ಬಂಗಾರಕ್ಕೆ ಪಟ್ಟು ಹಾಕಿದ ಸುಮಿತ್‌, ವಿನೇಶ್; ಸಾಕ್ಷಿ, ಸೊಮ್‌ವೀರ್‌ಗೆ ಕಂಚು

ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಭಾರತ ಮತ್ತಷ್ಟು ಪದಕಗಳನ್ನು ಗೆದ್ದಿದೆ. ವಿನೇಶ್ ಫೋಗಟ್ ಮತ್ತು ಸುಮಿತ್ ಮಲಿಕ್ ಸ್ವರ್ಣ ಸಾಧನೆ ಮಾಡಿದರೆ, ಸಾಕ್ಷಿ ಮಲಿಕ್ ಮತ್ತು ಸೊಮ್‌ವೀರ್ ಕಂಚಿನ ಪದಕಕ್ಕೆ ತೃಪ್ತರಾದರು. ಶನಿವಾರ ಮಧ್ಯಾಹ್ನದ ಹೊತ್ತಿಗೇ ಭಾರತ ೬ ಚಿನ್ನ ಜಯಿಸಿತು

ಗೋಲ್ಡ್ ಕೋಸ್ಟ್‌ನಲ್ಲಿನ ೨೧ನೇ ಕಾಮನ್ವೆಲ್ತ್ ಕ್ರೀಡಾಕೂಟದ ಸಮಾರೋಪದ ಮುನ್ನಾದಿನವಾದ ಶನಿವಾರ (ಏ.೧೪) ಭಾರತ ಮತ್ತಷ್ಟು ಪದಕಗಳೊಂದಿಗೆ ಬೀಗಿತು. ಮುಖ್ಯವಾಗಿ, ವಿವಿಧ ವಿಭಾಗಗಳಲ್ಲಿ ಒಟ್ಟು ಆರು ಸ್ವರ್ಣ ಪದಕಗಳನ್ನು ಗೆದ್ದದ್ದು ಗಮನೀಯ ಸಂಗತಿ. ದಿನದ ಆರಂಭದಲ್ಲಿ ಬಾಕ್ಸಿಂಗ್‌ನಲ್ಲಿ ಮೇರಿ ಕೋಮ್ ಚಿನ್ನ ಗೆದ್ದರೆ, ಬಳಿಕ ಗೌರವ್ ಸೋಲಂಕಿ ಕೂಡ ಬಂಗಾರದ ಬೇಟೆಯಾಡಿದರು. ಇತ್ತ, ಶೂಟಿಂಗ್‌ನಲ್ಲಿ ಸಂಜೀವ್ ರಜಪೂತ್, ಅಥ್ಲೆಟಿಕ್ಸ್‌ನಲ್ಲಿ ಜಾವೆಲಿನ್ ಪಟು ನೀರಜ್ ಚೋಪ್ರಾ ಸ್ವರ್ಣ ಸಾಧಕರೆನಿಸಿದರೆ, ಕುಸ್ತಿಯಲ್ಲಿ ಸುಮತ್ ಮಲಿಕ್ ಮತ್ತು ಮಹಿಳೆಯರ ಕುಸ್ತಿ ವಿಭಾಗದಲ್ಲಿ ಒಲಿಂಪಿಯನ್ ವಿನೇಶ್ ಫೋಗಟ್ ಚಿನ್ನದ ಪದಕ ಜಯಿಸಿದರು.

