ರೋಚಕ ಹಣಾಹಣಿಯಲ್ಲಿ ಸಿಂಧು ಮಣಿಸಿ ಕಾಮನ್ವೆಲ್ತ್ ಚಿನ್ನಕ್ಕೆ ಮುತ್ತಿಟ್ಟ ಸೈನಾ

ಸಿಡಿಲಬ್ಬರದ ಸೈನಾ ಆಟಕ್ಕೆ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ತಡಬಡಾಯಿಸಿದರು. ಭಾನುವಾರ (ಏ.೧೫) ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಜಿದ್ದಾಜಿದ್ದಿನ ಸೆಣಸಿನಲ್ಲಿ ಸಿಂಧುವನ್ನು ೨೧-೧೮, ೨೩-೨೧ರಿಂದ ಸೈನಾ ನೆಹ್ವಾಲ್ ಮಣಿಸಿದರೆ, ಇತ್ತ, ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಬೆಳ್ಳಿಗೆ ತೃಪ್ತರಾದರು

ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಪಿ ವಿ ಸಿಂಧು ಮತ್ತೊಮ್ಮೆ ಸೈನಾ ಎದುರು ಮಂಡಿಯೂರಿದರು. ಚೊಚ್ಚಲ ಕಾಮನ್ವೆಲ್ತ್ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದ ಸಿಂಧುವನ್ನು ವಿಶ್ವದ ೧೨ನೇ ಶ್ರೇಯಾಂಕಿತೆ ಸೈನಾ, ಆಕ್ರಮಣಕಾರಿ ಆಟದಿಂದ ಮಣಿಸಿದರು. ಈ ಮೂಲಕ, ಒಟ್ಟಾರೆ ಮುಖಾಮುಖಿಯಲ್ಲಿ ಸಿಂಧು ವಿರುದ್ಧ ಸೈನಾ ೪-೧ ಪ್ರಾಬಲ್ಯ ಮೆರೆದರು. ಕಳೆದ ವರ್ಷದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕೊನೇ ಬಾರಿಗೆ ಮುಖಾಮುಖಿಯಾಗಿದ್ದ ಇವರಿಬ್ಬರ ಪೈಕಿ ಸೈನಾ ಆಗಲೂ, ಸಿಂಧುವನ್ನು ೨೧-೧೭, ೨೭-೨೫ರಿಂದ ಸೋಲಿಸಿ ಮೂರನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದರು.

ಪಂದ್ಯಾದ್ಯಂತ ಅತ್ಯಂದ ನಿರ್ದಯಿ ಆಟವಾಡಿದ ೨೮ರ ಹರೆಯದ ಸೈನಾ ಅಬ್ಬರದ ಆಟದೆದುರು ಸಿಂಧು ಮಂಕಾದರು. ಆರಂಭದಲ್ಲಿ ಸಿಂಧು ವಿರುದ್ಧ ಸೈನಾ, ೯-೪, ೧೧-೬, ಮುನ್ನಡೆ ಸಾಧಿಸಿದರು. ಇದಕ್ಕೆ ಪ್ರತಿಯಾಗಿ ತನ್ನ ಸಹಜವಾದ ಶಕ್ತಿಶಾಲಿ ಸ್ಮ್ಯಾಶ್‌ಗಳಿಂದ ಭೋರ್ಗರೆದ ಸಿಂಧು, ೧೪-೧೮ರಿಂದ ಪಂದ್ಯದಲ್ಲಿ ಹಿಡಿತ ಸಾಧಿಸಲು ಯತ್ನಿಸಿದರು. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ಮುಂದೆ ಸಾಗಿದ್ದ ಸೈನಾ, ಮೊದಲ ಗೇಮ್‌ ಅನ್ನು ಸುನಾಯಾಸವಾಗಿ ಕೈವಶ ಮಾಡಿಕೊಂಡರು.

