ವಿಲಿಯಮ್ಸನ್ ಮನೋಜ್ಞ ಬ್ಯಾಟಿಂಗ್‌ನಲ್ಲಿ ಹ್ಯಾಟ್ರಿಕ್ ಜಯ ಕಂಡ ಸನ್‌ರೈಸರ್ಸ್

ಮೊದಲ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಶಿಖರ್ ಧವನ್ ವಿಕೆಟ್ ಬೀಳುತ್ತಲೇ ನೈಟ್ ರೈಡರ್ಸ್ ಗೆಲುವು ನಿಶ್ಚಿತ ಎಂದುಕೊಂಡವರ ಲೆಕ್ಕಾಚಾರವನ್ನು ನಾಯಕ ಕೇನ್ ವಿಲಿಯಮ್ಸನ್ ಬುಡಮೇಲು ಮಾಡಿದರು. ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್, ಸನ್‌ರೈಸರ್ಸ್‌ಗೆ ಹ್ಯಾಟ್ರಿಕ್ ಜಯ ತಂದಿತ್ತರು

ಮನೆಯಂಗಣದಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಸನ್‌ರೈಸರ್ಸ್ ಹೈದರಾಬಾದ್, ತವರಿನಾಚೆಗಿನ ಅಭಿಯಾನವನ್ನೂ ಜಯದೊಂದಿಗೆ ಆರಂಭಿಸಿತು. ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಈ ಋತುವಿನ ೧೦ನೇ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಐದು ವಿಕೆಟ್‌ಗಳ ಸುಲಭ ಗೆಲುವು ಪಡೆದು, ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿತು.

ಕೆಕೆಆರ್ ನೀಡಿದ್ದ ಸಾಧಾರಣ ಮೊತ್ತದ ಗುರಿಯನ್ನು ಸನ್‌ರೈಸರ್ಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಮುಟ್ಟಿತು. ೧೩೯ ರನ್ ಜಯದ ಗುರಿಯನ್ನು ಸನ್‌ರೈಸರ್ಸ್ ಸುಲಭವಾಗಿ ಭೇದಿಸಬಹುದಿತ್ತಾದರೂ, ಅದು ೧೯ ಓವರ್‌ಗಳನ್ನು ತೆಗೆದುಕೊಂಡಿತು. ಇದಕ್ಕೆ ಪ್ರಮುಖ ಕಾರಣ ಸ್ಫೋಟಕ ಆಟಗಾರ ಧವನ್ (೭) ಸ್ಪಿನ್ ಮಾಂತ್ರಿಕ ಸುನೀಲ್ ನರೇನ್‌ಗೆ ಬೌಲ್ಡ್ ಆಗಿ ಎರಡಂಕಿ ದಾಟಲು ಸಾಧ್ಯವಾಗದ್ದು ಒಂದಾದರೆ, ಆರಂಭಿಕ ವೃಧಿಮಾನ್ ಸಾಹ (೨೪) ಕೂಡ ಕೈಚೆಲ್ಲಿದ್ದು ಸನ್‌ರೈಸರ್ಸ್‌ನ ಹಿನ್ನಡೆಗೆ ಮತ್ತೊಂದು. ಏತನ್ಮಧ್ಯೆ, ಕನ್ನಡಿಗ ಮನೀಶ್ ಪಾಂಡೆ (೪) ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಾಗ ೮.೪ ಓವರ್‌ಗಳಲ್ಲಿ ಸನ್‌ರೈಸರ್ಸ್ ಪ್ರಮುಖ ೩ ವಿಕೆಟ್ ಕಳೆದುಕೊಂಡು ೫೫ ರನ್‌ಗಳನ್ನಷ್ಟೇ ಗಳಿಸಿತ್ತು.

