ಫೆಡರರ್ ನಿಶ್ಚಿಂತೆಯಿಂದ ಮಲಗುವಂತೆ ನನ್ನಿಂದ ಮಲಗಲಾಗಲಿಲ್ಲ: ಸೈನಾ ನೆಹ್ವಾಲ್

೨ನೇ ಕಾಮನ್ವೆಲ್ತ್ ಚಿನ್ನದ ಪದಕ ಗೆಲ್ಲುವ ಹಿಂದಿನ ತನ್ನ ಯಾತನಾಮಯ ಕ್ಷಣಗಳನ್ನು ಸೈನಾ ನೆಹ್ವಾಲ್ ಹೊರಗೆಡವಿದ್ದಾರೆ. ಕ್ರೀಡಾಗ್ರಾಮಕ್ಕೆ ತನ್ನಪ್ಪನನ್ನು ಬಿಡದೆ ಹೋದಾಗ ತಾನನುಭವಿಸಿದ ದುಗುಡವನ್ನೂ ಸ್ಮರಿಸಿರುವ ಸೈನಾ, ಜನ ತನ್ನನ್ನು ನಿವೃತ್ತಿಯಾಗೆಂದು ಹೇಳಲೂ ಹಿಂಜರಿಯುತ್ತಿರಲಿಲ್ಲ ಎಂದಿದ್ದಾರೆ

“ಭಾರತದಲ್ಲಿ ನೂರಾರು ಸಂಗತಿಗಳು ಘಟಿಸುತ್ತಿರುತ್ತವೆ. ಚೀನಾದಲ್ಲಿ ಹೀಗೆಲ್ಲ ಆಗುತ್ತದೆ ಎಂದೇನೂ ನನಗೆ ಅನಿಸದು. ಆದರೆ, ನಾನೇನಾದರೂ ಈ ಪಂದ್ಯದಲ್ಲಿ ಸೋಲನುಭವಿಸಿದ್ದರೆ ಭಾರತದ ಜನತೆ, ‘ಓಹ್ ಸೈನಾ ಕತೆ ಮುಗಿಯಿತು, ಅವಳಿಗೆ ವಯಸ್ಸಾಯಿತು, ಆಕೆ ನಿವೃತ್ತಿಯಾಗುವುದು ಲೇಸು’ ಎಂದು ಹೇಳುತ್ತಿದ್ದರು. ಮೊದಲೇ ಹೇಳಿದಂತೆ, ನನ್ನ ಬಗ್ಗೆ ಭಾರತದಲ್ಲಿ ನೂರಾರು ರೀತಿಯಲ್ಲಿ ಬರೆಯಲಾಗುತ್ತದೆ. ಆದರೆ, ಸಿಂಧುವಿನ ವಿಷಯ ನನ್ನಂತಲ್ಲ. ಈ ಸೋಲಿನ ಮಧ್ಯೆಯೂ ಆಕೆ ಇನ್ನೂ ಬೆಳೆಯುತ್ತಿರುವವಳು...’’ -ಪದಕ ವೇದಿಕೆಯಲ್ಲಿ ಸೈನಾ ಹೇಳುತ್ತಲೇ ಸಾಗಿದರು.

“ನನ್ನ ತಂದೆಯ ಬಳಿ ವೈಯಕ್ತಿಕ ತರಬೇತುದಾರನ ಮಾನ್ಯತಾ ಪತ್ರವಿದೆ. ಇಷ್ಟಾದರೂ, ನನ್ನ ತಂದೆಯನ್ನು ಎರಡು ದಿನ ಕ್ರೀಡಾಗ್ರಾಮದ ಒಳಗಡೆ ಬಿಡಲಿಲ್ಲ. ಅಡುಗೆ ಮನೆಗೂ ಬಾರದೆ ಅವರು ಎರಡು ದಿನ ಕ್ರೀಡಾಗ್ರಾಮದ ಹೊರಗಡೆಯೇ ಕಳೆದರು. ನನ್ನ ವೃತ್ತಿಬದುಕಿನ ಸುದೀರ್ಘ ಪಯಣದಲ್ಲಿ ಮೊದಲ ಬಾರಿಗೆ ಇಂಥದ್ದೊಂದು ಸನ್ನಿವೇಶವನ್ನು ಎದುರಿಸಬೇಕಾಗಿ ಬಂದಿತು. ಎರಡು ದಿನ ನಾನು ಚಿಂತೆಗೆ ಬಿದ್ದೆ. ನಿದ್ದೆಯಿಲ್ಲದೆ ಹೊರಳಾಡಿದೆ. ನಾನೇನೂ ಸರ್ಕಾರಿ ಅಧಿಕಾರಿಯಲ್ಲ. ನಾನೋರ್ವ ಕ್ರೀಡಾಪಟು. ದಿನಕ್ಕೆ ೧೦ರಿಂದ ೧೨ ತಾಸು ನಿದ್ದೆ ಮಾಡುತ್ತೇನೆ ಎಂದು ರೋಜರ್ ಫೆಡರರ್ ಹೇಳುತ್ತಾರೆ. ಆದರೆ, ನನ್ನ ತಂದೆ ಕ್ರೀಡಾಗ್ರಾಮದ ಹೊರಗಡೆ ಇದ್ದಾಗ ನನ್ನಿಂದ ಅರ್ಧ ತಾಸೂ ನಿದ್ರಿಸಲಾಗಲಿಲ್ಲ. ನಾನು ನಿಜವಾಗಿಯೂ ವಿಚಲಿತಳಾಗಿದ್ದೆ. ಇದೇ ಬೇಗೆಯಲ್ಲೇ ನಾನು ಆಕ್ರಮಣಕಾರಿ ಆಟವಾಡಿದೆ,’’ ಎಂಬ ಸೈನಾ ಮಾತುಗಳಲ್ಲಿ, ಗೋಲ್ಡ್ ಕೋಸ್ಟ್‌ನಲ್ಲಿ ಕಳೆದ ಹತ್ತು ದಿನಗಳಿಂದ ಮಡುಗಟ್ಟಿದ್ದ ಭಾವೋದ್ರೇಕವಿತ್ತು.

