ಗೌರವ್ ಸೋಲಂಕಿ, ವಿಕಾಸ್‌ಗೆ ಸ್ವರ್ಣ ಗೌರವ; ಅಮಿತ್, ಮನೀಶ್‌ಗೆ ಬೆಳ್ಳಿ

ಚೊಚ್ಚಲ ಕಾಮನ್ವೆಲ್ತ್ ಕೂಟದಲ್ಲಿ ಸ್ವರ್ಣ ಗೌರವಕ್ಕೆ ಗೌರವ್ ಸೋಲಂಕಿ ಭಾಜನರಾದರು. ಗೋಲ್ಡ್ ಕೋಸ್ಟ್ ಕೂಟದಲ್ಲಿ ಮೇರಿ ಕೋಮ್ ಚಿನ್ನ ತಂದಿತ್ತ ನಂತರ ಬಾಕ್ಸಿಂಗ್‌ನಲ್ಲಿ ಸಿಕ್ಕ ಎರಡನೇ ಸ್ವರ್ಣ ಪದಕವಿದು. ಇನ್ನುಳಿದಂತೆ, ಅಮಿತ್ ಪಂಗಲ್ ಮತ್ತು ಮನೀಶ್ ಕೌಶಿಕ್ ರಜತ ಪದಕ ಗಳಿಸಿದರು

ಮಾರಾಮಾರಿ ಕದನ ಕಣವಾಗಿ ಮಾರ್ಪಟ್ಟಿದ್ದ ಪುರುಷರ ೫೨ ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್ ಹಣಾಹಣಿಯಲ್ಲಿ ಭಾರತೀಯ ಬಾಕ್ಸರ್ ಗೌರವ್ ಸೋಲಂಕಿ ೪-೧ ವಿಭಜಿತ ಪಾಯಿಂಟ್ಸ್‌ ತೀರ್ಪಿನ ಆಧಾರದಲ್ಲಿ ಉತ್ತರ ಐರ್ಲೆಂಡ್‌ನ ಬ್ರೆಂಡನ್ ಇರ್ವಿನ್ ವಿರುದ್ಧ ಗೆಲುವು ಸಾಧಿಸಿದರು. ಪ್ರಖರತೆಯಿಂದ ಕೂಡಿದ್ದ ಹಾಗೂ ಶರವೇಗದ ಮತ್ತು ಅತೀವ ಕೌಶಲದ ಬೌಟ್‌ನಲ್ಲಿ ವಿಜೇತರನ್ನು ನಿರ್ಣಯಿಸುವುದೇ ತೀರ್ಪುಗಾರರಿಗೆ ದುಸ್ತರವಾಗಿ ಪರಿಣಮಿಸಿತು. ಆದರೆ, ತಾಂತ್ರಿಕ ನೈಪುಣ್ಯತೆ ಮೆರೆದ ಹಾಗೂ ಆಕರ್ಷಕ ಪಂಚ್‌ಗಳಿಂದ ಸೋಲಂಕಿ ಜಯ ಪಡೆದರು.

ಮೂರನೇ ಸುತ್ತಿನ ಬೌಟ್‌ನಲ್ಲಿ ಸೋಲಂಕಿ ಸೋಲನುಭವಿಸಿದರಾದರೂ, ಮೊದಲೆರಡು ಸುತ್ತಿನಲ್ಲಿ ಅವರು ತೋರಿದ ಪ್ರಭಾವಿ ಬಾಕ್ಸಿಂಗ್‌ನಿಂದಾಗಿ ತೀರ್ಪುಗಾರರು ಅವರ ಪರ ಪಾಯಿಂಟ್ಸ್ ಪ್ರಕಟಿಸಬೇಕಾಯಿತು. “ಇಂದು ನಾನು ಗಳಿಸಿದ ಈ ಚಿನ್ನದ ಪದಕವನ್ನು ನನ್ನ ತಾಯಿಗೆ ಸಮರ್ಪಿಸುತ್ತಿದ್ದೇನೆ. ನಾನೀಗ ಮುಂದಿನ ೨೦೨೦ರ ಒಲಿಂಪಿಕ್ಸ್ ಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತಿದ್ದೇನೆ. ಅಲ್ಲಿಯೂ ತಿರಂಗ ಹಾರಾಡುವುದನ್ನು ನಾನು ನೋಡಬಯಸುತ್ತೇನೆ,’’ ಎಂದು ೨೨ರ ಹರೆಯದ ಸೋಲಂಕಿ ಸ್ಪರ್ಧೆಯ ಬಳಿಕ ತಿಳಿಸಿದರು.