ಅಂದಹಾಗೆ, ಕುಸ್ತಿ ವಿಭಾಗದಲ್ಲಿಯೇ ಎರಡು ಸ್ವರ್ಣ ಸೇರಿ ಒಟ್ಟು ಐದು ಪದಕಗಳು ಭಾರತದ ಮಡಿಲಿಗೆ ಬಿದ್ದವು. ಇದಕ್ಕೂ ಮುನ್ನ ಕುಸ್ತಿ ಅಖಾಡದಲ್ಲಿ ಭಾರತ ಒಟ್ಟು ಎಂಟು ಪದಕಗಳನ್ನು ಜಯಿಸಿತ್ತು. ಕುಸ್ತಿ ಸ್ಪರ್ಧೆಯ ಮೊದಲ ದಿನವಾದ ಗುರುವಾರದಂದು ರಾಹುಲ್ ಅವಾರಿ ಮತ್ತು ಸುಶೀಲ್ ಕುಮಾರ್ ಸ್ವರ್ಣ ಪದಕ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಬಬಿತಾ ಫೋಗಟ್ ಬೆಳ್ಳಿ ಗೆದ್ದುಕೊಂಡರು. ಅಂತೆಯೇ, ಅದೇ ದಿನ ಕಿರಣ್ ಕಂಚಿನ ಪದಕ ಜಯಿಸಿದ್ದರು.

ಇನ್ನು ಎರಡನೇ ದಿನವಾದ ಶುಕ್ರವಾರ (ಏ.೧೨) ಬಜರಂಗ್ ಪುನಿಯಾ ಚಿನ್ನ ಗೆದ್ದರೆ, ಪೂಜಾ ಧಂಡಾ ಹಾಗೂ ಮೌಸಮ್ ಖತ್ರಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ವಿಭಾಗದ ಫೈನಲ್‌ನಲ್ಲಿ ಸೋತು ರಜತ ಪದಕ ಜಯಿಸಿದ್ದರು. ಅಂತೆಯೇ ದಿವ್ಯಾ ಕಾಕ್ರನ್ ಕೂಡ ಕಂಚಿನ ಪದಕ ಜಯಿಸಿದ್ದರು. ಶನಿವಾರದ ಸಾಧನೆಯಿಂದಾಗಿ ಕುಸ್ತಿಪಟುಗಳು ಒಟ್ಟಾರೆ ಹದಿಮೂರು ಪದಕಗಳನ್ನು ಗೆದ್ದಂತಾಗಿದೆ.

ಸುಮಿತ್‌ ಜಿದ್ದಾಜಿದ್ದಿನ ಕದನ

ಪುರುಷರ ೧೨೫ ಕೆಜಿ ವಿಭಾಗದ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಸುಮಿತ್ ಮಲಿಕ್ ರೋಚಕ ಗೆಲುವಿನೊಂದಿಗೆ ಚಿನ್ನದ ಪದಕ ಜಯಿಸಿದರು. ನೈಜೀರಿಯಾದ ಸಿನಿವಿ ಬೋಲ್ಟಿಕ್ ವಿರುದ್ಧದ ಹಣಾಹಣಿಯಲ್ಲಿ ಸೆಣಸದೆಯೇ ಸುಮಿತ್ ಚಿನ್ನ ಗೆದ್ದದ್ದು ವಿಶೇಷ. ಗಾಯದ ನಿಮಿತ್ತ ಬೋಲ್ಟಿಕ್ ಫೈನಲ್ ಬೌಟ್‌ನಿಂದ ಹಿಂದೆ ಸರಿದದ್ದು ಸುಮಿತ್ ಸ್ವರ್ಣ ಸಾಧನೆಗೆ ರಹದಾರಿ ನಿರ್ಮಿಸಿಕೊಟ್ಟಿತು.

ಇದಕ್ಕೂ ಮುನ್ನ ಸುಮಿತ್ ಪಾಕಿಸ್ತಾನದ ತಯಾಬ್ ರಾಜಾ ವಿರುದ್ಧದ ಅತ್ಯಂತ ನಾಟಕೀಯತೆಯಿಂದ ಕೂಡಿದ್ದ ಬೌಟ್‌ನಲ್ಲಿ ೧೦-೪ರಿಂದ ಜಯ ಪಡೆದರು. ಮೊದಲಿಗೆ, ಭಾರತೀಯ ಪೈಲ್ವಾನನ ವಿರುದ್ಧ ೨-೩ ಮುನ್ನಡೆಯಲ್ಲಿದ್ದ ರಾಜಾ, ಬಳಿಕ ಸುಮಿತ್ ಅವರ ಪ್ರಬಲ ಪ್ರತಿರೋಧಕ್ಕೆ ತತ್ತರಿಸಿದರು. ಸಾಹಸಮಯ ಸೆಣಸಾಟದಲ್ಲಿ ರಾಜಾ ತನ್ನ ಕಾಲನ್ನು ಆಕ್ರಮಿಸಿದಾಗ ಅಖಾಡದ ಗೆರೆಯಾಚೆಗೆ ಸರಿಯದಂತೆ ಎಚ್ಚರ ವಹಿಸಿದ ಸುಮಿತ್, ಆನಂತರದಲ್ಲಿ ಬೃಹತ್ ಅಂತರದಿಂದ ಗೆಲುವು ಸಾಧಿಸಿದರು.

