದ ಮುಸ್ತಾಫಿಜುರ್, ಸಿದ್ಧಾರ್ಥ್ ಕೌಲ್ (೦) ಹಾಗೂ ಸಂದೀಪ್ ಶರ್ಮಾ (೦) ಅವರನ್ನು ಶೂನ್ಯಕ್ಕೆ ಕ್ರೀಸ್ ತೊರೆಯುವಂತೆ ಮಾಡಿದರು. ಆದರೆ, ಈ ಇಬ್ಬರ ವಿಚ್ಛಿದ್ರಕಾರಿ ಸ್ಪೆಲ್‌ ಮುಂಬೈಗೆ ಗೆಲುವು ತಂದೀಯಲಿಲ್ಲ.

ಮತ್ತೆ ಎಡವಿದ ಮುಂಬೈ: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಎಡವಿ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೪೭ ರನ್ ಗಳಿಸಿತು. ಎವಿನ್ ಲೆವಿಸ್ (೨೯), ಸೂರ್ಯಕುಮಾರ್ ಯಾದವ್ (೨೮) ಹಾಗೂ ಕೀರನ್ ಪೊಲಾರ್ಡ್ (೨೮) ಅಸ್ಥಿರ ಆಟದಿಂದ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಈ ಮಧ್ಯೆ ಆರಂಭಿಕ ಹಾಗೂ ನಾಯಕ ರೋಹಿತ್ ಶರ್ಮಾ (೧೧) ಕೂಡ ನಿರಾಸೆ ಅನುಭವಿಸಿದರು.

ಇನ್ನು, ಕೆಳ ಮಧ್ಯಮ ಕ್ರಮಾಂಕ ಕೂಡ ಸನ್‌ರೈಸರ್ಸ್ ಬೌಲಿಂಗ್ ದಾಳಿಗೆ ಪ್ರತಿ ಹೇಳಲಾಗದೆ ಸುಲಭವಾಗಿ ವಿಕೆಟ್ ಕೈಚೆಲ್ಲಿತು. ತಂಡದ ಮುಂಚೂಣಿ ಬೌಲರ್ ಭುವನೇಶ್ವರ್ ಕುಮಾರ್ ಇಲ್ಲದ ಹೊರತಾಗಿಯೂ ಸನ್‌ರೈಸರ್ಸ್ ಬೌಲಿಂಗ್ ಸಶಕ್ತತೆಯಿಂದ ಕೂಡಿದ್ದುದು ಕೂಡ ಗಮನಾರ್ಹ. ವಿಶೇಷವಾಗಿ ಆಫ್ಘನ್ ಬೌಲರ್ ರಶೀದ್ ಖಾನ್ ಪ್ರಭಾವಿ ಬೌಲಿಂಗ್ ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್‌ಗೆ ಪೆಟ್ಟುನೀಡಿತು. ನಾಲ್ಕು ಓವರ್‌ಗಳಲ್ಲಿ ಅವರು ಕೇವಲ ೧೩ ರನ್ ನೀಡಿದ್ದಲ್ಲದೆ, ಒಂದು ವಿಕೆಟ್ ಅನ್ನೂ ಉರುಳಿಸಿದರು. ೧೮ ಡಾಟ್ ಬಾಲ್‌ಗಳನ್ನು ಎಸೆದ ಅವರು, ವಿಶೇಷ ಗೂಗ್ಲಿ ಎಸೆತಗಳಿಂದ ಮುಂಬೈ ಬ್ಯಾಟ್ಸ್‌ಮನ್‌ಗಳಿಗೆ ಉರುಳಾದರು.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: ೨೦ ಓವರ್‌ಗಳಲ್ಲಿ ೧೪೭/೮ (ಎವಿನ್ ಲೆವಿಸ್ ೨೯; ರಶೀದ್ ಖಾನ್ ೧೩ಕ್ಕೆ ೧) ಸನ್‌ರೈಸರ್ಸ್ ಹೈದರಾಬಾದ್: ೨೦ ಓವರ್‌ಗಳಲ್ಲಿ ೧೫೧/೯ (ಶಿಖರ್ ಧವನ್ ೪೫, ದೀಪಕ್ ಹೂಡಾ ಅಜೇಯ ೩೨; ಮಯಾಂಕ್ ಮಾರ್ಕಂಡೆ ೨೩ಕ್ಕೆ ೪, ಮುಸ್ತಾಫಿಜುರ್ ರೆಹಮಾನ್ ೨೪ಕ್ಕೆ ೩) ಫಲಿತಾಂಶ: ಸನ್‌ರೈಸರ್ಸ್ ಹೈದರಾಬಾದ್‌ಗೆ ೧ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ರಶೀದ್ ಖಾನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More