ಇತ್ತ, ಎರಡನೇ ಗೇಮ್ ಮೊದಲಿನದಕ್ಕಿಂತ ಇನ್ನಷ್ಟು ಪ್ರಖರವಾಗಿತ್ತು. ಈ ಬಾರಿ ಶುರುವಿನಲ್ಲೇ ಸಿಂಧು ೪ ಪಾಯಿಂಟ್ಸ್ ಮುನ್ನಡೆ ಸಾಧಿಸಿದರು. ಆದರೆ, ಸಿಂಧುವಿನ ಬ್ಯಾಕ್ ಹ್ಯಾಂಡ್ ಶಾಟ್‌ಗಳನ್ನು ಗುರಿಯಾಗಿಸಿಕೊಂಡ ಸೈನಾ, ಒಂದರ ಹಿಂದೊಂದರಂತೆ ಮೂರು ಸ್ಮ್ಯಾಶ್‌ಗಳನ್ನು ಸಿಡಿಸಿ ತನಗಿಂತಲೂ ಕಿರಿಯಳಾದ ಸಿಂಧುವಿನ ವಿರುದ್ಧ ತಿರುಗಿಬಿದ್ದರು. ಒಂದು ಹಂತದಲ್ಲಿ ೧೪-೧೮ರಿಂದ ಕೂಡಿದ್ದ ಗೇಮ್‌ನಲ್ಲಿ ಸೈನಾ ೧೯-೧೯ರ ಸಮಬಲ ಸಾಧಿಸಿ ರೋಚಕತೆಯನ್ನು ಹೆಚ್ಚಿಸಿದರು. ಈ ಹಂತದಲ್ಲಿ ಇಬ್ಬರಿಂದಲೂ ಮುನ್ನಡೆಗಾಗಿ ಸುದೀರ್ಘವಾದ ಆಟ ಸಾಗಿತು. ೬೪ ಶಾಟ್‌ಗಳಿಂದ ಕೂಡಿದ್ದ ನಿಡಿದಾದ ರ‍್ಯಾಲಿಯಲ್ಲಿ ಸಿಂಧು ಗೇಮ್ ಪಾಯಿಂಟ್ಸ್ ಪಡೆದರು. ಇದಕ್ಕೆ ಪ್ರತಿಯಾಗಿ ಎರಡು ರಿಟರ್ನ್ ಶಾಟ್‌ಗಳಲ್ಲಿ ಪ್ರಮಾದವೆಸಗಿದ ಸಿಂಧು ಎದುರು ಸೈನಾ ಕೂಡ ಮ್ಯಾಚ್ ಪಾಯಿಂಟ್ಸ್ ಗಳಿಸಿದರು.

ಇದನ್ನೂ ಓದಿ : ಚೊಚ್ಚಲ ಕಾಮನ್ವೆಲ್ತ್ ಗೋಲ್ಡ್‌ಗಾಗಿ ಸೈನಾ ವಿರುದ್ಧ ಸಿಂಧು ಹೋರಾಟ

ಒತ್ತಡ ಹಾಗೂ ಬಿರುಸಿನ ಆಟದ ಫಲವಾಗಿ ಸಿಂಧು ಸಹಜ ತಪ್ಪೆಸಗುವಂತೆ ಈ ಬಾರಿಯೂ ವೈಡ್ ಶಾಟ್‌ಗೆ ಬೆಲೆ ತೆತ್ತರು. ಆದಾಗ್ಯೂ ಪಾಯಿಂಟ್ಸ್ ಗಳಿಕೆಯಲ್ಲಿ ಇಬ್ಬರೂ ೨೧-೨೧ರಿಂದ ಸಮಬಲ ಸಾಧಿಸಿದ್ದರು. ಸೈನಾ ಚಿನ್ನದ ಪದಕಕ್ಕೆ ಮುತ್ತಿಡಲು ಇನ್ನೆರಡು ಪಾಯಿಂಟ್ಸ್ ಅಷ್ಟೇ ಸಾಕಾಗಿತ್ತು. ಅದ್ಭುತವಾದ ಸ್ಮ್ಯಾಶ್‌ನಿಂದ ಮುನ್ನಡೆ ಸಾಧಿಸಿದ ಸೈನಾ, ಮತ್ತೊಂದು ಪಾಯಿಂಟ್ಸ್ ಕಲೆಹಾಕಿ ಜಯದ ಸಮೀಪ ಸಾಗಿದರು. ಇತ್ತ, ಸಿಂಧು ಬಾರಿಸಿದ ರಿಟರ್ನ್ ಶಾಟ್ ಗೆರೆಯ ಆಚೆಗೆ ಬೀಳುತ್ತಲೇ ಸೈನಾ ಹರ್ಷೋದ್ಗಾರದಿಂದ ಚೀರಿದರು.