ಪಾಕ್ ಪೈಲ್ವಾನನ ವಿರುದ್ಧ ಕಾದಾಡುವುದಕ್ಕಿಂತ ಮುಂಚಿನ ಬೌಟ್‌ನಲ್ಲಿಯೂ ಸುಮಿತ್ ಇದೇ ರೀತಿ ಆರಂಭಿಕ ಹಿನ್ನಡೆಯನ್ನು ಮೆಟ್ಟಿನಿಂತು ಗೆಲುವು ಪಡೆದಿದ್ದರು. ಕೆನಡಾ ರೆಸ್ಲರ್ ಕೊರೆ ಜಾರ್ವಿಸ್ ಶುರುವಿನಲ್ಲಿ ೨-೦ ಮುನ್ನಡೆ ಕಂಡಿದ್ದರು. ಆದರೆ, ಒಡನೆಯೇ ತಿರುಗಿಬಿದ್ದ ಸುಮಿತ್ ಅಂತರವನ್ನು ೩-೨ಕ್ಕೆ ತಂದರು. ಆದರೆ, ಜಾರ್ವಿಸ್ ಮತ್ತೊಂದು ಪಾಯಿಂಟ್ಸ್ ಪಡೆಯುತ್ತಿದ್ದಂತೆ ಇಬ್ಬರೂ ಸಮಬಲ ಸಾಧಿಸಿದರು. ಆದರೆ, ಕುಸ್ತಿ ಮುಗಿಯುವ ಕೊನೇ ಕ್ಷಣಗಳಲ್ಲಿ ಜಾರ್ವಿಸ್ ಅವರನ್ನು ಕೊಡವಿದ ಸುಮಿತ್ ಒಟ್ಟು ೬-೪ ಪಾಯಿಂಟ್ಸ್‌ಗಳ ಅಂತರದಲ್ಲಿ ಜಯಿಸಿದರು.

ಇದನ್ನೂ ಓದಿ : ಕಾಮನ್ವೆಲ್ತ್ ಕೂಟದಲ್ಲಿ ಹ್ಯಾಟ್ರಿಕ್ ಮೆರೆದ ಜಗಜಟ್ಟಿ ಸುಶೀಲ್ ಕುಮಾರ್

ಆಕ್ರಮಣಕಾರಿ ವಿನೇಶ್‌

ಮೂರೂ ಸುತ್ತಿನ ಬೌಟ್‌ಗಳಲ್ಲಿ ಅಆಕ್ರಮಣಕಾರಿಯಾಗಿ ಕಾದಾಡಿದ ವಿನೇಶ್ ಫೋಗಟ್ ಮಹಿಳೆಯರ ೫೦ ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಅತೀವ ಹೊಯ್ದಾಟದಿಂದ ಕೂಡಿದ್ದ ಮೊದಲ ಬೌಟ್‌ನಲ್ಲಿ ವಿನೇಶ್ ಸಾಕಷ್ಟು ಬೆವರು ಹರಿಸಬೇಕಾಯಿತು. ನೈಜೀರಿಯಾದ ಮಿಸೆನಿ ಜೆನೆಸಿಸ್ ಅವರು ಒಡ್ಡಿದ ಕಠಿಣ ಕಾದಾಟದಲ್ಲಿ ೬-೫ರಿಂದ ಮಲಿಕ್ ಜಯ ಪಡೆದರು. ಇಬ್ಬರ ನಡುವಿನ ಪ್ರಬಲ ಕಾದಾಟದಿಂದಾಗಿ ಈ ಬೌಟ್ ೬ ನಿಮಿಷಗಳವರೆಗೆ ನಡೆಯಿತು.

