ಆರ್‌ಸಿಬಿಗೆ ಮೊದಲ ಗೆಲುವು ತಂದುಕೊಟ್ಟ ಡಿವಿಲಿಯರ್ಸ್, ಉಮೇಶ್ ಯಾದವ್

ಕಳೆದ ವರ್ಷ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತತ ಆರು ಸೋಲುಗಳನ್ನು ಕಂಡಿದ್ದ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ, ಈ ಬಾರಿ ಮೊದಲ ಪಂದ್ಯದಲ್ಲೇ ಜಯದ ಸವಿಯುಂಡಿತು. ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ಎಬಿ ಡಿವಿಲಿಯರ್ಸ್, ಸೋಲಿನತ್ತ ಮುಖಮಾಡಿದ್ದ ಆರ್‌ಸಿಬಿಯ ಕೈ ಹಿಡಿದು ಗೆಲ್ಲಿಸಿದರು

“ನಾಳೆ ಸ್ಫೋಟಕ ಇನ್ನಿಂಗ್ಸ್‌ಗಾಗಿ ಎದುರುನೋಡುತ್ತಿರಿ...” -ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯಕ್ಕೂ ಮುನ್ನಾದಿನದಂದು ಹೀಗೆ ಆರ್‌ಸಿಬಿ ಅಭಿಮಾನಿಗಳಿಗೆ ಕರೆಕೊಟ್ಟಿದ್ದ ಎಬಿಡಿ, ಹೇಳಿದ ಮಾತಿನಂತೆ ನಡೆದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ (ಏ.೧೩) ನಡೆದ ಈ ಋತುವಿನ ೮ನೇ ಐಪಿಎಲ್ ಪಂದ್ಯದಲ್ಲಿ, ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ೪ ವಿಕೆಟ್ ಗೆಲುವು ಸಾಧಿಸಲು ದಕ್ಷಿಣ ಆಫ್ರಿಕಾದ ಈ ಬಿಡುಬೀಸಿನ ಆಟಗಾರ ನೆರವಾದರು. ಈ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ತಂಡ ಅನುಭವಿಸಿದ್ದ ಮೊದಲ ಪಂದ್ಯದ ೪ ವಿಕೆಟ್ ಸೋಲಿನ ಬೇಗೆಯನ್ನು ಅವರು ಮರೆಮಾಚಿದರು.

ನಟಿ ಪ್ರೀತಿ ಜಿಂಟಾ ಸಹಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವಿಗೆ ನೀಡಿದ್ದ ೧೫೬ ರನ್ ಗುರಿಯನ್ನು ಬೆನ್ನತ್ತಲು ಹೋದ ಆರ್‌ಸಿಬಿ, ಒಂದು ಹಂತದಲ್ಲಿ ಒತ್ತಡಕ್ಕೆ ಸಿಲುಕಿತ್ತು. ಅದರಲ್ಲೂ ನಾಯಕ ಕೊಹ್ಲಿ (೨೧) ಮತ್ತೊಮ್ಮೆ ಅಸ್ಥಿರ ಆಟದೊಂದಿಗೆ ಕ್ರೀಸ್ ತೊರೆದಾಗಲಂತೂ ಆರ್‌ಸಿಬಿ ತೀವ್ರ ಚಡಪಡಿಕೆಯಲ್ಲಿತ್ತು. ಈ ಹಂತದಲ್ಲಿ ಆಡಲಿಳಿದ ಎಬಿಡಿ, ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಕಟ್ಟಿ ತಂಡದ ಗೆಲುವನ್ನು ಸುಗಮಗೊಳಿಸಿದರು. ೪೦ ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್ ಹಾಗೂ ಒಂದು ಬೌಂಡರಿ ಸೇರಿದ ೫೭ ರನ್‌ ಗಳಿಸಿ ಕಿಂಗ್ಸ್ ಇಲೆವೆನ್‌ ಪಂಜಾಬ್ ಪಾಲಿಗೆ ಮುಳುವಾದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನ ನೆರವಿನಿಂದಾಗಿಯೇ ಆರ್‌ಸಿಬಿ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ಜಯಶಾಲಿಯಾಯಿತು.