ವಿಲಿಯಮ್ಸನ್ ಮನಮೋಹಕ ಬ್ಯಾಟಿಂಗ್: ಈ ಹಂತದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್ ಕೆಕೆಆರ್ ಬೌಲರ್‌ಗಳನ್ನು ದಿಟ್ಟತೆಯಿಂದ ಎದುರಿಸಿದರು. ಮೊದಲ ಎರಡೂ ಪಂದ್ಯಗಳಲ್ಲಿ ವೈಫಲ್ಯತೆ ಅನುಭವಿಸಿದ್ದ ಈ ಕಿವೀಸ್ ಕಪ್ತಾನ, ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಶಕೀಬ್ ಅಲ್ ಹಸನ್ (೨೭: ೨೧ ಎಸೆತ, ೨ ಬೌಂಡರಿ, ೧ ಸಿಕ್ಸರ್) ಕೂಡ ನಾಯಕ ವಿಲಿಯಮ್ಸನ್‌ಗೆ ಸಾಥ್ ನೀಡಿದರು. ತಂಡವನ್ನು ಅಪಾಯದ ಅಂಚಿನಿಂದ ಪಾರುಮಾಡಿದ ಬಳಿಕ ಈ ಜೋಡಿ ನಿರ್ಗಮಿಸಿತಾದರೂ, ದೀಪಕ್ ಹೂಡಾ (೫) ಮತ್ತು ಯೂಸುಫ್ ಪಠಾಣ್ (೧೭: ೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ಅಜೇಯ ಆಟದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದನ್ನೂ ಓದಿ : ಕಡೇ ಎಸೆತದಲ್ಲಿ ಮುಂಬೈ ಮಣಿಸಿ ಸತತ ಎರಡನೇ ಜಯ ಕಂಡ ಸನ್‌ರೈಸರ್ಸ್

ಕಳಪೆ ಬ್ಯಾಟಿಂಗ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ೨೦ ಓವರ್‌ಗಳಲ್ಲಿ ೮ ವಿಕೆಟ್‌ಗೆ ಕೇವಲ ೧೩೮ ರನ್ ಕಲೆಹಾಕಿತು. ರಾಬಿನ್ ಉತ್ತಪ್ಪ (೩) ಎರಡಂಕಿ ದಾಟದೆ ಕೈಚೆಲ್ಲಿ ಹೊರನಡೆದರೆ, ಬಳಿಕ ಬಂದ ನಿತೀಶ್ ರಾಣಾ (೧೮) ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ಕ್ರಿಸ್ ಲಿನ್ (೪೯: ೩೪ ಎಸೆತ, ೭ ಬೌಂಡರಿ, ೧ ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದಲ್ಲಿ ನಾಯಕ ದಿನೇಶ್ ಕಾರ್ತಿಕ್ (೨೯: ೨೭ ಎಸೆತ, ೨ ಬೌಂಡರಿ, ೧ ಸಿಕ್ಸರ್) ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ ಆಟಗಾರರೆನಿಸಿದರು.

ಸನ್‌ರೈಸರ್ಸ್‌ನ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ (೨೬ಕ್ಕೆ ೩) ಮಿಂಚಿನ ದಾಳಿ ನಡೆಸಿದರೆ, ಬಿಲ್ಲಿ ಸ್ಟ್ಯಾನ್‌ಲೇಕ್ (೨೧ಕ್ಕೆ ೨) ಹಾಗೂ ಶಕೀಬ್ ಅಲ್ ಹಸನ್ (೨೧ಕ್ಕೆ ೨) ತಲಾ ಎರಡೆರಡು ವಿಕೆಟ್ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್

ಕೋಲ್ಕತಾ ನೈಟ್ ರೈಡರ್ಸ್: ೨೦ ಓವರ್‌ಗಳಲ್ಲಿ ೧೩೮/೮ (ಕ್ರಿಸ್ ಲಿನ್ ೪೯, ದಿನೇಶ್ ಕಾರ್ತಿಕ್ ೨೯; ಭುವನೇಶ್ವರ್ ೨೬ಕ್ಕೆ ೩) ಸನ್‌ರೈಸರ್ಸ್ ಹೈದರಾಬಾದ್: ೧೯ ಓವರ್‌ಗಳಲ್ಲಿ ೧೩೯/೫ (ಕೇನ್ ವಿಲಿಯಮ್ಸನ್ ೫೦; ಸುನೀಲ್ ನರೇನ್ ೧೭ಕ್ಕೆ ೨) ಫಲಿತಾಂಶ: ಸನ್‌ರೈಸರ್ಸ್‌ಗೆ ೫ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಬಿಲ್ಲಿ ಸ್ಟ್ಯಾನ್‌ಲೇಕ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More