ಹ್ಯಾಟ್ರಿಕ್ ಸೋಲು ಅನುಭವಿಸಿದ ಮುಂಬೈಗೆ ರೋಹಿತ್ ಫಾರ್ಮ್‌ನದ್ದೇ ಚಿಂತೆ

ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದೊಂದಿಗೆ ಈ ಋತುವಿನ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ನಾಯಕ ರೋಹಿತ್ ಶರ್ಮಾ ಅವರ ಕಳಪೆ ಫಾರ್ಮ್‌ ತಂಡವನ್ನು ಬಹುವಾಗಿ ಬಾಧಿಸುತ್ತಿದ್ದು, ರೋಹಿತ್ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ

ಕಳಪೆ ಫಾರ್ಮ್‌ನಿಂದ ಹೊರಬರಲು ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಿದರೂ, ರೋಹಿತ್ ಶರ್ಮಾ ಕಳೆದೆರಡು ಪಂದ್ಯಗಳಲ್ಲಿನ ವೈಫಲ್ಯವನ್ನು ಮೆಟ್ಟಿನಿಲ್ಲಲು ವಿಫಲವಾದರು. ಮನೆಯಂಗಣದಲ್ಲಿ ನಡೆದ ಋತುವಿನ ಮೊದಲ ಪಂದ್ಯದಲ್ಲಿ ೧೧ ರನ್ ಗಳಿಸಿದ್ದ ರೋಹಿತ್ ಶರ್ಮಾ, ಎರಡನೇ ಪಂದ್ಯದಲ್ಲಿ ಕೇವಲ ೧೫ ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಶನಿವಾರ (ಏ.೧೪) ತವರಿನ ವಾಂಖೆಡೆ ಮೈದಾನದಲ್ಲಿ ನಡೆದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ೧೮ ರನ್‌ಗಳಾಚೆಗೆ ಸಾಗಲಿಲ್ಲ.

ಅಂದಹಾಗೆ, ಕಳೆದ ಋತುವಿನಲ್ಲಿಯೂ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇಷ್ಟರ ಮಧ್ಯೆಯೂ ತಂಡ ಮೂರನೇ ಬಾರಿಗೆ ಐಪಿಎಲ್‌ ಕಿರೀಟ ಧರಿಸಿ ಸಂಭ್ರಮಿಸಿತ್ತು. ನಾಯಕ ರೋಹಿತ್ ವಿಫಲತೆಯ ಮಧ್ಯೆಯೂ ಮಿಕ್ಕ ಆಟಗಾರರ ಪ್ರಭಾವಿ ಆಟ ತಂಡದ ಹ್ಯಾಟ್ರಿಕ್‌ಗೆ ಪೂರಕವಾಗಿತ್ತು. ಆದರೆ, ಸತತ ಎರಡನೇ ಋತುವಿನಲ್ಲಿಯೂ ರೋಹಿತ್ ಶರ್ಮಾ ಬ್ಯಾಟಿಂಗ್‌ನಲ್ಲಿ ತಿಣುಕುತ್ತಿರುವುದು ನಿತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಅನ್ನು ದಿಗಿಲುಗೊಳಿಸಿದೆ.

೨೦೧೭ರ ಋತುವಿನಾದ್ಯಂತ ರೋಹಿತ್ ಶರ್ಮಾ ೩೦+ ರನ್ ಕಲೆಹಾಕಲೇ ವಿಫಲವಾಗಿದ್ದರು. ತಾನಾಡಿದ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ೩೦ ಇಲ್ಲವೇ ಅದಕ್ಕಿಂತ ಹೆಚ್ಚಿನ ರನ್ ಗಳಿಸಲಾಗದೆ ಒದ್ದಾಡುತ್ತಿದ್ದಾರೆ. ಕಳೆದ ವರ್ಷ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ೩೦+ ರನ್ ಗಳಿಸಿದ್ದು ಬಿಟ್ಟರೆ, ಇಲ್ಲೀವರೆಗೆ ಅವರಿಂದ ಸ್ಫೋಟಕ ಆಟ ಹೊರಹೊಮ್ಮಿಲ್ಲ. ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ ೧೫.೫೭೮ರ ಬ್ಯಾಟಿಂಗ್ ಸರಾಸರಿಯಲ್ಲಿ ಅವರು ಪೇರಿಸಿರುವುದು ಕೇವಲ ೧೦೯ ರನ್‌ಗಳನ್ನಷ್ಟೆ.

