ಮೇರಿಯೊಂದಿಗೆ ಗೋಲ್ಡ್ ಕೋಸ್ಟ್‌ನಲ್ಲಿ ಪದಕಗಳ ಸುರಿಮಳೆ ಸುರಿಸಿದ ಭಾರತ 

ಮೊಟ್ಟಮೊದಲ ಕಾಮನ್ವೆಲ್ತ್ ಚಿನ್ನದ ಪದಕಕ್ಕೆ ಮೇರಿ ಚುಂಬಿಸುವುದರೊಂದಿಗೆ ಶುರುವಾದ ಶನಿವಾರದ (ಏ.೧೪) ಪದಕ ಬೇಟೆ ಕಳೆದ ೯ ದಿನಗಳಿಗಿಂತಲೂ ಅತಿದೊಡ್ಡ ಸಾಧನೆ ಎನಿಸಿತು. ೮ ಚಿನ್ನ ಸೇರಿ ೧೭ ಪದಕಗಳನ್ನು ಗಳಿಸಿದ ಭಾರತ, ಹಾಕಿಯಲ್ಲಿ ಮಾತ್ರ ಎರಡೂ ವಿಭಾಗಗಳಲ್ಲಿ ಸೋತು ನಿರಾಸೆ ಅನುಭವಿಸಿತು

೨೦೧೨ರ ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ಕಂಚು ಗೆಲ್ಲುತ್ತಿದ್ದಂತೆ ಬಹುತೇಕ ಮೇರಿ ವೃತ್ತಿಬದುಕಿಗೆ ವಿದಾಯ ಹೇಳುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಭಾರತದ ನಂ.೧ ಮಹಿಳಾ ಬಾಕ್ಸರ್ ಕೆಲ ಕಾಲ ಬಾಕ್ಸಿಂಗ್‌ ರಿಂಗ್‌ನಿಂದ ದೂರ ಇದ್ದರೂ, ಕಳೆದ ವರ್ಷ ನವೆಂಬರ್‌ನಲ್ಲಿ ವಿಯೆಟ್ನಾಂನಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ತನ್ನಲ್ಲಿನ ಬಾಕ್ಸಿಂಗ್ ಮೋಹ ಇನ್ನೂ ಕುಂದಿಲ್ಲ ಎಂದಿದ್ದರು. ಇದೀಗ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಹೊತ್ತಿದ್ದ ಮೇರಿ ಕೋಮ್ ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

೩೫ರ ಹರೆಯದ ಮೇರಿ ಕೋಮ್ ಕಳೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದರೂ, ಅದಕ್ಕೆ ಅರ್ಹತೆ ಪಡೆದಿರಲಿಲ್ಲ. ಈ ಎಲ್ಲದರ ವೈಫಲ್ಯವನ್ನು ಅವರು ಏಷ್ಯಾ ಚಾಂಪಿಯನ್‌ಶಿಪ್ ಮತ್ತು ಚೊಚ್ಚಲ ಇಂಡಿಯನ್ ಓಪನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು ಇದೀಗ ಕಾಮನ್ವೆಲ್ತ್ ಕೂಟದಲ್ಲಿ ಮೆಟ್ಟಿನಿಂತಿದ್ದಾರೆ. ಅಂದಹಾಗೆ, ಪ್ರಸ್ತುತ ಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನವಿದು. ಶುಕ್ರವಾರ (ಏ.೧೪) ಭಾರತದ ಮೂವರು ಬಾಕ್ಸರ್‌ಗಳು ಕಂಚಿನ ಪದಕಕ್ಕೆ ತೃಪ್ತರಾಗಿದ್ದರು.

ಸಮಾರೋಪದಲ್ಲಿ ಧ್ವಜಧಾರಿ: ಅಂದಹಾಗೆ ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟಕ್ಕೆ ಮೇರಿ ಅರ್ಹತೆ ಪಡೆದಿರಲಿಲ್ಲ. ಆಯ್ಕೆ ಟ್ರಯಲ್ಸ್‌ನಲ್ಲಿ ಪಿಂಕಿ ಜಂಗ್ರಾ ವಿರುದ್ಧದ ಹಣಾಹಣಿಯಲ್ಲಿ ಅವರು ಸೋತದ್ದು ಇದಕ್ಕೆ ಕಾರಣವಾಗಿತ್ತು. ಆದರೀಗ ಆ ನಿರಾಸೆಯನ್ನೂ ಗೋಲ್ಡ್ ಕೋಸ್ಟ್‌ನಲ್ಲಿ ಸ್ವರ್ಣ ಗೆಲ್ಲುವ ಮೂಲಕ ಮೇರಿ ಹೋಗಲಾಡಿಸಿದರು. ಏತನ್ಮಧ್ಯೆ, ಭಾನುವಾರ ನಡೆಯಲಿರುವ ಕೂಟದ ಸಮಾರೋಪದಲ್ಲಿ ಅವರನ್ನು ಭಾರತ ತಂಡದ ಧ್ವಜಧಾರಿಯನ್ನಾಗಿ ನಿಯೋಜಿಸಲಾಗಿದ್ದು, ಭಾರತೀಯ ನಿಯೋಗವನ್ನು ಮುನ್ನಡೆ ಅವರು ಪಥಸಂಚಲನದಲ್ಲಿ ಮುನ್ನಡೆಸಲಿದ್ದಾರೆ.

