ರಾಷ್ಟ್ರೀಯ ದಾಖಲೆಯೊಂದಿಗೆ ಗೋಲ್ಡ್ ಕೋಸ್ಟ್‌ನಲ್ಲಿ ಇತಿಹಾಸ ಬರೆದ ಚೋಪ್ರಾ

ತನ್ನ ಮೇಲಿನ ನಿರೀಕ್ಷೆಯನ್ನು ನೀರಜ್ ಚೋಪ್ರಾ ಉಳಿಸಿಕೊಂಡಿದ್ದಾರೆ. ಗೋಲ್ಡ್ ಕೋಸ್ಟ್‌ಗೆ ತೆರಳುವ ಮುಂಚೆ ಇಪ್ಪತ್ತು ದಿನಗಳಿಗೂ ಮೇಲ್ಪಟ್ಟು ಜರ್ಮನಿಯಲ್ಲಿ ಸತತ ಅಭ್ಯಾಸ ನಡೆಸಿದ್ದ ಭಾರತದ ಈ ಯುವ ಅಥ್ಲೀಟ್, ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನ ತಂದಿತ್ತರು

ಗೋಲ್ಡ್ ಕೋಸ್ಟ್‌ನ ಕರಾರಾ ಕ್ರೀಡಾಂಗಣದಲ್ಲಿ ಶನಿವಾರ (ಏ.೧೪) ನಡೆದ ಅಥ್ಲೆಟಿಕ್ಸ್‌ ವಿಭಾಗದ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ನಿರೀಕ್ಷಿತ ಸ್ವರ್ಣಮಾಲೆ ಧರಿಸಿದರು. ೮೬.೪೭ ಮೀಟರ್ ಶ್ರೇಷ್ಠ ಸಾಧನೆಯೊಂದಿಗೆ ಮೊದಲ ಸ್ಥಾನ ಪಡೆದ ನೀರಜ್ ಚೋಪ್ರಾ, ಆ ಮೂಲಕ ಚೊಚ್ಚಲ ಕಾಮನ್ವೆಲ್ತ್ ಕೂಟದಲ್ಲೇ ಮಿಂಚು ಹರಿಸಿದರು. ಇನ್ನು, ಕಾಮನ್ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಅಭಿದಾನಕ್ಕೂ ನೀರಜ್ ಪಾತ್ರರಾದರು.

ಪದಕ ಸುತ್ತಿನ ಮೊದಲ ಯತ್ನದಲ್ಲಿ ೮೫.೫೦ ಮೀಟರ್ ದೂರದವರೆಗೆ ಜಾವೆಲಿನ್ ಎಸೆದ ಚೋಪ್ರಾ, ಚಿನ್ನ ಗೆಲ್ಲುವುದನ್ನು ಖಚಿತಪಡಿಸಿದ್ದರು. ಆದರೆ, ಅವರ ಎರಡನೇ ಯತ್ನ ಮೊದಲಿನಷ್ಟು ಮೊನಚಾಗಿರಲಿಲ್ಲ. ಈ ಬಾರಿ ಅವರು ೮೪.೭೮ ಮೀಟರ್‌ವರೆಗಷ್ಟೇ ಸಾಮರ್ಥ್ಯ ಮೆರೆದರು. ಆದರೆ, ನಾಲ್ಕನೇ ಯತ್ನದಲ್ಲಿ ಚೋಪ್ರಾ ಶ್ರೇಷ್ಠ ಪ್ರದರ್ಶನ ನೀಡಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮತ್ತೋರ್ವ ಅಥ್ಲೀಟ್ ವಿಪಿನ್ ಕಶಾನ ೭೭.೮೭ ಮೀಟರ್ ಸಾಧನೆಯಿಂದ ಐದನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರು. ಇನ್ನುಳಿದಂತೆ, ಜಾವೆಲಿನ್ ಎಸೆತದಲ್ಲಿ ಆಸ್ಟ್ರೇಲಿಯಾದ ಹ್ಯಾಮಿಶ್ ಪೀಕಾಕ್ ಬೆಳ್ಳಿ ಗೆದ್ದರೆ, ಗ್ರೆನೇಡಾದ ಆಂಡರ್ಸನ್ ಪೀಟರ್ಸ್ ೮೨.೨೦ ಮೀಟರ್ ಸಾಧನೆಯಿಂದ ಕಂಚಿನ ಪದಕಕ್ಕೆ ತೃಪ್ತರಾದರು.

ಅಂಜು ಮಾತನ್ನು ನಿಜಮಾಡಿದ ಚೋಪ್ರಾ: ಭಾರತದ ಮಾಜಿ ಅಥ್ಲೀಟ್ ಅಂಜು ಬಾಬ್ಬಿ ಜಾರ್ಜ್, “ನೀರಜ್ ಭವಿಷ್ಯದಲ್ಲಿ ಭಾರತದ ಉತ್ತಮ ಅಥ್ಲೀಟ್ ಆಗಿ ರೂಪುಗೊಳ್ಳಲಿದ್ದಾರೆ,” ಎಂದು ನುಡಿದ ಮಾತನ್ನು ೨೦ರ ಹರೆಯದ ಚೋಪ್ರಾ ನಿಜವಾಗಿಸಿದ್ದಾರೆ. ಇನ್ನು, ನೀರಜ್ ಅವರ ಮಾಜಿ ಕೋಚ್ ಗ್ಯಾರಿ ಕ್ಲೆವರ್ಟ್ ಕೂಡ ಚೋಪ್ರಾ ಅವರಲ್ಲಿನ ಅಥ್ಲೆಟಿಕ್ಸ್ ಸಾಮರ್ಥ್ಯವನ್ನು ಮುಂಚೆಯೇ ನಿರ್ಧರಿಸಿದ್ದರು. "ತಲೆಮಾರಿನಲ್ಲಿ ಒಮ್ಮೆ ಕಂಡುಬರುವ ಪ್ರತಿಭೆ,” ಎಂದು ಚೋಪ್ರಾ ಅವರನ್ನು ಕ್ಲೆವರ್ಟ್ ಬಣ್ಣಿಸಿದ್ದರು.