ಅಪರೂಪದ ಸಾಧಕಿ: ಅಂದಹಾಗೆ, ಈ ಗೆಲುವಿನೊಂದಿಗೆ ಸೈನಾ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅಪರೂಪದ ಸಾಧನೆ ಮಾಡಿ ಗಮನ ಸೆಳೆದರು. ೨೦೧೦ರ ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ವೈಯಕ್ತಿಕ ಹಾಗೂ ಮಿಶ್ರ ಟೀಂ ವಿಭಾಗದಲ್ಲಿ ಚಿನ್ನ ಗೆದಿದ್ದ ಸೈನಾ, ೨೦೦೬ರಲ್ಲಿ ಮಿಶ್ರ ಟೀಂ ವಿಭಾಗದಲ್ಲಿ ಕಂಚು ಜಯಿಸಿದ್ದರು. ಇನ್ನು, ಪ್ರಸಕ್ತ ಕೂಟದಲ್ಲಿ ಟೀಂ ವಿಭಾಗದಲ್ಲಿ ಭಾರತದ ಐತಿಹಾಸಿಕ ಚಿನ್ನದ ಸಾಧನೆಗೂ ಕೈಜೋಡಿಸಿದ್ದರು.

ಸಿಂಧುಗೆ ನಿರಾಸೆ: ಗೋಲ್ಡ್ ಕೋಸ್ಟ್‌ ಕೂಟಕ್ಕೆ ತೆರಳುವುದಕ್ಕೂ ಮುನ್ನ ಗಾಯದ ಸಮಸ್ಯೆಗೆ ಸಿಲುಕಿದ್ದ ಸಿಂಧು, ಕೂಟದ ಸಿಂಗಲ್ಸ್ ಪಂದ್ಯಗಳು ಶುರುವಾದಾಗಲಷ್ಟೇ ಕಣಕ್ಕಿಳಿದಿದ್ದರು. ಟೀಂ ಈವೆಂಟ್‌ನ ಯಾವುದೇ ಪಂದ್ಯದಲ್ಲಿಯೂ ಆಡದ ಸಿಂಧು, ಸಾಕಷ್ಟು ವಿಶ್ರಾಂತಿ ಪಡೆದಿದ್ದರು. ಆದರೆ, ಸಾಕಷ್ಟು ಪಂದ್ಯಗಳನ್ನು ಆಡಿ ಬಳಲಿದ್ದ ಸೈನಾ ಅವರನ್ನು ಮಣಿಸಲು ಅವರಿಗೆ ಇದು ಅಪೂರ್ವ ಅವಕಾಶವಾಗಿತ್ತಾದರೂ, ಅದ್ಭುತ ಫಾರ್ಮ್‌ನಲ್ಲಿದ್ದ ಸೈನಾ ಮಾತ್ರ ಮತ್ತೊಮ್ಮೆ ಸಿಂಧು ವಿರುದ್ಧ ಸಂಚಲನಕಾರಿ ಜಯ ಸಾಧಿಸಿದರು.