ಇನ್ನು, ಫೈನಲ್‌ ಕೂಡ ವಿನೇಶ್ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಿತ್ತು. ಜೆಸ್ಸಿಕಾ ಮೆಕ್‌ಡೊನಾಲ್ಡ್ ಅವರ ವಿರುದ್ಧ ಆಕ್ರಮಣಕಾರಿಯಾಗಿ ಸೆಣಸಿದ ವಿನೇಶ್ ಚಾಂಪಿಯನ್ ಆದರು. ಅಂದಹಾಗೆ, ರಿಯೊ ಒಲಿಂಪಿಕ್ಸ್ ಕೂಟದ ಮೊದಲ ಬೌಟ್‌ನಲ್ಲೇ ಗಾಯಗೊಂಡು ಸ್ಟ್ರೆಚರ್ ಮೂಲಕ ಕುಸ್ತಿ ಅಖಾಡದಿಂದ ತೆರಳಿದ್ದ ವಿನೇಶ್ ಈ ಬಾರಿ ಚಿನ್ನದ ನಗೆಬೀರಿದರು.

ಮಾಜಿ ವಿಶ್ವ ಚಾಂಪಿಯನ್ ಕೆನಡಾದ ಜೆಸ್ಸಿಕಾ ಶಕ್ತಿಮೀರಿ ಹೋರಾಟ ನಡೆಸಿದರು. ಆದರೆ, ೩೦ ಸೆಕೆಂಡುಗಳಲ್ಲೇ ಆಕೆಯನ್ನು ಅನಾಮತು ಎತ್ತಿ ಹೆಗಲಿಗೆ ಹಾಕಿಕೊಂಡ ವಿನೇಶ್, ಮ್ಯಾಟ್‌ಗೆ ಒರಗಿಸಿದರು. ಇದರಿಂದ ಒಮ್ಮೆಲೇ ೪ ಪಾಯಿಂಟ್ಸ್ ಪಡೆದ ವಿನೇಶ್, ಮತ್ತೊಮ್ಮೆ ಇಂಥದ್ದೇ ಆಕ್ರಮಣಕಾರಿ ಪ್ರದರ್ಶನದೊಂದಿಗೆ ಮೊದಲ ನಿಮಿಷದಲ್ಲೇ ವಿನೇಶ್ ೮-೦ ಮುನ್ನಡೆ ಪಡೆದರು. ಇತ್ತ, ಎರಡನೇ ಹಂತದ ಬೌಟ್‌ನಲ್ಲಿಯೂ ವಿನೇಶ್ ಆಕ್ರಮಣಕಾರಿ ನಡೆಯಿಂದ ೧೦-೩ ಮುನ್ನಡೆಯೊಂದಿಗೆ ಒಟ್ಟು ೧೩ ಪಾಯಿಂಟ್ಸ್ ಗಳಿಸಿದರು. ಇಬ್ಬರ ನಡುವೆಯೂ ೧೦ ಪಾಯಿಂಟ್ಸ್ ಅಂತರ ಇದ್ದಿದ್ದರಿಂದ ತೀರ್ಪುಗಾರರು ವಿನೇಶ್ ಚಾಂಪಿಯನ್ ಎಂದು ಘೋಷಿಸಿದರು.