ಅವಿರೋಧ ಗೆಲುವು: ಅಂದಹಾಗೆ, ಇಂದು ನಡೆದ ಮಹಿಳೆಯರ ೪೫-೪೮ ಕೆಜಿ ವಿಭಾಗದ ಫೈನಲ್ ಬೌಟ್‌ನಲ್ಲಿ ಮೇರಿ ಅವಿರೋಧ ಗೆಲುವು ಸಾಧಿಸಿದರು. ಅಂತಿಮ ಸುತ್ತಿನಲ್ಲಿ ಆಕೆ ಸೆಣಸಿದ್ದು ಉತ್ತರ ಐರ್ಲೆಂಡ್‌ನ ಕ್ರಿಸ್ಟಿನಾ ಒ'ಹಾರ ವಿರುದ್ಧ. ಅನುಭವಿ ಬಾಕ್ಸರ್ ಮೇರಿಗೆ ಸರಿಸಾಟಿ ಪ್ರದರ್ಶನ ನೀಡಲು ವಿಫಲವಾದ ಕ್ರಿಸ್ಟಿನಾ ತಡಬಡಾಯಿಸಿದರು. ಆಕರ್ಷಕ ಪಂಚ್ ಮತ್ತು ಶ್ರೇಷ್ಠ ತಾಂತ್ರಿಕ ಪ್ರದರ್ಶನ ನೀಡಿದ ಮೇರಿ ಕೋಮ್ ೩೦-೨೭, ೩೦-೨೭, ೨೯-೨೮, ೩೦-೨೭, ೨೦-೨೭ರಿಂದ ಅವಿರೋಧವಾಗಿ ತೀರ್ಪುಗಾರರ ಮೆಚ್ಚುಗೆ ಪಡೆದು ಜಯಭೇರಿ ಬಾರಿಸಿದರು.

ಇದನ್ನೂ ಓದಿ : ಗೋಲ್ಡ್ ಕೋಸ್ಟ್‌ನಲ್ಲಿ ಮುದಗೊಳಿಸಿದ ಸಾಧಕರ ಮಧ್ಯೆ ಮತ್ತೆ ಎದುರಾದ ಮುಜುಗರ

ಸ್ಫೂರ್ತಿಯಾದ ಮೇರಿ: ಅಂದಹಾಗೆ, ಕಳೆದ ಒಂಬತ್ತು ದಿನಗಳಿಂದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಾ ಬಂದ ಇಪ್ಪತ್ತೊಂದನೇ ಕಾಮನ್ವೆಲ್ತ್ ಕ್ರೀಡಾಕೂಟದ ಆಟೋಟಕ್ಕೆ ಇಂದು ಅಧಿಕೃತ ತೆರೆಬೀಳಲಿದೆ. ಭಾನುವಾರ (ಏ.೧೫) ಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ಕೊನೆಯ ದಿನ ಭಾರತ ಇನ್ನಷ್ಟು ಪದಕ ಗೆಲ್ಲಲು ಮೇರಿ ಸ್ಫೂರ್ತಿಯಾದರು. ಟೇಬಲ್ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ ಫೈನಲ್‌ಗೆ ತಲುಪಿದ್ದು, ಕುಸ್ತಿ ಹಾಗೂ ಬ್ಯಾಡ್ಮಿಂಟನ್ ಮತ್ತು ಶೂಟಿಂಗ್ ವಿಭಾಗದಲ್ಲಿಯೂ ಭಾರತ ಚಿನ್ನ ಗೆಲ್ಲುವ ಅವಕಾಶವಿತ್ತಾದ್ದರಿಂದ ಮೇರಿ ಕೊನೆಯ ದಿನದಂದು ಪದಕ ಬೇಟೆಯಲ್ಲಿರುವ ಭಾರತೀಯ ಅಥ್ಲೀಟ್‌ಗಳಿಗೆ ಸ್ಫೂರ್ತಿ ತುಂಬಿದರು.

ಮೂರನೇ ಸ್ಥಾನ ಭದ್ರ: ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದ ಪದಕ ಸಾಧನೆಯನ್ನು ಈಗಾಗಲೇ ಮೀರಿ ನಿಂತಿರುವ ಭಾರತ, ಒಟ್ಟಾರೆ ೭೧ ರಾಷ್ಟ್ರಗಳಿದ್ದ ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮೇರಿಯ ಚಿನ್ನದ ಸಾಧನೆಯೊಂದಿಗೆ ಭಾರತ ಇಲ್ಲೀವರೆಗೆ ೧೯ ಸ್ವರ್ಣ, ೧೨ ಬೆಳ್ಳಿ, ೧೪ ಕಂಚು ಸೇರಿದ ೪೫ ಪದಕಗಳನ್ನು ಗಳಿಸಿದೆ. ಇತ್ತ, ಆತಿಥೇಯ ಆಸ್ಟ್ರೇಲಿಯಾ ಎಂದಿನ ಪಾರಮ್ಯದೊಂದಿಗೆ ಮೊದಲ ಸ್ಥಾನ ಪಡೆದಿದೆ. ಅದು ಇಲ್ಲೀವರೆಗೆ ೬೭ ಚಿನ್ನ, ೫೦ ಬೆಳ್ಳಿ, ೫೪ ಕಂಚು ಸೇರಿದ ೧೭೧ ಪದಕಗಳನ್ನು ಕಲೆಹಾಕಿದೆ. ಆಸೀಸ್‌ಗೆ ಪ್ರತಿ ಬಾರಿ ಪ್ರತಿಸ್ಪರ್ಧೆ ಒಡ್ಡುವ ಇಂಗ್ಲೆಂಡ್, ೩೪ ಚಿನ್ನ, ೩೫ ಬೆಳ್ಳಿ ಹಾಗೂ ೩೬ ಕಂಚು ಸೇರಿದ ೧೦೫ ಪದಕಗಳನ್ನು ಗಳಿಸಿ ಎರಡನೇ ಸ್ಥಾನ ಕಾಯ್ದುಕೊಂಡಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More