ಶ್ರೀಕಾಂತ್‌ಗೆ ನಿರಾಸೆ

ಕಳೆದ ಗುರುವಾರವಷ್ಟೇ ವಿಶ್ವದ ನಂ ೧ ಸ್ಥಾನಕ್ಕೆ ಲಗ್ಗೆ ಹಾಕಿದ್ದ ಕಿಡಾಂಬಿ ಶ್ರೀಕಾಂತ್ ಚಿನ್ನದ ಪದಕಕ್ಕಾಗಿನ ಹೋರಾಟದಲ್ಲಿ ವೈಫಲ್ಯ ಅನುಭವಿಸಿದರು. ಮೂರು ಬಾರಿಯ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಹಾಗೂ ವಿಶ್ವದ ಮಾಜಿ ನಂ ೧ ಆಟಗಾರ ಲೀ ಚಾಂಗ್ ವೀ ವಿರುದ್ಧದ ಹಣಾಹಣಿಯಲ್ಲಿ ಶ್ರೀಕಾಂತ್ ೨೧-೧೯, ೧೪-೨೧, ೧೪-೨೧ ಅಂತರದಿಂದ ಸೋಲನುಭವಿಸಿದರು. ಕರಾರಾ ಕ್ರೀಡಾ ಅರೇನಾ ೨ರಲ್ಲಿ ನಡೆದ ಮೂರು ಗೇಮ್‌ಗಳ ರೋಚಕ ಕಾದಾಟದಲ್ಲಿ ಚಾಂಗ್ ವಿರುದ್ಧ ಮೊದಲ ಗೇಮ್‌ನಲ್ಲಿ ಶ್ರೀಕಾಂತ್ ಜಯಿಸಿದರಾದರೂ, ಆನಂತರದಲ್ಲಿ ಚಾಂಗ್ ವೀ ಮೇಲುಗೈ ಸಾಧಿಸಿದರು.

ಅಂದಹಾಗೆ ಟೀಂ ಈವೆಂಟ್‌ನಲ್ಲಿ ಇದೇ ಚಾಂಗ್ ವೀ ವಿರುದ್ಧ ಗೆಲುವು ಸಾಧಿಸಿದ್ದ ಶ್ರೀಕಾಂತ್, ಫೈನಲ್‌ನಲ್ಲಿ ಮಾತ್ರ ತುಸು ಒತ್ತಡಕ್ಕೆ ಒಳಗಾದರು. ನಿರೀಕ್ಷೆಯಂತೆಯೇ ಮೊದಲ ಗೇಮ್ ಗೆದ್ದ ಅವರು, ತದನಂತರದಲ್ಲಿ ಹಿನ್ನಡೆ ಅನುಭವಿಸಿದರು. ಅನುಭವಿ ಆಟಗಾರ ಚಾಂಗ್ ವೀ ಆಕರ್ಷಕ ಪ್ರದರ್ಶನದೊಂದಿಗೆ ಗೆಲುವು ಸಾಧಿಸಿದರು. ಮೊದಲ ಬಾರಿಗೆ ಕಾಮನ್ವೆಲ್ತ್ ಕೂಟದಲ್ಲಿ ಭಾಗವಹಿಸಿದ್ದ ಶ್ರೀಕಾಂತ್, ಬೆಳ್ಳಿ ಪದಕಕ್ಕೆ ತೃಪ್ತರಾದರು.

