ಸಿಂಗಲ್ಸ್‌ನಲ್ಲೂ ಭಾರತದ ಮುಡಿಗೆ ಚಿನ್ನದ ಕಿರೀಟ ತೊಡಿಸಿದ ಮಣಿಕಾ ಬಾತ್ರಾ

ಟೀಂ ವಿಭಾಗದಲ್ಲಿ ಭಾರತಕ್ಕೆ ಐತಿಹಾಸಿಕ ಸ್ವರ್ಣ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಣಿಕಾ ಬಾತ್ರಾ, ಸಿಂಗಲ್ಸ್‌ನಲ್ಲೂ ಬಂಗಾರ ಬಾಚಿದರು. ಗೋಲ್ಡ್ ಕೋಸ್ಟ್‌ನಲ್ಲಿನ ಭಾರತದ ಸ್ವರ್ಣ ಸಾಧನೆಗೆ ಮತ್ತೊಂದು ಗರಿಮೆ ಮೂಡಿದರೆ, ಪದಕ ಪಟ್ಟಿಯಲ್ಲಿ ಭಾರತ ಅರ್ಧಶತಕ ಬಾರಿಸಿತು

ಭಾರತದ ಪ್ರತಿಭಾನ್ವಿತ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎರಡನೇ ಚಿನ್ನದ ಪದಕ ಪಡೆದರು. ಟೀಂ ವಿಭಾಗದಲ್ಲಿ ನಿರ್ಣಾಯಕ ಆಟವಾಡಿ ಭಾರತದ ಐತಿಹಾಸಿಕ ಸ್ವರ್ಣ ಸಾಧನೆಗೆ ನೆರವಾಗಿದ್ದ ಮಣಿಕಾ ಬಾತ್ರಾ, ಶನಿವಾರ (ಏ.೧೪) ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿಯೂ ವಿಜಯೋತ್ಸವ ಆಚರಿಸಿಕೊಂಡರು. ಈ ಮೂಲಕ ಕಾಮನ್ವೆಲ್ತ್ ಕೂಟದ ಟೇಬಲ್ ಟೆನಿಸ್ ವಿಭಾಗದಲ್ಲಿ ಚಾಂಪಿಯನ್ ಆದ ಭಾರತದ ಮೊಟ್ಟಮೊದಲ ಮಹಿಳಾ ಅಥ್ಲೀಟ್ ಎನಿಸಿ ಚಾರಿತ್ರಿಕ ದಾಖಲೆ ಬರೆದರು.

ಮಣಿಕಾ ಬಾತ್ರಾ ಅವರ ಈ ಸಾಧನೆಯೊಂದಿಗೆ ಭಾರತ ಕೂಟದ ಮುಕ್ತಾಯದ ಹಿಂದಿನ ದಿನದಂದು ಒಂದೇ ದಿನ ವಿವಿಧ ವಿಭಾಗಗಳಲ್ಲಿ ಒಟ್ಟು ಏಳು ಚಿನ್ನದ ಪದಕಗಳನ್ನು ಗೆದ್ದು ಇತಿಹಾಸ ಬರೆಯಿತು. ಇದರೊಂದಿಗೆ ಒಟ್ಟು ೨೪ ಸ್ವರ್ಣ, ೧೪ ಬೆಳ್ಳಿ ಹಾಗೂ ೧೭ ಬೆಳ್ಳಿ ಪದಕಗಳನ್ನು ಒಳಗೊಂಡಂತೆ ಭಾರತ ಒಟ್ಟು ೫೫ ಪದಕಗಳೊಂದಿಗೆ ಪದಕ ಗಳಿಕೆಯಲ್ಲಿ ಅರ್ಧಶತಕ ಬಾರಿಸಿತು.

ಇಂದು ನಡೆದ ಅಂತಿಮ ಸುತ್ತಿನ ಕಾದಾಟದಲ್ಲಿ ಸಿಂಗಪುರದ ಮೆಂಗ್ಯು ಯು ವಿರುದ್ಧದ ನಾಲ್ಕು ಗೇಮ್‌ಗಳ ಕಾದಾಟದಲ್ಲಿ ಮಣಿಕಾ ಬಾತ್ರಾ, ೧೧-೭, ೧೧-೬, ೧೧-೨, ೧೧-೭ರಿಂದ ಜಯ ಪಡೆದರು. ಕಳೆದ ಎರಡೂ ಆವೃತ್ತಿಗಳಲ್ಲಿಯೂ ಚಾಂಪಿಯನ್ ಆಗಿ ಮೆರೆದಾಡಿದ್ದ ಸಿಂಗಪುರ ಆಟಗಾರ್ತಿ ಈ ಬಾರಿ ಹ್ಯಾಟ್ರಿಕ್ ಬಾರಿಸುವ ಗುಂಗಿನಲ್ಲಿದ್ದರು. ಆದರೆ, ಅತ್ಯಮೋಘ ಲಯದಲ್ಲಿದ್ದ ಬಾತ್ರಾ, ಶುರುವಿನಿಂದಲೇ ಮೆಂಗ್ಯುವಿನ ಮೇಲೆ ಒತ್ತಡ ಹೇರಿದರಲ್ಲದೆ, ಅಂತಿಮವಾಗಿ ಆಕೆಯ ಹ್ಯಾಟ್ರಿಕ್ ಕನಸನ್ನು ಭಗ್ನಗೊಳಿಸಿದರು.