ಇದನ್ನೂ ಓದಿ : ಜಾವೆಲಿನ್ ಪಟು ನೀರಜ್ ಹಾಗೂ ಪುರುಷರ ರಿಲೇ ತಂಡ ಫೈನಲ್‌ ಪ್ರವೇಶ

ಅರ್ಹತೆಯ ಹಾದಿ: ಇದದೇ ಮಾರ್ಚ್‌ನಲ್ಲಿ ಪಟಿಯಾಲದಲ್ಲಿ ನಡೆದಿದ್ದ ಹಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೆಡರೇಷನ್ ಕಪ್ ಸ್ಪರ್ಧಾವಳಿಯ ತನ್ನ ಆರನೇ ಯತ್ನದಲ್ಲಿ ೮೫.೯೪ ಮೀಟರ್ ಸಾಧನೆ ಮೆರೆಯುವುದರೊಂದಿಗೆ ನೀರಜ್ ಗೋಲ್ಡ್ ಕೋಸ್ಟ್‌ಗೆ ಅರ್ಹತೆ ಪಡೆದಿದ್ದರು. ಇದಕ್ಕೂ ಮುನ್ನ ಇಂಡಿಯನ್ ಗ್ರ್ಯಾನ್ ಪ್ರೀ ಅಥ್ಲೆಟಿಕ್ಸ್ ಕೂಟದಲ್ಲಿ ನೀರಜ್ ಕಾಮನ್ವೆಲ್ತ್ ಕೂಟಕ್ಕೆ ಬೇಕಾಗುವ ಅರ್ಹತಾ ಗೆರೆಯನ್ನು ತಲುಪಿದ್ದರಾದರೂ, ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ, ಫೆಡರೇಷನ್‌ ಕಪ್‌ನಲ್ಲಿ ಶ್ರೇಷ್ಠ ಸಾಧನೆ ನೀಡಿದವರನ್ನಷ್ಟೇ ಕಾಮನ್ವೆಲ್ತ್ ಕೂಟಕ್ಕೆ ಪರಿಗಣಿಸಲಾಗುವುದು ಎಂದು ಕಡ್ಡಾಯವಾಗಿ ತಿಳಿಸಿತ್ತು.

ಚೋಪ್ರಾ ಹಿಂದಿನ ಸಾಧನೆ: ಯುವ ಅಥ್ಲೀಟ್ ನೀರಜ್ ಚೋಪ್ರಾ, ಭುವನೇಶ್ವರದಲ್ಲಿ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಅದಾದ ಬಳಿಕ ಡೈಮಂಡ್ ಲೀಗ್ ಸರಣಿಯಲ್ಲಿ ಭಾಗವಹಿಸಿದ್ದ ಅವರು, ಸ್ಪರ್ಧೆಯಲ್ಲಿದ್ದವರ ಪೈಕಿ ಐದನೇ ಸ್ಥಾನ ಗಳಿಸಿದ್ದರು. ಆದರೆ, ಲಂಡನ್‌ನಲ್ಲಿ ನಡೆದ ವಿಶ್ಚ ಚಾಂಪಿಯನ್‌ಶಿಪ್‌ನಲ್ಲಿ ಅವರು ಕೇವಲ ೮೨.೨೬ ಮೀಟರ್‌ವರೆಗೆ ಜಾವೆಲಿನ್ ಎಸೆದು ನಿರಾಸೆ ಮೂಡಿಸಿದ್ದರು.

ಫೆಬ್ರವರಿ ಮೊದಲ ವಾರದಲ್ಲಿ ಜರ್ಮನಿಯ ಆಫೆನ್‌ಬರ್ಗ್‌ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ೮೨.೮೦ ಮೀಟರ್ ಸಾಧನೆಯಿಂದ ಬೆಳ್ಳಿ ಗೆದ್ದಿದ್ದರು. ವಿಶ್ವ ಚಾಂಪಿಯನ್ ಹಾಗೂ ಸ್ಥಳೀಯ ಅಥ್ಲೀಟ್ ಜೊಹಾನ್ನೆಸ್ ವೆಟರ್ ನಂತರದ ಸ್ಥಾನ ಪಡೆದಿದ್ದ ನೀರಜ್ ಚೋಪ್ರಾ, ಸಹಜವಾಗಿಯೇ ಗೋಲ್ಡ್ ಕೋಸ್ಟ್‌ನಲ್ಲಿ ಚಿನ್ನ ಗೆಲ್ಲುವ ಭರವಸೆಯಲ್ಲಿದ್ದರು.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More