ಇನ್ನಿಂಗ್ಸ್‌ನ ಹದಿನೆಂಟನೇ ಓವರ್‌ನಲ್ಲಿ ಎಬಿಡಿಯನ್ನು ಆರ್‌ಸಿಬಿ ಕಳೆದುಕೊಂಡಿತಾದರೂ, ಅಷ್ಟರಲ್ಲಾಗಲೇ ಅವರು ತಂಡವನ್ನು ಜಯದ ಸಮೀಪ ತಂದು ನಿಲ್ಲಿಸಿದ್ದರು. ೧.೫ ಓವರ್‌ಗಳಲ್ಲಿ ಆಗ ಆರ್‌ಸಿಬಿ ಗೆಲುವಿಗೆ ಬೇಕಿದ್ದುದು ಕೇವಲ ೧೦ ರನ್‌ಗಳಷ್ಟೆ. ಮನ್‌ದೀಪ್ ಸಿಂಗ್ (೨೨) ಜೊತೆಗೂಡಿದ ವಾಷಿಂಗ್ಟನ್ ಸುಂದರ್ ಅಜೇಯ ೯ ರನ್ ಗಳಿಸುತ್ತಿದ್ದಂತೆ ಆರ್‌ಸಿಬಿ ಈ ಋತುವಿನ ಐಪಿಎಲ್‌ನಲ್ಲಿ ಜಯದ ಖಾತೆ ತೆರೆಯಿತು.

ಕಳಪೆ ಆರಂಭ: ಅಂದಹಾಗೆ, ಆರ್‌ಸಿಬಿಯ ರನ್ ಚೇಸಿಂಗ್ ಸರಿದಿಸೆಯಲ್ಲಿರದೆ ಅತ್ಯಂತ ಕಳಪೆಯಾಗಿತ್ತು. ಸ್ಫೋಟಕ ಆಟಗಾರ ಬ್ರೆಂಡನ್ ಮೆಕಲಮ್ ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಕ್ರೀಸ್‌ಗಿಳಿದ ಕೊಹ್ಲಿ, ಆರಂಭಿಕ ಕ್ವಿಂಟಾನ್ ಡಿ'ಕಾಕ್ (೪೫: ೩೪ ಎಸೆತ, ೭ಬೌಂಡರಿ, ೧ ಸಿಕ್ಸರ್) ಜತೆಗೂಡಿ ಇನ್ನಿಂಗ್ಸ್ ಮುಂದುವರೆಸಿದರು. ಆಕರ್ಷಕ ಬೌಂಡರಿಗಳಿಂದ ದೊಡ್ಡ ಇನ್ನಿಂಗ್ಸ್ ಕಟ್ಟುವ ಸುಳಿವು ನೀಡಿದ ಅವರನ್ನು ಐದನೇ ಓವರ್‌ನಲ್ಲಿ ಆಫ್ಘನ್ ಬೌಲರ್ ಮುಜೀಬ್ ಉರ್ ರೆಹಮಾನ್ (೨೯ಕ್ಕೆ ೧) ಆಕರ್ಷಕವಾದ ಗೂಗ್ಲಿಯಿಂದ ಬೌಲ್ಡ್ ಮಾಡುತ್ತಲೇ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು.

