ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟ ಹಾಲಿ ಚಾಂಪಿಯನ್ ಜೋಡಿ ಪಳ್ಳೀಕಲ್-ಜೋಶ್ನಾ

ನಾಲ್ಕು ವರ್ಷಗಳ ಹಿಂದಿನ ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದ ದೀಪಿಕಾ ಪಳ್ಳೀಕಲ್ ಮತ್ತು ಜೋಶ್ನಾ ಚಿನ್ನಪ್ಪ ಜೋಡಿ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್‌ನಲ್ಲಿ ಭಾರತದ ಈ ಸ್ಟಾರ್ ಜೋಡಿ ನಿರಾಸೆ ಅನುಭವಿಸಿತು

ಅಷ್ಟೇನೂ ರೋಚಕವಾಗಿರದ, ಒಂದು ವಿಧದಲ್ಲಿ ಏಕಪಕ್ಷೀಯವಾಗಿದ್ದ ಫೈನಲ್ ಹಣಾಹಣಿಯಲ್ಲಿ ದೀಪಿಕಾ ಮತ್ತು ಜೋಶ್ನಾ ಜೋಡಿಯನ್ನು ನ್ಯೂಜಿಲೆಂಡ್‌ನ ಜೊಯೆಲಿ ಕಿಂಗ್ ಮತ್ತು ಅಮಂಡಾ-ಲ್ಯಾಂಡರ್ಸ್ ಮರ್ಫಿ ಸುಲಭವಾಗಿಯೇ ಮಣಿಸಿತು. ೧೧-೯, ೧೧-೮ರ ಎರಡು ನೇರ ಗೇಮ್‌ಗಳಲ್ಲಿ ಕಿಂಗ್ ಹಾಗೂ ಮರ್ಫಿ ಜೋಡಿ ಜಯಭೇರಿ ಬಾರಿಸುವುದರೊಂದಿಗೆ ಚಿನ್ನದ ಪದಕ ಪಡೆಯಿತು.

ಪಂದ್ಯದ ಕೆಲವೊಂದು ಘಟ್ಟದಲ್ಲಿ ರೆಫರಿ ಮಧ್ಯಪ್ರವೇಶದಿಂದ ಭಾರತೀಯ ಜೋಡಿ ಸರಿಯಾಗಿ ನೋಡಲೂ ಆಗದೆ ಗಲಿಬಿಲಿಗೊಂಡಿತು. ರೆಫರಿಯ ಈ ವರ್ತನೆಯಿಂದ ಬೇಸರಗೊಂಡ ದೀಪಿಕಾ ಅದನ್ನು ಪ್ರಶ್ನಿಸಿದರು ಕೂಡ. ಅಂದಹಾಗೆ, ಮಿಶ್ರ ಡಬಲ್ಸ್ ವಿಭಾಗದಲ್ಲಿಯೂ ದೀಪಿಕಾ ಇದೇ ಸಮಸ್ಯೆಯನ್ನು ಎದುರಿಸಿದ್ದರು.

೧೯೯೮ರಿಂದ ೨೦೧೦ರವರೆಗಿನ ನಾಲ್ಕು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಭಾರತ ಯಾವುದೇ ಪದಕ ಗೆಲ್ಲಲು ವಿಫಲವಾಗಿತ್ತು. ಆದರೆ, ೨೦೧೪ರ ಗ್ಲಾಸ್ಗೊ ಕೂಟದಲ್ಲಿ ದೀಪಿಕಾ ಮತ್ತು ಜೋಶ್ನಾ ಚಿನ್ನಪ್ಪ ಚಿನ್ನದ ಸಾಧನೆಯೊಂದಿಗೆ ಐತಿಹಾಸಿಕ ಸಾಧನೆ ಮೆರೆದಿತ್ತು.

ಇದನ್ನೂ ಓದಿ : ಸಿಂಗಲ್ಸ್‌ನಲ್ಲೂ ಭಾರತದ ಮುಡಿಗೆ ಚಿನ್ನದ ಕಿರೀಟ ತೊಡಿಸಿದ ಮಣಿಕಾ ಬಾತ್ರಾ

ದೀಪಿಕಾಗೆ ಎರಡನೇ ಪದಕ: ಅಂದಹಾಗೆ, ದೀಪಿಕಾ ಪಳ್ಳೀಕಲ್ ಮತ್ತು ಜೋಶ್ನಾ ಚಿನ್ನಪ್ಪ ಈ ಬಾರಿ ಸಿಂಗಲ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾದರು. ಆದರೆ, ದೀಪಿಕಾ ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಜತೆಯಾಟಗಾರ ಸೌರವ್ ಘೋಸಲ್ ಅವರೊಂದಿಗೆ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಡೊನಾ ಉರ್ಕಾರ್ಟ್ ಹಾಗೂ ಕೆಮರಾನ್ ಪಿಲ್ಲೆ ಎದುರು ಪರಾಜಿತರಾದರು.

ಕೇವಲ ೩೧ ನಿಮಿಷಗಳ ಈ ಕಾದಾಟದಲ್ಲಿ ಆಸ್ಟ್ರೇಲಿಯಾ ಜೋಡಿ ದೀಪಿಕಾ ಹಾಗೂ ಸೌರವ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಮೊದಲ ಗೇಮ್ ಅನ್ನು ೧೧-೮ರಿಂದ ಜಯಿಸಿದರೆ, ಎರಡನೇ ಗೇಮ್‌ ಅನ್ನು ೧೧-೧೦ರಿಂದ ಜಯಿಸಿತು. ಮೊದಲ ಗೇಮ್‌ನಲ್ಲಿ ಸೋಲನುಭವಿಸಿದ ತರುವಾಯ, ಎರಡನೇ ಗೇಮ್‌ನಲ್ಲಿ ತಿರುಗಿಬೀಳಲು ದೀಪಿಕಾ ಹಾಗೂ ಸೌರವ್ ಯತ್ನಿಸಿದರಾದರೂ, ಅದು ಸಾಧ್ಯವಾಗದೆ ಅಸ್ಟ್ರೇಲಿಯಾ ಜೋಡಿ ನೇರ ಗೇಮ್‌ಗಳಲ್ಲಿ ಗೆದ್ದು ಬಂಗಾರದ ಪದಕಕ್ಕೆ ಕೊರಳೊಡ್ಡಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More