ದಾಖಲೆ ಬರೆದ ಚಿರಾಗ್ ಜೋಡಿ

ಏತನ್ಮಧ್ಯೆ, ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ರಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕಂಚು ಪದಕ ಗೆದ್ದು ಇತಿಹಾಸ ಬರೆಯಿತು. ಫೈನಲ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಇಂಗ್ಲೆಂಡ್‌ನ ಮಾರ್ಕುಸ್ ಎಲ್ಲಿಸ್ ಹಾಗೂ ಕ್ರಿಸ್ ಲ್ಯಾಂಗ್ರಿಡ್ಜ್ ಜೋಡಿಯನ್ನು ೨೧-೧೩, ೨೧-೧೬ರ ಎರಡು ನೇರ ಗೇಮ್‌ಗಳಲ್ಲಿ ಮಣಿಸಿದರು. ಒಂದು ವಿಧದಲ್ಲಿ ಏಕಪಕ್ಷೀಯವಾಗಿದ್ದ ಈ ಅಂತಿಮ ಸುತ್ತಿನಲ್ಲಿ ರಿಯೊ ಒಲಿಂಪಿಕ್ಸ್ ಕಂಚು ವಿಜೇತ ಜೋಡಿಯ ವಿರುದ್ಧ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಅಮೋಘ ಆಟವಾಡಿತು. ಆ ಮೂಲಕ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಕಾಮನ್ವೆಲ್ತ್ ಕೂಟದ ಇತಿಹಾಸದಲ್ಲಿ ಚೊಚ್ಚಲ ಪದಕು ಗೆದ್ದುಕೊಟ್ಟ ದಾಖಲೆ ಬರೆಯಿತು.

ಅಶ್ವಿನಿ ಪೊನ್ನಪ್ಪ

ಕನ್ನಡತಿ ಅಶ್ವಿನಿಗೆ ಕಂಚು

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತೊಂದು ಕಾಮನ್ವೆಲ್ತ್ ಪದಕ ಪಡೆದರು. ಜತೆಯಾಟಗಾರ್ತಿ ಸಿಕಿ ರೆಡ್ಡಿಯೊಂದಿಗೆ ಕಂಚು ಪದಕಕ್ಕಾಗಿನ ಕಾದಾಟದಲ್ಲಿ ಆಸ್ಟ್ರೇಲಿಯಾದ ಸೆಟ್ಯಾನ ಮಪಾಸ ಮತ್ತು ಗ್ರಾನ್ಯಾ ಸಾಮರ್‌ವಿಲ್ಲೆ ಜೋಡಿಯ ವಿರುದ್ಧ ಅಶ್ವಿನಿ ಪೊನ್ನಪ್ಪ ಹಾಗೂ ಸಿಕಿ ರೆಡ್ಡಿ ೨೧-೧೯, ೨೧-೧೯ರಿಂದ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಅಶ್ವಿನಿ ಪೊನ್ನಪ್ಪ ಒಟ್ಟು ಐದನೇ ಕಾಮನ್ವೆಲ್ತ್ ಪದಕ ಪಡೆದರು.

೨೦೧೦ರ ದೆಹಲಿ ಕಾಮನ್ವೆಲ್ತ್ ಕೂಟದಲ್ಲಿ ಜ್ವಾಲಾ ಗುಟ್ಟಾ ಜತೆಗೆ ಚಿನ್ನದ ಪದಕ ಗೆದ್ದಿದ್ದ ಅಶ್ವಿನಿ ಪೊನ್ನಪ್ಪ, ೨೦೧೪ರ ಗ್ಲಾಸ್ಗೊ ಕೂಟದಲ್ಲಿಯೂ ಜ್ವಾಲಾ ಮತ್ತು ಅಶ್ವಿನಿ ರಜತ ಪದಕ ಜಯಿಸಿದ್ದರು. ಇದೀಗ ಕಂಚಿನ ಪದಕ ಜಯಿಸಿದ್ದಾರೆ. ಕಳೆದ ಮೂರೂ ಕೂಟಗಳಲ್ಲಿ ಪದಕ ಗೆದ್ದ ಸಾಧನೆಗೆ ಅವರು ಈ ಮೂಲಕ ಭಾಜನರಾದರೂ, ಕೂಟದಿಂದ ಕೂಟಕ್ಕೆ ಇಳಿಮುಖರಾದದ್ದು ಕೂಡ ಗಮನಿಸಬೇಕಾದ ಅಂಶ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More