ಇನ್ನು, ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಸರಾಸರಿ ಕೇವಲ ೧೩.೦೦. ಸ್ಟ್ರೈಕಿಂಗ್ ರೇಟ್ ಅಂತೂ ೯೨.೮೫. ಇನ್ನು, ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ಎರಡು ಬೌಂಡರಿ, ೨ ಸಿಕ್ಸರ್‌ಗಳನ್ನಷ್ಟೇ ಬಾರಿಸಿರುವ ರೋಹಿತ್ ಶರ್ಮಾ ಅತೀವ ರೀತಿಯಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ, ಆನಂತರದಲ್ಲಿ ತಿರುಗಿಬಿದ್ದು ಟ್ರೋಫಿ ಗೆದ್ದ ನಿದರ್ಶನವೂ ಇದೆ. ಆದರೆ, ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯದಿಂದ ಹೊರಬಂದು ತಂಡದ ಇನ್ನಿಂಗ್ಸ್‌ಗೆ ಬಲ ತುಂಬಬೇಕಾದುದು ಅತ್ಯಂತ ಅಗತ್ಯವಾಗಿದೆ.

ಜೇಸನ್ ರಾಯ್ ಬೊಂಬಾಟ್ ಬ್ಯಾಟಿಂಗ್: ಇನ್ನು ಮುಂಬೈ ಇಂಡಿಯನ್ಸ್‌ ಸತತ ಮೂರನೇ ಸೋಲನುಭವಿಸಲು ಜೇಸನ್ ರಾಯ್ ಅವರ ಸ್ಫೋಟಕ ಬ್ಯಾಟಿಂಗೇ ಕಾರಣ. ಗೆಲ್ಲಲು ಮುಂಬೈ ನೀಡಿದ್ದ ೧೯೫ ರನ್ ಗುರಿಯನ್ನು ಡೆಲ್ಲಿ ಡೇರ್‌ಡೆವಿಲ್ಸ್ ಯಶಸ್ವಿಯಾಗಿ ಭೇದಿಸಿ ಋತುವಿನಲ್ಲಿ ತಂಡ ಜಯದ ಖಾತೆ ತೆರೆಯುವಂತೆ ನೋಡಿಕೊಳ್ಳುವಲ್ಲಿ ಜೇಸನ್ ರಾಯ್ ಸಫಲವಾಗಿದ್ದರು. ಕೇವಲ ೫೩ ಎಸೆತಗಳಲ್ಲಿ ೬ ಬೌಂಡರಿ, ೬ ಸಿಕ್ಸರ್ ಸೇರಿದ ಅಜೇಯ ೯೧ ರನ್ ಗಳಿಸಿದ ಅವರು ಮುಂಬೈಗೆ ಹ್ಯಾಟ್ರಿಕ್ ಸೋಲುಣಿಸಿದರು.

ನಾಯಕ ಗೌತಮ್ ಗಂಭೀರ್ (೧೫) ಮತ್ತೊಮ್ಮೆ ವೈಫಲ್ಯತೆ ಅನುಭವಿಸಿದರಾದರೂ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (೪೭: ೨೫ ಎಸೆತ, ೬ ಬೌಂಡರಿ, ೨ ಸಿಕ್ಸರ್) ಅವರೊಂದಿಗೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಜೇಸನ್ ರಾಯ್, ಮುಂಬೈ ಕೈಯಿಂದ ಪಂದ್ಯವನ್ನು ಕಿತ್ತುಕೊಂಡರು. ಏತನ್ಮಧ್ಯೆ, ಮಧ್ಯಂತರದಲ್ಲಿ ಪಂತ್ ವಿಕೆಟ್ ಕೈಚೆಲ್ಲಿ ಹೊರನಡೆದ ಮೇಲೆ ಶ್ರೇಯಸ್ ಅಯ್ಯರ್ (ಅಜೇಯ೨೭: ೨೦ ಎಸೆತ, ೩ ಬೌಂಡರಿ, ೧ ಸಿಕ್ಸರ್) ಜತೆಗೂಡಿ ತಂಡವನ್ನು ಜಯದ ದಡ ಮುಟ್ಟಿಸಿದರು. ಕಳೆದ ಎರಡೂ ಪಂದ್ಯಗಳಲ್ಲಿ ಅಪಾಯಕಾರಿ ಸ್ಪೆಲ್‌ನಿಂದ ಗಮನ ಸೆಳೆದಿದ್ದ ಯುವ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಕೇವಲ ೩ ಓವರ್‌ಗಳಲ್ಲಿ ೪೨ ರನ್ ನೀಡಿ ಯಾವುದೇ ವಿಕೆಟ್ ಪಡೆಯಲು ವಿಫಲವಾದರು.