ಇದನ್ನೂ ಓದಿ : ಕಾಮನ್ವೆಲ್ತ್ ಗೇಮ್ಸ್ ಟೇಬಲ್ ಟೆನಿಸ್‌: ಬಂಗಾರ ಗೆದ್ದು ಇತಿಹಾಸ ಬರೆದ ಭಾರತ

ಆರಂಭದಲ್ಲೇ ಹಿಡಿತ: ಮೆಂಗ್ಯು ಅತ್ಯಂತ ಅಪಾಯಕಾರಿ ಆಟಗಾರ್ತಿ ಎಂಬುದನ್ನು ಅರಿತಿದ್ದ ಮಣಿಕಾ ಬಾತ್ರಾ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಮೊದಲ ಗೇಮ್‌ನಲ್ಲಿ ೬-೧ ಮುನ್ನಡೆ ಪಡೆದ ೨೨ರ ಹರೆಯದ ಬಾತ್ರಾ ವಿರುದ್ಧ ಪ್ರಬಲವಾಗಿ ತಿರುಗಿಬಿದ್ದ ಮೆಂಗ್ಯು ಅಂತರವನ್ನು ೫-೭ಕ್ಕೆ ತಗ್ಗಿಸಿದರು. ಆದರೆ, ಸೊಗಸಾದ ಫೋರ್‌ಹ್ಯಾಂಡ್ ಶಾಟ್‌ನೊಂದಿಗೆ ಬಾತ್ರಾ ಮೊದಲ ಗೇಮ್ ಅನ್ನು ವಶಕ್ಕೆ ಪಡೆದರು.

ಇತ್ತ, ಎರಡನೇ ಗೇಮ್‌ನಲ್ಲಿಯೂ ವಿಶ್ವದ ೫೮ನೇ ಶ್ರೇಯಾಂಕಿತೆ ಮಣಿಕಾ, ೪-೩ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದರು. ಪ್ರಖರವಾದ ಬ್ಯಾಕ್ ಹ್ಯಾಂಡ್ ಶಾಟ್‌ಗಳಿಂದ ಸಿಂಗಪುರ ಆಟಗಾರ್ತಿಯನ್ನು ತಬ್ಬಿಬ್ಬುಗೊಳಿಸಿದ ಮಣಿಕಾ, ಅಂತ್ಯದವರೆಗೂ ಎಚ್ಚರಿಕೆಯಿಂದ ಸೆಣಸಿದರು. ಬಳಿಕ ನಡೆದ ಮೂರನೇ ಗೇಮ್‌ನಲ್ಲಿ ಇನ್ನಷ್ಟು ಆಕ್ರಮಣಕಾರಿಯಾದ ಮಣಿಕಾ ಬಿಟ್ಟುಕೊಟ್ಟದ್ದು ಕೇವಲ ೨ ಪಾಯಿಂಟ್ಸ್‌ಗಳನ್ನಷ್ಟೆ. ಮೂರನೇ ಗೇಮ್‌ನಲ್ಲಿ ತಿರುಗಿಬೀಳಲು ಮೆಂಗ್ಯು ಯತ್ನಿಸಿದರಾದರೂ, ಅದಕ್ಕೆ ಭಾರತೀಯ ಆಟಗಾರ್ತಿ ಆಸ್ಪದ ಕಲ್ಪಿಸಲಿಲ್ಲ.

ಡಬಲ್ಸ್‌ನಲ್ಲಿ ರಜತ: ಶುಕ್ರವಾರ (ಏ.೧೩) ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಹ ಆಟಗಾರ್ತಿ ಮೌಮಾದಾಸ್ ಜತೆಗೂಡಿದ್ದ ಬಾತ್ರಾ, ಬೆಳ್ಳಿ ಪದಕ ಜಯಿಸಿದ್ದರು. ಅಂತಿಮ ಸುತ್ತಿನಲ್ಲಿ ಮಣಿಕಾ ಮತ್ತು ಮೌಮಾ ಜೋಡಿ ಸಿಂಗಪುರದ ಟಿಯಾನ್‌ವೀ ಫೆಂಗ್ ಹಾಗೂ ಇದೇ ಯು ಮೆಂಗ್ಯು ಜೋಡಿಯ ವಿರುದ್ಧ ೫-೧೧, ೪-೧೧, ೫-೧೧ರ ಮೂರು ನೇರ ಗೇಮ್‌ಗಳಲ್ಲಿ ಸೋಲನುಭವಿಸಿದ್ದರು. ಇದೀಗ ಭಾನುವಾರ (ಏ.೧೫) ನಡೆಯಲಿರುವ ಮಿಶ್ರ ಟೀಂ ವಿಭಾಗದ ಕಂಚಿನ ಪದಕಕ್ಕಾಗಿ ನಡೆಯುವ ಕಾದಾಟದಲ್ಲಿ ಅಚಂತಾ ಶರತ್ ಕಮಲ್, ಮೌಮಾ ದಾಸ್ ಹಾಗೂ ಸತಿಯಾನ್ ಜ್ಞಾನಶೇಖರನ್ ಜತೆಗೆ ಬಾತ್ರಾ ಕೈಜೋಡಿಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More