ಚಿನ್ನ ಗೆದ್ದ ವಿಕಾಸ್

ಅನುಭವಿ ಬಾಕ್ಸರ್ ವಿಕಾಸ್ ಕೃಷ್ಣ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೂರನೇ ಸ್ವರ್ಣ ಪದಕ ತಂದುಕೊಟ್ಟರು. 75 ಕೆಜಿ ವಿಭಾಗದಲ್ಲಿ ಕೆಮರಾನ್‌ನ ಡೈಯೊಡೆನ್ ವಿಲ್ಫ್ರೆಡ್ ಸೇಯಿ ನಿಟ್ಸೆಂಗು ವಿರುದ್ಧ ಏಕಪಕ್ಷೀಯ ಪ್ರದರ್ಶನ ನೀಡಿದ ವಿಕಾಸ್, ೫-೦ ಅಂತರದಿಂದ ಜಯಭೇರಿ ಬಾರಿಸಿದರು. ವಿಕಾಸ್‌ ಪಾಲಿಗಿದು ಇದು ಮೊಟ್ಟಮೊದಲ ಚಿನ್ನದ ಕಾಮನ್ವೆಲ್ತ್ ಪದಕವೆಂಬುದು ಗಮನಾರ್ಹ. ೨೦೧೬ರ ರಿಯೊ ಒಲಿಂಪಿಕ್ಸ್ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ್ದ ೨೬ರ ಹರೆಯದ ವಿಕಾಸ್, ೨೦೧೧ರಲ್ಲಿ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಇದನ್ನೂ ಓದಿ : ಮೇರಿಯೊಂದಿಗೆ ಗೋಲ್ಡ್ ಕೋಸ್ಟ್‌ನಲ್ಲಿ ಪದಕಗಳ ಸುರಿಮಳೆ ಸುರಿಸಿದ ಭಾರತ 

ಈ ಮಧ್ಯೆ, ಮತ್ತೆರಡು ಫೈನಲ್‌ಗಳಲ್ಲಿ ಭಾರತ ನಿರಾಸೆ ಅನುಭವಿಸಿತು. ಮನೀಶ್ ಕೌಶಿಕ್ (೬೦ ಕೆಜಿ) ಹಾಗೂ ಅಮಿತ್ ಪಂಗಲ್ (೪೬-೨೯ ಕೆಜಿ) ಕೊನೇ ಹಂತದ ಕಾದಾಟದಲ್ಲಿ ವೈಫಲ್ಯತೆ ಅನುಭವಿಸಿದರು. ಆಸ್ಟ್ರೇಲಿಯಾದ ಹ್ಯಾರಿ ಗಾರ್ಸಿಡೆ ವಿರುದ್ಧದ ಸೆಣಸಾಟದಲ್ಲಿ ಕೌಶಿಕ್ ದಿಟ್ಟ ಹೋರಾಟ ನಡೆಸಿಯೂ ಸೋಲಿಗೆ ಗುರಿಯಾದರೆ, ಅಮಿತ್ ಇಂಗ್ಲೆಂಡ್‌ನ ಗಲಾಲ್ ಯಫಾಯಿ ವಿರುದ್ಧ ಪರಾಜಿತರಾದರು.

“ತೀರ್ಪುಗಾರರು ನನ್ನನ್ನು ನಿರಾಸೆಗೊಳಿಸಿದರು. ಈ ಬೌಟ್ ನಿಜವಾಗಿಯೂ ಸಮಬಲದಿಂದ ಕೂಡಿತ್ತು,’’ ಎಂದು ಬೌಟ್‌ನ ಬಳಿಕ ಅಮಿತ್ ಪ್ರತಿಕ್ರಿಯಿಸಿದರು. ಏತನ್ಮಧ್ಯೆ, ಮನೀಶ್ ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದರಾದರೂ, ಅಂತಿಮವಾಗಿ ಹ್ಯಾರಿ ಅವರನ್ನು ೩-೨ರಿಂದ ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಈ ಬೌಟ್‌ನಲ್ಲಿ ಕೂಡ ವಿಭಜಿತ ಪಾಯಿಂಟ್ಸ್‌ಗಳ ಅಧಾರದಲ್ಲಿ ಇಂಗ್ಲೆಂಡ್ ಬಾಕ್ಸರ್‌ನನ್ನು ವಿಜೇತರನ್ನಾಗಿ ತೀರ್ಪುಗಾರರು ಘೋಷಿಸಿದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More