ಇದನ್ನೂ ಓದಿ : ಆರ್‌ಸಿಬಿಗೆ ಮೊದಲ ಗೆಲುವು ತಂದುಕೊಟ್ಟ ಡಿವಿಲಿಯರ್ಸ್, ಉಮೇಶ್ ಯಾದವ್

ಸೂರ್ಯಕುಮಾರ್ ಅರ್ಧಶತಕ: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ಗೆ ಸೂರ್ಯಕುಮಾರ್ (೫೩: ೩೨ ಎಸೆತ, ೭ ಬೌಂಡರಿ, ೧ ಸಿಕ್ಸರ್) ಅಮೋಘ ಬ್ಯಾಟಿಂಗ್‌ನಿಂದ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಎವಿನ್ ಲೆವಿಸ್ (೪೮: ೨೮ ಎಸೆತ, ೪ ಬೌಂಡರಿ, ೪ ಸಿಕ್ಸರ್) ಜತೆಗೂಡಿದ ಅವರು ಮೊದಲ ವಿಕೆಟ್‌ಗೆ ಕೇವಲ ಒಂಬತ್ತು ಓವರ್‌ಗಳಲ್ಲೇ ೧೦೨ ರನ್ ಪೇರಿಸಿದರು. ಆದರೆ, ೯ನೇ ಓವರ್‌ನ ಕೊನೇ ಎಸೆತದಲ್ಲಿ ಲೆವಿಸ್ ವಿಕೆಟ್ ಕಳೆದುಕೊಂಡ ನಂತರದಲ್ಲಿ ಸೂರ್ಯಕುಮಾರ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಆನಂತರದಲ್ಲಿ ವಿಕೆಟ್‌ಕೀಪರ್ ಇಶಾನ್ ಕಿಶನ್ (೪೪: ೨೩ ಎಸೆತ, ೫ ಬೌಂಡರಿ, ೨ ಸಿಕ್ಸರ್) ತೋರಿದ ಬಿರುಸಿನ ಆಟದಿಂದ ತಂಡ ಸವಾಲಿನ ಮೊತ್ತ ಪೇರಿಸಿತು. ಆದರೆ, ಈ ಮೊತ್ತವನ್ನು ಜೇಸನ್ ರಾಯ್ ಅದ್ವಿತೀಯ ಬ್ಯಾಟಿಂಗ್ ಮುಂದೆ ಸಾಕಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್

ಮುಂಬೈ ಇಂಡಿಯನ್ಸ್: ೨೦ ಓವರ್‌ಗಳಲ್ಲಿ ೧೯೪/೭ (ಸೂರ್ಯಕುಮಾರ್ ೫೩, ಎವಿನ್ ಲೆವಿಸ್; ಡೇನಿಯಲ್ ಕ್ರಿಶ್ಚಿಯನ್ ೩೫ಕ್ಕೆ ೨) ಡೆಲ್ಲಿ ಡೇರ್‌ಡೆವಿಲ್ಸ್: ೨೦ ಓವರ್‌ಗಳಲ್ಲಿ ೧೯೫/೩ (ಜೇಸನ್ ರಾಯ್ ಅಜೇಯ ೯೧; ಕೃನಾಲ್ ಪಾಂಡ್ಯ ೨೧ಕ್ಕೆ ೨) ಫಲಿತಾಂಶ: ಡೆಲ್ಲಿ ಡೇರ್‌ಡೆವಿಲ್ಸ್‌ಗೆ ೭ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಜೇಸನ್ ರಾಯ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More