ಮತ್ತೆ ಕಂಚು ಪಡೆದ ಸಾಕ್ಷಿ

೨೦೧೬ರ ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಕಂಚು ಗೆದ್ದು ಇತಿಹಾಸ ಸೃಷ್ಟಿಸಿದ್ದ ಸಾಕ್ಷಿ ಮಲಿಕ್, ಗೋಲ್ಡ್ ಕೋಸ್ಟ್‌ನಲ್ಲೂ ಮೂರನೇ ಸ್ಥಾನ ಪಡೆದರು. 62 ಕೆಜಿಯ ನಾರ್ಡಿಕ್ ವಿಭಾಗದ ಸೆಮಿಫೈನಲ್‌ನಲ್ಲಿ ಅವರು ನೈಜೀರಿಯಾದ ಅಮಿನಾತ್ ಆಡೆನಿಯಿ ವಿರುದ್ಧದ ಕಾದಾಟದಲ್ಲಿ ಸಾಕ್ಷಿ ತೀವ್ರ ಹಿನ್ನಡೆ ಅನುಭವಿಸಿದರು. ಶುರುವಿನಿಂದಲೇ ಅಭದ್ರತಾ ಭಾವದಿಂದ ಕೂಡಿದ್ದ ಸಾಕ್ಷಿ, ನೈಜೀರಿಯಾ ಪ್ರತಿಸ್ಪರ್ಧಿಯೊಂದಿಗಿನ ಸೆಣಸಿನಲ್ಲಿ ದಿಟ್ಟತೆ ತೋರಲಿಲ್ಲ.

ಆದಾಗ್ಯೂ ಕೆಲವೊಂದು ಪಾಯಿಂಟ್ಸ್‌ಗಳನ್ನು ಕಲೆಹಾಕುವಲ್ಲಿ ಸಾಕ್ಷಿ ಯಶಸ್ವಿಯಾದರು. ಇತ್ತ, ೩-೪ ಅಂತರದಿಂದ ಕೇವಲ ಒಂದು ಪಾಯಿಂಟ್ಸ್ ಮುನ್ನಡೆಯಲ್ಲಿದ್ದ ಅಡೆನಿಯಿ, ಸಾಕ್ಷಿ ವಿರುದ್ಧ ತಿರುಗಿಬಿದ್ದು ಇನ್ನೆರಡು ಅಂಕಗಳನ್ನು ಕಲೆಹಾಕುವುದರೊಂದಿಗೆ ೬-೩ರಿಂದ ಮುನ್ನಡೆ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕೂಟದಲ್ಲಿ ಬೆಳ್ಳಿ ಗೆದ್ದಿದ್ದ ಸಾಕ್ಷಿ ಮಲಿಕ್, ಈ ಬಾರಿ ಚಿನ್ನ ಗೆಲ್ಲುವ ಆಶೋತ್ತರ ಹೊತ್ತಿದ್ದರಾದರೂ, ಕೊನೆಗೂ ಫಲಕಾರಿಯಾಗಲಿಲ್ಲ.

ಹಿನ್ನಡೆ ಮೆಟ್ಟಿನಿಂತ ಸೊಮ್‌ವೀರ್‌

ಕಂಚು ಪದಕಕ್ಕಾಗಿನ ಇನ್ನೊಂದು ಸೆಣಸಾಟದಲ್ಲಿ ಭಾರತದ ಸೊಮ್‌ವೀರ್ ಆರಂಭದಲ್ಲಿನ ಹಿನ್ನಡೆಯನ್ನು ಮೆಟ್ಟಿನಿಂತು ತೃತೀಯ ಸ್ಥಾನ ಗಳಿಸಿದರು. ಪುರುಷರ ೮೬ ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಕೆನಡಾ ಪೈಲ್ವಾನ ಅಲೆಕ್ಸಾಂಡರ್ ಮೂರೆ ವಿರುದ್ಧ ೭-೩ ಅಂತರದಿಂದ ಗೆಲುವು ಪಡೆದು ತೃತೀಯ ಸ್ಥಾನ ಗಳಿಸಿದರು. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದ ಸೊಮ್‌ವೀರ್ ಬಳಿಕ ಮಿಂಚು ಹರಿಸಿದರು. ಅವರು ಹಾಕಿದ ಪಟ್ಟುಗಳಿಗೆ ಪ್ರತಿ ಹೇಳಲು ಕೆನಡಾ ಪೈಲ್ವಾನನದಿಂದ ಸಾಧ್ಯವಾಗಲಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More