ಹರಿಣಗಳ ಜೊತೆಯಾಟ: ಕೊಹ್ಲಿ ನಿರ್ಗಮನದ ನಂತರ ಆಡಲಿಳಿದ ಎಬಿಡಿ, ಶುರುವಿನಲ್ಲಿ ನಿಧಾನಗತಿಯ ಆಟವಾಡುತ್ತ ಎಚ್ಚರಿಕೆ ವಹಿಸಿದರು. ಯುವ ಆಟಗಾರ ಡಿ'ಕಾಕ್ ಅವರನ್ನು ಪ್ರೋತ್ಸಾಹಿಸುತ್ತ ನಡೆದ ಎಬಿಡಿ, ಕ್ರಮೇಣ ಆಕ್ರಮಣಕಾರಿಯಾದರು. ಇತ್ತ, ಡಿ'ಕಾಕ್ ಕೂಡ ಸೊಗಸಾದ ಬ್ಯಾಟಿಂಗ್ ನಡೆಸುತ್ತಿದ್ದರಾದರೂ, ಪಂಜಾಬ್ ಕಪ್ತಾನ ಆರ್ ಅಶ್ವಿನ್, ಡಿ'ಕಾಕ್ ವಿಕೆಟ್ ಎಗರಿಸಿ ಆರ್‌ಸಿಬಿಗೆ ಹೊಡೆತ ನೀಡಿದರು. ಡಿಕಾಕ್ ಮತ್ತು ಎಬಿಡಿ ಮೂರನೇ ವಿಕೆಟ್‌ಗೆ ೫೪ ರನ್ ಕಲೆಹಾಕಿದರು. ಡಿ'ಕಾಕ್ ನಿರ್ಗಮನದ ನಂತರದಲ್ಲಿ ಬಂದ ಸರ್ಫರಾಜ್ ಖಾನ್ (೦) ಕೂಡ ಅಶ್ವಿನ್ ಕೈಚಳಕಕ್ಕೆ ಬಲಿಯಾದರು. ಈ ಹಂತದಲ್ಲಿ ಪಂದ್ಯ ಪಂಜಾಬ್‌ನತ್ತ ಜಾರಿದ್ದು ನಿಚ್ಚಳವಾಗಿತ್ತು.

ಇದನ್ನೂ ಓದಿ : ಕಡೇ ಎಸೆತದಲ್ಲಿ ಮುಂಬೈ ಮಣಿಸಿ ಸತತ ಎರಡನೇ ಜಯ ಕಂಡ ಸನ್‌ರೈಸರ್ಸ್

೧೫ ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೦೯ ರನ್ ಗಳಿಸಿದ್ದ ಆರ್‌ಸಿಬಿ ಕೊನೆಯ ಐದು ಓವರ್‌ಗಳಲ್ಲಿ ೪೭ ರನ್ ಕಲೆಹಾಕುವಂತಾಯಿತು. ಆದರೆ, ಎಬಿಡಿ ಕ್ರೀಸ್‌ನಲ್ಲಿದ್ದುದರಿಂದ ತಂಡ ನಿಶ್ಚಿಂತೆಯಿಂದಿತ್ತು. ಇತ್ತ, ೧೭ನೇ ಓವರ್‌ ಪಂದ್ಯದ ಗತಿಯನ್ನು ಬದಲಿಸಿತು. ಆಫ್ಘನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಬೌಲಿಂಗ್‌ನಲ್ಲಿ ಸತತ ಎರಡು ಸಿಕ್ಸರ್ ಎತ್ತಿದ ಎಬಿಡಿ, ಆ ಓವರ್‌ನಲ್ಲಿ ೧೯ ರನ್ ಕಲೆಹಾಕಿ ತನ್ನ ಮೇಲಿನ ಜವಾಬ್ದಾರಿಯನ್ನಷ್ಟೇ ಅಲ್ಲದೆ, ತಂಡದ ಮೇಲಿದ್ದ ಒತ್ತಡದ ಹೊರೆಯನ್ನೂ ಹಗುರಾಗಿಸಿದರು.