ಇದನ್ನೂ ಓದಿ : ರೋಚಕ ಹಣಾಹಣಿಯಲ್ಲಿ ಸಿಂಧು ಮಣಿಸಿ ಕಾಮನ್ವೆಲ್ತ್ ಚಿನ್ನಕ್ಕೆ ಮುತ್ತಿಟ್ಟ ಸೈನಾ

ಅಂದಹಾಗೆ, ಕ್ರೀಡಾಕೂಟ ಶುರುವಾಗುವ ಮುನ್ನ ಸೈನಾ ತಂದೆ ಹರ್ವೀರ್ ಸಿಂಗ್ ಅವರನ್ನು ಕ್ರೀಡಾಗ್ರಾಮದ ಒಳಗಡೆ ಬಿಟ್ಟಿರಲಿಲ್ಲ. ಇದರಿಂದ ಕೆರಳಿದ್ದ ಸೈನಾ, ಕೂಟದಿಂದ ನಿರ್ಗಮಿಸಬೇಕಾದೀತೆಂದು ಹೇಳಿದ್ದರು. ಆದರೆ, ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸೈನಾ ರಾಷ್ಟ್ರಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವೆಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಲಾಯಿತು. ಏತನ್ಮಧ್ಯೆ, ಸೈನಾ ಹಾಗೂ ಸಿಂಧು ಫೈನಲ್‌ನಲ್ಲಿ ಕಾದಾಡುತ್ತಿದ್ದಾರೆ ಎಂದಾದಾಗಲೂ, ಒಂದೊಮ್ಮೆ ಸಿಂಧು ವಿರುದ್ಧ ಏನಾದರೂ ಸೋತರೆ ಸೈನಾ ತೀವ್ರ ಟೀಕೆಗೆ ಗುರಿಯಾಗುವ ಸಾಧ್ಯತೆಯೂ ಇತ್ತು. ಆದರೆ, ಇದೀಗ ಸೈನಾ ಇದೆಲ್ಲ ಸವಾಲುಗಳನ್ನು ಮೆಟ್ಟಿನಿಂತಿದ್ದಾರೆ.

ನಿಜ, ಸೈನಾ ಈ ಬಾರಿಯ ಕಾಮನ್ವೆಲ್ತ್ ಕೂಟದಲ್ಲಿ ಸಾಕಷ್ಟು ಒತ್ತಡ, ಮಾನಸಿಕ ಕ್ಷೋಭೆಯಿಂದಿದ್ದರು ಎಂದು ಅವರು ಆಡಿದ ಪ್ರತಿಯೊಂದು ಪಂದ್ಯದಲ್ಲಿನ ಆಕ್ರಮಣಕಾರಿ ಆಟ ಸಾಕ್ಷ್ಯ ನುಡಿಯುತ್ತಿತ್ತು. ತಂಡದ ಟೀಂ ವಿಭಾಗದಲ್ಲಿಯೂ ಸೈನಾ ಕಣಕ್ಕಿಳಿದರಾದರೂ, ಸಿಂಧು ಮಾತ್ರ ಗಾಯದ ನಿಮಿತ್ತ ಸಿಂಗಲ್ಸ್ ಪಂದ್ಯಗಳಲ್ಲಷ್ಟೇ ಆಡಿದ್ದರು. ಇಡೀ ಕೂಟದಲ್ಲಿ ಅಜೇಯ ಓಟದೊಂದಿಗೆ ಸೈನಾ ಚಾಂಪಿಯನ್ ಆಗಿದ್ದು ಕೂಡ ಗಮನಾರ್ಹ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More