ಸಂಜು ಸ್ಯಾಮ್ಸನ್ ಸ್ಫೋಟಕ ಇನ್ನಿಂಗ್ಸ್‌ಗೆ ಬೆಚ್ಚಿಬಿದ್ದ ರಾಯಲ್ ಚಾಲೆಂಜರ್ಸ್

ಕೇರಳದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟಿಂಗ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೇಸ್ತುಬಿದ್ದಿತು. ಹಸಿರುಮಯವಾಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ಸ್ ಮಂದಹಾಸ ಬೀರಿದರೆ, ಮನೆಯಂಗಣದಲ್ಲಿ ವಿರಾಟ್ ಕೊಹ್ಲಿ ಪಡೆ ಸೋಲಿಗೆ ಸಿಲುಕಿ ತತ್ತರಿಸಿತು

ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎರಡು ವರ್ಷಗಳ ಅಮಾನತು ಶಿಕ್ಷೆ ಪೂರೈಸಿ ಮತ್ತೆ ಐಪಿಎಲ್ ಕೂಟಕ್ಕೆ ಮರಳಿದ್ದ ರಾಜಸ್ಥಾನ ರಾಯಲ್ಸ್, ತನ್ನ ಮೊದಲ ಪಂದ್ಯದಲ್ಲಿ ಸೋಲಿನೊಂದಿಗೆ ಈ ಋತುವಿನ ಐಪಿಎಲ್ ಅಭಿಯಾನ ಆರಂಭಿಸಿತ್ತು. ಅದೂ ತವರಿನಲ್ಲಿ ಅನುಭವಿಸಿದ್ದ ಈ ಸೋಲಿನಿಂದ ರಾಯಲ್ಸ್ ಕಂಗೆಟ್ಟಿದ್ದು ನಿಜ. ಆದರೆ, ಇದೀಗ ತವರಿನಾಚೆ ಅದು ಸತತ ಎರಡನೇ ಬಾರಿಗೆ ಗೆಲುವಿನ ನಗೆಬೀರಿದೆ. ಅಮೋಘ ಇನ್ನಿಂಗ್ಸ್ ಕಟ್ಟಿದ ಸಂಜು ಸ್ಯಾಮ್ಸನ್ (೯೨: ೪೫ ಎಸೆತ, ೨ ಬೌಂಡರಿ, ೧೦ ಸಿಕ್ಸರ್) ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಏ.೧೫) ನಡೆದ ಈ ಋತುವಿನ ೧೧ನೇ ಐಪಿಎಲ್ ಪಂದ್ಯದಲ್ಲಿ, ಗೆಲ್ಲಲು ರಾಜಸ್ಥಾನ ರಾಯಲ್ಸ್ ನೀಡಿದ್ದ ೨೧೮ ರನ್‌ಗಳ ಸವಾಲಿನ ಗುರಿಯನ್ನು ರಾಯಲ್ ಚಾಲೆಂಜರ್ಸ್ ಮುಟ್ಟಲು ಸಾಧ್ಯವಾಗದೆ, ರಾಯಲ್ಸ್‌ ಎದುರು ೧೯ ರನ್‌ಗಳ ಸೋಲನುಭವಿಸಿತು. ಪ್ರತಿ ಬಾರಿಯಂತೆ ಈ ಬಾರಿಯೂ ಹಸಿರು ಉಳಿಸುವ ಜಾಗೃತಿಗಾಗಿ ಹಸಿರು ಜೆರ್ಸಿಯೊಂದಿಗೆ ಕಣಕ್ಕಿಳಿದಿದ್ದ ಆರ್‌ಸಿಬಿ ಗೆಲುವಿನ ಸವಿ ಕಾಣಲಿಲ್ಲ.

ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ (೫೭: ೩೦ ಎಸೆತ, ೭ ಬೌಂಡರಿ, ೨ ಸಿಕ್ಸರ್), ಎಬಿ ಡಿವಿಲಿಯರ್ಸ್ (೨೦: ೧೮ ಎಸೆತ, ೧ ಬೌಂಡರಿ, ೧ ಸಿಕ್ಸರ್) ಕೈಚೆಲ್ಲಿದ ನಂತರದಲ್ಲಿ ಆರ್‌ಸಿಬಿ ಪರ ಹೋರಾಡಿದ್ದು ಮನ್‌ದೀಪ್ ಸಿಂಗ್ (೪೭*: ೨೫ ಎಸೆತ, ೬ ಬೌಂಡರಿ, ೧ ಸಿಕ್ಸರ್) ಹಾಗೂ ವಾಷಿಂಗ್ಟನ್ ಸುಂದರ್ (೩೫: ೧೯ ಎಸೆತ, ೧ ಬೌಂಡರಿ, ೩ ಸಿಕ್ಸರ್). ಇವರಿಬ್ಬರ ೭೨ ರನ್‌ಗಳ ಪ್ರತಿರೋಧದ ಇನ್ನಿಂಗ್ಸ್ ಸೋಲಿನ ಅಂತರವನ್ನು ತಗ್ಗಿಸಿತಷ್ಟೆ.

ಆಘಾತದ ನಂತರ ಚೇತರಿಕೆ: ರಾಯಲ್ಸ್ ಆರಂಭಿಕ ಹಿನ್ನಡೆಯ ಮಧ್ಯೆಯೂ ಚೇತರಿಕೆಯ ಹಾದಿ ಹಿಡಿದಿತ್ತಲ್ಲದೆ, ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿತ್ತು. ಕೆ ಗೌತಮ್ ಬೌಲಿಂಗ್‌ನಲ್ಲಿ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲೇ ಬ್ರೆಂಡನ್ ಮೆಕಲಮ್ (೪) ಬೆನ್ ಸ್ಟೋಕ್ಸ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ಕ್ವಿಂಟಾನ್ ಡಿಕಾಕ್ (೨೬) ಮತ್ತು ನಾಯಕ ವಿರಾಟ್ ಕೊಹ್ಲಿ ತಂಡದ ಇನ್ನಿಂಗ್ಸ್‌ ಅನ್ನು ತಹಬದಿಗೆ ತಂದಿತು. ಆದಾಗ್ಯೂ, ಎಂಟನೇ ಓವರ್‌ನ ಕೊನೇ ಎಸೆತದಲ್ಲಿ ಆರ್ಕಿ ಶಾರ್ಟ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಡಿಕಾಕ್, ಉನದ್ಕಟ್‌ಗೆ ಕ್ಯಾಚಿತ್ತು ಹೊರನಡೆದರು. ಕೊಹ್ಲಿ ಮತ್ತು ಡಿಕಾಕ್ ೨ನೇ ವಿಕೆಟ್‌ಗೆ ೭೭ ರನ್ ಕಲೆಹಾಕಿತು.

ತಿರುವು ನೀಡಿದ ಶ್ರೇಯಸ್: ಡಿಕಾಕ್ ನಿರ್ಗಮನದ ನಂತರದಲ್ಲಿ ಆಡಲಿಳಿದ ಎಬಿ ಡಿವಿಲಿಯರ್ಸ್ ಜೊತೆಗೂಡಿದ ಕೊಹ್ಲಿ ರನ್ ಗಳಿಕೆಗೆ ಆದ್ಯತೆ ನೀಡಿದರು. ಈ ಜೋಡಿ ಸ್ಥಿರವಾಗುತ್ತಿರುವುದನ್ನು ಕಂಡ ರಾಯಲ್ಸ್ ನಾಯಕ ಅಜಿಂಕ್ಯ ರಹಾನೆ, ೧೧ನೇ ಓವರ್‌ನಲ್ಲಿ ಕನ್ನಡಿಗ ಶ್ರೇಯಸ್ ಗೋಪಾಲ್ ಅವರನ್ನು ಬೌಲಿಂಗ್‌ಗಿಳಿಸಿ ಅಪಾಯಕಾರಿ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಎರಡನೇ ಎಸೆತದಲ್ಲೇ ವಿರಾಟ್ ಕೊಹ್ಲಿ ಆರ್ಕಿ ಶಾರ್ಟ್‌ಗೆ ಕ್ಯಾಚ್ ನೀಡುತ್ತಿದ್ದಂತೆ ಇಡೀ ಕ್ರೀಡಾಂಗಣ ಸ್ತಬ್ಧವಾಯಿತು. ೩೦ ಎಸೆತಗಳಲ್ಲಿ ೭ ಬೌಂಡರಿ, ೨ ಸಿಕ್ಸರ್‌ಗಳೊಂದಿಗೆ ೫೭ ರನ್ ಗಳಿಸಿದ್ದ ಕೊಹ್ಲಿ ಇನ್ನಿಂಗ್ಸ್‌ಗೆ ಶ್ರೇಯಸ್ ತೆರೆ ಎಳೆದರು. ಇನ್ನು, ಅಪಾಯಕಾರಿ ಆಟಗಾರ ಎಬಿ ಡಿವಿಲಿಯರ್ಸ್ (೨೦: ೧೮ ಎಸೆತ, ೧ ಬೌಂಡರಿ, ೧ ಸಿಕ್ಸರ್) ಅವರನ್ನೂ ೧೩ನೇ ಓವರ್‌ನ ಮೂರನೇ ಎಸೆತದಲ್ಲಿ ಕ್ರೀಸ್ ತೊರೆಯುವಂತೆ ಮಾಡಿ ಪಂದ್ಯಕ್ಕೆ ತಿರುವು ನೀಡಿದರು.

ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ರಾಯಲ್ಸ್, ೨೦ ಓವರ್‌ಗಳಲ್ಲಿ ಕೇವಲ ೪ ವಿಕೆಟ್ ನಷ್ಟಕ್ಕೆ ೨೧೭ ರನ್ ಗಳಿಸಿತು. ಮೊದಲ ವಿಕೆಟ್‌ಗೆ ನಾಯಕ ಹಾಗೂ ಆರಂಭಿಕ ಅಜಿಂಕ್ಯ ರಹಾನೆ (೩೬: ೨೦ ಎಸೆತ, ೬ ಬೌಂಡರಿ, ೧ ಸಿಕ್ಸರ್) ಮತ್ತು ಆರ್ಕಿ ಶಾರ್ಟ್‌ (೧೧) ೪೯ ರನ್ ಕಾಣಿಕೆ ನೀಡಿದರು. ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಹಾನೆ, ವೇಗಿ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಉಮೇಶ್ ಯಾದವ್‌ಗೆ ಕ್ಯಾಚಿತ್ತು ಹೊರನಡೆದರೆ; ಶಾರ್ಟ್, ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಡಿಕಾಕ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಆದರೆ, ಇಡೀ ತಂಡದ ಇನ್ನಿಂಗ್ಸ್ ಅನ್ನು ಸವಾಲಿನತ್ತ ಕೊಂಡೊಯ್ದದ್ದು ಸಂಜು ಸ್ಯಾಮ್ಸನ್. ಇಂಗ್ಲೆಂಡ್ ಆಟಗಾರರಾದ ಬೆನ್ ಸ್ಟೋಕ್ಸ್ (೨೭) ಮತ್ತು ಜೋಸ್ ಬಟ್ಲರ್ (೨೩) ನೀಡಿದ ಅಲ್ಪ ಸಮಯದ ಜೊತೆಯಾಟದ ಮಧ್ಯೆ ಸಂಜು ಸ್ಯಾಮ್ಸನ್ ಮಿಂಚಿನ ಆಟವಾಡಿ ತಂಡದ ಮೊತ್ತವನ್ನು ೨೦೦ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್

ರಾಜಸ್ಥಾನ ರಾಯಲ್ಸ್: ೨೦ ಓವರ್‌ಗಳಲ್ಲಿ ೪ ವಿಕೆಟ್‌ಗೆ ೨೧೭(ರಹಾನೆ ೩೬, ಸಂಜು ಸ್ಯಾಮ್ಸನ್ ಅಜೇಯ 92; ಯಜುವೇಂದ್ರ ಚಾಹಲ್ ೨೨ಕ್ಕೆ ೨) ರಾಯಲ್ ಚಾಲೆಂಜರ್ಸ್ ಬೆಂಗಳೂರು: ೨೦ ಓವರ್‌ಗಳಲ್ಲಿ ೧೯೮/೬ (ವಿರಾಟ್ ಕೊಹ್ಲಿ ೫೭; ಶ್ರೇಯಸ್ ಗೋಪಾಲ್ ೨೨ಕ್ಕೆ ೨) ಫಲಿತಾಂಶ: ರಾಜಸ್ಥಾನ ರಾಯಲ್ಸ್‌ಗೆ ೧೯ ರನ್ ಗೆಲುವು ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More