ಉಮೇಶ್ ಮಾರಕ ದಾಳಿ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್, ವೇಗಿ ಉಮೇಶ್ ಯಾದವ್ ಅವರ ಮಾರಕ ದಾಳಿಗೆ ನಲುಗಿತು. ಒಂದೇ ಓವರ್‌ನಲ್ಲಿ ೩ ವಿಕೆಟ್ ಎಗರಿಸಿದ ಉಮೇಶ್ ಯಾದವ್ ಅವರ ನೆರವಿನೊಂದಿಗೆ ಆರ್‌ಸಿಬಿ, ಪ್ರೀತಿ ಪಡೆಯನ್ನು ೧೫೫ ರನ್‌ಗಳಿಗೆ ನಿಯಂತ್ರಿಸಿತು. ಮಯಾಂಕ್ ಅಗರ್ವಾಲ್ (೧೫), ಏರಾನ್ ಫಿಂಚ್ (೦) ಮತ್ತು ಯುವರಾಜ್ ಸಿಂಗ್ (೪) ಈ ಮೂವರನ್ನೂ ಒಂದೇ ಓವರ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದ ಉಮೇಶ್ ಯಾದವ್, ಕಿಂಗ್ಸ್ ಇಲೆವೆನ್ ಇನ್ನಿಂಗ್ಸ್‌ಗೆ ಬಲವಾದ ಬರೆ ಎಳೆದರು.

ನಾಲ್ಕನೇ ಓವರ್‌ಗಳಾಗುವ ಹೊತ್ತಿಗೆ ಕೇವಲ ೩೬ ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್, ಆ ಬಳಿಕ ಕನ್ನಡಿಗ ಕೆ ಎಲ್ ರಾಹುಲ್ (೪೭: ೩೦ ಎಸೆತ, ೨ ಬೌಂಡರಿ, ೪ ಸಿಕ್ಸರ್) ಅವರ ಪ್ರತಿರೋಧದ ಆಟದಿಂದ ಚೇತರಿಸಿಕೊಂಡಿತು. ತಂಡದ ಇನ್ನಿಂಗ್ಸ್‌ಗೆ ಇನ್ನಷ್ಟು ಬಲ ತುಂಬಲು ರಾಹುಲ್ ಪ್ರಯತ್ನಿಸಿದರಾದರೂ, ವಾಷಿಂಗ್ಟನ್ ಸುಂದರ್ ಬೌಲಿಂಗ್‌ನಲ್ಲಿ ಅವರು ಸರ್ಫರಾಜ್ ಖಾನ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಳ್ಳುತ್ತಿದ್ದಂತೆ ಪಂಜಾಬ್ ಇನ್ನಿಂಗ್ಸ್ ಕೂಡ ಕಳಾಹೀನವಾಯಿತು. ಆದಾಗ್ಯೂ ನಾಯಕ ಆರ್ ಅಶ್ವಿನ್ (೩೩: ೨೧ ಎಸೆತ, ೩ ಬೌಂಡರಿ, ೧ ಸಿಕ್ಸರ್) ಇದಕ್ಕೂ ಮುನ್ನ ಕರುಣ್ ನಾಯರ್ (೨೯) ಸಲ್ಲಿಸಿದ ಅಲ್ಪ ಕೊಡುಗೆಯಿಂದಾಗಿ ತಂಡ ೧೫೦ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್

ಕಿಂಗ್ಸ್ ಇಲೆವೆನ್ ಪಂಜಾಬ್: ೧೯.೨ ಓವರ್‌ಗಳಲ್ಲಿ ೧೫೫/೧೦ (ಕೆ ಎಲ್ ರಾಹುಲ್ ೪೭, ಅಶ್ವಿನ್ ೩೩; ಉಮೇಶ್ ಯಾದವ್ ೨೩ಕ್ಕೆ ೩) ರಾಯಲ್ ಚಾಲೆಂಜರ್ಸ್ ಬೆಂಗಳೂರು: ೧೯.೩ ಓವರ್‌ಗಳಲ್ಲಿ ೧೫೯/೬ (ಡಿ'ಕಾಕ್ ೪೫; ಎಬಿಡಿ ೫೭; ಆರ್ ಅಶ್ವಿನ್ ೩೦ಕ್ಕೆ ೨) ಫಲಿತಾಂಶ: ಆರ್‌ಸಿಬಿಗೆ ೪ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಉಮೇಶ್ ಯಾದವ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More